ವಾಹನ ಸವಾರರೇ ಎಚ್ಚರ, ನೇತ್ರ ಆಯ್ತು ಈಗ ನಯನ ಬರ್ತಿದೆ
Team Udayavani, Feb 15, 2023, 3:42 PM IST
ಬೆಂಗಳೂರು: ಪ್ರಮುಖ ನಗರಗಳಲ್ಲಿ ಸಂಚಾರ ನಿಯಮಗಳ ಉಲ್ಲಂ ಸುವವರ ಮೇಲೆ ಸದ್ಯ “ನೇತ್ರ’ ಸಿಸಿಟಿವಿ ಕಣ್ಗಾವಲು ಇದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಮುಂಬರುವ ದಿನಗಳಲ್ಲಿ ಜತೆಗೆ ಬರುವ ವಾಹನಗಳೆಲ್ಲಾ “ಕ್ಯಾಮೆರಾ ಕಣ್ಣು’ಗಳಾಗಿ ನಿಮ್ಮನ್ನು ಹಿಂಬಾಲಿಸಲಿವೆ. ಅಷ್ಟೇ ಅಲ್ಲ, ಅದರ ಬಗ್ಗೆ ಸಂಬಂಧಪಟ್ಟವರಿಗೆ ವರದಿ ರವಾನಿಸಲಿವೆ!
ಹೌದು, ನಿರ್ಭಯಾ ಯೋಜನೆಯಡಿ ಪ್ರಮುಖ ಸಿಗ್ನಲ್‌ಗಳಲ್ಲಿ ಈಗಾಗಲೇ “ನೇತ್ರ’ ಅಳವಡಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಯುಎಇ ಮೂಲದ ಕಂಪನಿಯೊಂದು ಕೃತಕ ಬುದ್ಧಿಮತ್ತೆ ಆಧಾರಿತ “ನಯನ’ ಆ್ಯಪ್ ಅಭಿವೃದ್ಧಿಪಡಿಸಿದೆ. ಅದನ್ನು ಕ್ಯಾಬ್ ಡ್ರೈವರ್‌ಗಳು, ಆಟೋ ಚಾಲಕರು ಸೇರಿದಂತೆ ಯಾರು ಬೇಕಾದರೂ ಅಳವಡಿಸಿಕೊಳ್ಳಬಹುದು. ಈ ಆ್ಯಪ್ ಓಪನ್ ಇಟ್ಟುಕೊಂಡು ವಾಹನ ಚಾಲನೆ ಮಾಡಿದರೆ, ಎದುರಿಗಿದ್ದ ವಾಹನ ಸವಾರನ ಸಂಚಾರ ನಿಯಮ ಉಲ್ಲಂಘನೆಗಳೆಲ್ಲವೂ ದಾಖಲಾಗುತ್ತದೆ. ಜತೆಗೆ ಸಂಚಾರ ಪೊಲೀಸರು ಅಥವಾ ಸಂಬಂಧಪಟ್ಟ ಇಲಾಖೆಗೆ ರವಾನೆಯಾಗುತ್ತದೆ.
“ಕೇವಲ ಸಂಚಾರ ನಿಯಮ ಉಲ್ಲಂಘನೆ ಅಲ್ಲ; ಮಾರ್ಗದುದ್ದಕ್ಕೂ ಬರುವ ರಸ್ತೆ ಗುಂಡಿಗಳು, ರಸ್ತೆ ಪಕ್ಕದಲ್ಲಿನ ಕಸದ ರಾಶಿ, ಅಪಘಾತಗಳು ಹೀಗೆ ಯಾವುದೇ ಘಟನೆಗಳು ಉದ್ದೇಶಿತ “ನಯನ’ ಆ್ಯಪ್ ನಲ್ಲಿ ದಾಖಲಾಗುತ್ತ ಹೋಗುತ್ತವೆ. ಇದಕ್ಕೆ ಉತ್ತೇಜನ ನೀಡುವಂತೆ “ನಯನ’ ಕಂಪನಿಯು ಪ್ರತಿ ಘಟನೆಯ ದಾಖಲಾತಿಗೆ ಇಂತಿಷ್ಟು ಪಾಯಿಂಟ್‌ಗಳನ್ನು ನೀಡುತ್ತದೆ. ಇದನ್ನು ಆಧರಿಸಿ ಆ್ಯಪ್ ಚಂದಾದಾರರಿಗೆ ಆದಾಯವೂ ಬರುತ್ತದೆ’ ಎಂದು ಕಂಪನಿಯ ಬ್ಯುಸಿನೆಸ್ ಡೆವಲಪ್‌ಮೆಂಟ್ ವಿಭಾಗದ ಉಮಂಗ್ ಗುಪ್ತ “ಉದಯವಾಣಿ’ಗೆ ತಿಳಿಸಿದರು.
ನಗರದಲ್ಲಿ ಶೀಘ್ರ ಬರಲಿದೆ?: “ಮುಖ್ಯವಾಗಿ ನಾವು ಕೇಂದ್ರ ಸರ್ಕಾರ ಆಯ್ಕೆಮಾಡಿದ ಸ್ಮಾರ್ಟ್‌ಸಿಟಿಗಳನ್ನು ಕೇಂದ್ರೀಕರಿಸಿದ್ದು, ರಾಜ್ಯದ ಬೆಂಗಳೂರು, ತುಮಕೂರು ಮತ್ತು ಬೆಳಗಾವಿಯೂ ಇದರಲ್ಲಿವೆ. ಅಲ್ಲೆಲ್ಲಾ ಈ ತಂತ್ರಜ್ಞಾನ ಪರಿಚಯಿಸುವ ಕಾರ್ಯ ವಿವಿಧ ಹಂತಗಳಲ್ಲಿವೆ. ಸದ್ಯಕ್ಕೆ ನಾವು ಕ್ಯಾಬ್ ಮತ್ತು ಆಟೋ ಚಾಲಕರನ್ನು ವ್ಯವಸ್ಥೆ ಜಾಲದಲ್ಲಿ ತರುತ್ತಿದ್ದೇವೆ. ಈಗಾಗಲೇ ಸಾವಿರಕ್ಕೂ ಅಧಿಕ ಚಾಲಕರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದು, ನಿತ್ಯ ಸಾವಿರಾರು ಮಾಹಿತಿಗಳು ಲಭ್ಯವಾಗುತ್ತಿವೆ. ಮೂರು ದಿನಗಳ ಹಿಂದಷ್ಟೇ ಬೆಂಗಳೂರಿನ ಸ್ಮಾರ್ಟ್‌ಸಿಟಿ ಯೋಜನೆ ಮುಖ್ಯಸ್ಥರೊಂದಿಗೂ ಮಾತುಕತೆ ನಡೆಸಿದ್ದು, ಆದಷ್ಟು ಶೀಘ್ರ ಈ ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ’ ಎಂದು ಅವರು ಮಾಹಿತಿ ನೀಡಿದರು.
“ಸಾಮಾನ್ಯವಾಗಿ ಸ್ಟೇರಿಂಗ್ ಪಕ್ಕದಲ್ಲೇ ಗೂಗಲ್ ಮ್ಯಾಪ್‌ಗಾಗಿ ಡ್ಯಾಶ್‌ಬೋರ್ಡ್ ಇರುತ್ತದೆ. ಅದೇ ವ್ಯವಸ್ಥೆಯಲ್ಲಿ ಈ “ನಯನ’ ಕೂಡ ಸಕ್ರಿಯವಾಗಿರಲಿದೆ. ಉದಾಹರಣೆಗೆ ಆ ವಾಹನದ ಮುಂಭಾಗದಲ್ಲಿ ಬೈಕ್ ಸವಾರ ಹೆಲ್ಮೆಟ್ ಧರಿಸದೆ ಚಾಲನೆ ಮಾಡುತ್ತಿದ್ದರೆ, ತಕ್ಷಣ ಅದು ಮೊಬೈಲ್‌ನಲ್ಲಿ ಸೆರೆಯಾಗುತ್ತದೆ. ನಂತರ ಅದು ಸ್ಮಾರ್ಟ್‌ಸಿಟಿ ನೋಡಿಕೊಳ್ಳುತ್ತಿರುವವರಿಗೆ ಹೋಗುತ್ತದೆ. ಅವರು ಸಂಚಾರ ಪೊಲೀಸರಿಗೆ ಕಳುಹಿಸುತ್ತಾರೆ. ಇದರಿಂದ ಚಾಲಕರಿಗೆ ಆಗುವ ಲಾಭವೆಂದರೆ ಪಾಯಿಂಟ್‌ಗಳು ಸಿಗುತ್ತವೆ. ಅದು ಆದಾಯವಾಗಿ ಪರಿವರ್ತನೆಯಾಗುತ್ತದೆ. ಆದರೆ, ಈ ಆದಾಯವು ಆಯಾ ನಗರಗಳಲ್ಲಿನ ಪ್ರಮುಖ ಸಮಸ್ಯೆಗಳನ್ನು ಆಧರಿಸಿರುತ್ತದೆ. ಉದಾಹರಣೆಗೆ ಬೆಂಗಳೂರಿನಲ್ಲಿಯ ರಸ್ತೆಗುಂಡಿಗಳು ತುಂಬಾ ಇರಬಹುದು. ಅದರ ಬಗ್ಗೆ ಮಾಹಿತಿ ಒದಗಿಸಿದಾಗ, ಹೆಚ್ಚು ಪಾಯಿಂಟ್‌ಗಳು ಬರಬಹುದು’ ಎಂದು ವಿವರಿಸಿದರು.
ನಗರದ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ “ಏರೋ ಇಂಡಿಯಾ ಶೋ’ದಲ್ಲಿ ಇಂಡಿಯಾ ಪೆವಿಲಿಯನ್‌ನಲ್ಲಿ ಈ ವ್ಯವಸ್ಥೆಯನ್ನು ಕಾಣಬಹುದು.
ಸೋಲಾರ್ ಆಧಾರಿತ ಕಣ್ಗಾವಲು! : ಇಂಟರ್‌ನೆಟ್ ಬೇಡ. ವಿದ್ಯುತ್ ಸೌಲಭ್ಯವೂ ಬೇಕಿಲ್ಲ. ಸೌರವಿದ್ಯುತ್‌ನಿಂದ ಸ್ವತಂತ್ರವಾಗಿ ವಾಹನಗಳ ಮೇಲೆ ಕಣ್ಗಾವಲಿಡುವ ರಿಮೋಟ್ ಮಾನಿಟರಿಂಗ್ ಸಿಸ್ಟಂ ಬಂದಿದೆ. ಪ್ರಸ್ತುತ ಪ್ರಮುಖ ನಗರಗಳಲ್ಲಿ ಅಳವಡಿಸಲಾದ ಸಿಸಿಟಿವಿಗಳು ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಫೋಟೋ ಸೆರೆಹಿಡಿಯುತ್ತದೆ. ಅದು ಸಂಬಂಧಪಟ್ಟವರಿಗೆ ರವಾನೆ ಆಗುತ್ತದೆ. ಆದರೆ, ಇದಕ್ಕೆ ಇಂಟರ್‌ನೆಟ್ ಅವಶ್ಯಕತೆ ಇದೆ. ಡಾಟಾ ಸಂಗ್ರಹಿಸಿಡಲು ಅಪಾರ ಪ್ರಮಾಣದ ದತ್ತಾಂಶ ಸಂಗ್ರಹ ವ್ಯವಸ್ಥೆ ಇರಬೇಕಾಗುತ್ತದೆ. ಸೌರಶಕ್ತಿ ಯಿಂದ ಇದು ಕಾರ್ಯನಿರ್ವಹಿಸುತ್ತದೆ. ಇಂಟ ರ್‌ನೆಟ್ ಇಲ್ಲದೆ, ವೀಡಿಯೋಗಳನ್ನು ಸೆರೆಹಿಡಿದು ಕಳುಹಿಸುತ್ತದೆ ಎಂದು ಮೇಡ್‌ಇಟ್ ಇನೋ ವೇಷನ್ ಫೌಂಡೇಷನ್ ಕನ್ಸಲ್ಟಂಟ್ ಎಂ. ಸೇಸುರಾಜನ್ ತಿಳಿಸಿದರು.
ಸೋಲಾರ್ ಆಧಾರಿತ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ರಿಮೋಟ್ ಮಾನಿಟರಿಂಗ್ ಸಿಸ್ಟ್‌ಂ ಅನ್ನು ಪ್ರಾಯೋಗಿಕವಾಗಿ ಚೆನ್ನೈನಲ್ಲಿ ಮೂರು ಕಡೆಗಳಲ್ಲಿ ಅಳವಡಿಸಲಾಗಿದೆ. ರಾತ್ರಿ ವೇಳೆ ಚಂದ್ರನ ಬೆಳಕಿನಿಂದಲೇ ಇದು ಕಾರ್ಯನಿರ್ವ ಹಿಸಲಿದ್ದು, ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಸಿಗುವುದು ಕಷ್ಟ ಎಂದು ಅವರು ಸ್ಪಷ್ಟಪಡಿಸಿದರು.
-ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.