ನಾಯಕರ ಕೊರಳಿಗೆ ಸುವಿಹಾರ
Team Udayavani, Feb 20, 2023, 6:10 AM IST
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಯಾತ್ರೆಗಳು, ರ‍್ಯಾಲಿ, ಸಮಾವೇಶಗಳ ಭರಾಟೆಯೂ ಜೋರಾಗಿದೆ. ಇದರಲ್ಲಿ ಪಾಲ್ಗೊಳ್ಳುವ ರಾಜಕೀಯ ನಾಯಕರನ್ನು ಮೆಚ್ಚಿಸುವ ಸಲುವಾಗಿ ಸ್ಥಳೀಯ ನಾಯಕರು ತರಹೇವಾರಿ ಹಾರಗಳನ್ನು ಸಿದ್ಧ ಪಡಿಸಿ ಹಾಕುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ “ಹಾರ’ಗಳು ಫ್ಯಾಶನ್ ರೀತಿ ಆಗಿಬಿಟ್ಟಿವೆ. ಅದರಲ್ಲೂ ಜೆಡಿಎಸ್ ಪಂಚಯಾತ್ರೆಯಲ್ಲಿ ಭಾಗಿಯಾಗಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗಂತೂ ಬೇರೆ ಬೇರೆ ರೀತಿಯ ಹಾರಗಳಿಂದ ಖುಷಿ ಪಡಿಸಲಾಗಿದೆ. ಇತ್ತೀಚೆಗೆ ತುಮಕೂರಿಗೆ ಬಂದಿದ್ದ ಪ್ರಧಾನಿ ಮೋದಿಯವರಿಗೆ ಅಡಿಕೆಯಿಂದ ಮಾಡಿದ ಹಾರವನ್ನೂ ಹಾಕಲಾಗಿತ್ತು.
ಬೆಂಗಳೂರು:ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ನಾಯಕರನ್ನು ಖುಷಿ ಪಡಿಸುವ ಸಲುವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭರ್ಜರಿ “ಹಾರ’ಗಳ ಮೇಳವೇ ನಡೆಯುತ್ತಿದೆ. ದಿನಕ್ಕೊಂದು ರೀತಿಯ ಹಾರಗಳ ಬಳಕೆ ಮಾಡುವ ಮೂಲಕ ನೋಡುಗರಿಗೆ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಮೂರು ಪಕ್ಷಗಳ ಕಾರ್ಯಕರ್ತರೂ ಭರ್ತಿ ಭರ್ತಿ ಹಣ ಸುರಿಯುತ್ತಿದ್ದಾರೆ. ಈ ಹಾರಗಳದ್ದೇ ಒಂದು ರೀತಿ ಟ್ರೆಂಡ್ ಸೆಟ್ ಆಗಿದ್ದು, ಕಾರ್ಯಕರ್ತರ ಬುದ್ಧಿವಂತಿಕೆಗೂ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಾರದ ಕಲ್ಪನೆ ಈಗಿನದ್ದೇನಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ದ ಸುಮಲತಾ ಅಂಬರೀಷ್ ಮತ್ತು ಇವರಿಗೆ ಬೆಂಬಲ ನೀಡಿ ಪ್ರಚಾರ ನಡೆಸಿದ್ದ ನಟರಾದ ಯಶ್ ಮತ್ತು ದರ್ಶನ್ ಅವರಿಗೆ ಇದೇ ರೀತಿಯ ಹಾರಗಳನ್ನು ಹಾಕಲಾಗುತ್ತಿತ್ತು. ಈಗ ಈ ಟ್ರೆಂಡ್ ವಿಧಾನಸಭೆ ಚುನಾವಣೆಗೆ ಪ್ರವೇಶಿಸಿದೆ.
ಕೈ ನಾಯಕರಿಗೆ ವಿನೂತನ ಹಾರ
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಮೈಸೂರಿಗೆ ಆಗಮಿಸಿದಾಗ ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎನ್.ಎಂ.ನವೀನ್ ಕುಮಾರ್ ಅವರು 15 ಅಡಿ ಎತ್ತರದ ಮುಸುಕಿನ ಜೋಳ ಹಾರ ಹಾಕಿದ್ದರು. ಇದನ್ನು ಬೆಂಗಳೂರಿನಲ್ಲಿ ತಯಾರಿಸಲಾಗಿತ್ತು. ಇದಕ್ಕೆ 40 ಸಾವಿರ ರೂ. ವೆಚ್ಚವಾಗಿತ್ತು. ಮೈಸೂರು ತಾಲೂಕು ಕಾಳಿಸಿದ್ದನಹುಂಡಿಯ ಜೈಸ್ವಾಮಿ ಎಂಬವರು ಸಿದ್ದರಾಮಯ್ಯ ಅವರಿಗೆ 28 ಅಡಿ ಎತ್ತರದ ಮೈಸೂರು ಪಾಕ್ ಹಾರ ಹಾಕಿದ್ದು ಗಮನ ಸೆಳೆದಿತ್ತು. ಇದಕ್ಕೆ 2.50 ಲಕ್ಷ ವೆಚ್ಚವಾಗಿತ್ತು.
ಚಾಮರಾಜನಗರದಲ್ಲಿ ಡಿ.26ರಂದು ನಡೆದ ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಯಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯರಿಗೆ ಚುಡಾ ಮಾಜಿ ಅಧ್ಯಕ್ಷ, ಕೆಪಿಸಿಸಿ ಸದಸ್ಯ ಸಯ್ಯದ್ ರಫೀ ಮತ್ತು ಅವರ ಪುತ್ರ ಮಾಧ್ಯಮ ಸಂಚಾಲಕ ಸಯ್ಯದ್ ಮುಸೈಬ್ ತಲಾ 10 ಸಾವಿರ ರೂ. ಬೆಲೆಯ ರೇಷ್ಮೆ ಹಾರಗಳನ್ನು ಹಾಕಿ ಅಭಿನಂದಿಸಿದರು. ಕೋಲಾರ ಸಿದ್ದರಾಮಯ್ಯ ಅವರಿಗೆ ಬೃಹತ್ ಗಾತ್ರದ ಹೂವಿನ ಮತ್ತು ಆ್ಯಪಲ್ ಹಾರಗಳಿಂದ ಸ್ವಾಗತಿಸಲಾಗಿತ್ತು. ಚಿಕ್ಕಬಳ್ಳಾಪುರದಲ್ಲಿ ಸಿದ್ದರಾಮಯ್ಯ, ಡಿಕೆಶಿಗೆ ಸೇಬಿನ ಹಾರದಿಂದ ಅಭಿನಂದಿಸಲಾಗಿತ್ತು.
ಡಿ.ಕೆ.ಶಿವಕುಮಾರ್ ಅವರು “ಪ್ರಜಾಧ್ವನಿ’ ಯಾತ್ರೆಗೆ ತೀರ್ಥಹಳ್ಳಿಗೆ ಬಂದಾಗ ಯುವ ಕಾಂಗ್ರೆಸ್ ಶಿವಮೊಗ್ಗ ಜಿಲ್ಲಾಧ್ಯಕ್ಷ ಎಚ್.ಪಿ.ಗಿರೀಶ್ ಹಾಗೂ ಕುರುವಳ್ಳಿ ನಾಗರಾಜ್ ನೇತೃತ್ವದ ತಂಡ ಅಡಿಕೆ ಕೊನೆಗಳ ಹಾರ ಮಾಡಿ ಅರ್ಪಿಸಿತ್ತು. ಇದಕ್ಕೆ 50 ಕೊನೆಗಳನ್ನು ಬಳಸಲಾಗಿತ್ತು. ಒಂದೂವರೆ ಕ್ವಿಂಟಾಲ್ ಅಡಿಕೆ ಇದರಲ್ಲಿ ಇದ್ದವು ಎಂದು ಅಂದಾಜಿಸಲಾಗಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣಕ್ಕೆ ಸಿದ್ದರಾಮಯ್ಯ ಆಗಮಿಸಿದ್ದ ವೇಳೆ ಕಾಂಗ್ರೆಸ್ ಮುಖಂಡ ಜೆ.ಎಂ. ಕೊರಬು 32 ಡೊಳ್ಳು (ಡ್ರಮ್)ಗಳ ಹಾರ ಹಾಕಿದ್ದರು. ಜತೆಗೆ ಆಳಂದದ ಬಳಿ ಜೋಳದ ದಂಟಿನಿಂದ ಮಾಡಿದ ಹಾರವನ್ನು ಬಳಕೆ ಮಾಡಲಾಗಿತ್ತು. ಇಂಡಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಎರಡು ಟನ್ ನಿಂಬೆ ಹಣ್ಣಿನ ಹಾರವನ್ನು ಹಾಕಿ ಸ್ವಾಗತಿಸಲಾಗಿತ್ತು. ವಿಶೇಷವೆಂದರೆ ಈ ಹಾರಗಳ ಬಗ್ಗೆ ಮೊನ್ನೆ ಸದನದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರು ಪ್ರಸ್ತಾವ ಮಾಡಿ ಸ್ಥಗಿತ ಮಾಡುವಂತೆ ಹೇಳಿದ್ದರು.
ಪಂಚರತ್ನ ಯಾತ್ರೆ ಮೂಲಕ ಪ್ರವೇಶ
ಸದ್ಯ ವಿಧಾನಸಭೆ ಚುನಾವಣ ಪ್ರಚಾರಕ್ಕಾಗಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಪಂಚರತ್ನ ರಥಯಾತ್ರೆ ನಡೆಸುತ್ತಿದ್ದು, ಇವರಿಗೆ ಅಭಿನಂದನೆ ಸಲ್ಲಿಸಲು ತರಹೇವಾರಿ ಹಾರಗಳನ್ನು ಬಳಕೆ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 13 ರೀತಿಯ ವಿವಿಧ ಹಾರಗಳನ್ನು ಬಳಕೆ ಮಾಡಲಾಗಿದೆ. ಅಂದರೆ ಕಬ್ಬು, ಭತ್ತ, ರಾಗಿ, ಸೇಬು, ದ್ರಾಕ್ಷಿ, ಬೆಲ್ಲ, ಕೊಬ್ಬರಿ, ಕಿತ್ತಲೆ, ಮೂಸಂಬಿ, ಅನಾನಸ್, ತರಕಾರಿ, ಹೂವು ಸಹಿತ ವಿವಿಧ ಮಾದರಿಯ ಹಾರಗಳನ್ನು ಹಾಕಲಾಗಿತ್ತು. ತುಮಕೂರಿನಲ್ಲಿ ಸೌತೆಕಾಯಿ, ನಾಣ್ಯ, ನೇಗಿಲು, ಎತ್ತಿನ ಲಾಳದ, ಜೆಡಿಎಸ್ ಚಿಹ್ನೆ, ಮಣ್ಣಿನ, ಕಿರೀಟದ ಹಾರ, ಮಹಿಳೆಯರು ಹಾಕಿದ ರಾಖೀ, ಕರ್ಜಿಕಾಯಿ, ವಿವಿಧ ತರಕಾರಿ, ಹಣ್ಣುಗಳ, ಎಲ್‌ಇಡಿ ಹಾರ ಬಳಕೆ ಮಾಡಲಾಗಿತ್ತು. ಈ ಯಾತ್ರೆ ಏಷ್ಯಾ ಬುಕ್ ಆಫ್ ರೆಕಾಡ್ಸ್ ì, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿ ತುಮಕೂರಿನಲ್ಲಿಯೇ ಪ್ರಶಸ್ತಿ ವಿತರಿಸಲಾಗಿತ್ತು. ರಾಮನಗರ ಜಿಲ್ಲೆಯಲ್ಲಿ ಒಂಬತ್ತು, ಕೋಲಾರದಲ್ಲಿ 12 ರೀತಿಯ ಹಾರಗಳನ್ನು ಮಾಡಿ ಹಾಕಲಾಗಿತ್ತು. ಚಿಕ್ಕಬಳ್ಳಾಪುರದಲ್ಲಿ ಕುಮಾರಸ್ವಾಮಿ ಅವರಿಗೆ ರೇಷ್ಮೆ ಗೂಡಿನಿಂದ ಮಾಡಿದ್ದ ಹಾರವನ್ನು ಹಾಕಲಾಗಿತ್ತು.
ಪ್ರಧಾನಿ ಮೋದಿಗೆ ಅಡಿಕೆ ಹಾರ
ಇತ್ತೀಚೆಗಷ್ಟೇ ತುಮಕೂರು ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಡಿಕೆ ಹಾರ ಮತ್ತು ಅಡಿಕೆಯಿಂದಲೇ ಮಾಡಿದ ಪೇಟವನ್ನು ತೋಡಿಸಲಾಗಿತ್ತು. ಈ ಹಾರವನ್ನು ವಿಶೇಷವಾಗಿ ಮಾಡಿ ಸಲಾಗಿತ್ತು. ಹಾಗೆಯೇ ಸಿಎಂ ಬಸವರಾಜ ಬೊಮ್ಮಾಯಿ ಶಿವಮೊಗ್ಗಕ್ಕೆ ತೆರಳಿದ್ದಾಗ 10 x10 ಅಡಿ ಉದ್ದದ ಹೂವಿನ ಹಾರ ಹಾಕಲಾಗಿತ್ತು. ಧಾರ ವಾಡಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಅವರಿಗೆ ಸುಮಾರು ನಾಲ್ಕು ಅಡಿ ಗಾತ್ರದ ಏಲಕ್ಕಿ ಮಾಲೆ ಹಾಗೂ ಏಲಕ್ಕಿ ಪೇಟ ಹಾಕಿ ಸಮ್ಮಾನಿಸಲಾಗಿತ್ತು.
ಹಾರಕ್ಕೆ ವೆಚ್ಚವಾಗುವ ಹಣ
ಒಂದೊಂದು ರೀತಿಯ ಹಾರಗಳಿಗೂ ಒಂದೊಂದು ರೀತಿ ಬೆಲೆ ಇರುತ್ತದೆ. ಅಲ್ಲದೆ ಇದನ್ನು ಎಲ್ಲ ಕಡೆಯಲ್ಲಿಯೂ ಮಾಡುವುದಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಮಾಡಿಸಲಾಗಿದ್ದ ಹಾರಗಳಿಗೆ 15 ರಿಂದ 20 ಸಾವಿರ ರೂ. ವೆಚ್ಚವಾಗಿತ್ತು. ಇವುಗಳನ್ನು ತಮಿಳುನಾಡು ಮತ್ತು ಬೆಂಗಳೂರು ವರ್ತಕರು ಮಾಡಿಕೊಟ್ಟಿದ್ದರು. ತುಮಕೂರಿನಲ್ಲಿ 1ರಿಂದ 10 ಲಕ್ಷ ರೂ.ವರೆಗೂ ವೆಚ್ಚವಾಗಿದೆ ಎಂದು ಕಾರ್ಯಕರ್ತರು ಹೇಳಿದ್ದಾರೆ. ರಾಮನಗರದಲ್ಲಿ ಹೂವಿನ ಹಾರಗಳಿಗೆ 30 ಸಾವಿರ ರೂ. ವೆಚ್ಚವಾಗಿದ್ದರೆ, ಬೊಂಬೆಯಲ್ಲಿ ಮಾಡಿದ ಹಾರಕ್ಕೆ 1 ಲಕ್ಷ ರೂ.ಗಿಂತ ಹೆಚ್ಚು ವೆಚ್ಚ
ವಾಗಿದೆ. ಕೋಲಾರದಲ್ಲಿಯೂ ಕೆಲವೊಂದನ್ನು ಬೆಂಗಳೂರಿನಿಂದ ಮಾಡಿಸಿ ತಂದಿದ್ದರೆ, ಉಳಿದವನ್ನು ಸ್ಥಳೀಯರೇ ಮಾಡಿದ್ದಾರೆ. ಇಲ್ಲಿಯೂ 25 ಸಾವಿರದಿಂದ 1 ಲಕ್ಷ ರೂ.ವರೆಗೆ ವೆಚ್ಚ ಮಾಡಿದ್ದೇವೆ ಎಂದು ಕಾರ್ಯಕರ್ತರು ಹೇಳಿದ್ದಾರೆ.
1ರಿಂದ 2 ಸಾವಿರ ಬಾಡಿಗೆ
ರಾಜಕೀಯ ಪಕ್ಷಗಳ ಸಮಾವೇಶ, ರಥ ಯಾತ್ರೆ, ಮೆರವಣಿಗೆಯಲ್ಲಿ ವಿಶೇಷ ಹಾರಗಳನ್ನು ಹಾಕಲು ಕ್ರೇನ್‌ಗಳನ್ನು ಹೆಚ್ಚು ಬಳಸಲಾಗುತ್ತಿದೆ. ಹಾರ ಹಾಕಲು ಒಂದು ಕ್ರೇನ್‌ಗೆ 1ರಿಂದ 2 ಸಾವಿರ ರೂ.ವರೆಗೆ ಬಾಡಿಗೆ ನೀಡಲಾಗುತ್ತಿದೆ. ಅಲ್ಲದೆ ಹಾರ ತಯಾರಿಸಲು ಬೇಕಾದ ಎಲ್ಲ ಹೂವು, ಹಣ್ಣು, ತರಕಾರಿ, ಕಬ್ಬು, ಬೆಲ್ಲ, ಭತ್ತ, ರಾಗಿ ಸಹಿತ ವಿವಿಧ ವಸ್ತುಗಳನ್ನು ಸ್ಥಳೀಯವಾಗಿಯೇ ಸಂಗ್ರಹಿಸಲಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.