ಬಿಜೆಪಿಗೆ ಸಿಕ್ಕ “ಸ್ಟಾರ್’ ಸುಮಲತಾ ಅಂಬರೀಷ್
Team Udayavani, Mar 11, 2023, 7:57 AM IST
ಬೆಂಗಳೂರು: ಅಂತೂ ಇಂತೂ ಸುಮಲತಾ ಅಂಬರೀಷ್ ಅವರು ಕಳೆದೊಂದು ವರ್ಷದಿಂದ ಅಳೆದೂ ತೂಗಿ ಅಂತಿಮವಾಗಿ ಬಿಜೆಪಿ ಬೆಂಬಲಿಸುವ ತೀರ್ಮಾನ ಕೈಗೊಂಡಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಸುಮಲತಾ ಅಂಬರೀಷ್ ಅವರ ಈ ತೀರ್ಮಾನ ಮಂಡ್ಯ ಜಿಲ್ಲೆಯಲ್ಲಿ ಆಗುವ ಲಾಭ- ನಷ್ಟಕ್ಕಷ್ಟೇ ಸೀಮಿತವಾಗಿ ನೋಡುವಂತೆಯೂ ಇಲ್ಲ. ರಾಜ್ಯಾದ್ಯಂತ ಇದರ “ಎಫೆಕ್ಟ್’ ಇದ್ದೇ ಇರಲಿದೆ.
ರಾಜಕೀಯ ಕುರುಕ್ಷೇತ್ರದಂತಹ ಪರಿಸ್ಥಿತಿಯಲ್ಲಿ ಸ್ವಾಭಿಮಾನ, ಅನುಕಂಪ, ಮಹಿಳೆಯರ ಸಾರಾಸಗಟು ಬೆಂಬಲ “ಅಸ್ತ್ರ’ದೊಂದಿಗೆ ರಾಜ ಕೀಯ ಲೆಕ್ಕಾಚಾರಗಳನ್ನೆಲ್ಲ ತಲೆಕೆಳಗು ಮಾಡಿದ್ದ ಸುಮಲತಾ ಅಂಬರೀಷ್ ಮಂಡ್ಯದಲ್ಲಿ ಪಕ್ಷೇತರ ಸಂಸದೆಯಾಗಿ ಗೆದ್ದು ಬಂದು ಶಕ್ತಿ ಪ್ರದರ್ಶನ ಮಾಡಿದ್ದವರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ಕುಡಿ ನಿಖೀಲ್‌ಕುಮಾರ್ ಅವರನ್ನು ಸೋಲಿಸಿ ಲೋಕಸಭೆ ಪ್ರವೇಶಿಸಿ ದಿಲ್ಲಿಯಲ್ಲೂ ಗಮನ ಸೆಳೆದಿದ್ದರು. ಸುಮಲತಾ ಅಂಬರೀಷ್ ಅವರ ಗೆಲುವಿಗೆ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಪ್ರಗತಿಪರ ಸಂಘಟನೆಗಳು ಎಲ್ಲದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ನಾಯಕರ ಬೆಂಬಲ, ಸಹಕಾರ ಕಾರಣವಾಗಿತ್ತು.
ಜೆಡಿಎಸ್ ಭದ್ರಕೋಟೆಯಲ್ಲಿ ಸಂಸದೆಯಾದ ಅನಂತರ ರಾಜಕೀಯವಾಗಿ ಸಾಕಷ್ಟು ಆರೋಪಗಳು ಬಂದರೂ ಸಹನೆ ಕಳೆದುಕೊಳ್ಳದೆ ಮೌನವಾಗಿಯೇ ಎದುರಿಸಿದರು. ಲೋಕಸಭೆ ಯಲ್ಲಿ ಬೆಂಬಲಕ್ಕಿದ್ದ ಎಲ್ಲರೂ “ಗೋಡೆ’ಯಂತೆ ಬೆಂಬಲಕ್ಕಿದ್ದದ್ದು ಧೈರ್ಯ ತಂದಿತ್ತು. ಆದರೆ ಇದೀಗ ಸುಮಲತಾ ಅಂಬರೀಷ್ ಅಧಿಕೃತವಾಗಿ ಬಿಜೆಪಿ ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಇಲ್ಲಿಂದಾಚೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳನ್ನೂ ಎದುರಿಸಬೇಕಾಗಿದೆ. ಇದು ಅವರಿಗೂ ಗೊತ್ತಿಲ್ಲದ ಸಂಗತಿಯೇನಲ್ಲ.
ಸುಮಲತಾ ಅಂಬರೀಷ್ ಅವರು ಬಿಜೆಪಿಗೆ ಬೆಂಬಲ ಘೋಷಿಸುವಾಗ ಆಡಿದ ಮಾತುಗಳನ್ನು ನೋಡಿದರೆ ಭವಿಷ್ಯದಲ್ಲಿ ತನ್ನ ಪಾತ್ರ ಹಾಗೂ ಎದುರಾಗಬಹುದಾದ ಸವಾಲು ಗಳ ಅಂದಾಜು ಅವರಿಗೆ ಇದೆ. ಜತೆಗೆ ಎಲ್ಲವನ್ನೂ ಎದುರಿಸಲು ಮಾನಸಿಕವಾಗಿ ಸಿದ್ಧತೆ, “ಹೋಂವರ್ಕ್’ಮಾಡಿಕೊಂಡೇ “ಅಖಾಡ’ ಕ್ಕಿಳಿದಿದ್ದಾರೆ ಎಂಬ ವ್ಯಾಖ್ಯಾನಗಳು ಇವೆ.
ಸುಮಲತಾ ರಾಷ್ಟ್ರೀಯ ಪಕ್ಷವೊಂದನ್ನು ಸೇರುತ್ತಾರೆ ಎಂಬುದು ಖಚಿತವಾದ ಅನಂತರ ಅವರ ಪುತ್ರ ರಾಜಕೀಯ ಪ್ರವೇಶ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ತಮ್ಮ ಪುತ್ರ ರಾಜಕೀಯ ಪ್ರವೇಶ ಮಾಡುವುದಿಲ್ಲ, ಕುಟುಂಬ ರಾಜಕಾರಣ ನನಗೆ ಇಷ್ಟವಿಲ್ಲ ಎಂದೂ ಸುಮಲತಾ ಹೇಳುವ ಮೂಲಕ ರಾಜಕೀಯವಾಗಿ ಬೇರೆಯದೇ ಸಂದೇಶ ರವಾನಿಸಿದ್ದಾರೆ.
ಸುಮಲತಾ ಅಂಬರೀಷ್ ಅವರನ್ನು ಮಂಡ್ಯ ಕ್ಕಷ್ಟೇ ಸೀಮಿತಗೊಳಿಸದೇ ಹಳೇ ಮೈಸೂರು, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಭಾಗ ಸಹಿತ ರಾಜ್ಯಾದ್ಯಂತ ಅಂಬರೀಷ್ ಅಭಿಮಾನಿಗಳ ಮತ ಬ್ಯಾಂಕ್ ಸೆಳೆಯಲು ಸ್ಟಾರ್ ಪ್ರಚಾರಕರಾಗಿಸುವುದು ಬಿಜೆಪಿಯ ಕಾರ್ಯತಂತ್ರವಾಗಿರಲೂಬಹುದು.
ವಿಧಾನಸಭೆ ಹೊಸ್ತಿಲಲ್ಲಿ ಬಿಜೆಪಿ ಪಾಲಿಗೆ ಹಳೇ ಮೈಸೂರು ಭಾಗದಲ್ಲಿ ಇದು ದೊಡ್ಡ “ಶಿಕಾರಿ’ ಯಾಗಿದ್ದು ಯಾವುದೇ ದೃಷ್ಟಿಕೋನದಲ್ಲಿ ನೋಡಿದರೂ ಬಿಜೆಪಿಗೆ ಲಾಭವೇ. ಆದರೆ ಸುಮಲತಾ ಅವರಿಗೆ ಎಷ್ಟರ ಮಟ್ಟಿಗೆ ಯಾವ ರೀತಿಯಲ್ಲಿ ರಾಜಕೀಯ ಲಾಭವಾಗಬಹುದು ಎಂಬುದು ಕಾದು ನೋಡಬೇಕಾಗಿದೆ. ಅವರು ರಾಜ್ಯ ರಾಜಕೀಯಕ್ಕೆ ಬರುತ್ತಾರಾ, ರಾಷ್ಟ್ರ ರಾಜಕಾರಣದಲ್ಲೇ ಮುಂದುವರಿಯುತ್ತಾರಾ ಎಲ್ಲದಕ್ಕೂ ಕಾಲವೇ ಉತ್ತರಿಸಬೇಕಾಗಿದೆ.
ಒಟ್ಟಾರೆ ಬಿಜೆಪಿಗೆ “ಸ್ಟಾರ್’ ಸುಮಲತಾ ಅಂಬರೀಷ್ ಸಿಕ್ಕಿದ್ದಾರೆ. ಬಿಜೆಪಿಯ ಅಜೆಂಡಾ ಸಹ ಸುಮಲತಾ ಅವರಿಗೆ ಗೊತ್ತಿದೆ. ಕಮಲ ಪಾಲಿನ ಮರುಭೂಮಿಯಲ್ಲಿ “ಫಸಲು’ ತೆಗೆಯುವ ಸವಾಲು ಸುಮಲತಾ ಅಂಬರೀಷ್ ಅವರ ಮುಂದಿದೆ.
ಕಮಲ ಅರಳಿಸುವ ಅಗ್ನಿಪರೀಕ್ಷೆ
ಮಂಡ್ಯದಲ್ಲಿ ಬಿಜೆಪಿ ಖಾತೆ ತೆರೆದಿರಲಿಲ್ಲ. ಆಪರೇಷನ್ ಕಮಲ ಕಾರ್ಯಾಚರಣೆಯಿಂದಾಗಿ ಜೆಡಿಎಸ್‌ನಿಂದ ನಾರಾಯಣಗೌಡ ಬಿಜೆಪಿಗೆ ಹೋಗಿದ್ದರಿಂದ ಉಪ ಚುನಾವಣೆಯಲ್ಲಿ ಸರ್ವರ ಪ್ರಯತ್ನದಿಂದ ಖಾತೆ ತೆರೆಯುವಂತಾಗಿತ್ತು. ಆದರೆ, ಇದೀಗ ಬಿಜೆಪಿಯಿಂದ ಗೆದ್ದ ನಾರಾಯಣಗೌಡರೇ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ. ಹೀಗಾಗಿ, ಸುಮಲತಾ ಅವರ ಪಾಲಿಗೆ ಈ ಅಸೆಂಬ್ಲಿ ಚುನಾವಣೆ ಮಂಡ್ಯದಲ್ಲಿ ಬಿಜೆಪಿಯ ಕಮಲ ಅರಳಿಸುವ ಮೊದಲ “ಅಗ್ನಿಪರೀಕ್ಷೆ’ಯಾಗಬಹುದು.
– ಎಸ್.ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.