ಆಧಾರ್-ಪಾನ್ ಜೋಡಣೆ ಗಡುವು ವಿಸ್ತರಣೆ: ಇನ್ನು ವಿಳಂಬ ಸಲ್ಲದು
Team Udayavani, Mar 29, 2023, 6:00 AM IST
ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಜೋಡಣೆಗೆ ನಿಗದಿಪಡಿಸಿದ್ದ ಅಂತಿಮ ಗಡುವನ್ನು ಕೇಂದ್ರ ಸರಕಾರ ಈಗ ಮತ್ತೆ ಮೂರು ತಿಂಗಳುಗಳ ಕಾಲ ವಿಸ್ತರಿಸಿದೆ. ಸರಕಾರದ ಈ ನಿರ್ಧಾರದಿಂದಾಗಿ ಜನರಿಗೆ ಆಧಾರ್ ಮತ್ತು ಪಾನ್ ಕಾರ್ಡ್ ಜೋಡಣೆಗೆ ಜೂ. 30ರ ವರೆಗೆ ಕಾಲಾವಕಾಶ ಲಭಿಸಿದಂತಾಗಿದ್ದು ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ.
ಆಧಾರ್ ಮತ್ತು ಪಾನ್ ಕಾರ್ಡ್‌ಗಳ ಜೋಡಣೆಗೆ ಮಾ. 31 ಕೊನೆಯ ದಿನವಾಗಿತ್ತು. ಗಡುವು ಸಮೀಪಿಸುತ್ತಿದ್ದಂತೆಯೇ ಜನರು ತಮ್ಮ ಎರಡೂ ಕಾರ್ಡ್ ಗಳು ಜೋಡಣೆಯಾಗಿವೇ ಇಲ್ಲವೇ ಎಂದು ತಿಳಿಯಲು ಮತ್ತು ಈವರೆಗೆ ಕಾರ್ಡ್ ಗಳನ್ನು ಜೋಡಣೆ ಮಾಡದಿರುವವರು ಆದಾಯ ತೆರಿಗೆ ಇಲಾಖೆಯ ಪೋರ್ಟಲ್‌ಗೆ ಮುಗಿಬಿದ್ದ ಪರಿಣಾಮ ಕಳೆದ ಕೆಲವು ದಿನಗಳಿಂದೀಚೆಗೆ ಪೋರ್ಟಲ್‌ನ ಕೆಲವೊಂದು ವಿಭಾಗಗಳು ಸಮರ್ಪಕವಾಗಿ ತೆರೆದು ಕೊಳ್ಳುತ್ತಿರಲಿಲ್ಲ. ಈ ತಾಂತ್ರಿಕ ದೋಷದ ಸಂಬಂಧ ದೇಶಾದ್ಯಂತ ಭಾರೀ ದೂರುಗಳು ಕೇಳಿಬಂದಿದ್ದವು. ಒಂದೆಡೆಯಿಂದ ಒಂದು ಸಾವಿರ ರೂ. ದಂಡ ತೆತ್ತು ಈ ಎರಡು ಕಾರ್ಡ್‌ಗಳ ಜೋಡಣೆಗೆ ಮುಂದಾದರೂ ಅದು ಸಾಧ್ಯ ವಾಗದಿರುವುದರಿಂದ ಜನಸಾಮಾನ್ಯರು ಸರಕಾರಕ್ಕೆ ಹಿಡಿಶಾಪ ಹಾಕತೊಡಗಿದ್ದರು. ಅಷ್ಟು ಮಾತ್ರವಲ್ಲದೆ ಇನ್ನೂ ಭಾರೀ ಸಂಖ್ಯೆಯಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್‌ಗಳು ಜೋಡಣೆಯಾಗಲು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ನೇರ ತೆರಿಗೆಗಳ ಕೇಂದ್ರ ಮಂಡಳಿ ಈಗ ಗಡುವನ್ನು ವಿಸ್ತರಿಸಿದೆ.
ಆಧಾರ್ ಮತ್ತು ಪಾನ್ ಕಾರ್ಡ್ ಜೋಡಣೆ ಪ್ರಕ್ರಿಯೆ ಆರಂಭವಾಗಿ ಸರಿಸುಮಾರು ಆರು ವರ್ಷಗಳೇ ಸಂದಿವೆ. 2017ರ ಬಳಿಕ ಪಾನ್ ಕಾರ್ಡ್ ಮಾಡಿಸಿಕೊಂಡವರ ಪಾನ್ ಸಂಖ್ಯೆ ಆಧಾರ್ ಕಾರ್ಡ್‌ನ ಜತೆ ಸಹಜವಾಗಿ ಜೋಡಣೆಯಾಗುತ್ತ ಬಂದಿದೆ. ಆದರೆ ಇದಕ್ಕೂ ಮುನ್ನ ಪಾನ್ ಕಾರ್ಡ್ ಮಾಡಿಸಿಕೊಂಡವರ ಕಾರ್ಡ್‌ನ್ನು ಜೋಡಣೆ ಮಾಡುವಂತೆ ಕೇಂದ್ರ ಸರಕಾರ ನಿರಂತರವಾಗಿ ಹೇಳುತ್ತಲೇ ಬಂದಿದೆಯಲ್ಲದೆ ಈ ಸಂಬಂಧ ಗಡುವನ್ನು ನಿಗದಿಪಡಿಸುತ್ತ ಬಂದಿತ್ತು. ಆರಂಭದಲ್ಲಿ ಉಚಿತವಾಗಿ ಈ ಎರಡು ಕಾರ್ಡ್‌ಗಳ ಜೋಡಣೆಗೆ ಕಾಲಾವಕಾಶ ಕಲ್ಪಿಸಲಾಗಿತ್ತಾದರೂ 2021ರಲ್ಲಿ ಹಣಕಾಸು ಕಾಯ್ದೆಗೆ ತಿದ್ದುಪಡಿ ಮಾಡಿ 500 ರೂ. ದಂಡ ವಿಧಿಸಿ ಕಾರ್ಡ್ ಜೋಡಣೆಗೆ ಅವಕಾಶ ನೀಡಲಾಗಿತ್ತು. ಕಳೆದ ವರ್ಷ ಅಂದರೆ 2022ರಲ್ಲಿ ಎರಡು ಬಾರಿ ಈ ಗಡುವನ್ನು ವಿಸ್ತರಿಸಲಾಗಿತ್ತಲ್ಲದೆ ಕಾರ್ಡ್‌ಗಳ ಜೋಡಣೆಗೆ 1,000ರೂ. ನಿಗದಿಪಡಿಸಲಾಗಿತ್ತು. ಈ ವರ್ಷದ ಮಾ. 31ರಂದು ಜೋಡಣೆಗೆ ಕೊನೆಯ ದಿನ ಎಂದು ಘೋಷಿಸಿ ಆ ಬಳಿಕ ಆಧಾರ್ ಕಾರ್ಡ್‌ನೊಂದಿಗೆ ಜೋಡಣೆಯಾಗದ ಎಲ್ಲ ಪಾನ್ ಕಾರ್ಡ್ ಗಳು ನಿಷ್ಕ್ರಿಯವಾಗಲಿವೆ ಹಾಗೂ ಬ್ಯಾಂಕ್ ವ್ಯವಹಾರ ಮತ್ತು ಇನ್ನಿತರ ಹಣಕಾಸು ವಹಿವಾಟು ನಡೆಸಲು ಸಾಧ್ಯವಾಗದು ಎಂದಿತ್ತು.
ಅಕ್ರಮ ವಹಿವಾಟು ಮತ್ತು ಹಣಕಾಸು ವ್ಯವಹಾರವನ್ನು ನಿಯಂತ್ರಿಸಲು ಹಾಗೂ ದೇಶದಲ್ಲಿ ನಡೆಯುವ ಪ್ರತಿಯೊಂದೂ ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಕೇಂದ್ರ ಸರಕಾರ ಪಾನ್ ಮತ್ತು ಆಧಾರ್ ಕಾರ್ಡ್ ಜೋಡಣೆ ಮಾಡುವ ನಿರ್ಧಾರ ಕೈಗೊಂಡಿದೆ. ಕಳೆದ ಆರು ವರ್ಷಗಳಿಂದ ಈ ಪ್ರಕ್ರಿಯೆ ಜಾರಿಯಲ್ಲಿದ್ದರೂ ಜನರು ಇತ್ತ ತಲೆಕೆಡಿಸಿಕೊಳ್ಳದ ಪರಿಣಾಮ ಕಾರ್ಡ್ ಜೋಡಣೆಗಾಗಿನ ಗಡುವನ್ನು ವಿಸ್ತರಿಸುತ್ತಲೇ ಬಂದಿತ್ತು. ಈಗ ಮತ್ತೆ ಕೇಂದ್ರ ಸರಕಾರ ದೇಶದ ಜನರ ಸಮಸ್ಯೆಯನ್ನು ಅರ್ಥೈಸಿಕೊಂಡು ಮತ್ತೆ ಮೂರು ತಿಂಗಳ ಕಾಲಾವಕಾಶ ನೀಡಿದೆ. ಜನರಲ್ಲಿ ಆರ್ಥಿಕ ಶಿಸ್ತನ್ನು ಮೂಡಿಸುವ ಮೂಲಕ ಎಲ್ಲ ತೆರನಾದ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸರಕಾರ ಈ ಉಪಕ್ರಮವನ್ನು ಕೈಗೆತ್ತಿಕೊಂಡಿದೆ. ಇಂತಹ ಮಹತ್ವಾಕಾಂಕ್ಷಿ ಉಪಕ್ರಮಕ್ಕೆ ದೇಶದ ಜನತೆ ಕೈಜೋಡಿಸಲೇಬೇಕು.
ಈಗಾಗಲೇ ಆರು ವರ್ಷಗಳಷ್ಟು ವಿಳಂಬವಾಗಿದ್ದು ಇದರ ಕಡ್ಡಾಯ ಜಾರಿಯನ್ನು ಇನ್ನಷ್ಟು ಮುಂದೂಡುವುದು ಸರಿಯಲ್ಲ. ಇನ್ನೂ ಮೂರು ತಿಂಗಳು ಇದೆಯಲ್ಲ ಎಂಬ ಅಸಡ್ಡೆಯ ಮನೋಭಾವವನ್ನು ಬಿಟ್ಟು ಆದಷ್ಟು ಬೇಗ ಜನರು ತಮ್ಮ ಪಾನ್ ಕಾರ್ಡ್‌ನ್ನು ಆಧಾರ್ ಕಾರ್ಡ್‌ನೊಂದಿಗೆ ಜೋಡಿಸಬೇಕು. ಮತ್ತೆ ವಿಸ್ತರಣೆಯಾಗಬಹುದು ಎಂಬ ಕಾರಣಕ್ಕೆ ಅಸಡ್ಡೆ ಮಾಡಬಾರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.