ಪಂಡಿತ ಪರಂಪರೆಯ ಕೊಂಡಿ ಪ್ರೊ| ಸುಬ್ರಾಯ ಭಟ್ಟ


Team Udayavani, Feb 26, 2023, 6:00 AM IST

ಪಂಡಿತ ಪರಂಪರೆಯ ಕೊಂಡಿ ಪ್ರೊ| ಸುಬ್ರಾಯ ಭಟ್ಟ

ಫೆಬ್ರವರಿ 26ರ ರವಿವಾರ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಪ್ರೊ| ಸುಬ್ರಾಯ ಭಟ್ಟರ ಜನ್ಮ ಶತಮಾನೋತ್ಸವ ಸಂಭ್ರಮವನ್ನು ಹಮ್ಮಿಕೊಳ್ಳಲಾಗಿದ್ದು “ಸಾರಥಿ’ ಎಂಬ ಬೃಹತ್‌ ನೆನಪಿನ ಸಂಚಿಕೆಯನ್ನು ಬಿಡುಗಡೆಗೊಳಿಸಲಾಗುತ್ತಿದೆ. ಈ ಮೂಲಕ ತಮ್ಮ ಅಗಾಧ ಪಾಂಡಿತ್ಯ ಮತ್ತು ಪರಿಶ್ರಮದ ಮೂಲಕ ಕನ್ನಡ ಭಾಷೆಗೆ ಕೊಡುಗೆ ನೀಡಿದ ಸಾಧಕನನ್ನು ಸ್ಮರಿಸಿಕೊಳ್ಳುವ ಜತೆಯಲ್ಲಿ ಅವರನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸಿಕೊಡುವ ಕಾರ್ಯವನ್ನು ಮಾಡಲಾಗುತ್ತಿದೆ.

ಕಾಸರಗೋಡು ಸಹಿತ ಹಳೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನ್ನಡದ ಪಂಡಿತ ಪರಂಪರೆಯೊಂದನ್ನು ಕಟ್ಟಿ ಬೆಳೆಸಲು ಕಾರಣರಾದ ಮೊದಲ ಪಾಳಿಯ ನಾಲ್ಕೈದು ಮಂದಿಯಲ್ಲಿ ಪೆರಡಾಲ ಕೃಷ್ಣಯ್ಯನವರೂ ಒಬ್ಬರು. ಅವರ ಶಿಷ್ಯ ಪ್ರೊ| ಪಿ. ಸುಬ್ರಾಯ ಭಟ್ಟರು ಮೂಲತಃ ಪಳ್ಳತ್ತಡ್ಕದವರು. ತಂದೆ ಕೇಶವ ಭಟ್ಟ, ತಾಯಿ ತಿರುಮಲೇಶ್ವರಿ. ಹುಟ್ಟಿದ್ದು 1922ರ ಮಾರ್ಚ್‌ 16ರಂದು.

ಇವರ ಪ್ರಾಥಮಿಕ ಶಿಕ್ಷಣ ಆರಂಭವಾದದ್ದು ಪಳ್ಳತ್ತಡ್ಕ ಶಾಲೆ ಯಲ್ಲಿ. ಅನಂತರ ಪೆರ್ಲದ ಶ್ರೀ ಸತ್ಯನಾರಾಯಣ ಹೈಯರ್‌ ಎಲಿ ಮೆಂಟರಿ ಶಾಲೆಯಲ್ಲಿ ಎಂಟನೇ ತರಗತಿ. ಮುಂದೆ ನೀರ್ಚಾಲಿನ ಮಹಾಜನ ಸಂಸ್ಕೃತ ಪಾಠಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ. ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ವಿದ್ವಾನ್‌ ಪದವಿಯಲ್ಲಿ ಗರಿಷ್ಠ ಅಂಕಗಳೊಂದಿಗೆ ಉತ್ತೀರ್ಣ.

1944ರಲ್ಲಿ ತಿರುಪತಿ ತಿರುಮಲ ದೇವಾಲಯದಲ್ಲಿ ಪ್ರಾಚೀನ ತಾಳೆಯೋಲೆ ಗ್ರಂಥಗಳನ್ನು ಪ್ರತಿ ಮಾಡುವ ಕೆಲಸ ಸಿಕ್ಕಿತು. ಮುಂದೆ ಮದರಾಸಿನ ಸರಕಾರಿ ಪ್ರಾಚ್ಯ ಪುಸ್ತಕ ಭಂಡಾರದಲ್ಲಿ ಕನ್ನಡ ಪಂಡಿತರಾಗಿ ಸೇರಿಕೊಂಡರು. ಈ ನಡುವೆ ಎಸೆಸೆಲ್ಸಿ, ಇಂಟರ್‌ ಮೀಡಿಯಟ್‌ ಮತ್ತು ಬಿ.ಎ. ಮುಗಿಸಿದರು. 1952ರಲ್ಲಿ ಪ್ರಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇರಿಕೊಂಡರು. ಐದು ವರ್ಷಗಳ ಕಾಲ ಅಲ್ಲಿ ಕನ್ನಡ ಬಿ.ಎ. ಮತ್ತು ಎಂ.ಎ. ತರಗತಿಗಳಿಗೆ ಪಾಠ ಮಾಡಿದರು.

1957ರ ಅಕ್ಟೋಬರ್‌ನಲ್ಲಿ ಸುಬ್ರಾಯ ಭಟ್ಟರು ಕಾಸರಗೋಡು ಸರಕಾರಿ ಕಾಲೇಜಿನ ಮೊದಲ ಕನ್ನಡ ಉಪನ್ಯಾಸಕರಾಗಿ ಸೇರಿಕೊಂಡರು. ಅಲ್ಲಿ 1963ರಲ್ಲಿ ಕನ್ನಡ ಐಚ್ಛಿಕ ಬಿ.ಎ. ಆರಂಭವಾಯಿತು. ಸುಬ್ರಾಯ ಭಟ್ಟರು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಖಾಸಗಿಯಾಗಿ ಪ್ರಥಮ ಶ್ರೇಣಿಯಲ್ಲಿ ಎಂ.ಎ. ಪದವಿ ಪಡೆದು ಕನ್ನಡ ಉಪನ್ಯಾಸಕ ಹುದ್ದೆಯಿಂದ ಪ್ರಾಧ್ಯಾಪಕ ಹುದ್ದೆಗೆ ಭಡ್ತಿ ಪಡೆದರು. 1969ರಲ್ಲಿ ಸುಬ್ರಾಯ ಭಟ್ಟರ ಸತತ ಪ್ರಯತ್ನದ ಫ‌ಲವಾಗಿ ಕನ್ನಡ ವಿಭಾಗವನ್ನು ಸ್ನಾತಕೋತ್ತರ ಕನ್ನಡ ವಿಭಾಗವಾಗಿ ರೂಪಿಸುವುದು ಸಾಧ್ಯವಾಯಿತು. 1970ರಲ್ಲಿ ಉನ್ನತ ಶ್ರೇಣಿಯ ಪ್ರಾಧ್ಯಾಪಕರಾಗಿ ಭಡ್ತಿ ಪಡೆದರು.

ಸುಬ್ರಾಯ ಭಟ್ಟರ ಕಾಲಾವಧಿಯಲ್ಲಿ ಒಂಟಿ ಉಪನ್ಯಾಸಕನಿಂದ ಆರಂಭವಾದ ಕನ್ನಡ ವಿಭಾಗ, ಒಟ್ಟು ಎಂಟು ಮಂದಿ ಅಧ್ಯಾಪಕರಿರುವ ದೊಡ್ಡ ವಿಭಾಗವಾಗಿ ಬೆಳೆಯಿತು. 1977ರ ಮಾರ್ಚ್‌ 31ರಂದು ನಿವೃತ್ತರಾಗಬೇಕಾಗಿದ್ದ ಸುಬ್ರಾಯ ಭಟ್ಟರು 1976 ಅಗಸ್ಟ್‌ 26ರಂದು ಸ್ಕೂಟರ್‌ ಅಪಘಾತಕ್ಕೆ ಈಡಾಗಿ, ಚಿಕಿತ್ಸೆ ಫ‌ಲಿಸದೆ ದೈವಾಧೀನರಾದರು. ಒಂದು ವಿಭಾಗವನ್ನು ಕಟ್ಟಿ ಬೆಳೆಸಿದ, ಪಾಂಡಿತ್ಯದ ಘನತೆವೆತ್ತ ವ್ಯಕ್ತಿತ್ವವೊಂದನ್ನು ಕಳೆದುಕೊಂಡ ಕಾಸರಗೋಡು ಈ ಆಘಾತವನ್ನು ಮೌನವಾಗಿ ಸಹಿಸಿಕೊಂಡಿತು.

ಸುಬ್ರಾಯ ಭಟ್ಟರು ಅತ್ಯುತ್ತಮ ಅಧ್ಯಾಪಕರಾ ಗಿದ್ದರು ಎನ್ನುವುದಕ್ಕೆ ಅವರ ಅನಂತರದ ತಲೆಮಾರು ಅವರ ಬಗ್ಗೆ ಆಡಿಕೊಳ್ಳುವ ಮಾತುಗಳಿಗೂ ಮಿಕ್ಕ ನಿದರ್ಶನ ನಮ್ಮಲ್ಲಿಲ್ಲ. ಶಾಕುಂತಲಾ, ರಾಮಾಶ್ವಮೇಧ, ಗಿರಿಜಾಕಲ್ಯಾಣ, ಹರಿಶ್ಚಂದ್ರ ಕಾವ್ಯ, ಎಲ್ಲಕ್ಕಿಂತ ಹೆಚ್ಚಾಗಿ ರನ್ನನ ಗದಾಯುದ್ಧ ಅವರ ಕಂಠದಿಂದ ಮೂಡಿಬಂದ ಬಗೆಯ ಮೆಲುಕು ಅವರ ವಿದ್ಯಾರ್ಥಿಗಳನ್ನು ಯಾವಾಗಲೂ ರೋಮಾಂಚಿತರನ್ನಾಗಿ ಮಾಡುತ್ತದೆ ಎಂದಮೇಲೆ ಅವರ ಅಧ್ಯಾಪನದ ಶ್ರೀಮಂತಿಕೆಗೆ ಬೇರೆ ಮೆಚ್ಚುಗೆ ಪತ್ರದ ಆವಶ್ಯಕತೆಯೇ ಇಲ್ಲ. ಒಂದೊಂದು ಪದ್ಯವನ್ನೂ ಓದುವ ಕಂಚಿನ ಕಂಠದ ಅನುರಣನ, ಪದಚ್ಛೇದದ ಸೊಗಸು, ಅನ್ವಯದ ಬೆಡಗು, ಅರ್ಥ ವಿವರಣೆಯ ಚಮತ್ಕಾರ, ವಿಶ್ಲೇಷಣೆಯ ಪಾಂಡಿತ್ಯ, ಎಲ್ಲವೂ ಸೇರಿ ಆಗುವ ರಸಪಾಕದ ರುಚಿ ನಮ್ಮ ಕಲ್ಪನೆಗೆ ಮೀರಿದ್ದು. ಪಂಡಿತ ಪರಂಪರೆಯ ಕೊಂಡಿಯಾದ ಅವರೊಳಗೆ ಕವಿತ್ವದ ಸೃಜನತೆಯೂ ಜೀವಂತವಾಗಿತ್ತು. ಪಾತ್ರಗಳ ಒಳಹೊಕ್ಕು, ತಾವೇ ಪಾತ್ರವಾಗಿ, ಪಾತ್ರವನ್ನು ಅಭಿನಯಿಸುತ್ತ, ರಸತಾಣಗಳನ್ನೆಲ್ಲ ಒಂದಿಂಚೂ ಬಿಡದೆ ಗಾಢವಾಗಿ ತಬ್ಬಿ, ಹಾಗೆಯೇ ಹಿಡಿದೆತ್ತಿ ವಿದ್ಯಾರ್ಥಿಗಳ ಮನದಾಳದಲ್ಲಿ ನೆಟ್ಟ ಈ ಪ್ರಾಧ್ಯಾಪಕನ ಬಗ್ಗೆ ಒಬ್ಬೊಬ್ಬ ವಿದ್ಯಾರ್ಥಿಯೂ ಮನದಣಿಯೆ ಮಾತನಾಡುತ್ತಾರೆ.

1976ರಲ್ಲಿ ಅವರ ಗದಾಯುದ್ಧದರ್ಪಣ ಎಂಬ ಪ್ರೌಢ ಕೃತಿ ಪ್ರಕಟವಾಯಿತು. ಇದು ರನ್ನನಿಗೆ ಸಂಬಂಧಿಸಿದಂತೆ ಒಂದು ಉತ್ತಮ ಪರಾಮರ್ಶನ ಗ್ರಂಥವಾಗಿ ಜನಪ್ರಿಯವಾಗಿದೆ. ಹಾಗೆಯೇ ಪಂಪ ಭಾರತ ದೀಪಿಕೆಯ ಮೇಲೊಂದು ಕ್ಷಕಿರಣ ಎಂಬ ಸುದೀರ್ಘ‌ವಾದ ಅಪ್ರಕಟಿತ ಲೇಖನವೂ ಸುಬ್ರಾಯ ಭಟ್ಟರ ಪಾಂಡಿತ್ಯಕ್ಕೆ ಕನ್ನಡಿ ಹಿಡಿಯುತ್ತದೆ.

ಮಾರ್ಜರಿ ಸೈಕ್ಸ್‌ ಎನ್ನುವವರು ರವೀಂದ್ರನಾಥ ಟಾಗೋರರ ಬಗ್ಗೆ ಇಂಗ್ಲಿಷಿನಲ್ಲಿ ಬರೆದ ಬರೆದ ಕೃತಿ ಯನ್ನು 1958ರಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. ಸಂಸ್ಕೃತ
ದಲ್ಲಿ ರಚನೆಗೊಂಡ ಮಲಯಾಳದ ಪ್ರಾಚೀನ ಲಕ್ಷಣ ಗ್ರಂಥ ಲೀಲಾ ತಿಲಕಂ ಕೃತಿಯನ್ನು ಬಿ.ಕೆ. ತಿಮ್ಮಪ್ಪನವರ ಜತೆ ಸೇರಿ 1974ರಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು.

ಸುಬ್ರಾಯ ಭಟ್ಟರ ಬಗ್ಗೆ ಬರೆಯುವಾಗ, ಅವರ ಕುರಿತು ಅವರ ವಿದ್ಯಾರ್ಥಿಗಳು ಭಾವುಕರಾಗಿ ಮಾತನಾಡುವಾಗ ಎರಡು ತಲೆಮಾರುಗಳ ಕೊಂಡಿಯಾಗಿ ನಿಂತ ಪಾಂಡಿತ್ಯದ ಆಳ ಅಗಲಗಳ ಅನುಭವ ಕಾಡತೊಡಗುತ್ತದೆ. ಒಂದು ವಿಭಾಗವನ್ನು ಕಟ್ಟಿ ಬೆಳೆಸಿದ ಮಹತ್ವದ ವ್ಯಕ್ತಿತ್ವವೊಂದರ ಶಿಲ್ಪ ಅನಾವರಣಗೊಳ್ಳುತ್ತದೆ.

-ಡಾ| ರಾಧಾಕೃಷ್ಣ ಬೆಳ್ಳೂರು

ಟಾಪ್ ನ್ಯೂಸ್

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Prajwal Revanna

Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.