ಈ ಭೂಮಿ ಬಣ್ಣದ ಬುಗರಿ… ಕಾಲ ಕ್ಷಣಿಕ ಕಣೋ…ಭೂಕಂಪ ಸಂತ್ರಸ್ತರ ಬದುಕಿನ ಕರಾಳತೆ
Team Udayavani, Feb 19, 2023, 8:05 AM IST
ಸುಸ್ಥಿರವಾಗಿದ್ದ ಬದುಕು ಹೇಗೆ ಕ್ಷಣ ಮಾತ್ರದಲ್ಲಿ ಬದಲಾಗಿ ಬಿಡುತ್ತದೆ ಎನ್ನುವುದಕ್ಕೆ ಟರ್ಕಿ-ಸಿರಿಯಾ ಸಾಕ್ಷಿಯಾಗಿ ಕಣ್ಣ ಮುಂದಿದೆ. ತೀವ್ರ ಭೂಕಂಪದ ಹೊಡೆತಕ್ಕೆ ಇಲ್ಲಿನ ಜನರ ಬದುಕು ನೆಲೆ ಕಳೆದುಕೊಂಡಿದೆ. ನಾಗರಿಕತೆ ಅಸ್ತಿತ್ವದಲ್ಲಿತ್ತು ಎನ್ನುವುದಕ್ಕೆ ಅಲ್ಲಿ ಈಗ ಸಾಕ್ಷಿಯಾಗಿ ಉಳಿದಿರುವುದು ಕಾಂಕ್ರೀಟ್ ಅವಶೇಷಗಳಷ್ಟೆ. ಸಾವು-ಬದುಕು ವಿಧಿಯನ್ನೂ ಮೀರಿ ನಿಂತ ಕ್ಷಣಗಳನ್ನು ಕಂಡಿದ್ದೇವೆ. ಹದಿನೈದು ದಿನಗಳಾದರೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ತನ್ನವರಿಗಾಗಿ ಇನ್ನು ಎಷ್ಟೋ ಜೀವಗಳು ಹುಡುಕುತ್ತಲೇ ಇವೆ. ಧರೆಗುರುಳಿದ ಕಟ್ಟಡಗಳ ಅವಶೇಷಗಳಡಿಯಿಂದ ಶವಗಳನ್ನು ಒಂದೊಂದಾಗಿಯೇ ಹೊರತೆಗೆಯಲಾಗುತ್ತಿದೆಯಾದರೆ, ಅಲ್ಲೊಂದು ಇಲ್ಲೊಂದು ಎಂಬಂತೆ ಜೀವಗಳು ಉಸಿರನ್ನು ಬಿಗಿಹಿಡಿದು ಹೊಸ ಬದುಕಿನ ನಿರೀಕ್ಷೆಯಲ್ಲಿ, ನೆರವಿನ ಭರವಸೆಯಲ್ಲಿವೆ. ಹೆಣಗಳ ವಿಲೇವಾರಿಗೆ ಶ್ಮಶಾನದಲ್ಲೂ ಜಾಗವಿಲ್ಲದಷ್ಟು ಪರಿಸ್ಥಿತಿ ಬಿಗಡಾಯಿಸಿದೆ. ಭೂಕಂಪ ಸಂತ್ರಸ್ತ ಪ್ರದೇಶಗಳತ್ತ ಇಣುಕಿ ನೋಡಿದರೆ ಇಂಥ ನೂರಾರು ಬದುಕಿನ ಕಥೆಗಳು ನಮ್ಮ ಹೃದಯವನ್ನು ಕಲಕುತ್ತವೆ.
“ನನ್ನ ಕಣ್ಣುಗಳೇ ತುಂಬಿ ಬಂದವು’
ಸಿರಿಯಾದ ಅಫ್ರಿನ್ ನಗರದಲ್ಲಿರುವ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಬ್ಬರ ಮಾತಿದು. ಸುಮಾರು 30 ಗಂಟೆಗಳ ಅನಂತರ ಕುಸಿದ ಕಟ್ಟಡ ಗಳ ಅಡಿಯಲ್ಲಿ ಅಪ್ಪ-ಅಮ್ಮ ಹಾಗೂ ಅವನ ಒಡಹುಟ್ಟಿ ದವರ ಶವದ ನಡುವೆ ಜೀವಂತವಾಗಿ ಏಳು ವರ್ಷದ ಬಾಲಕ ಮೊಹಮ್ಮದ್ ದೊರಕಿದ್ದ. ಆಸ್ಪತ್ರೆಯ ಬೆಡ್ ಮೇಲೆ ಮಲಗಿ, ತೀಕ್ಷ್ಣ ನೋಟ ಬೀರುತ್ತಿದ್ದ ಬಾಲಕನನ್ನು ಕಂಡ ವೈದ್ಯರ ಕಣ್ಣುಗಳು ತುಂಬಿ ಬಂದಿದ್ದವು. “ಆ ಬಾಲಕನ ಕಣ್ಣಿನ ನೋಟಗಳು ನನ್ನನ್ನು ನಿಜವಾಗಿಯೂ ಕಾಡಿಸುತಿತ್ತು. ಅವನು ನನ್ನನ್ನು ನೋಡಿದ ತತ್‌ಕ್ಷಣ ನನಗೆ ಅರಿವಿಲ್ಲದೇ ನಾನು ಅಳತೊಡಗಿದೆ. ಬಾಲಕನ ಕಣ್ಣುಗಳು ನನ್ನ ಮೇಲೆ ಬಲವಾದ ನಂಬಿಕೆಯ ನೋಟವನ್ನು ಬೀರುತ್ತಿದ್ದವು. ಆಘಾತದ ನೋವನ್ನು ಸಹಿಸಿಕೊಳ್ಳುವ ಶಕ್ತಿ ಆ ಬಾಲಕನಿಗೆ ಎಲ್ಲಿಂದ ಬಂದಿರಬಹುದು ಎಂಬುದೇ ನನಗೆ ಆಶ್ಚರ್ಯವಾಗುತ್ತದೆ’ ಎಂದು ಹೇಳುವಾಗ ಆ ವೈದ್ಯರ ಕಣ್ಣಿನಿಂದ ನೀರು ಜಿನುಗತೊಡಗುತ್ತದೆ.
ಮೊಮ್ಮಗನನ್ನು ಉಳಿಸಿ…
ಕೈ- ಕಾಲುಗಳು ಸುಕ್ಕು ಕಟ್ಟಿವೆ, ಕಾಂಕ್ರೀಟ್ ತುಂಡುಗಳ ಧೂಳಿನ ನಡುವೆ ನಿಂತು ಆ ಹಳೆಯ ಜೀವದ ಕಣ್ಣುಗಳು ತನ್ನ ಮೊಮ್ಮಗನನ್ನು ಅರಸುತ್ತಿದೆ. ಟರ್ಕಿಯ ಅದಾನ ಸಿಟಿಯಲ್ಲಿ ಬಿದ್ದಿರುವ ಅಪಾರ್ಟ್‌ಮೆಂಟ್‌ಗಳ ನಡುವೆ ನಿಂತಿರುವ ಅಜ್ಜ “ನನ್ನ 11 ವರ್ಷದ ಮೊಮ್ಮಗನಿಗೆ ಸಹಾಯ ಮಾಡಿ. ಅವರ ಕುರಿತು ಯಾವುದೇ ಸುದ್ದಿ ತಿಳಿಯುತ್ತಿಲ್ಲ. ಅವರು 21 ನೇ ಮಹಡಿಯಲ್ಲಿ ವಾಸಿಸುತ್ತಿದ್ದರು. ಅವರನ್ನು ಬದುಕಿಸಿ’ ಎಂದು ಅಳುತ್ತಾ ಸಿಕ್ಕಸಿಕ್ಕವರೊಡನೆ ಅಂಗಲಾಚುತ್ತಿದ್ದಾರೆ. ಆದರೆ ಪರಿಹಾರ ಮತ್ತು ರಕ್ಷಣ ಕಾರ್ಯಾಚರಣೆಯಲ್ಲಿ ತೊಡಗಿಕೊಂಡವರು ಮತ್ತು ತಮ್ಮವರಿಗಾಗಿ ಅಜ್ಜನಂತೆಯೇ ಹುಡುಕಾಟದಲ್ಲಿ ನಿರತವಾಗಿರುವವರೆಲ್ಲರದೂ ಮೌನವೇ ಉತ್ತರ. ಅಜ್ಜನ ಆರ್ತನಾದ ದೇವರಿಗೆ ಕೇಳಿಸೀತೇ? ಎಂಬುದಕ್ಕೆ ಕಾಲವೇ ಉತ್ತರಿಸಬೇಕಷ್ಟೆ.
ಅಂತೂ ಬದುಕಿತು ಬಡ ಜೀವ !
ಭೂಕಂಪದ ತೀವ್ರತೆಗೆ ಉರುಳಿಬಿದ್ದ ಬಹುಮಹಡಿ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರನ್ನು ತಮ್ಮ ಅವಿರತ ಶ್ರಮದಿಂದ ಮೇಲಕ್ಕೆತ್ತಿ ಅವರ ಪ್ರಾಣ ಕಾಪಾಡಿದ ರಕ್ಷಣ ಸಿಬಂದಿ ಆ ಬಳಿಕ ಕಣ್ಣೀರು ಹಾಕುವ ವೀಡಿಯೋ ನೆಟ್ಟಿಗರ ಮನ ಗೆದ್ದಿದೆ. ಹಲವು ಗಂಟೆಗಳ ಕಾರ್ಯಾಚರಣೆಯ ಅನಂತರ ಕಾಂಕ್ರೀಟ್ ತುಂಡುಗಳ ಅಡಿಯಿಂದ ಮಗು ಮತ್ತು ತಾಯಿಯನ್ನು ರಕ್ಷಿಸಿದ ಬಳಿಕ ಎರಡು ಜೀವಗಳನ್ನು ಉಳಿಸಿದ ಸಂತೃಪ್ತಿಯ ಭಾವದ ಕಣ್ಣೀರು ಸಿಬಂದಿಯ ಕಣ್ಣಲ್ಲಿ ತುಂಬಿಕೊಂಡಿತ್ತು. ಕಳೆದ ಎರಡು ವಾರಗಳಿಂದೀಚೆಗೆ ಭೂಕಂಪಪೀಡಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ರಕ್ಷಣ ಮತ್ತು ಪರಿಹಾರ ಕಾರ್ಯಾಚರಣ ತಂಡಗಳು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಮೃತದೇಹಗಳನ್ನು ಹೊರತೆಗೆಯುವ ಕಾಯಕದಲ್ಲಿ ನಿರತವಾಗಿವೆ. ರಕ್ಷಣ ಕಾರ್ಯಾಚರಣೆ ವೇಳೆ ಕೆಲವರನ್ನು ಜೀವಂತವಾಗಿ ಅವಶೇಷಗಳಡಿಯಿಂದ ಮೇಲಕ್ಕೆತ್ತುವಾಗ ಈ ಸಿಬಂದಿಯ ಮೊಗದಲ್ಲಿ ಮೂಡುವ ಹರ್ಷ ಮತ್ತು ಸಂತೃಪ್ತಿಯ ಭಾವವನ್ನು ಕಂಡು ನೆಟ್ಟಿಗರ ಕಣ್ಣಲ್ಲೂ ಆನಂದಬಾಷ್ಪ ಸುರಿಯುತ್ತಿದೆ.
ಮಿರಾಕಲ್ ಬೇಬಿ
ತನ್ನ ಕೂಸಿಗೆ ಜನ್ಮ ನೀಡಿದಾಗ ಸುಂದರ ವಾದ ಈ ಹೊರ ಜಗತ್ತನ್ನು ತನ್ನ ಕಂದಮ್ಮನಿಗೆ ತೋರಿಸಿ ಸಂಭ್ರಮಿಸಬೇಕೆಂದು ಆ ತಾಯಿ ಅಂದುಕೊಂಡಿದ್ದಳು. ತಾಯಿಯ ಗರ್ಭದಿಂದ ಇನ್ನೇನು ಹೊರಬಂದು ಹೊರ ಪ್ರಪಂಚವನ್ನು ನೋಡುವ ತವಕ ಆ ಕೂಸಲ್ಲಿ. ಆದರೆ ವಿಧಿಯಾಟ ನಡೆದಿದ್ದೇ ಬೇರೆ. ರಾತ್ರಿ ಬೆಳಗಾಗುವುದರಲ್ಲಿ ಇವೆಲ್ಲ ಛಿದ್ರವಾಗಿ ಕೇವಲ ಕನಸಾಗಿ ಉಳಿದಿದ್ದವು. ಭೂಮಿಯ ಕಂಪನ ತಾಯಿ – ಮಗುವಿನ ಹಣೆ ಬರಹವನ್ನೇ ಬದಲಿಸಿತ್ತು. ತಾಯಿಯ ಕರುಳಬಳ್ಳಿಯ ಹಿಡಿದು ಕಾಂಕ್ರೀಟ್‌ಗಳ ಧೂಳು ಗಾಳಿಯ ನಡುವೆ ಮಗು ಜನ್ಮ ತಾಳಿತ್ತು. ನತದೃಷ್ಟ ತಾಯಿ ತನ್ನ ಕೂಸು ಬದುಕಿದೆಯೋ, ಇಲ್ಲವೋ ಎಂಬುದೂ ಅರಿವಿಲ್ಲದೇ ನಿಶ್ಚಲವಾಗಿ ಮಲಗಿದ್ದಳು. ಶವಗಳು, ರಕ್ತ, ನೆಲಕ್ಕುರುಳಿದ್ದ ಸಾಲುಸಾಲು ಕಟ್ಟಡಗಳು ಹೀಗೆ ನಿಸರ್ಗದ ರೌದ್ರತೆಗೆ, ಪ್ರಪಂಚದ ಅಸಹಾಯಕತೆಗೆ ಕೂಸು ಸಾಕ್ಷಿಯಾಗಿತ್ತು. ಹುಟ್ಟುತ್ತಲೇ ಜಗತ್ತು ಎಂದೂ ಮರೆಯದ ಘಟನೆಯ ಕುರುಹಾಗಿ ಆ ಜೀವ ಉಳಿದಿದೆ.
ತನ್ನವರನ್ನೆಲ್ಲ ಕಳೆದುಕೊಂಡಿರುವ ಸಿರಿಯಾದ ಈ ಹೆಣ್ಣು ಮಗುವಿಗೆ “ಅಯಾ’ ಎಂದು ಹೆಸರಿಡಲಾಗಿದೆ. “ಅಯಾ’ ಎಂದರೆ ಅರೇಬಿಕ್‌ನಲ್ಲಿ “ಮಿರಾಕಲ್’ ಎಂದರ್ಥ. ಈ ಕೂಸು ಬದುಕಿ ಉಳಿದದ್ದು ಸಹ ವಿಸ್ಮಯವೇ. ಈ ಮಿರಾಕಲ್ ಬೇಬಿಯನ್ನು ದತ್ತು ಪಡೆದು ಒಂದು ಸುಂದರ ಜೀವನ ಕೊಡಲು ಸೋಶಿಯಲ್ ಮೀಡಿಯಾದಲ್ಲಿ ಅದೆಷ್ಟೋ ಮಂದಿ ಮುಂದೆ ಬಂದಿದ್ದಾರೆ. ಹುಟ್ಟುತ್ತಲೇ ಕರಾಳತೆಯನ್ನು ಕಂಡ ಕೂಸಿನ ಭವಿಷ್ಯ ಉಜ್ವಲವಾಗಿ ಪ್ರಜ್ವಲಿಸಲಿ ಎಂಬ ಆಶಯ ಕೇವಲ ಸಿರಿಯಾದ ಜನತೆ ಮಾತ್ರವಲ್ಲ ಇಡೀ ವಿಶ್ವದ ಆಶಯ, ಹಾರೈಕೆ.
ವೈರಲ್ ಕಥೆಗಳು
ಟ್ವಿಟರ್‌ನಲ್ಲಿ #turkeyearthquake ಎಂದು ಹುಡುಕಿದರೆ ಹಲವಾರು ಮನಕಲಕುವ ದೃಶ್ಯಗಳು ನಮ್ಮ ಕಣ್ಣೆದುರು ತೆರೆದುಕೊಳ್ಳುತ್ತವೆ. ಭೂಕಂಪ ಸಂಭವಿಸಿದ ದಿನದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಅಲ್ಲಿನ ರಕ್ಷಣ ಮತ್ತು ಪರಿಹಾರ ಕಾರ್ಯಾಚರಣೆಯ ಫೋಟೋ, ವೀಡಿಯೋಗಳನ್ನು ಕಂಡಾಗ ನಮ್ಮವರಿಗಾಗಿ ಕಣ್ತುಂಬಿಕೊಂಡು ಹುಡುಕಾಡುವ ಕಣ್ಣುಗಳು, ಬದುಕಿನ ಅಸಹಾಯಕತೆಯನ್ನು ಹೇಳಲಾಗದೇ ಒದ್ದಾಡುತ್ತಿರುವ ಜೀವಗಳು, ಸಾವನ್ನಪ್ಪಿದೆವು ಎಂದು ತಿಳಿದಿದ್ದವರು ರಕ್ಷಣ ಕಾರ್ಯಪಡೆಗಳ ಅವಿರತ ಶ್ರಮದಿಂದ ಅದೆಷ್ಟೋ ಗಂಟೆಗಳ ಅನಂತರ ರಕ್ಷಿಸಲ್ಪಟ್ಟು ಜಗತ್ತನ್ನು ಮತ್ತೆ ಕಾಣುವಂತಾ ದಾಗ ಅದೇನೋ ಸಂತೃಪ್ತ ಭಾವನೆ, ಅವಶೇಷ ಗಳಡಿಯಲ್ಲಿ ಸಿಲುಕಿದ ಜೀವಗಳನ್ನು ಉಳಿಸಿದ ರಕ್ಷಕರ ಖುಷಿಯ ಕಣ್ಣೀರು… ಹೀಗೆ ಒಂದೇ ಎರಡೇ ಇಂತಹ ಸಾವಿರಾರು ಮನಮುಟ್ಟುವ ದೃಶ್ಯಾವಳಿಗಳೇ ನಮ್ಮ ಕಣ್ಣಿಗೆ ರಾಚುತ್ತವೆ.
“ನಮ್ಮನ್ನು ರಕ್ಷಿಸಿ, ನಾವು ದೇಶ ಸೇವೆ ಮಾಡುತ್ತೇವೆ’
ತುಂಡು ತುಂಡಾದ ಕಾಂಕ್ರೀಟ್‌ಗಳ ಮೇಲೆ ಎರಡು ಪುಟ್ಟ ಜೀವಗಳು ರಕ್ಷಣೆಯ ನಿರೀಕ್ಷೆಯಲ್ಲಿ ಮಲಗಿರುವ ಫೋಟೋ ಒಂದು ಸಾಮಾಜಿಕ ಜಾಲ ತಾಣಗಳಲ್ಲಿ ತುಂಬಾ ವೈರಲ್ ಆಗಿದೆ. ಸುಮಾರು 7 ವರ್ಷದ ಬಾಲಕಿ ತನ್ನ ಜತೆಗಿರುವ ತಮ್ಮನ ತಲೆಯ ಮೇಲೆ ಕೈಯಿಟ್ಟು, ಆತನನ್ನು ಎದೆಗವುಚಿಕೊಂಡು ಮಲಗಿ, ” ನಮ್ಮನ್ನು ರಕ್ಷಿಸಿ, ನಾವು ಮುಂದೆ ದೇಶ ಸೇವೆ ಮಾಡುತ್ತೇವೆ’ ಎಂದು ಹೇಳಿರುವ ಮಾತುಗಳು ಎಂಥ ಕಠೊರ ಮನಸ್ಸನ್ನೂ ಕ್ಷಣಕಾಲ ಕದಡದೇ ಇರಲಾರದು. ಬಾಲಕಿಯ ದೇಶಪ್ರೇಮ ಕ್ಷಣಕಾಲ ಎಲ್ಲರನ್ನೂ ಸ್ತಂಭೀಭೂತರನ್ನಾಗಿಸುತ್ತದೆ.
ಮಗನ ಶವದೊಂದಿಗೆ ತಾಯಿ
ರಸ್ತೆಯ ಮಧ್ಯದಲ್ಲಿ ಕಪ್ಪು ಬಣ್ಣದ ಕವರ್‌ನಲ್ಲಿ ಶವವನ್ನು ಸುತ್ತಿ ಇಡಲಾಗಿದೆ. ಅದರ ಪಕ್ಕದಲ್ಲೇ ಇನ್ನೊಂದು ಜೀವ ಬದುಕಿದ್ದರೂ ಸತ್ತಂತೆ ಕಣ್ಣುಮುಚ್ಚಿ ಶವದ ತಲೆಗೆ ತಲೆಕೊಟ್ಟು ಮಲಗಿದೆ. ಭೂಕಂಪ ದಲ್ಲಿ ಸಾವನ್ನಪ್ಪಿದ ಮಗನ ಶವವನ್ನು ಕಾಯುತ್ತಾ ತಾಯಿ ಭಾರದ ಹೃದಯದಿಂದ ನಿರ್ಲಿಪ್ತವಾಗಿ ಮಲಗಿರುವ ದೃಶ್ಯವಿದು.
ಹಿಂದೆಂದೂ ಅನುಭವಿಸದ ಕ್ಷಣ…
“ನಿಂತ ಭೂಮಿ ನಡುಗುತ್ತಿದೆ. ನಾವೆಲ್ಲ ನಡುಗುತ್ತಿದ್ದೇವೆ. ಹಿಂದೆಂದೂ ಈ ರೀತಿಯ ಅನುಭವವಾಗಿರಲಿಲ್ಲ’ ಟರ್ಕಿಯಲ್ಲಿ ಭೂಕಂಪದ ಕ್ಷಣವನ್ನು ಅಲ್ಲಿನ ಮಹಿಳೆ ವಿವರಿಸುವುದು ಹೀಗೆ. ಇದ್ದಕ್ಕಿದ್ದ ಹಾಗೇ ಭೂಮಿ ಕಂಪಿಸಲು ಆರಂಭಿಸಿದಾಗ ಏನಾಗುತ್ತಿದೆ ಎಂಬುದೇ ತಿಳಿಯಲಿಲ್ಲ. ಭೂಮಿಯೊಂದಿಗೆ ನಾವು ಅಲುಗಾಡು ತ್ತಿದ್ದೆವು. ಒಮ್ಮೆ ಇಡೀ ಜಗತ್ತೇ ಕೊನೆಯಾಗುತ್ತಿದೆ ಎಂದು ಭಾಸವಾಗುತ್ತಿತ್ತು ಎಂದು ಮಹಿಳೆಯೊಬ್ಬರು ತಮ್ಮ ಕರಾಳ ಅನುಭವವನ್ನು ಹಂಚಿಕೊಳ್ಳುತ್ತಾರೆ. ಜತೆಯಲ್ಲಿ ಇಂಥ ಪ್ರಾಕೃತಿಕ ವಿಪತ್ತಿನ ಹೊರತಾಗಿಯೂ ಪ್ರಾಣಾಪಾಯದಿಂದ ಪಾರು ಮಾಡಿದ ಆ ಭಗವಂತನಿಗೆ ಕೈಮುಗಿಯುತ್ತಾಳೆ. ಅಷ್ಟು ಮಾತ್ರವಲ್ಲದೆ ರಕ್ಷಣ ಕಾರ್ಯಾ ಚರಣೆಯಲ್ಲಿ ಹಗಲು-ರಾತ್ರಿ ಎನ್ನದೇ ದಿನವಿಡೀ ಶ್ರಮಿಸುತ್ತಿರುವವರಿಗೆ ಆಕೆ ಕೃತಜ್ಞತೆ ಸಲ್ಲಿಸಲು ಮರೆಯುವುದಿಲ್ಲ.
ಮಗಳ ಕೈಬಿಡದ ತಂದೆ
ಕಟ್ಟಡಗಳ ಅವಶೇಷಗಳಡಿ ಸಿಲುಕಿ ಹೂತಿರುವ ಮಗಳ ಕೈಯನ್ನು ಹಿಡಿದು ದುಃಖ ತಪ್ತವಾಗಿ ಕೂತಿರುವ ತಂದೆಯ ಈ ಫೋಟೋ ಅಸಹಾಯಕತೆಯ ಅದೆಷ್ಟೋ ಭಾವನೆಗಳನ್ನು ರವಾನಿಸುತ್ತದೆ. ವಾಸ್ತವದ ಅರಿವಿದ್ದರೂ ಸಂಬಂಧಗಳ ಅಗಲಿಕೆಯ ನೋವು ಹೇಳಲಾಗದ್ದು. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ಸಾಕಷ್ಟು ವೈರಲ್ ಆಗಿದ್ದು ರಕ್ತ ಸಂಬಂಧದ ಬಿಡಿಸಲಾರದ ಆ ನಂಟು ಮನಸ್ಸಿಗೆ ನಾಟುವಂತೆ ಮಾಡಿದೆ.
“ಗರ್ಲ್ಸ್…
ಮೇಕ್ ಸಮ್ ನಾಯ್ಸ’
ಛಿದ್ರ ಛಿದ್ರವಾದ ಅವಶೇಷಗಳ ಮುಂದೆ ಬಿದ್ದಿರುವ ಕಾಂಕ್ರೀಟ್ ತುಂಡುಗಳನ್ನು ಮಧ್ಯ ವಯಸ್ಕರೋರ್ವರು ತನ್ನ ಕೈಗಳಿಂದ ಒಡೆ ಯಲು ಪ್ರಯತ್ನಿಸುತ್ತಿದ್ದಾರೆ. ಅದರೊಳಗೆ ಸಿಲುಕಿ ರುವ ತನ್ನವರನ್ನು ಉದ್ದೇಶಿಸಿ “ಸೇ ಸಮ್‌ಥಿಂಗ್ ಗರ್ಲ್ಸ್…ಮೇಕ್ ಸಮ್ ನಾಯ್ಸ…’ ಎಂದು ಕಣ್ಣೀರು ಹಾಕುತ್ತ ಕೂಗಿ ಕೂಗಿ ಕರೆಯುತ್ತಿದ್ದರೆ ಆ ಕಡೆ ಬರೇ ಮೌನ. ತನ್ನ ಕುಟುಂಬಕ್ಕಾಗಿ ಚಡ ಪಡಿಸುತ್ತಿರುವ ವ್ಯಕ್ತಿಯ ವೀಡಿಯೋ ಆತನ ದುಃಖದ ತೀವ್ರತೆಯನ್ನು ತೋರಿಸುತ್ತದೆ.
ಇವೆಲ್ಲವೂ ಕೇವಲ ಬೆರಳೆಣಿಕೆಯ ಉದಾಹರಣೆ, ನಿದರ್ಶನಗಳಷ್ಟೆ. ಟರ್ಕಿ, ಸಿರಿಯಾಗಳಲ್ಲಿ ಇಂಥ ಅವೆಷ್ಟೋ ಸಾವಿರಾರು ದೃಶ್ಯಾವಳಿಗಳು ಕಾಣಸಿಗುತ್ತವೆ. ಭೂಕಂಪ ಸಂಭವಿಸಿ 15 ದಿನಗಳು ಕಳೆದರೂ ರಕ್ಷಣ ಕಾರ್ಯಾಚರಣೆಗಳು ನಡೆಯುತ್ತಲೇ ಇವೆ. ಸಾವಿನ ಸಂಖ್ಯೆ ಪ್ರತೀದಿನ ಏರುತ್ತಲೇ ಇದೆ. ಈ ಭೂಮಿಯ ಮೇಲೆ ಬದುಕು ಎಷ್ಟು ಕ್ಷಣಿಕ ಎಂಬುದು ಇವೆಲ್ಲವನ್ನೂ ಕಂಡಾಗ ನಮಗೆಲ್ಲರಿಗೂ ಅರ್ಥವಾಗದೇ ಇರಲಾರದು.
- ವಿಧಾತ್ರಿ ಭಟ್, ಉಪ್ಪುಂದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.