ಭಾರತ ವಿರುದ್ಧ ಆಸೀಸ್ ಬೃಹತ್ ಮೊತ್ತ
Team Udayavani, Mar 11, 2023, 5:42 AM IST
ಅಹ್ಮದಾಬಾದ್: ಮೊದಲೆರಡು ಟೆಸ್ಟ್ ಪಂದ್ಯಗಳು ಮೂರೇ ದಿನಕ್ಕೆ ಮುಗಿದುದನ್ನು ಕಂಡು ನಿರಾಶರಾದ ಕ್ರಿಕೆಟ್ ಪ್ರೇಮಿಗಳಿಗೆ ಅಹ್ಮದಾಬಾದ್‌ನಲ್ಲಿ ಬ್ಯಾಟಿಂಗ್ ರಸದೌತಣವೊಂದು ಲಭಿಸುವ ಸಾಧ್ಯತೆ ಗೋಚರಿಸಿದೆ.
ಆಸ್ಟ್ರೇಲಿಯ ತನ್ನ ಮೊದಲ ಇನ್ನಿಂಗ್ಸ್ ಮೊತ್ತವನ್ನು 480ಕ್ಕೆ ವಿಸ್ತರಿಸಿದ್ದು, ಭಾರತ ದ್ವಿತೀಯ ದಿನದಾಟದ ಕೊನೆಯ ಅವಧಿಯ 10 ಓವರ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸಿದೆ.
ಉಸ್ಮಾನ್ ಖ್ವಾಜಾ ಅವರ 180 ರನ್ ಸಾಹಸ, ಕ್ಯಾಮರಾನ್ ಗ್ರೀನ್ ಅವರ ಚೊಚ್ಚಲ ಶತಕ, ಸ್ಪಿನ್ನರ್ ಆರ್.ಅಶ್ವಿನ್ ಅವರ 6 ವಿಕೆಟ್ ಸಾಧನೆ ಎರಡನೇ ದಿನದಾಟದ ವಿಶೇಷವಾಗಿತ್ತು.
ಆಸ್ಟ್ರೇಲಿಯ 4ಕ್ಕೆ 255 ರನ್ ಗಳಿಸಿದಲ್ಲಿಂದ ಶುಕ್ರವಾರದ ಆಟ ಮುಂದುವರಿಸಿತ್ತು. ಆಗ ಆರಂಭಕಾರ ಖ್ವಾಜಾ 104, ಗ್ರೀನ್ 49 ರನ್ ಮಾಡಿ ಆಡುತ್ತಿದ್ದರು. ದ್ವಿತೀಯ ದಿನದ ಮೊದಲ ಅವಧಿಯ್ದುಕ್ಕೂ ಇವರದೇ ಬ್ಯಾಟಿಂಗ್ ವೈಭವ ಮುಂದುವರಿಯಿತು. ಭಾರತ ಈ ಜೋಡಿಯನ್ನು ಬೇರ್ಪಡಿಸಲು ಇನ್ನಿಲ್ಲದ ಪ್ರಯತ್ನ ಮಾಡಿತಾದರೂ ಯಶಸ್ವಿಯಾಗಲಿಲ್ಲ. ಊಟದ ವೇಳೆ ಆಸೀಸ್ ಸ್ಕೋರ್ 347ಕ್ಕೆ ಏರಿತು. ಆಗಲೇ ಖ್ವಾಜಾ 150ರ ಗಡಿ ತಲುಪಿದ್ದರು. ಗ್ರೀನ್ ಶತಕವನ್ನು ಸಮೀಪಿಸಿದ್ದರು(95).
ದ್ವಿತೀಯ ಅವಧಿಯ ಆಟದಲ್ಲಿ ಗ್ರೀನ್ ಅವರ ಮೊದಲ ಟೆಸ್ಟ್ ಶತಕ ದಾಖಲಾಯಿತು. ಇವರ ಮೊತ್ತ 114ಕ್ಕೆ ಏರಿದೊಡನೆ ಅಶ್ವಿನ್ ದೊಡ್ಡದೊಂದು ಬ್ರೇಕ್ ಒದಗಿಸಿದರು. ಕೀಪರ್ ಭರತ್ ಕೈಗೆ ಕ್ಯಾಚ್ ನೀಡಿದ ಗ್ರೀನ್ ಪೆವಿಲಿಯನ್ ಸೇರಿಕೊಂಡರು. 170 ಎಸೆತಗಳ ಈ ಸೊಗಸಾದ ಆಟದಲ್ಲಿ 18 ಬೌಂಡರಿ ಸೇರಿತ್ತು.
ಖ್ವಾಜಾ-ಗ್ರೀನ್ 59.4 ಓವರ್‌ಗಳ ಜತೆಯಾಟದಲ್ಲಿ 5ನೇ ವಿಕೆಟಿಗೆ 208 ರನ್ ರಾಶಿ ಹಾಕಿದರು. ಗ್ರೀನ್ ನಿರ್ಗಮನದ ಬೆನ್ನಲ್ಲೇ ಆಲೆಕ್ಸ್ ಕ್ಯಾರಿ(0) ಮತ್ತು ಮಿಚೆಲ್ ಸ್ಟಾರ್ಕ್(6) ವಿಕೆಟ್ ಕೂಡ ಬೆನ್ನು ಬೆನ್ನಿಗೆ ಬಿತ್ತು. ಟೀ ವೇಳೆ ಆಸೀಸ್ 7ಕ್ಕೆ 409 ರನ್ ಗಳಿಸಿತ್ತು. 180 ರನ್ ಮಾಡಿದ್ದ ಖ್ವಾಜಾ ದ್ವಿಶತಕದ ನಿರೀಕ್ಷೆಯಲ್ಲಿದ್ದರು.
ಆದರೆ ಟೀ ಅನಂತರದ ಪ್ರಥಮ ಎಸೆತದಲ್ಲೇ ಅಕ್ಷರ್ ಪಟೇಲ್ ಇದಕ್ಕೆ ಅಡ್ಡಗಾಲಿಕ್ಕಿದರು. ಖ್ವಾಜಾ ಅವರನ್ನು ಲೆಗ್ ಬಿಫೋರ್ ಬಲೆಗೆ ಬೀಳಿಸಿದರು. 10 ಗಂಟೆ, 11 ನಿಮಿಷಗಳ ಮ್ಯಾರಥಾನ್ ಇನ್ನಿಂಗ್ಸ್ ಕೊನೆಗೊಂಡಿತು. 422 ಎಸೆತ ಎದುರಿಸಿದ ಖ್ವಾಜಾ 21 ಬೌಂಡರಿ ಹೊಡೆದಿದ್ದರು.
409 ರನ್ ಆದಾಗ 8ನೇ ವಿಕೆಟ್ ರೂಪದಲ್ಲಿ ಖ್ವಾಜಾ ವಿಕೆಟ್ ಬಿದ್ದೊಡನೆಯೇ ಆಸೀಸ್ ಇನ್ನಿಂಗ್ಸ್ ಕೂಡ ಬೇಗನೇ ಕೊನೆಗೊಳ್ಳಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಬೌಲರ್‌ಗಳಾದ ನಥನ್ ಲಿಯಾನ್(34) ಮತ್ತು ಟಾಡ್ ಮರ್ಫಿ(41) ಕೂಡ ಬ್ಯಾಟ್ ಬೀಸತೊಡಗಿದಾಗ ಭಾರತದ ಬೌಲರ್ ಮತ್ತೆ ಬೆವರು ಸುರಿಸತೊಡಗಿದರು. 9ನೇ ವಿಕೆಟಿಗೆ 70 ರನ್ ಹರಿದುಬಂತು. ಸ್ಕೋರ್ 480ರ ತನಕ ಬೆಳೆಯಿತು.
ದ್ವಿತೀಯ ದಿನ ಉರುಳಿದ 6 ವಿಕೆಟ್‌ಗಳಲ್ಲಿ 5 ಅಶ್ವಿನ್ ಪಾಲಾಯಿತು. ಅವರ ಸಾಧನೆ 91ಕ್ಕೆ 6. ಒಂದು ವಿಕೆಟ್ ಅಕ್ಷರ್ ಪಟೇಲ್ ಉರುಳಿಸಿದರು.
ರೋಹಿತ್-ಗಿಲ್ ಭರವಸೆಯ ಆರಂಭ ಒದಗಿಸುವ ಸೂಚನೆ ನೀಡಿದ್ದಾರೆ. ಕ್ರಮವಾಗಿ 17 ಮತ್ತು 18 ರನ್ ಮಾಡಿ ಆಡುತ್ತಿದ್ದಾರೆ. ಲಿಯಾನ್ ಎಸೆತದಲ್ಲಿ ಗಿಲ್ ಒಂದು ಸಿಕ್ಸರ್ ಕೂಡ ಎತ್ತಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-480(ಖ್ವಾಜಾ 180, ಗ್ರೀನ್ 114, ಮರ್ಫಿ 41, ಲಿಯಾನ್ 34, ಹೆಡ್ 32, ಅಶ್ವಿನ್ 91ಕ್ಕೆ 6, ಶಮಿ 134ಕ್ಕೆ 2, ಅಕ್ಷರ್ 47ಕ್ಕೆ 1, ಜಡೇಜ 89ಕ್ಕೆ 1). ಭಾರತ-ವಿಕೆಟ್ ನಷ್ಟವಿಲ್ಲದೆ 36 (ಗಿಲ್ ಬ್ಯಾಟಿಂಗ್ 18, ರೋಹಿತ್ ಬ್ಯಾಟಿಂಗ್ 17).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.