ಇಂದೋರ್‌ನಲ್ಲಿ ಇಂದು ಕೊನೆಯ ಶೋ
ಕ್ಲೀನ್ ಸ್ವೀಪ್ ತವಕದಲ್ಲಿ ಟೀಮ್ ಇಂಡಿಯಾ ನ್ಯೂಜಿಲ್ಯಾಂಡ್‌ಗೆ ಪ್ರತಿಷ್ಠೆಯ ಪಂದ್ಯ
Team Udayavani, Jan 24, 2023, 8:00 AM IST
ಇಂದೋರ್: ರಾಯ್‌ಪುರ ಪಂದ್ಯವನ್ನು ಕತ್ತಲು ಆವರಿಸುವುದರೊಳಗೆ ಗೆದ್ದು ಸರಣಿ ವಶಪಡಿಸಿಕೊಂಡ ಭಾರತವೀಗ ಇಂದೋರ್‌ನಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್ ತಂಡವನ್ನು ಕೊನೆಯ ಸಲ ಎದುರಿಸಲು ಅಣಿಯಾಗಿದೆ. ಮಂಗಳವಾರ ಈ ಮುಖಾಮುಖಿ ಏರ್ಪಡಲಿದ್ದು, ರೋಹಿತ್ ಪಡೆ ಸಹಜವಾಗಿಯೇ ಕ್ಲೀನ್ ಸ್ವೀಪ್ ಯೋಜನೆ ಹಾಕಿಕೊಂಡಿದೆ. ಕಿವೀಸ್ ಪ್ರತಿಷ್ಠೆಗಾಗಿ ಹೋರಾಡಲಿದೆ.
ಹೈದರಾಬಾದ್‌ನಲ್ಲಿ ಬೆನ್ನಟ್ಟಿಕೊಂಡು ಬಂದು ಬೆದರಿಸಿದ ಪರಿ ಕಂಡಾಗ ನ್ಯೂಜಿಲ್ಯಾಂಡ್ ರಾಯ್‌ಪುರದಲ್ಲಿ ರಾಯಭಾರ ಮಾಡೀತೆಂದೇ ಭಾವಿಸಲಾಗಿತ್ತು. ಆದರೆ ಅದು ಸೊಲ್ಲೆತ್ತದೆ ಶರಣಾಯಿತು. ತೀವ್ರ ಪೈಪೋಟಿ ನಿರೀಕ್ಷಿಸಿದವರಿಗೆ ಈ ಪಂದ್ಯವೊಂದು ಅಚ್ಚರಿಯಾಗಿ, ಒಗಟಾಗಿ ಕಂಡಿತು. ಹೀಗಾಗಿ ಇಂದೋರ್‌ನಲ್ಲಿ ಭಾರತವೇ ಮೇಲುಗೈ ಸಾಧಿಸುವ ಲಕ್ಷಣ ದಟ್ಟವಾಗಿದೆ.
ಹೀಗೆ ಹೇಳಲು ಇನ್ನೊಂದು ಕಾರಣವೂ ಇದೆ. ಇಲ್ಲಿನ “ಹೋಳ್ಕರ್ ಸ್ಟೇಡಿಯಂ’ನಲ್ಲಿ ಭಾರತದ್ದು ಅಜೇಯ ದಾಖಲೆ. ಆಡಿದ ಐದೂ ಪಂದ್ಯಗಳಲ್ಲಿ ಗೆದ್ದು ಬಂದಿದೆ. ಆರನೇ ಪಂದ್ಯದ ಫಲಿತಾಂಶವೂ ಟೀಮ್ ಇಂಡಿಯಾ ಪರವಾಗಿ ಬಂದರೆ ಅಚ್ಚರಿಯೇನೂ ಇಲ್ಲ.
ಮಧ್ಯಮ ಕ್ರಮಾಂಕದ ಸಮಸ್ಯೆ
ಸರಣಿಯನ್ನು ವಶಪಡಿಸಿಕೊಂಡರೂ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆ ಬಗೆಹರಿದಿಲ್ಲ ಎಂಬುದನ್ನು ಗಮನಿಸಬೇಕು. ಈವರೆಗಿನ ಎರಡೂ ಪಂದ್ಯಗಳಲ್ಲಿ ಮಿಂಚಿದ್ದು ಆರಂಭಿಕರಾದ ಶುಭಮನ್ ಗಿಲ್ ಮತ್ತು ರೋಹಿತ್ ಶರ್ಮ ಮಾತ್ರ. ಗಿಲ್ ಹೈದರಾಬಾದ್‌ನಲ್ಲಿ ದ್ವಿಶತಕ ಬಾರಿಸಿದ ಬಳಿಕ ರಾಯ್‌ಪುರದಲ್ಲಿ ಅಜೇಯ 40 ರನ್ ಮಾಡಿ ಬ್ಯಾಟಿಂಗ್ ಫಾರ್ಮ್ ಮುಂದುವರಿಸಿದರು. ನಾಯಕ ರೋಹಿತ್ ಕ್ರಮವಾಗಿ 34 ಹಾಗೂ 51 ರನ್ ಕೊಡುಗೆ ಸಲ್ಲಿಸಿದರು. ಆದರೆ ಮಧ್ಯಮ ಕ್ರಮಾಂಕದವರ ಕೊಡುಗೆ ಮಾತ್ರ ಲೆಕ್ಕಕ್ಕೆ ಸಿಗದಷ್ಟು ಕಡಿಮೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
4 ಇನ್ನಿಂಗ್ಸ್‌ಗಳಲ್ಲಿ 3 ಶತಕ ಬಾರಿಸಿದ ಬಳಿಕ ವಿರಾಟ್ ಕೊಹ್ಲಿ ಬ್ಯಾಟ್ ಥಂಡಾ ಹೊಡದಿದೆ. ಅಂದಮಾತ್ರಕ್ಕೆ ಫಾರ್ಮ್ನಲ್ಲಿಲ್ಲ ಎಂದರ್ಥವಲ್ಲ. ಎಡಗೈ ಸ್ಪಿನ್ನರ್‌ಗಳನ್ನು ಎದುರಿಸುವಾಗ ಕೊಹ್ಲಿ ತುಸು ಸಮಸ್ಯೆ ಅನುಭವಿಸುತ್ತಿರುವುದು ಅರಿವಿಗೆ ಬಂದಿದೆ. ಎರಡೂ ಪಂದ್ಯಗಳಲ್ಲಿ ಅವರು ಮಿಚೆಲ್ ಸ್ಯಾಂಟ್ನರ್‌ಗೆ ವಿಕೆಟ್ ಒಪ್ಪಿಸಿದ್ದರು (8 ಮತ್ತು 11 ರನ್).
ವಿಶ್ವಕಪ್ ಆರಂಭವಾಗುವುದರೊಳಗೆ ಕೊಹ್ಲಿ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಿದೆ.ಶ್ರೇಯಸ್ ಅಯ್ಯರ್ ಗೈರಲ್ಲಿ ಅವಕಾಶ ಪಡೆದ ಸೂರ್ಯಕುಮಾರ್ ಯಾದವ್ ಇನ್ನೂ “360 ಡಿಗ್ರಿ’ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಹಾಗೆಯೇ ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ ಕೂಡ ಸಿಡಿದಿಲ್ಲ. ಈ ಪಂದ್ಯ ಮುಗಿದೊಡನೆ ಟಿ20 ಸರಣಿ ಇರುವುದರಿಂದ ಟೀಮ್ ಇಂಡಿಯಾದ ಮಿಡ್ಲ್ ಆರ್ಡರ್ ವಿಸ್ಫೋಟಕಗೊಳ್ಳಬೇಕಾದ ಅಗತ್ಯವಿದೆ. ಮಧ್ಯಮ ಕ್ರಮಾಂಕದಲ್ಲಿ ಬದಲಾವಣೆ ಯೊಂದು ಸಂಭವಿಸಬಹುದಾದರೆ ಮತ್ತೋರ್ವ ಬಿಗ್ ಹಿಟ್ಟರ್ ರಜತ್ ಪಾಟೀದಾರ್ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದಾರು.
ಇಂದೋರ್ ಬ್ಯಾಟಿಂಗ್ ಟ್ರ್ಯಾಕ್?
ಹೈದರಾಬಾದ್‌ನಲ್ಲಿ ಲಯ ಕಳೆದುಕೊಂಡಿದ್ದ ಭಾರತದ ಬೌಲಿಂಗ್ ವಿಭಾಗ ರಾಯ್‌ಪುರದಲ್ಲಿ ಒಮ್ಮೆಲೇ ಹರಿತಗೊಂಡಿದ್ದನ್ನು ಮರೆಯುವಂತಿಲ್ಲ. ಸಿರಾಜ್-ಶಮಿ ಕಿವೀಸ್ ಮೇಲೆ ಘಾತಕವಾಗಿ ಎರಗಿದ್ದರು. ಇಲ್ಲಿ ಪರಿವರ್ತನೆ ಮಾಡಿಕೊಳ್ಳುವುದಿದ್ದರೆ ಎಕ್ಸ್‌ಪ್ರೆಸ್ ವೇಗಿ ಉಮ್ರಾನ್ ಮಲಿಕ್ ಮತ್ತು ಲೆಗ್‌ಸ್ಪಿನ್ನರ್ ಯಜುವೇಂದ್ರ ಚಹಲ್ ಆಡಬಹುದು. ಇವರಿಬ್ಬರೂ ಈ ಸರಣಿಯಲ್ಲಿ ಅವಕಾಶ ಪಡೆದಿಲ್ಲ. ಸಣ್ಣ ಬೌಂಡರಿಯಾದ ಕಾರಣ ಇಂದೋರ್ ಪಿಚ್ ಬ್ಯಾಟಿಂಗ್‌ಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆಯಿದ್ದು, ಬೌಲರ್‌ಗಳಿಗೆ ದೊಡ್ಡ ಸವಾಲು ಎದುರಾದೀತು.
ನ್ಯೂಜಿಲ್ಯಾಂಡ್‌ಗೆ ಏನಾಯಿತು?
ಹೈದರಾಬಾದ್‌ನಲ್ಲಿ ಅಷ್ಟೊಂದು ದೊಡ್ಡ ಮೊತ್ತವನ್ನು ಬೆನ್ನಟ್ಟಿಕೊಂಡು ಬಂದ ನ್ಯೂಜಿಲ್ಯಾಂಡ್ ರಾಯ್‌ಪುರದಲ್ಲಿ 108 ರನ್ನಿಗೆ ಕುಸಿದದ್ದು ಅರ್ಥವಾಗದ ಸಂಗತಿ. ಒಂದಿಷ್ಟಾದರೂ ಪ್ರತಿಷ್ಠೆ ಗಳಿಸಬೇಕಾದರೆ ಅವರ ಬ್ಯಾಟಿಂಗ್ ವಿಭಾಗದಲ್ಲಿ ದೊಡ್ಡ ಮಟ್ಟದ ಚೇತರಿಕೆ ಕಾಣಬೇಕಾದುದು ಅಗತ್ಯ. ಕಳೆದ 30 ಏಕದಿನ ಇನ್ನಿಂಗ್ಸ್‌ಗಳಲ್ಲಿ ಕಿವೀಸ್ ಬ್ಯಾಟರ್ 40 ಪ್ಲಸ್ ರನ್ ಗಳಿಸಿದ್ದು ಕೇವಲ 7 ಸಲ. ಬ್ರೇಸ್‌ವೆಲ್ ಮತ್ತು ಸ್ಯಾಂಟ್ನರ್ ಮಾತ್ರ ಹೆಚ್ಚು ಪರಿಣಾಮ ಬೀರಿದ್ದಾರೆ. ಅಗ್ರ ಕ್ರಮಾಂಕದಿಂದ ರನ್ ಹರಿದು ಬಂದರಷ್ಟೇ ನ್ಯೂಜಿಲ್ಯಾಂಡ್‌ನಿಂದ ಪ್ರತಿರೋಧ ನಿರೀಕ್ಷಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.