ಭಾರತೀಯ ನ್ಯಾಯಶಾಸ್ತ್ರ ಜಗತ್ತಿಗೇ ಮಾದರಿ: ಡಾ| ವೀರಪ್ಪ ಮೊಯ್ಲಿ
ಡಾ| ಸಂಧ್ಯಾ ಎಸ್. ಪೈ ಅವರಿಗೆ ವಿಶ್ವಪ್ರಭಾ ಪುರಸ್ಕಾರ ಪ್ರದಾನ
Team Udayavani, Jan 15, 2023, 9:32 PM IST
ಉಡುಪಿ: ಇಡೀ ಜಗತ್ತು ಧಾರ್ಮಿಕ ಪರಂಪರೆಯ ನ್ಯಾಯಾಂಗ ವ್ಯವಸ್ಥೆ ಪಂಜರದಲ್ಲಿ ನಲುಗಿದಾಗ ಭಾರತೀಯ ನ್ಯಾಯಶಾಸ್ತ್ರ ಅನಾದಿಕಾಲದಿಂದಲೂ ಅನೇಕ ಮಹರ್ಷಿಗಳ ಫಲವಾಗಿ ಮತೀಯ ಪಂಜರಕ್ಕೆ ಸಿಲುಕದೆ ಸ್ವತಂತ್ರವಾಗಿ ಕಾರ್ಯಾಚರಿಸಿದೆ. ನಿರಂತರ ಸಮಾನತೆ, ಮಾನವೀಯತೆಯನ್ನು ಕಾಪಾಡಿಕೊಳ್ಳಲು ಭಾರತದ ನ್ಯಾಯಶಾಸ್ತ್ರ ಜಗತ್ತಿಗೆ ಮಾದರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯ್ಲಿ ಹೇಳಿದರು.
ಎಂಜಿಎಂ ಕಾಲೇಜಿನ ಮುದ್ದಣಮಂಟಪದಲ್ಲಿ ರವಿವಾರ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ “ವಿಶ್ವಪ್ರಭಾ ಪುರಸ್ಕಾರ’ವನ್ನು “ತರಂಗ’ ವಾರಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ ಅವರಿಗೆ ಪ್ರದಾನ ಮಾಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ನಾಗರಿಕತೆಯ ಮೂಲ ಭಾಷೆ, ಸಾಹಿತ್ಯ, ಸಂಸ್ಕೃತಿ. ಇದು ಆಳವಾಗಿ ಬೆಳೆದಾಗ ಜಗತ್ತಿನಲ್ಲಿ ಪ್ರಶಾಂತತೆ ನೆಲೆಸುತ್ತದೆ. ಜಗತ್ತಿನಲ್ಲಿ ಎಲ್ಲ ನಾಗರಿಕತೆಯೂ ಭಾಷೆ, ಸಾಹಿತ್ಯ, ಸಂಸ್ಕೃತಿಯಿಂದ ನೆಮ್ಮದಿ, ಶಾಂತಿಯನ್ನು ಕಂಡುಕೊಂಡಿವೆ. ಧರ್ಮ ಎಂದರೆ ಪ್ರೀತಿಯ ಪಥವನ್ನು ತೆರೆಯುವುದು. ದೈನಂದಿನ ಸಮಸ್ಯೆಗೆ ಪರಿಹಾರ ಹುಡುಕಲು ವಿಜ್ಞಾನದ ಮೊರೆ ಹೋಗಬೇಕು ಅಥವಾ ಪ್ರಾಚೀನ ಮಾನವ ಧರ್ಮದಿಂದ ಪರಿಹಾರ ಕಂಡುಕೊಳ್ಳಬೇಕು ಎಂದರು.
ವಿಶ್ವ ಬ್ಯಾಂಕ್ ವರದಿ ಪ್ರಕಾರ ಭಾರತದಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಬಡವರಿದ್ದಾರೆ. ಇದರ ಜತೆಗೆ ಭಾರತ ಮತ್ತು ಚೀನದಲ್ಲಿ ಖಾಸಗಿ ಸಂಪತ್ತು ಬೆಳೆಯುತ್ತಿರುವುದು ಆತಂಕಕಾರಿ ವಿಚಾರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಯುದ್ಧವಿಲ್ಲದಿದ್ದರೂ ಶೋಷಣೆ, ಮಾನವೀಯ ಹಕ್ಕು ನಿರಾಕರಣೆಯಿಂದ ಅಶಾಂತಿ ನಿರ್ಮಾಣವಾಗುತ್ತದೆ. ಆಂತರಿಕ ಶಾಂತಿ ಜತೆಗೆ ಜಾಗತಿಕ ಶಾಂತಿ ಕಾಪಾಡಿಕೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಎಂದರು.
1970ರಿಂದ “ಉದಯವಾಣಿ’ ಪತ್ರಿಕೆ ಕರಾವಳಿಯ ಅಭಿವೃದ್ಧಿಗೆ ಸಲ್ಲಿಸಿದ ಸೇವೆ ಅಮೂಲ್ಯವಾಗಿದೆ. ತರಂಗ ವಾರಪತ್ರಿಕೆಯಲ್ಲಿ ಜಾಗತಿಕ ವಿಚಾರಗಳ ಬಗ್ಗೆ ವೈಶಿಷ್ಟಪೂರ್ಣ ಲೇಖನ ಬರಹಗಳು ಚಿಂತನೆಗೆ ಹಚ್ಚುತ್ತವೆ. ಈ ಕಾರಣದಿಂದಲೇ ಸಹಸ್ರಾರು ಓದುಗರನ್ನು ತರಂಗ ತನ್ನತ್ತ ಸೆಳೆದುಕೊಂಡಿದೆ. ಇದರ ಸಂಪೂರ್ಣ ಶ್ರೇಯಸ್ಸು ಡಾ| ಸಂಧ್ಯಾ ಪೈ ಅವರಿಗೆ ಸಲ್ಲಬೇಕು. ತಮ್ಮ ಬರವಣಿಗೆ ಮೂಲಕ ಸಾಮಾಜಿಕ, ಸಾಂಸ್ಕೃತಿಕವಾಗಿ ಹೊಸ ಬಗೆಯ ಆಯಾಮಗಳನ್ನು ತೆರೆದಿಟ್ಟಿದ್ದಾರೆ. ಸತತ ಅಧ್ಯಯನ, ವ್ಯಾಪಕ ಓದು ಎಲ್ಲ ಕ್ಷೇತ್ರಗಳ ಉತ್ತಮ ವಿಚಾರಗಳನ್ನು ಸಮನ್ವಯಗೊಳಿಸಿ ಪ್ರಸ್ತುತ ಪಡಿಸುವ ಅವರ ಬರಹಗಳು ಜ್ಞಾನಕೋಶವಾಗಿದೆ ಎಂದು ಬಣ್ಣಿಸಿದರು.
ಪರರ ಬಾಳು ಬೆಳಗಿದರೆ ಸಾರ್ಥಕ: ಡಾ| ಸಂಧ್ಯಾ ಪೈ
ವಿಶ್ವಪ್ರಭಾ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಡಾ| ಸಂಧ್ಯಾ ಎಸ್. ಪೈ ಅವರು, ಜೀವನವನ್ನು ಸುಖ ಮತ್ತು ದುಃಖ ಈ ಎರಡು ರೀತಿಯಲ್ಲಿ ಅವಲೋಕಿಸಿ ಮುನ್ನಡೆಯಬೇಕು. ಸತತ ಚಿಂತನೆ, ಧ್ಯಾನದಿಂದ ಯೋಗ್ಯ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ. ನಾವು ಮಾಡುವ ಕೆಲವು ಕೆಲಸಗಳು ಇನ್ನೊಬ್ಬರ ಬಾಳು ಬೆಳಗಿಸಿದೆ ಎಂದಾಗ ಅದರಲ್ಲಿ ಸಿಗುವ ಸಾರ್ಥಕತೆ ಯಾವ ಸಂಪತ್ತಿನಲ್ಲಿಯೂ ಇಲ್ಲ ಎಂದರು.
ಓದಿನ ಹವ್ಯಾಸ ಮಾತ್ರ ಹೊಂದಿದ್ದ ನನಗೆ ತರಂಗದಿಂದ ಬರಹದ ಬದುಕು ಮೊದಲಾಯಿತು ಎಂದು ಪತ್ರಿಕೆ ಕಾರ್ಯ ನಿರ್ವಹಣೆ ಆರಂಭದ ದಿನಗಳ ಬಗ್ಗೆ ಸ್ಮರಿಸಿದರು. ಪ್ರಶಸ್ತಿ ಪ್ರಾಯೋಜ ಕರಾದ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ, ಪ್ರಭಾವತಿ ಶೆಣೈ ದಂಪತಿ ಸಮಾಜಮುಖಿ ಚಿಂತನೆಯನ್ನು ಶ್ಲಾಘಿ ಸಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಅಭಿನಂದನಾ ಭಾಷಣ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಎಂಜಿಎಂ ಕಾಲೇಜು ಪ್ರಾಂಶುಪಾಲ ಪ್ರೊ| ಲಕ್ಷ್ಮೀ ನಾರಾಯಣ ಕಾರಂತ, ಪುರಸ್ಕಾರ ಸಮಿತಿಯ ಸಂಚಾಲಕ ಮರವಂತೆ ನಾಗರಾಜ್ ಹೆಬ್ಟಾರ್, ಪ್ರತಿಷ್ಠಾನದ ಅಧ್ಯಕ್ಷ ಪ್ರೊ| ಶಂಕರ್ ಉಪಸ್ಥಿತರಿದ್ದರು. ಸಂಚಾಲಕ ರವಿರಾಜ್ ಎಚ್. ಪಿ. ಸ್ವಾಗತಿಸಿ, ಪೂರ್ಣಿಮಾ ಕೊಡವೂರು ಅಭಿನಂದನಾ ಪತ್ರ ವಾಚಿಸಿದರು. ಸಂಧ್ಯಾ ಶೆಣೈ ವಂದಿಸಿ, ಶಿಲ್ಪಾ ಜೋಷಿ ನಿರೂಪಿಸಿದರು.
ಶೀಘ್ರ ಇನ್ನೆರಡು ಪುಸ್ತಕಗಳ ಬಿಡುಗಡೆ: ಮೊಯ್ಲಿ
ಜಗತ್ತಿನ ನಾಗರಿಕತೆ ಕುರಿತಂತೆ ಪುಸ್ತಕವನ್ನು ಬರೆ ಯುತ್ತಿದ್ದೇನೆ. ಇದರ ಶೇ.75ರಷ್ಟು ಕೆಲಸ ಮುಗಿದಿದೆ. ಭಾರತೀಯ ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿ ಆಂಗ್ಲ ಭಾಷೆಯಲ್ಲಿ ಪುಸ್ತಕವನ್ನು ಬರೆದಿದ್ದು ಎರಡು ತಿಂಗಳಲ್ಲಿ ದಿಲ್ಲಿಯ ಪ್ರಕಾಶನ ಸಂಸ್ಥೆ ಯಿಂದ ಹೊರಬರಲಿದೆ ಎಂದು ನ್ಯಾಯವಾ ದಿಯೂ ಆದ ವೀರಪ್ಪ ಮೊಯ್ಲಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.