ಕರಾವಳಿ ತೀರದ ಗರಿಷ್ಠ ಭದ್ರತೆಗೆ ಸಂಘಟಿತ ಪ್ರಯತ್ನ ಅಗತ್ಯ : ಜಿಲ್ಲಾಧಿಕಾರಿ ಕೂರ್ಮಾರಾವ್
ಮಲ್ಪೆ ಕರಾವಳಿ ಕಾವಲು ಪೊಲೀಸ್ : ಕರಾವಳಿ ಭದ್ರತಾ ತರಬೇತಿ ಸಂಸ್ಥೆ ಉದ್ಘಾಟನೆ
Team Udayavani, Feb 14, 2023, 6:30 AM IST
ಮಲ್ಪೆ : ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಗರಿಷ್ಠ ಭದ್ರತೆ ಮತ್ತು ಸುರಕ್ಷ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಸಮುದ್ರದಲ್ಲಿ ಸಂಭವಿಸುವ ಸಾವುಗಳನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ, ಕರಾವಳಿ ಕಾವಲು ಪೊಲೀಸ್, ಮೀನುಗಾರಿಕಾ ಇಲಾಖೆ , ಮೀನುಗಾರರು ಮತ್ತು ಎಲ್ಲಾ ಸ್ಥಳೀಯ ಸಂಸ್ಥೆಗಳು ಸಂಘಟಿತವಾಗಿ ಪ್ರಯತ್ನಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು.
ಅವರು ಸೋಮವಾರ ಮಲ್ಪೆ ಕರಾವಳಿ ಕಾವಲು ಪೊಲೀಸ್ ಕಚೇರಿಯಲ್ಲಿ ನಡೆದ, ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಬೀಚ್‌ಗಳಲ್ಲಿ ಮತ್ತು ಸಮುದ್ರದಲ್ಲಿ ಪ್ರವಾಸಿಗರು ಮತ್ತು ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಯಾವುದೇ ಅಪಾಯವಾದಲ್ಲಿ ತಕ್ಷಣವೇ ಅವರನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ವಿಧದ ತರಬೇತಿಯನ್ನು ಕರಾವಳಿ ಕಾವಲು ಪೊಲೀಸ್ ಸಿಬಂದಿಗೆ ನೀಡುವ ಅಗತ್ಯವಿದೆ. ಜಿಲ್ಲೆಯ ಎಲ್ಲಾ ಬೀಚ್‌ಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ, ತುರ್ತು ಸಂದರ್ಭಗಳಲ್ಲಿ ಅಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ದಾಖಲೀಕರಣ ಮಾಡುವ ಮಾದರಿ ಕಾರ್ಯವಾಗಬೇಕು ಎಂದರು.
ಪೊಲೀಸರಿಗೆ ತಾಂತ್ರಿಕ ತರಬೇತಿ ಅಗತ್ಯ:
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ಮಾತನಾಡಿ, ಇತ್ತೀಚೆಗೆ ಸಮುದ್ರದ ಮೂಲಕ ಹೆಚ್ಚಿನ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು ಇವುಗಳನ್ನು ನಿಯಂತ್ರಿಸಲು ಪೊಲೀಸ್ ಸಿಬಂದಿಗೆ ನಿರಂತರವಾಗಿ ಕಾನೂನು ಮತ್ತು ತಾಂತ್ರಿಕ ತರಬೇತಿಯ ಅಗತ್ಯವಿದೆ. ಉಡುಪಿ ಜಿಲ್ಲೆಯಲ್ಲೂ ಸಿಎಸ್‌ಪಿ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗಳು ಸೇರಿ ಪ್ರಾಮುಖ್ಯವಾದ ಕೆಲಸಗಳನ್ನು ಮಾಡಬೇಕಾಗಿದೆ. ಸಿಎಸ್‌ಪಿ ಮೂಲಕ ತರಬೇತಿ ಕೊಡುವ ಕೆಲಸ ನಿರಂತರವಾಗಿ ನಡೆಯಲಿ. ಆ ಮೂಲಕ ಕರಾವಳಿ ಜನರ ಮತ್ತು ಮೀನುಗಾರರ ಭದ್ರತೆಯನ್ನು ಕಾಪಾಡುವ ಕೆಲಸ ತಮ್ಮಿಂದ ಆಗಲಿ ಎಂದರು.
ಸಮುದ್ರದಲ್ಲಿ ಪ್ರಾಯೋಗಿಕ ತರಬೇತಿ
ಪ್ರಾಸ್ತಾವಿಕವಾಗಿ ಮಾತನಾಡಿದ, ಕರಾವಳಿ ಕಾವಲು ಪೊಲೀಸ್‌ನ ಎಸ್ಪಿ ಹಾಗೂ ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಅಬ್ದುಲ್ ಅಹದ್ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ಭೂಮಿ, ವಾಯು ಪ್ರದೇಶದ ರಕ್ಷಣೆಗೆ ಪೊಲೀಸ್ ಸಿಬಂದಿಗೆ ತರಬೇತಿ ನೀಡುತ್ತಿದ್ದು, ಕರಾವಳಿ ಭದ್ರತಾ ತರಬೇತಿ ಮೂಲಕ ಮೂರು ವಿಭಾಗದಲ್ಲಿ ರಾಜ್ಯದ ರಕ್ಷಣೆ ಸಾಧ್ಯವಾಗಲಿದೆ. ಈ ತರಬೇತಿ ಕೇಂದ್ರದಲ್ಲಿ ಕರಾವಳಿ ಕಾವಲು ಪೊಲೀಸ್ ವಿಭಾಗದ ಆಯ್ದ ಸಿಬಂದಿಗಳಿಗೆ 2 ವಾರಗಳ ತರಬೇತಿ ನೀಡುತ್ತಿದ್ದು, ನೌಕಾಪಡೆ ,ಕೋಸ್ಟ್ ಗಾರ್ಡ್ ಹಾಗೂ ಬಿಎಸ್‌ಎಫ್‌ನ ನೌಕಾ ಸಿಬಂದಿ ವತಿಯಿಂದ ತರಬೇತಿ ನೀಡಲಿದ್ದು, ತರಬೇತಿಯಲ್ಲಿ ಶೇ. 30 ಪ್ರಯೋಗಿಕ ಮತ್ತು ಶೇ.70 ಥಿಯರಿ ಇರುತ್ತದೆ. ಸಮುದ್ರದಲ್ಲಿ ಪ್ರಾಕ್ಟಿಕಲ್ ತರಬೇತಿಯನ್ನು ನೀಡಲಾಗುತ್ತಿದ್ದು ಇದು ಕರಾವಳಿ ಕಾವಲು ಪೊಲೀಸ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಆಗಲಿದೆ ಎಂದರು.
ಮಂಗಳೂರಿನ ಆಂತರಿಕ ಭದ್ರತಾ ವಿಭಾಗದ ಎಸ್ಪಿ ಡಾ| ಎ. ಎನ್. ಪ್ರಕಾಶ್ ಗೌಡ ಉಪಸ್ಥಿತರಿದ್ದರು.
ಕರಾವಳಿ ಕಾವಲು ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಸ್ವಾಗತಿಸಿದರು. ಪೊಲೀಸ್ ಉಪ ಅಧೀಕ್ಷಕ ಟಿ. ಎನ್. ಸುಲ್ಫಿ ವಂದಿಸಿದರು. ಪಿಎಸ್‌ಐ ಬಿ. ಮನಮೋಹನ್ ರಾವ್ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.