ಸುರಕ್ಷಾ ಕ್ರಮಗಳ ಮೇಲಿರಲಿ ಹೆಚ್ಚಿನ ಆದ್ಯತೆ
Team Udayavani, Jan 12, 2023, 6:00 AM IST
ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಮಂಗಳವಾರ ಇಬ್ಬರು ಅಮಾಯಕರು ಪ್ರಾಣ ಕಳೆದುಕೊಂಡಿದ್ದು, ತಾಯಿ ಮತ್ತು ಮಗುವಿನ ದಾರುಣ ಅಂತ್ಯಕ್ಕೆ “ನಮ್ಮ ಮೆಟ್ರೋ’ ದುಃಸಾಕ್ಷಿಯಾಗಿದೆ. ಇದು ಕಳಪೆ ಕಾಮಗಾರಿಯ ಪರಿಣಾಮ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ಕಾಮಗಾರಿ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷಾ ಕ್ರಮಗಳ ಕೊರತೆ ಮತ್ತು ಕಾಮಗಾರಿಯ ನಿರ್ವಹಣೆಯ ಸ್ಥಾನಗಳಲ್ಲಿರುವವರ ಘೋರ ಅವಜ್ಞೆ ಇದಕ್ಕೆ ಪ್ರಮುಖ ಕಾರಣ.
ಮೆಟ್ರೋ ಕಾಮಗಾರಿ ವೇಳೆ ದುರಂತ ಘಟಿಸಿ ಸಾವು-ನೋವು ಸಂಭ ವಿಸಿದ್ದು ಇದೇ ಮೊದಲಲ್ಲ. ಕಳೆದ ಒಂದು ದಶಕದಲ್ಲಿ ಅನೇಕ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ಸಂಭವಿಸಿದಾಗ ಸರಕಾರದ ತುರ್ತು ಸ್ಪಂದನೆ, ಸಾರ್ವಜನಿಕರ ಕ್ಷಣಿಕ ಆಕ್ರೋಶ ಕಂಡು ಬರುತ್ತದೆ. ಸಮಯ ಕಳೆದಂತೆ ಎಲ್ಲವೂ ತೆರೆಗೆ ಸರಿಯುತ್ತದೆ. ಮತ್ತೆ ಯಾವುದಾದರೂ ಘಟನೆ ನಡೆದಾಗ ಮತ್ತದೆ ಪುನರಾವರ್ತನೆಯಾಗುತ್ತದೆ. ಬುಧ ವಾರ ನಡೆದ ಘಟನೆಯೂ ಒಂದೆರಡು ದಿನಗಳಲ್ಲಿ ನೇಪಥ್ಯಕ್ಕೆ ಸರಿಯುತ್ತದೆ.
ಸರಕಾರ ಪರಿಹಾರ ಘೋಷಣೆ ಮಾಡಿದೆ, ಮೆಟ್ರೋ ಸಹ ಪರಿಹಾರ ನೀಡುವ ಮಾತನಾಡಿದೆ, ಗುತ್ತಿಗೆದಾರ ಕಂಪೆನಿ ಎನ್‌ಸಿಸಿ, ಮೆಟ್ರೋ ನಿಗಮಕ್ಕೆ ಸೇರಿದ ಕೆಲವರ ಮೇಲೆ ಎಫ್ಐಆರ್ ಆಗಿ ಕೆಲವರನ್ನು ಅಮಾನತುಗೊಳಿಸಲಾಗಿದೆ. ಪರಿಶೀಲಿಸಿ ವರದಿ ಸಲ್ಲಿಸಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಗೆ ವಹಿಸಲಾಗಿದೆ. ಇದೆಲ್ಲವೂ ತಾಂತ್ರಿಕ ಮತ್ತು ಕಾನೂನಾತ್ಮಕ ಹಂತಗಳು. ಬಿಸೋದೊಣ್ಣೆಯಿಂದ ತಪ್ಪಿಸಿಕೊಳ್ಳಲು ಇರುವ ಮಾರ್ಗಗಳು. ಆದರೆ ಈ ಬಗ್ಗೆ ದೂರದೃಷ್ಟಿ ಕ್ರಮಗಳ ಅಗತ್ಯವಿದೆ. 2009ರಿಂದ ಇಲ್ಲಿಯವರೆಗೆ 10ಕ್ಕೂ ಹೆಚ್ಚು ಜನ ಮೆಟ್ರೋ ಕಾಮಗಾರಿಗಳಿಗೆ ತಮ್ಮ “ಬಲಿ ಅರ್ಪಿಸಿದ್ದಾರೆ’.
ಮೆಟ್ರೋ ರೈಲು ಯೋಜನೆಗೆ ಸರಕಾರ “ನಮ್ಮ ಮೆಟ್ರೋ’ ಹೆಸರು ಕೊಟ್ಟಿದೆ. ಇದು ನಿಜಕ್ಕೂ ನಮ್ಮದಾಗಬೇಕಾದರೆ ಕಾಮಗಾರಿ ಮತ್ತು ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಬೇಕು. ನಾಗರಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಯೋಜನೆಗಳ ಅನುಷ್ಠಾನದಲ್ಲಿ ಅವರ ಸುರಕ್ಷತೆಯೂ ಮುಖ್ಯವಾಗಬೇಕು. ನಗರದಲ್ಲಿನ ಮೆಟ್ರೋ ಕಾಮಗಾರಿಗಳು ಸ್ವತಃ ಅಪಾಯಗಳನ್ನು ತಂದಿಡುವುದರ ಜತೆಗೆ ಅನೇಕ ಅನಾಹುತ, ಅನನುಕೂಲತೆಗಳಿಗೆ ದಾರಿ ಮಾಡಿಕೊಡುತ್ತಿವೆ. ಅಪಫಾತಗಳಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ತಂದುಕೊಟ್ಟ ಅಪಖ್ಯಾತಿ ಮೆಟ್ರೋಗೆ ಸಲ್ಲುತ್ತದೆ. ಬೆಂಗಳೂರಿಗೆ ರಸ್ತೆ ಗುಂಡಿಗಳ ಕಿರೀಟ ಬಂದಿರುವುದರಲ್ಲಿ ದೊಡ್ಡ ಪಾತ್ರ ಮೆಟ್ರೋ ಕಾಮಗಾರಿಯದ್ದು ಇದೆ. ಈ ವಿಚಾರದಲ್ಲಿ ಹೈಕೋರ್ಟ್ ಅನೇಕ ಬಾರಿ ಮೆಟ್ರೋ ನಿಗಮ ಹಾಗೂ ಸರಕಾರಕ್ಕೆ ಚಾಟಿ ಬೀಸಿದೆ.
ಮೆಟ್ರೋ ಯೋಜನೆ ಸದ್ಯಕ್ಕೆ ಮುಗಿಯುವಂತದ್ದಲ್ಲ ಇನ್ನೂ ಕೆಲ ಹಂತಗಳ ಕಾಮಗಾರಿ ಮುಂಬರುವ ವರ್ಷಗಳಲ್ಲಿ ಪ್ರಾರಂಭವಾಗಬೇಕಿದೆ. ಬುಧವಾರ ನಡೆದ ತಾಯಿ-ಮಗುವಿನ ಸಾವು ಪ್ರಕರಣ ಸರಕಾರ ಮತ್ತು ಮೆಟ್ರೋ ನಿಗಮಕ್ಕೆ ಎಚ್ಚರಿಕೆ ಗಂಟೆ ಆಗಬೇಕು. ಕಳಪೆ ಕಾಮಗಾರಿಗೆ ಕಿಂಚಿತ್ತೂ ಅವಕಾಶ ನೀಡದೆ, ಕಾಮಗಾರಿ ನಡೆಸುವ ವೇಳೆ ಸುರಕ್ಷಾ ಕ್ರಮಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಆ ಮೂಲಕ ಅಮಾಯಕ ಜನರ ಬದುಕಿನೊಂದಿಗೆ ಚೆಲ್ಲಾಟ ಆಡುವುದನ್ನು ನಿಲ್ಲಿಸಬೇಕು. ಗುಣಮಟ್ಟದ ಕಾಮಗಾರಿ ಮತ್ತು ನಾಗರಿಕರ ಸುರಕ್ಷತೆ ಧ್ಯೇಯವಾಕ್ಯವಾಗಲಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.