ಪುತ್ತೂರು: ಸಮುದಾಯ ಆರೋಗ್ಯ ಕೇಂದ್ರವಾಗಿ ಪಾಣಾಜೆ ಕೇಂದ್ರ ಮೇಲ್ದರ್ಜೆಗೆ
ದಂತ ವೈದ್ಯರು ಹಾಗೂ ಆಯುಷ್ ಅಧಿಕಾರಿ ಕರ್ತವ್ಯ ನಿರ್ವಹಿಸಲಿದ್ದಾರೆ
Team Udayavani, Mar 17, 2023, 10:15 AM IST
ಪುತ್ತೂರು: ಕೇರಳ- ಕರ್ನಾಟಕ ಗಡಿಭಾಗದಲ್ಲಿರುವ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿದೆ. ರೋಗಿಗಳ ತಪಾಸಣೆ, ನಿಗದಿತ ಚಿಕಿತ್ಸೆಗಷ್ಟೇ ಸೀಮಿತವಾಗಿದ್ದ ಪಾಣಾಜೆ ಆರೋಗ್ಯ ಕೇಂದ್ರ ಭವಿಷ್ಯದಲ್ಲಿ ಸಮು ದಾಯ ಆರೋಗ್ಯ ಕೇಂದ್ರವಾಗಿ ಒಳ ಮತ್ತು ಹೊರರೋಗಿ ವಿಭಾಗದಲ್ಲಿ ದಿನದ 24 ತಾಸು ಚಿಕಿತ್ಸೆ ಸೌಲಭ್ಯ ಹೊಂದಲಿದೆ.
28 ಸಾವಿರ ಜನಸಂಖ್ಯೆ ವ್ಯಾಪ್ತಿ
ಪಾಣಾಜೆ, ನಿಡ³ಳ್ಳಿ, ಬೆಟ್ಟಂಪಾಡಿ, ಇರ್ದೆ, ಬಲ್ನಾಡು, ಸಾಜ, ಕೊಡಿಪ್ಪಾಡಿ, ಕಬಕ ಉಪಕೇಂದ್ರಗಳು ಪಾಣಾಜೆ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರಿದೆ. ಪ್ರಸ್ತುತ ಆರೋಗ್ಯ ಕೇಂದ್ರದಲ್ಲಿ ಓರ್ವ ವೈದ್ಯರಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರವಾಗಿ ಪರಿವರ್ತನೆ ಆದ ಬಳಿಕ ಬೇರೆ ಬೇರೆ ವಿಭಾಗದಲ್ಲಿ ವೈದ್ಯರು ಲಭ್ಯವಾಗಲಿದ್ದಾರೆ. ಒಟ್ಟು 28 ಸಾವಿರ ಜನಸಂಖ್ಯೆಯ ವ್ಯಾಪ್ತಿ ಇರುವ ಪಾಣಾಜೆ ಆರೋಗ್ಯ ಕೇಂದ್ರದಲ್ಲಿ 30 ಬೆಡ್‌ಗಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸದ್ಯದಲ್ಲೇ ಕಾಮಗಾರಿ ನಡೆಯಲಿದೆ.
ಅನುದಾನ ಮಂಜೂರು
ಪಾಣಾಜೆ ಆರೋಗ್ಯ ಕೇಂದ್ರವು 5 ಎಕ್ರೆ ಜಾಗ ಹೊಂದಿದೆ. ಸಮುದಾಯ ಆರೋಗ್ಯ ಕೇಂದ್ರದ ಮೂಲ ಸೌಕರ್ಯ ಜೋಡಣೆಗೆ 12.40 ಕೋಟಿ ರೂ. ಅನುದಾನ ಮಂಜೂರಾಗಿದೆ. ಹೊಸ ಕಟ್ಟಡ ನಿರ್ಮಿಸಿ, ಈಗ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಅದೇ ರೀತಿ ಉಳಿಸಲಾಗುತ್ತದೆ. ನೆಲ ಅಂತಸ್ತು ಹಾಗೂ ಮೊದಲ ಅಂತಸ್ತಿನ ಹೊಸ ಕಟ್ಟಡ ನಿರ್ಮಾಣ, ಕೋಲ್ಡ್ ಸ್ಟೋರೇಜ್ ಮೋರ್ಚರಿ (ಶೀತಲೀಕರಣ ಶವಾಗಾರ), ಮೆಡಿಕಲ್ ಎಕ್ವಿಪ್‌ಮೆಂಟ್ಸ್ (ವೈದ್ಯಕೀಯ ಸಲಕರಣೆಗಳು), ಫರ್ನಿಚರ್ಸ್, ಮಾಡ್ನೂಲರ್ ಓಟಿ (ಆಧುನಿಕ ಶಸ್ತ್ರಚಿಕಿತ್ಸಾ ಕೊಠಡಿ) ಮೊದಲಾದ ಆಧುನಿಕ ವ್ಯವಸ್ಥೆಗಳು ಇರಲಿವೆ. ಈ ಕಟ್ಟಡದ ಸುತ್ತ ರಸ್ತೆ, ಸಿಸಿ ಕೆಮರಾ, ಫೈರ್ ಫೈಟಿಂಗ್ ವರ್ಕ್ಸ್, ಮೆಡಿಕಲ್ ಆಕ್ಸಿಜನ್ ಲೈನ್ ಮೊದಲಾದ ವ್ಯವಸ್ಥೆಗಳು ಲಭ್ಯವಾಗಲಿದೆ.
ಮಾಡ್ನೂಲರ್ ಓಟಿ
ಪುತ್ತೂರು ತಾಲೂಕಿಗೇ (ಸರಕಾರಿ ಆಸ್ಪತ್ರೆಗಳಲ್ಲಿ) ಪ್ರಥಮ ಬಾರಿಗೆ ಮಾಡ್ನೂಲರ್ ಓಟಿಯನ್ನು ಇಲ್ಲಿ ಅನುಷ್ಠಾನಿಸಲಾಗುತ್ತದೆ. ಆಪರೇಶನ್ ಥಿಯೇಟರ್ ಅನ್ನು ಆಧುನಿಕಗೊಳಿಸಿರುವುದೇ ಇಲ್ಲಿನ ಪ್ರಮುಖ ಸಂಗತಿ. ಮಾಡ್ನೂಲರ್ ಓಟಿಯಲ್ಲಿ ಶಸ್ತ್ರಚಿಕಿತ್ಸೆಗೆ ಬಳಸಲಾಗುವ ಯಂತ್ರಗಳು ಆಧುನಿಕಗೊಂಡಿದ್ದು, ರೋಗಿಗಳಿಗೆ ಸುಲಭ ವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅನುಕೂಲಕರ ವಾಗಲಿದೆ ಎಂದು ಆರೋಗ್ಯ ಕೇಂದ್ರದ ವೈದ್ಯರು ಮಾಹಿತಿ ನೀಡಿದ್ದಾರೆ.
24 ತಾಸು ಕಾರ್ಯ
ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರನ್ನು ಹೊರತುಪಡಿಸಿ 25 ಹುದ್ದೆಗಳು ಮಂಜೂರಾಗಲಿದೆ. ಪ್ರಸೂತಿ, ಮಕ್ಕಳ ತಜ್ಞರು, ಅರಿವಳಿಕೆ, ಆಡಳಿತ ವೈದ್ಯಾಧಿಕಾರಿ, ದಂತ ವೈದ್ಯರು ಹಾಗೂ ಆಯುಷ್ ಅಧಿಕಾರಿ ಕರ್ತವ್ಯ ನಿರ್ವಹಿಸಲಿದ್ದಾರೆ. 12 ಡಿ ಗ್ರೂಪ್ ನೌಕರರು, ಲ್ಯಾಬ್ ಟೆಕ್ನಿಷಿಯನ್, 6 ಸ್ಟಾಫ್ ನರ್ಸ್, 2 ಔಷಧ ವಿತರಕರು ಇರಲಿದ್ದಾರೆ. ದಿನದ 24 ತಾಸು ಕೂಡ ಆಸ್ಪತ್ರೆ ಕಾರ್ಯ ನಿರ್ವಹಿಸಲಿದೆ. ಎಂಡೋಸಲ್ಫಾನ್ ಕೇಂದ್ರ ನಿರ್ಮಾಣಕ್ಕೂ ಯೋಜನೆ ಸಿದ್ಧವಾಗಿದ್ದು, ಫಿಸಿಯೋಥೆರಪಿಗೆ ಸಮುದಾಯ ಆರೋಗ್ಯ ಕೇಂದ್ರ ಪೂರಕವಾಗಿದೆ.
ದ.ಕ. ಜಿಲ್ಲೆಯಲ್ಲಿ ಮೂರು ಕೇಂದ್ರ
ದ.ಕ. ಜಿಲ್ಲೆಯಲ್ಲಿ ಪುತ್ತೂರು ತಾಲೂಕಿನ ಪಾಣಾಜೆ ಆರೋಗ್ಯ ಕೇಂದ್ರ, ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಪ್ರಾ.ಆ. ಕೇಂದ್ರ, ಬೆಳ್ತಂಗಡಿ ತಾಲೂಕಿನ ವೇಣೂರು ಪ್ರಾ.ಆ. ಕೇಂದ್ರವನ್ನು 30 ಬೆಡ್‌ಗೆ ಏರಿಸಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ.
ಮೇಲ್ದರ್ಜೆಗೇರಿಸಲಾಗಿದೆ
ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿದೆ. ದಿನದ 24 ಗಂಟೆಯೂ ಜನರ ಸೇವೆಗೆ ಲಭ್ಯವಾಗಲಿದೆ. ಈಗಾಗಲೇ 12.4 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕೆ.ಎಚ್.ಎಸ್.ಆರ್.ಡಿ. ಕಾಮಗಾರಿ ಅನುಷ್ಠಾನ ಮಾಡಲಿದೆ.
-ಸಂಜೀವ ಮಠಂದೂರು,
ಶಾಸಕರು, ಪುತ್ತೂರು
ಅನುಕೂಲಕರ
ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸುವ ಗಡಿಭಾಗ ಇದಾಗಿದ್ದು ಈ ನಿಟ್ಟಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಅನುಕೂಲಕರವಾಗಲಿದೆ. ಜನರಿಗೆ ಯಾವುದೇ ಸಂದರ್ಭದಲ್ಲಾದರೂ ಚಿಕಿತ್ಸೆ ಪಡೆದುಕೊಳ್ಳಬಹುದು.
-ಡಾ| ದೀಪಕ್ ರೈ,
ತಾಲೂಕು ಆರೋಗ್ಯಾಧಿಕಾರಿ, ಪುತ್ತೂರು
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.