13 ಗ್ರಾಪಂ ಕೊಳವೆಬಾವಿ ನೀರು ಕಲುಷಿತ!
Team Udayavani, Feb 14, 2023, 12:51 PM IST
ನೆಲಮಂಗಲ: ತಾಲೂಕಿನ 13 ಗ್ರಾಪಂ ವ್ಯಾಪ್ತಿಯ ಕೊಳವೆ ಬಾವಿಗಳ ನೀರಿನ ಮೂಲಗಳು ಕಲುಷಿತಗೊಂಡಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ.
ಜನತೆ ಒತ್ತಾಯ: ಜಿಲ್ಲಾ ಮಟ್ಟದ ಪ್ರಯೋಗಾಲಯದ ಹಿರಿಯ ರಾಸಾಯನಿಕ ವಿಶ್ಲೇಷಣೆಗಾರರು ನೀರಿನ ಮಾದರಿ ಪರೀಕ್ಷಿಸಿ ವರದಿ ನೀಡಿದ್ದು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಗ್ರಾಪಂಗಳಿಗೆ ಶುದ್ಧ ನೀರಿನ ಘಟಕದ ಮೂಲಕ ಸಂಸ್ಕರಿಸಿ ನೀರು ಕುಡಿಯುವಂತೆ ನೋಟಿಸ್ ನೀಡಲಾಗಿದೆ.
ತಾಲೂಕಿನ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಬಳಕೆ ಆಗುತ್ತಿರುವ ಕೊಳವೆ ಬಾವಿಗಳ ನೀರು ಕಲುಷಿತವಾಗಿದೆ ಎಂಬ ವರದಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದ್ದು ತಕ್ಷಣ ಶುದ್ಧ ನೀರು ಸರಬರಾಜು ಮಾಡುವಂತೆ ಗ್ರಾಮೀಣ ಜನ ಒತ್ತಾಯ ಮಾಡಿದ್ದಾರೆ.
ಕಲುಷಿತಕ್ಕೆ ಕಾರಣ: ತಾಲೂಕಿನ 13 ಗ್ರಾಪಂ ವ್ಯಾಪ್ತಿಯಲ್ಲಿ ಅನೇಕ ಕೈಗಾರಿಕೆಗಳಿದ್ದು ಅನೇಕ ಕೈಗಾರಿಕೆಗಳ ಕಲುಷಿತ ನೀರನ್ನು ಅಂತರ್ಜಲಕ್ಕೆ ಬಿಡುತ್ತಿದ್ದಾರೆ. ಇದರಿಂದ ಕೊಳವೆ ಬಾವಿಗಳ ನೀರು ಕಲುಷಿತವಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
21ರಲ್ಲಿ 13 ಗ್ರಾಪಂಗಳಲ್ಲಿ ಸಮಸ್ಯೆ: ತಾಲೂಕಿನ 21 ಗ್ರಾಪಂಗಳ ಪೈಕಿ ಸೋಂಪುರ, ಗೊಲ್ಲಹಳ್ಳಿ, ಬೂದಿಹಾಳ್, ಮಣ್ಣೆ, ಕೊಡಿಗೇಹಳ್ಳಿ, ನರಸೀಪುರ, ಶಿವಗಂಗೆ, ಹೊನ್ನೇನಹಳ್ಳಿ, ಟಿ.ಬೇಗೂರು, ದೊಡ್ಡಬೆಲೆ, ಯಂಟಗನಹಳ್ಳಿ, ಕಳಲುಘಟ್ಟ, ಅರೆಬೊಮ್ಮ ನಹಳ್ಳಿ ಸೇರಿ 13 ಗ್ರಾಪಂಗಳಲ್ಲಿ ನೀರಿನ ಮಾದರಿ ಸಂಗ್ರಹಣೆ ಮಾಡಿರುವ ಕೊಳವೆ ಬಾವಿಗಳ ನೀರು ಕಲುಷಿತವಾಗಿದೆ. ಶುದ್ಧ ನೀರಿನ ಘಟಕಗಳೂ ಅನೇಕ ಕಡೆ ರಿಪೇರಿ ಆಗಿದ್ದರೆ ಕೆಲವು ಕಡೆ ಘಟಕಗಳೇ ಇಲ್ಲ ದಂತಾಗಿವೆ.
ಮನವಿ: ಕೊಳವೆ ಬಾವಿ ನೀರು ಕಲುಷಿತ ಎಂಬ ವರದಿ ಬಂದಿರುವ ಕಾರಣ ಗ್ರಾಮೀಣ ಜನ ಕುಡಿಯಲು ತುರ್ತಾಗಿ ಶುದ್ಧ ನೀರು ಸರಬರಾಜು ಮಾಡುವ ಅನಿವಾರ್ಯತೆ ಎದುರಾಗಿದ್ದು ಅಧಿಕಾರಿಗಳು, ಜನಪ್ರತಿನಿಧಿ ಗಳು ಇದರ ಬಗ್ಗೆ ಶೀಘ್ರವೇ ಕ್ರಮಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ.
ಅಂತರ್ಜಲಕ್ಕೆ ಕೈಗಾರಿಕೆಗಳ ಕಲುಷಿತ ನೀರನ್ನು ಬಿಡುವುದರ ಜತೆಗೆ ನೀರಿನ ಮೂಲಗಳಿಗೆ ತ್ಯಾಜ್ಯ ಹಾಕುತ್ತಿರುವ ಕಾರಣ ಕೊಳವೆ ಬಾವಿಗಳಲ್ಲಿಯೂ ನೀರು ಕಲುಷಿತವಾಗುತ್ತಿದೆ. ವರದಿಯ ಮೂಲಕ ಇದು ಸಾಬೀತಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತ ಕ್ರಮಕೈಗೊಳ್ಳಬೇಕು. -ವಿನಯ್ ಸಾಮಾಜಿಕ ಕಾರ್ಯಕರ್ತ
ಗ್ರಾಪಂ ಕೊಳವೆ ಬಾವಿ ನೀರು ಕಲುಷಿತವಾಗಿರುವ ಬಗ್ಗೆ ನನಗೆ ಮಾಹಿತಿ ಬಂದಿಲ್ಲ. ಈ ಸಂಬಂಧಪಟ್ಟ ಇಲಾಖೆಗೆ ತಕ್ಷಣ ಮಾಹಿತಿ ಪಡೆದು ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ. – ಮಧು, ಇಒ ನೆಲಮಂಗಲ ಗ್ರಾಪಂ
ಕೊಳವೆಬಾವಿ ನೀರನ್ನು ಪ್ರಾಥಮಿಕವಾಗಿ ಪರೀಕ್ಷೆ ಮಾಡಿದಾಗ ಕಲುಷಿತವಾಗಿರುವುದು ಕಂಡುಬಂದಿದೆ. ಮತ್ತೂಮ್ಮೆ ಪರೀಕ್ಷೆ ಮಾಡಲಾಗುತ್ತದೆ. ಅಲ್ಲಿಯವರೆಗೂ ಶುದ್ಧ ನೀರಿನ ಘಟಕದಿಂದ ಸಂಸ್ಕರಿಸಿದ ನೀರನ್ನು ಕುಡಿಯಲು ಜನತೆಗೆ ತಿಳಿಸಲಾಗಿದೆ. – ಶ್ರೀಕಾಂತ್, ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೆಲಮಂಗಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.