![1-dee](https://www.udayavani.com/wp-content/uploads/2025/02/1-dee-1-415x221.jpg)
![1-dee](https://www.udayavani.com/wp-content/uploads/2025/02/1-dee-1-415x221.jpg)
Team Udayavani, Feb 21, 2023, 8:48 PM IST
ಸವದತ್ತಿ: ಕಾಲೇಜಿನ ಪ್ರತಿಷ್ಠೆಗಾಗಿ ಪ್ರಾಚಾರ್ಯ ಹಾಗೂ ಸಿಬ್ಬಂದಿಗಳು ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ನಡೆಸಿದ್ದಾರೆ. ಪಿಯುಸಿ ಪ್ರಥಮ ವರ್ಷದ ಮಕ್ಕಳ ಹಾಜರಾತಿ ನೆಪವೊಡ್ಡಿ 72 ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ನಿಷೇಧಿಸಲಾಗಿದೆ. ಪ್ರತಿವರ್ಷ ಇದನ್ನು ಮುಂದುವರೆಸಿದೆ ಎಂದು ಕರ್ನಾಟಕ ಸಮತಾ ಸೈನಿಕ ದಳದ ಬೆಳಗಾವಿ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಬಸವರಾಜ ತಳವಾರ ಆಕ್ರೋಶಿದರು.
ಇಲ್ಲಿನ ಜಿ.ಜಿ. ಚೋಪ್ರಾ ಕಾಲೇಜಿನಲ್ಲಿ ಹಾಜರಾತಿ ನೆಪವೊಡ್ಡಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ನಿರಾಕರಿಸಿದ್ದನ್ನು ಖಂಡಿಸಿ ದಲಿತ ಮುಖಂಡರು ಹಾಗೂ ವಿದ್ಯಾರ್ಥಿಗಳಿಂದ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಹಾಜರಾತಿ ಕುರಿತು ಕಾಲೇಜಿನಲ್ಲಿ ಪಾಲಕರ ಸಭೆ ನಡೆಸುವದಿಲ್ಲ. ಮಾಹಿತಿ ನೀಡದೇ ಮನ ಬಂದಂತೆ ವರ್ತಿಸುತ್ತಿದ್ದಾರೆ. ಮಕ್ಕಳು ಹಾಜರಾಗದಿದ್ದಲ್ಲಿ ಪಾಲಕರಿಗೆ ಮಾಹಿತಿ ನೀಡಬೇಕಿತ್ತು ಆದರೆ ಕಾಲೇಜಿನಿಂದ ಪಾಲಕರನ್ನು ಸಂಪರ್ಕಿಸುವ ಪ್ರಯತ್ನ ನಡೆಸದೇ ಏಕಾಏಕಿ ಪರೀಕ್ಷೆಗಳಿಂದ ಬಹಿಷ್ಕರಿಸಿದ್ದಾರೆ. ಇದೀಗ ವಿದ್ಯಾರ್ಥಿಗಳ ಭವಿಷ್ಯದ ಗತಿ ಏನು? ಎಂದು ಪ್ರಾಚಾರ್ಯ ಹಾಗೂ ಸಿಬ್ಬಂದಿಗಳಿಗೆ ಪ್ರಶ್ನಿಸಿದ ಅವರು, ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರೇ ಈ ರೀತಿ ಬಹಿಷ್ಕರಿಸಿದರೇ ಮಕ್ಕಳ ಪಾಡೇನು?. ಮಾನವೀಯ ದೃಷ್ಠಿಯಿಂದಲಾದರೂ ಅವಕಾಶ ನೀಡಬೇಕಿತ್ತು ಎಂದು ಕಾಲೇಜಿನ ಅಶಿಸ್ತಿನ ವಿರುದ್ಧ ಆಕ್ರೋಶ ಹೊರಹಾಕಿದರು.
ಸಂಘಟನೆ ಪ್ರಮುಖ ಮಹಾದೇವ ಬಡ್ಲಿ, ‘ಕಾಲೇಜಿನ ಸಿಬ್ಬಂದಿಗಳ ಧೋರಣೆ ಖಂಡನೀಯ. ಗೈರು ಕೇವಲ ನೆಪ ಮಾತ್ರ. ಸೂಕ್ತ ದಾಖಲೆ ನೀಡಿ. ಇಲ್ಲದಿದ್ದರೆ ಪ್ರಕರಣ ದಾಖಲಿಸುವದು ನಿಶ್ಚಿತ. ಅವಶ್ಯಕತೆಗೆ ತಕ್ಕಂತೆ ಪಠ್ಯ ಪೂರೈಸಿಲ್ಲ. ಉಪನ್ಯಾಸಕರು ಸಮರ್ಪಕ ಪಾಠ ಬೋಧಿಸಿಲ್ಲ. ಉಪನ್ಯಾಸಕರೇ ಹಾಜರಾತಿ ತೆಗೆದುಕೊಂಡಿಲ್ಲವೆಂದು ಮಕ್ಕಳು ನಿಮ್ಮ ಬಗ್ಗೆ ಆಪಾದಿಸುತ್ತಾರೆ. ನಿಮ್ಮ ತಪ್ಪು ಸರಿಪಡಿಸಲು ಇವರ ಬಹಿಷ್ಕಾರ ಸರಿಯೇ ಎಂದು ತಿವಿದ ಅವರು, ನೀವು ಸರಿಯಾಗಿ ಪಾಠ ಮಾಡದೇ ಮಕ್ಕಳನ್ನು ಗುರಿಯಾಗಿರಿಸಿಕೊಂಡಿದ್ದೀರಿ. ಅನುತ್ತೀರ್ಣರಾದ ಮಕ್ಕಳ ಸಹಿತ ಎಲ್ಲದಕ್ಕೂ ಉತ್ತರ ನೀಡಿರೆಂದು ಆಗ್ರಹಿಸಿದರು’.
ಕಾಲೇಜು ಆರಂಭದಿಂದ ನಮಗೆ ಪುಸ್ತಕ ನೀಡಿಲ್ಲ. ನೀಡಿದರೂ ರೂ. 200 ವಸೂಲಿ ಮಾಡಿದ್ದಾರೆ. ಬಡಮಕ್ಕಳ ಅಭ್ಯಾಸ ಕಷ್ಟಕರವಾಗಿದೆ ಎಂದು ಸೇರಿದ ಮಕ್ಕಳು ತಿಳಿಸಿದರು.
ಪ್ರತಿಭಟನೆ ವೇಳೆ ಬೆಳಗಾವಿಯ ಡಿಡಿಪಿಯು ಎಮ್.ಎಮ್. ಕಾಂಬಳೆರನ್ನು ಸಂಪರ್ಕಿಸಿದಾಗ, ಪ್ರಾಚಾರ್ಯರ ಬೇಜವಬ್ದಾರಿಯಿಂದ ಕೆಲವರು ಪರೀಕ್ಷೆ ಎದುರಿಸಿಲ್ಲ. ಮುಂಬರುವ ಪರೀಕ್ಷೆಯಲ್ಲಿ ಅಂಥವರಿಗೆ ಅವಕಾಶ ಕಲ್ಪಿಸಲಾಗುವುದು. ಬುಧವಾರ ಸ್ವತಃ ಭೇಟಿ ನೀಡಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ನೋಟಿಸ್ ನೀಡಿ ಕ್ರಮ ಜರುಗಿಸಲಾಗುವದು ಎಂದರು.
ಕಾಲೇಜ ಪ್ರಾಂಶುಪಾಲ ವ್ಹಿ.ವ್ಹಿ.ಕೋಳೇಕರ, ಮಕ್ಕಳ ಹಾಜರಾತಿಯಲ್ಲಿ ಕೊರತೆಯಿದೆ. ಕಾಲೇಜ ಅವಧಿಯಲ್ಲಿ ಹೊರಗೆ ಸುತ್ತಾಡುತ್ತಾರೆ. ಪಾಠದ ಮೊದಲ ಅಧ್ಯಾಯವೇ ಇವರಿಗೆ ಗೊತ್ತಿಲ್ಲ. ನಿಯಮಾನುಸಾರ ಪರೀಕ್ಷೆಗೆ ಅನುಮತಿ ನಿರಾಕರಿಸಿದೆಂದು ಸ್ಪಷ್ಟಪಡಿಸಿದರು.
ಈ ವೇಳೆ ನಾಗಪ್ಪ ಬಡೆಪ್ಪನವರ, ಗದಿಗೆಪ್ಪ ದೊಡಮನಿ, ಶಿವಾನಂದ ಮಾದರ, ಬರಮಪ್ಪ ಈಟಿ, ಸುರೇಶ ಹಾಸಟ್ಟಿ ಹಾಗೂ ಪ್ರಮುಖರು ಇದ್ದರು.
ಇದನ್ನೂ ಓದಿ: 24.93 ಲಕ್ಷ ಮೌಲ್ಯದ ಅಡುಗೆ ಎಣ್ಣೆ ಕಳ್ಳತನ ಪ್ರಕರಣ: ಮೂರೇ ದಿನದಲ್ಲಿ ಕಳ್ಳರು ಅಂದರ್
You seem to have an Ad Blocker on.
To continue reading, please turn it off or whitelist Udayavani.