ಕೆ.ವಿ. ತಿರುಮಲೇಶ್ – ನುಡಿನಮನ: ಖಂಡಾಂತರ ನೆಗೆವ ಕಾವ್ಯ
Team Udayavani, Feb 1, 2023, 12:17 AM IST
ಕೆ.ವಿ. ತಿರುಮಲೇಶ್ ಅವರದು ಖಂಡಾಂತರ ನೆಗೆವ ಕಾವ್ಯ. ಐಗುಪ್ತದ ಪಿರಮಿಡ್ಡುಗಳ ಬಗ್ಗೆಯೂ ಅರೇಬಿಯಾದ ಸುಂದರಿಯರ ಬಗ್ಗೆಯೂ ಅವರು ಬರೆದಿದ್ದಾರೆ. ಕುಳಿತಲ್ಲೇ ಖಂಡಾಂತರಗಳನ್ನು ನೆಗೆಯುವುದೆಂದರೆ ಅವರಿಗೆ ಇಷ್ಟ. ಈ ಮಾತುಗಳನ್ನು ಅವರು “ನಾನು, ನನ್ನ ಕಾವ್ಯ’ ಎಂಬ ಲೇಖನದಲ್ಲಿ ದಾಖಲಿಸಿಯೂ ಇದ್ದಾರೆ (ಕಾವ್ಯ ಕಾರಣ 2007).
ತಿರುಮಲೇಶರಷ್ಟು ಕಾವ್ಯದ ಮೂಲಕ ಖಂಡಾಂತರಗಳನ್ನು ದಾಟಿದ ಇನ್ನೊಬ್ಬ ಕನ್ನಡ ಕವಿ ಅತ್ಯಪೂರ್ವ. ಕಾರಡ್ಕ, ಕಾಸರಗೋಡು, ತಿರುವನಂತಪುರ, ಹೈದರಾಬಾದ್, ಕೊಲ್ಲಿ, ಅಯೋವಾ- ಹೀಗೆ ನಾನಾ ಊರು, ದೇಶಗಳ ಅನುಭವ ತಿರುಮಲೇಶರಲ್ಲಿ ಸಾಂದ್ರಗೊಂಡು ಸಹಜ ಕವಿತೆಯಾಗುತ್ತದೆ. ಸಾಲಾರ್ ಜಂಗ್ ಮ್ಯೂಸಿಯಂನಿಂದ, ಅಬೀಡಿನಲ್ಲಿ ರಸ್ತೆ ದಾಟುವುದು- ಇಂತಹ ಕವಿತೆಗಳನ್ನು ಬರೆದ ಇದೇ ಕವಿ ಪೋಸ್ಟಾಪೀಸು, ತಾಲೂಕಾಪೀಸು- ಇಂತಹ ಕವಿತೆಗಳನ್ನೂ ಬರೆಯುತ್ತಾರೆ. ಅತ್ಯಂತ ಸ್ಥಳೀಯವಾದದ್ದನ್ನೂ ಅತ್ಯಂತ ಜಾಗತಿಕವಾದದ್ದನ್ನೂ ಅನುಭವದ ಎರಕದಿಂದ ಬರೆಯಬಲ್ಲ ಕವಿ ತಿರುಮಲೇಶ್.
ಯಾಕೆ ಕವಿತೆ ಎಂಬ ಪ್ರಶ್ನೆಗೆ ಕವಿ ತಿರುಮಲೇಶರು ಇದೇ ಲೇಖನದಲ್ಲಿ ಕೊಟ್ಟ ಉತ್ತರ ನೋಡಿ: “ಅದು ಬಹುಶಃ ಏನನ್ನೋ ಹೇಳುವುದಕ್ಕೆ ಅಥವಾ ಹೇಳದೇ ಇರುವುದಕ್ಕೆ, ಭಾಷೆಯ ಸಾಧ್ಯತೆಗಳನ್ನು ಹುಡುಕುವುದಕ್ಕೆ! ಅಥವಾ ಅಡಗಿಸುವುದಕ್ಕೆ, ಸುಖ, ದುಃಖ, ಕೋಪ, ತಾಪಗಳನ್ನು ಮೆರೆಸುವುದಕ್ಕೆ ಅಥವಾ ಮರೆಸುವುದಕ್ಕೆ.’ ನವ್ಯರಿಗೆ ಕಾವ್ಯ ಎನ್ನುವುದು ಲ್ಯೂಮಿನಸ್ ಡಿಟೇಲ್ಸ್ ಕಟ್ಟಿಕೊಡುವ ಮಾಧ್ಯಮ ಎನ್ನುವುದನ್ನು ಇಲ್ಲಿ ಮರೆಯುವ ಹಾಗಿಲ್ಲ. ಮಿನುಗುವ, ಮಿಂಚುವ, ಮಿಂಚಿ ಮರೆಯಾಗುವ, ಮತ್ತೆ ತೆರೆ ತೆರೆದು ತೋರುವ ಮಿಣುಕು ವಿವರ. ಟಿ.ಎಸ್. ಎಲಿಯಟ್ಟಿಗಾಗಲೀ, ಎಜ್ರಾಪೌಂಡ್‌ಗಾಗಲೀ, ಟಿ.ಇ. ಹ್ಯೂಮ್‌ಗಾಗಲೀ ಇಂತಹ ವಿವರಗಳಲ್ಲಿ ಹೆಚ್ಚಿನ ಆಸಕ್ತಿ.
ಗಾಡ್ ಆಫ್ ಸ್ಮಾಲ್‌ಥಿಂಗ್ಸ್!
ಹೌದು! ತಿರುಮಲೇಶರ ಕಾವ್ಯ ಅತ್ಯಂತ ಚಿಕ್ಕಪುಟ್ಟ ವಸ್ತುಗಳ ಕುರಿತ ಸಂಕೀರ್ಣ ಅಭಿವ್ಯಕ್ತಿಯಾಗಿಬಿಡುತ್ತದೆ. ಅವರು ಕಿಟಕಿಯ ಬಗ್ಗೆ ಬರೆಯುತ್ತಾರೆ. “ಆ ಹೊರಗು ಒಳಕ್ಕೆ ಬಿರಿಯುವಂತೆ /ಆ ಒಳಗು ಕದಡಿ ಸರಿದು ಹೊರಕ್ಕೆ ಲಯಿಸಿದಂತೆ/ಏಕಾಂತತೆ ಮತ್ತು ಸಂತೆ ಅತ್ತಿತ್ತ ಹೊಕ್ಕು ಬೆರೆತಂತೆ ಕ್ಷಣಗಳು’. ತಿರುಮಲೇಶರಲ್ಲಿ ಭಾಷೆ ಕರಗಿ, ಕವಿ ಎಂ. ಗೋಪಾಲಕೃಷ್ಣ ಅಡಿಗರು ಹೇಳಿದಂತೆ ಇಷ್ಟದೇವತಾ ವಿಗ್ರಹಕ್ಕೊಗ್ಗಿಸುವ ಅಸಲಿ ಕಸುಬಾಗಿ ಬಿಡುತ್ತದೆ. ಕಾವ್ಯ ಕೇವಲ ಕಾವ್ಯವಾಗದೇ ಅದೊಂದು ಜಲವರ್ಣ ಚಿತ್ರದಂತೆ ಇಲ್ಲಿ ಭಾಸವಾಗುತ್ತದೆ.
ಮನುಷ್ಯರು, ಪರಿಸರ, ಚರಿತ್ರೆ, ವರ್ತಮಾನ, ಭವಿಷ್ಯ- ಸಣ್ಣಪುಟ್ಟ ಸಂಗತಿಗಳೂ ಸೇರಿದಂತೆ ಸಕಲವೂ ತಿರುಮಲೇಶರ ಕವಿತೆಗೆ ವಸ್ತುಗಳಾಗಿಬಿಡುತ್ತವೆ. “ಸಣ್ಣಪುಟ್ಟ ವಸ್ತುಗಳೆಂದರೆ ನಮಗೆಲ್ಲ ನಿಸ್ಸಾರ, ಆದರೆ ಯೋಚಿಸಿ ನೋಡಿದರೆ ಎಲ್ಲರ ಬದುಕೂ ಇಂತಹ ವಸ್ತುಗಳಿಂದಲೇ ತುಂಬಿರುವುದು’ ಎಂದು ಕಾಫಾನ ಮಾತುಗಳನ್ನು ನೆನಪಿಸಿದ ಕವಿ ತಿರುಮಲೇಶರು. ಕವಿ, ಕಲಾವಿದ, ಚಿತ್ರಕಾರ ಇಂತಹ ವಸ್ತುಗಳ ಬಗ್ಗೆ ಯೋಚಿಸಬೇಕು ಎನ್ನುವುದು ಅವರ ವಾದ. ಹೀಗಾಗಿಯೇ ಅವರು “ಪೆಂಟಯ್ಯನ ಅಂಗಿ’, “ಇರುವೆಗಳ ಜಗತ್ತು’ ಇಂತಹ ಕವಿತೆಗಳನ್ನು ಬರೆದಿದ್ದಾರೆ. ಬೆಕ್ಕು ಮತ್ತು ಮನುಷ್ಯನ “ಮುಖಾಮುಖೀ’ಯನ್ನು ಅತ್ಯಂತ ಎತ್ತರದ ಫಿಲಾಸಫಿಕಲ್ ನೆಲೆಗೆ ಒಯ್ದಿದ್ದಾರೆ.
ಪಿಕಾಸೋ ಮಾದರಿ
ಕಲಾಪ್ರಪಂಚದಲ್ಲಿ ಪಿಕಾಸೋ ಮಾಡಿದ ಪ್ರಯೋಗಗಳಿಗೆ ಲೆಕ್ಕವಿಲ್ಲ. ಲೋಕದ ಎಲ್ಲ ವಿಚಾರಗಳನ್ನೂ ತನ್ನ ಅಭಿವ್ಯಕ್ತಿಯ ಪರಿಧಿಗೆ ತಂದ. ಗೆರ್ನಿಕಾದಂತಹ ಅದ್ಭುತ ಕಲಾಕೃತಿ ರಚಿಸಿದ. “ವೀನಸ್ ದು ಗಾಸ್’ ಎಂಬ ಮೇರು ಕೃತಿಯನ್ನೂ ಸೃಷ್ಟಿಸಿದ ಮಹಾನ್ ಕಲಾಕಾರ ಪಿಕಾಸೋ. ತಿರುಮಲೇಶರು ತಮ್ಮ ಕಾವ್ಯಪ್ರಯೋಗಗಳಿಗೆ ಪಿಕಾಸೋನನ್ನೇ ಮಾದರಿಯಾಗಿಸಿದ್ದು ಕಾಕತಾಳೀಯವೇನಲ್ಲ. ತಿರುಮಲೇಶರು ನವ್ಯದಿಂದ ಬಹಳ ಬೇಗ ಭಿನ್ನ ಮಾರ್ಗ ಹಿಡಿದ ಕವಿ. ಎ.ಕೆ. ರಾಮಾನುಜನ್‌ರಂತೆ ಭಾಷೆಯ ಸೂಕ್ಷ್ಮ¾ಗಳನ್ನು ಹಿಡಿದಿಟ್ಟ ಕವಿ.
“ಕೇರಳ’ ಎನ್ನುವ ಕವಿತೆಯಲ್ಲಿ “ಪಂಪ ಕುಮಾರವ್ಯಾಸರ, ಮಿಲ್ಟನರ/ಕಿಸೆಗೆ ಕೈಹಾಕಿ/ ಪದವಿಜೃಂಭಣೆಯ ಅಮಲಿನಲ್ಲಿ/ನಾನು ರಾಮಾಯಣ ಬರೆಯಲೊಲ್ಲೆ/ನನ್ನ ದರ್ಶನ ಬೇರೆ/ಕೊಂಡೆ ಕೊಳ್ಳಗಳಲ್ಲಿ ಗಲ್ಲಿಗಳಲ್ಲಿ/ಕಂಡ ಅರಗಿಸಿಕೊಂಡ ಮರೆತೇ ಹೋದ ಸಂಕೀರ್ಣ/ ಅನುಭವದ ವಿಸ್ಕಿ ಅದು’ ಎಂದಿದ್ದಾರೆ ತಿರುಮಲೇಶ್. ತಿರುಮಲೇಶರ ಪ್ರಕಾರ “ನನ್ನ ಹಾಡೇ ಬೇರೆ/ತಾಳಲಯ ವ್ಯಾಕರಣ ಸಿಂಟ್ಯಾಕ್ಸು ಎಲ್ಲ/ ಒಡೆದು/ನೋವು ನಗೆ ಜುಗುಪ್ಸೆ ವ್ಯಂಗ್ಯ/ ತಿಳಿದ ತಿಳಿಯದ ಸುಪ್ತ ಜಾಗೃತ ಭಾವಗಳ ಆಕ್ರೋಬಾಟಿಕ್ಸ್’.
ವಿದ್ಯಾರ್ಥಿ ದೆಸೆಯಲ್ಲೇ ತಿರುಮಲೇಶರಿಗೆ ಚೆಗುವೆರಾನ ಚಟುವಟಿಕೆಗಳ ಆಸಕ್ತಿ ಇತ್ತು. ತಿರುಮಲೇಶರು 1982ರಲ್ಲೇ ರಿಚರ್ಡ್ ಹ್ಯಾರಿಸ್‌ನ ಡೆತ್ ಆಫ್ ಎ ರೆವೊಲ್ಯುಷನರಿ: ಚೆ ಗವೇರಾಸ್ ಲೋಸ್ಟ್ ಮಿಷನ್ ಕೃತಿಯನ್ನು ಓದಿದ್ದರು. ಆದರೆ ಚೆಯಂತೆ ತಿರುಮಲೇಶರು ಮಾರ್ಕ್‌ಸಿಸಂಗೆ ಬದ್ಧರಾಗಲಿಲ್ಲ. ಅದಕ್ಕೆ ಅವರ ತಾತ್ವಿಕ ನೆಲೆಗಟ್ಟೇ ಕಾರಣ. ಯಾವುದನ್ನೂ ಇದಮಿತ್ಥಂ ಎಂದು ತೆಗೆದುಕೊಳ್ಳಲಾರದವರು ತಿರುಮಲೇಶ್. ಒಂದು ಆದರ್ಶಕ್ಕೆ ಬದ್ಧರಾಗಿ ನಡೆವವರ ಬಗ್ಗೆ ತಿರುಮಲೇಶರಿಗೆ ಆದರವಿತ್ತು. ಹಾಗಾಗಿಯೇ “ಬೊಲಿವಿಯಾದಲ್ಲಿ ಚೆ’ ಎನ್ನುವ ಕವಿತೆಯನ್ನೂ ಬರೆದಿದ್ದಾರೆ ತಿರುಮಲೇಶ್.
ಅನುಭವಗಳನ್ನು ಸೀಮಿತಗೊಳಿಸುವುದಕ್ಕಿಂತ ಅದನ್ನು ವಿಸ್ತರಿಸಿಕೊಳ್ಳುವುದರಲ್ಲಿ ತಿರುಮಲೇಶರಿಗೆ ಆಸಕ್ತಿ. ಆದ್ದರಿಂದ ಯಾವುದನ್ನೂ ಬೇಡವೆಂದು ಅವರು ದೂರವಿಡಲಿಲ್ಲ. ಅವರ ಓದುವಿಕೆಗೆ ಹಲವು ದಿಕ್ಕುಗಳು. ಯಾವುದು ನಮ್ಮ ಸಂಸ್ಕ¢ತಿಯಿಂದ ಹೆಚ್ಚು ದೂರವಾಗಿದೆಯೋ ಅದರಲ್ಲಿ ತಿರುಮಲೇಶರಿಗೆ ಹೆಚ್ಚಿನ ಆಸಕ್ತಿ. ಅಂತಹ ದೂರವಾದದ್ದನ್ನು ಹತ್ತಿರಕ್ಕೆ ತರುವ, ದಂಡೆಗಳನ್ನು ಬೆಸೆವ ಕೆಲಸ ಅವರ ಗದ್ಯ ಮತ್ತು ಪದ್ಯಕೃತಿಗಳೆರಡರಲ್ಲೂ ನಡೆದಿದೆ.
ಟಿ.ಎಸ್. ಎಲಿಯಟ್‌ನ “ದ ವೇಸ್ಟ್ ಲ್ಯಾಂಡ್’ ಅನ್ನು ನೆನಪಿಸುವ “ಮಹಾಪ್ರಸ್ಥಾನ’ ಬರೆದ ಕವಿ ತಿರುಮಲೇಶರು. ಎಲಿಯಟ್ ಕಾವ್ಯದ ಕೇಂದ್ರವನ್ನು ಅವರು ಗುರುತಿಸಿದ್ದು ಹೀಗೆ- “ಎಲಿಯಟ್ ವರ್ಣಸಂಕರವನ್ನು ವಿರೋಧಿಸಿದರೂ ಅವನ ಕಾವ್ಯ ಮಾತ್ರ ಹಲವು ಸಂಕರಗಳ ಫಲವೆನ್ನುವುದು ಎಷ್ಟೊಂದು ದೊಡ್ಡ ವಿರೋಧಾಭಾಸ!’ ತಿರುಮಲೇಶರ ಕಾವ್ಯ ಎಲಿಯಟ್‌ನನ್ನೂ ಹಾದು, ವಿವಿಧ ಖಂಡಗಳನ್ನು ದಾಟಿ ಮತ್ತೆ ಕೀರ್ತನೆಗಳ ಕಡೆಗೆ, ಮಕ್ಕಳ ಪದ್ಯಗಳ ಪ್ರಯೋಗಗಳ ಕಡೆಗೆ ಮುಖಮಾಡಿದ್ದು ಅವರ ಪ್ರಯೋಗಶೀಲತೆಗೆ ಸಾಕ್ಷಿ.
– ಬಾಲಕೃಷ್ಣ ಬಿ.ಎಂ. ಹೊಸಂಗಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.