ಭಾರತ-ಆಸ್ಟ್ರೇಲಿಯಕ್ಕೆ ಅಹ್ಮದಾಬಾದ್ ಅಗ್ನಿಪರೀಕ್ಷೆ
Team Udayavani, Mar 9, 2023, 8:00 AM IST
ಅಹ್ಮದಾಬಾದ್: ಟೆಸ್ಟ್ ಪಂದ್ಯಗಳನ್ನು 4 ದಿನಕ್ಕೆ ಇಳಿಸ ಬೇಕೆಂಬ ಕೂಗು ಕೇಳಿಬರುತ್ತಿರುವುದಕ್ಕೂ, ಭಾರತ-ಆಸ್ಟ್ರೇಲಿಯ ನಡುವಿನ ಪಂದ್ಯಗಳು ಎರಡೂವರೆ-ಮೂರು ದಿನಗಳಲ್ಲಿ ಮುಗಿಯು ವುದಕ್ಕೂ ಏನು ಸಂಬಂಧವಿದೆಯೋ ತಿಳಿಯದು. ಆದರೆ ಅಂತಿಮ ಟೆಸ್ಟ್ ಪಂದ್ಯವಾದರೂ ಸಂಪೂರ್ಣ 5 ದಿನಗಳನ್ನು ಕಾಣಲಿ ಎಂಬುದು ಅಭಿಮಾನಿಗಳ ಹಾರೈಕೆ ಮತ್ತು ನಿರೀಕ್ಷೆ.
ಗುರುವಾರ ಅಹ್ಮದಾಬಾದ್‌ನಲ್ಲಿ ಈ ನಿರ್ಣಾಯಕ ಮುಖಾಮುಖೀ ಆರಂಭವಾಗಲಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ದೃಷ್ಟಿಯಿಂದಲೂ ಈ ಪಂದ್ಯ ಮಹತ್ವ ಪಡೆದಿದೆ. ಇಂದೋರ್‌ನಲ್ಲಿ ತಿರುಗೇಟು ನೀಡುವ ಮೂಲಕ ಒಂದು ಫೈನಲ್ ಸ್ಥಾನ ಆಸ್ಟ್ರೇಲಿಯ ಪಾಲಾಗಿದೆ. ಇಲ್ಲಿಯೂ ರೋಹಿತ್ ಪಡೆ ಜಯಿಸಿದ್ದರೆ ಭಾರತದ ಫೈನಲ್ ಅಧಿಕೃತಗೊಳ್ಳುತ್ತಿತ್ತು. ಆದರೀಗ ಟೀಮ್ ಇಂಡಿಯಾ ಅಹ್ಮದಾಬಾದ್ ಗೆಲುವನ್ನು ಅಥವಾ ಡ್ರಾ ಫಲಿತಾಂಶವನ್ನು ನಂಬಿಕೊಂಡು ಕೂರಬೇಕಿದೆ. ಇದನ್ನು ಗೆದ್ದರೆ ಭಾರತ ಸತತ 2ನೇ ಸಲವೂ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಿದಂತಾಗುತ್ತದೆ. ಅಕಸ್ಮಾತ್ ಈ ಸರಣಿ 2-2 ಅಥವಾ 2-1ರಿಂದ ಮುಗಿದರೆ ಲೆಕ್ಕಾಚಾರ ಬದಲಾಗಬಹುದು. ನ್ಯೂಜಿಲ್ಯಾಂಡ್ ಎದುರಿನ ಸರಣಿಯನ್ನು ಶ್ರೀಲಂಕಾ 2-0 ಅಂತರದಿಂದ ಗೆದ್ದರೆ ಭಾರತ ಫೈನಲ್ ರೇಸ್‌ನಿಂದ ಹೊರಬೀಳಲಿದೆ!
ನ್ಪೋರ್ಟಿವ್ ಪಿಚ್?
ಮೊದಲ ಮೂರೂ ಪಂದ್ಯಗಳಲ್ಲಿ ಸ್ಪಿನ್ನರ್‌ಗಳೇ ಪ್ರಭುತ್ವ ಸಾಧಿಸಿದ್ದರು. ನಾಗ್ಪುರ ಹಾಗೂ ಹೊಸದಿಲ್ಲಿಯಲ್ಲಿ ಭಾರತ ಸ್ಪಿನ್ ಪರಾಕ್ರಮ ಮೆರೆದರೆ, ಇಂದೋರ್‌ನಲ್ಲಿ ಆಸ್ಟ್ರೇಲಿಯ ಸ್ಪಿನ್ ತಿರುಗೇಟು ನೀಡಿತು. ಮೂರೂ ಟೆಸ್ಟ್‌ಗಳಲ್ಲಿ ಬ್ಯಾಟಿಂಗ್ ಮೆಗಾಸ್ಟಾರ್ ಮಂಕಾಗಿದ್ದರು.
ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಗೆ ಸಾಮರ್ಥ್ಯ ತೋರ್ಪಡಿ ಸಲು ಇದು ಅಂತಿಮ ಅವಕಾಶ. ವಿರಾಟ್ ಕೊಹ್ಲಿ (111), ಚೇತೇಶ್ವರ್ ಪೂಜಾರ (98) ರನ್ ಗಳಿಕೆಯಲ್ಲಿ ಅಕ್ಷರ್ ಪಟೇಲ್‌ಗಿಂತಲೂ (185) ಹಿಂದುಳಿದಿರುವುದೊಂದು ವಿಪರ್ಯಾಸ. ರೋಹಿತ್ ಶರ್ಮ ಅತ್ಯಧಿಕ 207 ರನ್ ಮಾಡಿದರೂ ಗಟ್ಟಿಮುಟ್ಟಾದ ಓಪನಿಂಗ್ ಒದಗಿಸುವಲ್ಲಿ ಯಶಸ್ವಿಯಾಗಿಲ್ಲ. ಕೆ.ಎಲ್. ರಾಹುಲ್, ಇವರ ಸ್ಥಾನಕ್ಕೆ ಬಂದ ಶುಭಮನ್ ಗಿಲ್ ಇಬ್ಬರೂ ಕ್ರೀಸ್ ಆಕ್ರಮಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಶ್ರೇಯಸ್ ಅಯ್ಯರ್ ಕೂಡ ನೆರವಿಗೆ ನಿಂತಿಲ್ಲ.
ಸರಣಿಯಲ್ಲಿ ದಾಖಲಾಗಿರುವುದು ಒಂದು ಶತಕ ಮಾತ್ರ. ಇದನ್ನು ನಾಗ್ಪುರದಲ್ಲಿ ರೋಹಿತ್ ಶರ್ಮ ಬಾರಿಸಿದ್ದರು (120). ಐವತ್ತರ ಗಡಿ ದಾಟಿದ ಮತ್ತೋರ್ವ ಆಟಗಾರ ಪೂಜಾರ ಮಾತ್ರ. ಇಂದೋರ್‌ನಲ್ಲಿ ಅವರು 59 ರನ್ ಹೊಡೆದಿದ್ದರು. ಉಸ್ಮಾನ್ ಖ್ವಾಜಾ ಈ ಸರಣಿಯಲ್ಲಿ 2 ಅರ್ಧ ಶತಕ ಬಾರಿಸಿದ ಏಕೈಕ ಆಟಗಾರ (81 ಮತ್ತು 72). ಅರ್ಧ ಶತಕ ಹೊಡೆದ ಪ್ರವಾಸಿ ತಂಡದ ಮತ್ತೂಬ್ಬ ಆಟಗಾರ ಪೀಟರ್ ಹ್ಯಾಂಡ್ಸ್‌ಕಾಂಬ್ (72). ಇಷ್ಟೇ ಈ ಸರಣಿಯ ಬ್ಯಾಟಿಂಗ್ ಕಥನ.
ಇದನ್ನೆಲ್ಲ ಗಮನಿಸಿ ಅಹ್ಮದಾಬಾದ್ ಟ್ರ್ಯಾಕ್ ಅನ್ನು ಬ್ಯಾಟ್ಸ್ ಮನ್‌ಗಳಿಗೆ ಅನುಕೂಲವಾಗುವಂತೆ ಹೆಚ್ಚು ನ್ಪೋರ್ಟಿವ್ ಆಗಿ ರೂಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ತಿರುಗಿ ಬಿದ್ದ ಆಸೀಸ್
ಆದರೆ ಆಸ್ಟ್ರೇಲಿಯ ಎಲ್ಲ 4 ಪಂದ್ಯಗಳನ್ನೂ ಸೋಲುತ್ತದೆ ಎಂದು ಭಾವಿಸಿದರೆಲ್ಲ ಇಂದೋರ್ ಫಲಿತಾಂಶದಿಂದ ಮೌನಕ್ಕೆ ಶರಣಾಗಿರುವುದು ಸುಳ್ಳಲ್ಲ. ನಾಯಕತ್ವ ಬದಲಾದ ಕೂಡಲೇ ಕಾಂಗರೂ ಪಡೆ ತಿರುಗಿ ಬಿದ್ದ ರೀತಿ ನಿಜಕ್ಕೂ ಅಮೋಘ. ಭಾರತ ನಿರೀಕ್ಷಿಸಿಯೇ ಇರದ ಸೋಲು ಇದಾಗಿದೆ. ಹೀಗಾಗಿ ಅಹ್ಮದಾಬಾದ್‌ನಲ್ಲಿ ಏನೂ ಸಂಭವಿಸಬಹುದು, ಡ್ರಾ ಒಂದನ್ನು ಬಿಟ್ಟು!
ಶಮಿ ಪುನರಾಗಮನ
ತೃತೀಯ ಪಂದ್ಯದ ವೇಳೆ ವಿಶ್ರಾಂತಿ ಪಡೆದಿದ್ದ ವೇಗಿ ಮೊಹಮ್ಮದ್ ಶಮಿ ಅಹ್ಮದಾಬಾದ್‌ನಲ್ಲಿ ಆಡಲಿಳಿಯಲಿದ್ದಾರೆ. ಇವರಿಗೆ ಜೋಡಿ ಯಾಗಿ ಉಮೇಶ್ ಯಾದವ್ ಇರುತ್ತಾರೆ. ಮುಂದಿನ ಮೂರೂ ಏಕದಿನ ಪಂದ್ಯಗಳಲ್ಲಿ ಆಡಬೇಕಾದ ಕಾರಣ ಮೊಹಮ್ಮದ್ ಸಿರಾಜ್‌ಗೆ ವಿಶ್ರಾಂತಿ ನೀಡಲಾಗುವುದು. ವಿಕೆಟ್ ಕೀಪರ್ ಶ್ರೀಕರ್ ಭರತ್ ಬದಲು ಇಶಾನ್ ಕಿಶಾನ್ ಅವಕಾಶ ಪಡೆಯುವ ಸಾಧ್ಯತೆ ಬಹುತೇಕ ಖಚಿತ. ಓಪನಿಂಗ್ ಸ್ಥಾನದಲ್ಲಿ ಗಿಲ್ ಅವರೇ ಮುಂದುವರಿಯಬಹುದು.
ಗೆಲುವಿನ ಹಳಿಯೇರಿ ಈಗಾಗಲೇ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಸ್ಥಾನಕ್ಕೆ ಲಗ್ಗೆ ಇಟ್ಟಿರುವ ಆಸ್ಟ್ರೇಲಿಯ ಭಾರೀ ಹುರುಪಿನಲ್ಲಿದೆ. ಗೆಲುವಿನ ಪಡೆಯನ್ನು ನೆಚ್ಚಿಕೊಳ್ಳಬಹುದಾದರೂ ಓರ್ವ ಸ್ಪಿನ್ನರ್‌ನನ್ನು ಕೈಬಿಟ್ಟು ಹೆಚ್ಚುವರಿ ವೇಗಿಯನ್ನು ಸೇರಿಸಿಕೊಳ್ಳುವ ಕುರಿತೂ ಯೋಚಿಸುತ್ತಿದೆ. ಆಗ ಟಾಡ್ ಮರ್ಫಿ ಬದಲು ಸ್ಕಾಟ್ ಬೋಲ್ಯಾಂಡ್ ಆಡಲಿಳಿಯಬಹುದು.
ಪ್ರಧಾನಿಗಳಿಂದ ಪಂದ್ಯ ವೀಕ್ಷಣೆ
ಎರಡೂ ದೇಶಗಳ ಪ್ರಧಾನಿಗಳಾದ ನರೇಂದ್ರ ಮೋದಿ ಮತ್ತು ಆ್ಯಂಟನಿ ಅಲ್ಬನೀಸ್ ಮೊದಲ ದಿನವೇ ಅಹ್ಮದಾಬಾದ್ ಟೆಸ್ಟ್ ಪಂದ್ಯವನ್ನು ವೀಕ್ಷಿಸಲಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಇದು ಭಾರತ-ಆಸ್ಟ್ರೇಲಿಯ ನಡುವಿನ 75 ವರ್ಷಗಳ ಬಾಂಧವ್ಯದ ದ್ಯೋತಕವೂ ಹೌದು.
ಪ್ರಧಾನಿಗಳು ಬಂಗಾರ ವರ್ಣದ ಗಾಲ್ಫ್ ಕಾರಿನಲ್ಲಿ ಮೈದಾನಕ್ಕೊಂದು ಸುತ್ತು ಬರಲಿದ್ದಾರೆ. ಇದು ನವೀಕೃತ ಸ್ಟೇಡಿಯಂಗೆ ಮೋದಿ ಅವರ ಎರಡನೇ ಭೇಟಿ. ಕಳೆದ ವರ್ಷದ ನ್ಯಾಶನಲ್ ಗೇಮ್ಸ್ ಉದ್ಘಾಟನ ಸಮಾರಂಭಕ್ಕೆ ಮೊದಲ ಸಲ ಆಗಮಿಸಿದ್ದರು. ಅಂದು ಕೂಡ ಇದೇ ಗಾಲ್ಫ್ ಕಾರನ್ನೇರಿ ಮೈದಾನಕ್ಕೆ ಸುತ್ತು ಬಂದಿದ್ದರು. ತಮ್ಮದೇ ಹೆಸರಿನ ಈ ಬೃಹತ್ ಕ್ರೀಡಾಂಗಣದಲ್ಲಿ ಅವರು ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿರುವುದು ಇದೇ ಮೊದಲು. ಸೈಟ್‌ಸ್ಕ್ರೀನ್ ಬಳಿ ಅಳವಡಿಸಲಾದ ಡಯಾಸ್‌ನಲ್ಲಿ ಸರಳ ಸಮಾರಂಭವೊಂದು ನಡೆಯಲಿದೆ.
ಪ್ರಧಾನಿಗಳ ಆಗಮನದ ಹಿನ್ನೆಲೆಯಲ್ಲಿ ಒಂದು ಲಕ್ಷ, 10 ಸಾವಿರ ವೀಕ್ಷಕರ ಸಾಮರ್ಥ್ಯವುಳ್ಳ ವಿಶ್ವದ ಈ ದೈತ್ಯ ಕ್ರೀಡಾಂಗಣಕ್ಕೆ ಭಾರೀ ಭದ್ರತೆ ಒದಗಿಸಲಾಗಿದೆ. ಈಗಾಗಲೇ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ಎಸ್‌ಪಿಜಿ) ಕಾರ್ಯ ನಿರತವಾಗಿದೆ.
ಅಹ್ಮದಾಬಾದ್ ಭಾರತದ ಏಕೈಕ ಫಾಸ್ಟ್ ಟ್ರ್ಯಾಕ್ ಎಂಬ ಖ್ಯಾತಿ ಪಡೆದಿದ್ದ ಅಂಕಣ. ಇಲ್ಲಿ 1983ರಿಂದ ಮೊದಲ್ಗೊಂಡು ಈವರೆಗೆ 14 ಟೆಸ್ಟ್‌ಗಳನ್ನು ಆಡಲಾಗಿದೆ. ಭಾರತ ಆರನ್ನು ಗೆದ್ದಿದೆ, ಎರಡರಲ್ಲಿ ಸೋತಿದೆ, ಉಳಿದ 6 ಟೆಸ್ಟ್ ಡ್ರಾಗೊಂಡಿದೆ.
1983ರಲ್ಲಿ ಇಲ್ಲಿ ಆಡಲಾದ ಪ್ರಥಮ ಪಂದ್ಯದಲ್ಲೇ ವೆಸ್ಟ್ ಇಂಡೀಸ್ 138 ರನ್ನುಗಳಿಂದ ಭಾರತವನ್ನು ಸೋಲಿಸಿತ್ತು. ನಾಯಕ ಕಪಿಲ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ 83 ರನ್ನಿಗೆ 9 ವಿಕೆಟ್ ಉಡಾಯಿಸಿದ್ದು ಇದೇ ಪಂದ್ಯದಲ್ಲಿ. ನವಜೋತ್ ಸಿಂಗ್ ಸಿದ್ಧು ಅವರ ಪದಾರ್ಪಣ ಪಂದ್ಯವೂ ಇದಾಗಿತ್ತು.
ಭಾರತದ ಮತ್ತೊಂದು ಸೋಲು ಎದುರಾದದ್ದು ದಕ್ಷಿಣ ಆಫ್ರಿಕಾ ವಿರುದ್ಧ, 2008ರಲ್ಲಿ. ಅಂತರ ಇನ್ನಿಂಗ್ಸ್ ಮತ್ತು 90 ರನ್.
1983ರಿಂದ 2012ರ ತನಕ ಇಲ್ಲಿ ನಿರಂತರ ಟೆಸ್ಟ್ ಪಂದ್ಯಗಳು ನಡೆಯುತ್ತ ಬಂದವು. ಬಳಿಕ 9 ವರ್ಷಗಳ ದೊಡ್ಡದೊಂದು ಬ್ರೇಕ್ ಬಿತ್ತು. ಸ್ಟೇಡಿಯಂ ನವೀಕೃತಗೊಂಡು “ನರೇಂದ್ರ ಮೋದಿ ಸ್ಟೇಡಿಯಂ’ ಎಂದು ನಾಮಕರಣಗೊಂಡಿತು. ಬಳಿಕ 2021ರಲ್ಲಿ ಇಂಗ್ಲೆಂಡ್ ವಿರುದ್ಧ 2 ಟೆಸ್ಟ್ ನಡೆಯಿತು. ಮೊದಲನೆಯದು ಡೇ ನೈಟ್ ಟೆಸ್ಟ್. ಇದು ಎರಡೇ ದಿನದಲ್ಲಿ ಮುಗಿಯಿತು. ಫಲಿತಾಂಶ, ಭಾರತಕ್ಕೆ 10 ವಿಕೆಟ್ ಗೆಲುವು. ಅನಂತರದ ಟೆಸ್ಟ್ ಮೂರನೇ ದಿನಕ್ಕೆ ಕಾಲಿಟ್ಟಿತು. ಇದನ್ನು ಭಾರತ ಇನ್ನಿಂಗ್ಸ್ ಹಾಗೂ 25 ರನ್ ಅಂತರದಿಂದ ತನ್ನದಾಗಿಸಿಕೊಂಡಿತು.
ಪ್ರಸಕ್ತ ಸರಣಿಯ ಮೊದಲ 3 ಟೆಸ್ಟ್ ಮೂರೇ ದಿನಗಳಲ್ಲಿ ಮುಗಿದದ್ದು ಹಾಗೂ ಅಹ್ಮದಾಬಾದ್‌ನ ಕೊನೆಯ 2 ಟೆಸ್ಟ್‌ಗಳೂ 2-3 ದಿನಗಳಲ್ಲಿ ಸಮಾಪ್ತಿ ಆದುದನ್ನು ಕಂಡಾಗ 4ನೇ ಟೆಸ್ಟ್ ಎಷ್ಟು ದಿನಗಳ ಕಾಲ ಸಾಗೀತು ಎಂಬ ಪ್ರಶ್ನೆ ಕಾಡದೆ ಇರದು.
ಅಂದಹಾಗೆ, ಭಾರತ-ಆಸ್ಟ್ರೇಲಿಯ ಅಹ್ಮದಾಬಾದ್‌ನಲ್ಲಿ ಮುಖಾಮುಖಿ ಆಗುತ್ತಿರುವುದು ಇದೇ ಮೊದಲು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.