ದೊಡ್ಡಬಳ್ಳಾಪುರ: ಸಂಗೀತ ಕೇತ್ರಕ್ಕೆ ಪುರಂದರದಾಸರ ಕೊಡುಗೆ ಅಪಾರ
ತಮ್ಮ ಪಂಚರತ್ನ ಕೃತಿಗಳ ಮೂಲಕ ಭಕ್ತಿಯ ಪರಾಕಾಷ್ಟತೆ ಮುಟ್ಟಿದ್ದಾರೆ
Team Udayavani, Feb 16, 2023, 2:25 PM IST
ದೊಡ್ಡಬಳ್ಳಾಪುರ: ಜನಸಾಮಾನ್ಯರಿಂದ ದೂರವಾಗುತ್ತಿದ್ದ ಶಾಸ್ತ್ರೀಯ ಸಂಗೀತಕ್ಕೆ ಹೊಸ ಆಯಾಮ ನೀಡುವ ಮೂಲಕ ಕರ್ನಾಟಕ ಸಂಗೀತವನ್ನು ಜಗದ್ವಿಖ್ಯಾತ ಮಾಡಿದ ಕೀರ್ತಿ ಪುರಂದರ ದಾಸರಿಗೆ ಸಲ್ಲುತ್ತದೆ ಎಂದು ಪಿಟೀಲು ವಾದಕ ವಿದ್ವಾನ್ ಆರ್.ಜಗದೀಶ್ ಕುಮಾರ್ ಹೇಳಿದರು.
ನಗರದ ದೇವಾಂಗ ಮಂಡಳಿ ಕಲ್ಯಾಣ ಮಂದಿರದಲ್ಲಿ ನಡೆದ ಸುಸ್ವರ ಸಂಸ್ಥೆಯ 24ನೇ ವಾರ್ಷಿಕೋತ್ಸವ ಹಾಗೂ ಶ್ರೀ ತ್ಯಾಗರಾಜ ಮತ್ತು ಪುರಂದರದಾಸರ ಆರಾಧನಾ ಮಹೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಸಾಹಿತ್ಯ, ಸಂಗೀತ, ಸಂಸ್ಕಾರ ನೀಡಿರುವ ಪುರಂದರದಾಸರ 4.5 ಲಕ್ಷ ಕೃತಿಗಳಲ್ಲಿ ನಮಗೆ ದೊರೆತಿರುವುದು ಕೆಲ ಸಾವಿರಾರು ಕೃತಿಗಳು ಮಾತ್ರ. ಸ್ವರ, ಲಯ, ಭಾವಗಳ ಆಧಾರದ ಮೇಲೆ ಸಂಗೀತದ ಬುನಾದಿ ನಿಂತಿದ್ದು, ನವವಿಧ ಭಕ್ತಿಯ ಮೇಲೆ ಕೀರ್ತನೆ ರಚಿಸಿ ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಪುರಂದರ ದಾಸರು ಕರ್ನಾಟಕ ಸಂಗೀತ ಪಿತಾಮಹ ಎನಿಸಿಕೊಂಡಿದ್ದಾರೆ ಎಂದರು.
ಕರ್ನಾಟಕ ಸಂಗೀತಕ್ಕೆ ಮೆರುಗು ನೀಡಿದ ತ್ಯಾಗ ರಾಜರು ಶ್ರೀ ರಾಮನಲ್ಲಿ ಅಪಾರ ಭಕ್ತಿಯುಳ್ಳವರಾಗಿ ರಾಮನಿಗೆ ತಮ್ಮ ಕೀರ್ತನೆ ಸಮರ್ಪಿ ಸಿದ್ದರು. ರಾಮನ ಹೊರತಾಗಿ ರಾಜನಿಗೆ ತಮ್ಮ ಭಕ್ತಿ ಸಮರ್ಪಿಸಿ ಕೀರ್ತನೆಗಳನ್ನು ಹಾಡಬೇಕೆಂದಾಗ ರಾಜಾಶ್ರಯವನ್ನೇ ತಿರಸ್ಕರಿಸಿದ್ದರು. ಸಂಗೀತಕ್ಕೆ ಮುಕುಟ ಪ್ರಾಯವಾದ ತಮ್ಮ ಪಂಚರತ್ನ ಕೃತಿಗಳ ಮೂಲಕ ಭಕ್ತಿಯ ಪರಾಕಾಷ್ಟತೆ ಮುಟ್ಟಿದ್ದಾರೆ ಎಂದರು.
ಮಕ್ಕಳಲ್ಲಿ ಸಂಗೀತ ಅಭಿರುಚಿ ಮೂಡಿಸಿ: ಸುಸ್ವರ ಟ್ರಸ್ಟ್ ಅಧ್ಯಕ್ಷ ಎ.ಆರ್. ನಾಗರಾಜನ್ ಮಾತನಾಡಿ, ಸಂಗೀತಕ್ಕೆ ಅರ್ಪಣಾ ಮನೋಭಾವ ಬೇಕಿದ್ದು, ಕಲಿಕೆ ನಿರಂತರವಾಗಿರಬೇಕಿದೆ, ಇದಕ್ಕೆ ಪುರಂದರ ದಾಸರು, ತ್ಯಾಗರಾಜರು ನಮಗೆ ಮಾದರಿಯಾಗಬೇಕು. ಸುಸ್ವರ ಇಂದು ಪ್ರತಿ ಎರಡು ತಿಂಗಳಿಗೊಮ್ಮೆ ಸಂಗೀತ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದು, ಇದಕ್ಕೆ ಹಣದ ಕೊರತೆಯಿಲ್ಲ. ಆದರೆ, ಸಹೃದಯರ ಕೊರತೆಯಿದೆ. ಸಂಗೀತ ಶಿಕ್ಷಕರು, ಪೋಷಕರು
ಭಾಗವಹಿಸುವುದರೊಂದಿಗೆ ಮಕ್ಕಳಲ್ಲಿಯೂ ಸಂಗೀತ ಅಭಿರುಚಿ ಮೂಡಿಸಬೇಕಿದೆ ಎಂದರು.
ಬಹುಮಾನ ವಿತರಣೆ: ಪಿಟೀಲು ವಾದಕ ವಿದ್ವಾನ್ ಆರ್. ಜಗದೀಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸುಸ್ವರ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಪಿ.ಶ್ರೀನಿವಾಸ ಮೂರ್ತಿ, ಖಜಾಂಚಿ ಎಂ.ಬಿ. ಗುರುದೇವ, ಟ್ರಸ್ಟಿಗಳಾದ ಡಾ.ಎ.ಒ.ಆವಲಮೂರ್ತಿ ಎಸ್.ರಾಜಲಕ್ಷ್ಮೀ, ಎನ್. ದೇವರಾಜ್ ಕಾರ್ಯಕ್ರಮದ ಸಂಘಟಕರಾದ ಸಿ.ವೆಂಕಟರಾಜು ಎನ್.ಸಿ.ಲಕ್ಷ್ಮೀ, ಕಾರ್ಯಕ್ರಮ ಆಯೋಜನಾ ಸಮಿತಿ ವಿದುಷಿ ಶಾರದಾ ಶ್ರೀಧರ್, ವಿ.ಪಿ.ರಘುನಾಥ ರಾವ್, ವಿದುಷಿ ಸುಮಾ ಸು ನಿಲ್, ಬಿ.ಎನ್. ವಿಜಯ,ವರಲಕ್ಷ್ಮೀ, ಟಿ.ಗಿರೀಶ್, ಶ್ವೇತಾ, ಲತಾ ಸುನಿಲ್, ಸಂಧ್ಯಾ, ಎನ್.ಭಾಸ್ಕರ್ ಇದ್ದರು. ಆರಾಧನಾ ಮಹೋತ್ಸವದ ಅಂಗವಾಗಿ ಮಂಗಳವಾದ್ಯ, ಸ್ಥಳೀಯ ಕಲಾವಿದರಿಂದ ಸಂಗೀತ ಗಾಯನ, ಪುರಂದರದಾಸರ ಪಿಳ್ಳಾರಿ ಗೀತೆಗಳು ಮತ್ತು ತ್ಯಾಗರಾಜರ ಪಂಚರತ್ನ ಕೀರ್ತನೆಗಳ ಸಮೂಹ ಗಾಯನ ಸ್ಥಳೀಯ ಕಲಾವಿದರಿಂದ ಗಾಯನ ನಡೆಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.