JDS: ಭವಾನಿ ಹಠ, ರೇವಣ್ಣಗೆ ಉಭಯ ಸಂಕಟ
ಬಂಡಾಯ ಸ್ಪರ್ಧೆಯ ಬಯಕೆ -ಜೆಡಿಎಸ್ ಭದ್ರಕೋಟೆಯಲ್ಲಿ ಜೋರಾಗುತ್ತಿದೆ ಜಟಾಪಟಿ
Team Udayavani, Apr 9, 2023, 7:51 AM IST
ಹಾಸನ: ಭವಾನಿ ರೇವಣ್ಣ ಮತ್ತು ಎಚ್.ಪಿ.ಸ್ವರೂಪ್ ನಡುವೆ ಹಾಸನ ಕ್ಷೇತ್ರದಲ್ಲಿ ನಡೆಯುತ್ತಿರುವ ಟಿಕೆಟ್ ಜಟಾಪಟಿ ಇನ್ನೂ ಜೋರಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡುವ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ದಳಪತಿ ಎಚ್.ಡಿ.ಕುಮಾರಸ್ವಾಮಿ ಹೇಳುವ ಮೂಲಕ ಸ್ವರೂಪ್‌ಗೆ ಟಿಕೆಟ್ ಖಚಿತಪಡಿಸುತ್ತಿರುವಂತೆ ಇತ್ತ ಭವಾನಿ ರೇವಣ್ಣ ಬಂಡಾಯವಾಗಿ ಸ್ಪರ್ಧೆಗಿಳಿಯುವ ಮುನ್ಸೂಚನೆ ನೀಡತೊಡಗಿದ್ದಾರೆ.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಹಾಸನ ಕ್ಷೇತ್ರದ ಟಿಕೆಟ್ ವಿವಾದ ನಾನೇ ಬಗೆಹರಿಸಿ ಘೋಷಣೆ ಮಾಡುವೆ ಎಂದು ಹೇಳಿದ ಮೇಲೆ ಭವಾನಿ ಮತ್ತು ಸ್ವರೂಪ್ ಅವರು ಪ್ರತಿಕ್ರಿಯೆ ನೀಡುತ್ತಿಲ್ಲ.
ಆದರೆ ಪ್ರಚಾರ ನಡೆಸುವುದು ಹಾಗೂ ಬೆಂಬಲಿಗರ ಸಭೆ ನಡೆಸುವುದನ್ನು ಮಾತ್ರ ಬಿಟ್ಟಿಲ್ಲ. ಸ್ವರೂಪ್ ಅವರಿಗೆ ಟಿಕೆಟ್ ಖಚಿತ ಎಂದು, ಏ.10 ಸೋಮವಾರದಂದು ಟಿಕೆಟ್ ಘೋಷಣೆ ಆಗುವುದೆಂಬ ಸುದ್ದಿ ಹರಿದಾಡುತ್ತಿದ್ದಂತೆ, ಸ್ವರೂಪ್ ಬೆಂಬಲಿಗರು ಪ್ರಚಾರ ಚುರುಕುಗೊಳಿಸಿದ್ದಾರೆ. ಸ್ವರೂಪ್‌ಗೆ ಟಿಕೆಟ್ ಖಚಿತವಾಗಿದೆ ಎಂಬುದನ್ನು ಸಹಿಸಿಕೊಳ್ಳದ ಭವಾನಿ ಬೆಂಬಲಿಗರು ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಸಿಗದಿದ್ದರೂ ಭವಾನಿ ಅವರು ಪಕ್ಷೇತರರಾಗಿಯಾದರೂ ಸ್ಪರ್ಧೆಗಿಳಿಯಲೇಬೇಕೆಂದು ಒತ್ತಡ ಹೇರತೊಡಗಿದ್ದಾರೆ.
ರೇವಣ್ಣ ಅವರ ಸಮ್ಮುಖದಲ್ಲಿಯೇ ಶುಕ್ರವಾರ ನಡೆದ ಸಭೆಯಲ್ಲಿ ಈ ಅಭಿಪ್ರಾಯಗಳನ್ನು ಬೆಂಬಲಿಗರು ವ್ಯಕ್ತಪಡಿಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೊಳೆನರಸೀಪುರದಲ್ಲಿ ರೇವಣ್ಣ ಅವರೂ ಜೆಡಿಎಸ್ ಟಿಕೆಟ್ ನಿರಾಕರಿಸಿ ಪಕ್ಷೇತರರಾಗಿ ಸ್ಪರ್ಧಿಸಬೇಕು. ಕುಮಾರಸ್ವಾಮಿ ಅವರು ಉದ್ದೇಶಪೂರ್ವಕವಾಗಿ ಭವಾನಿ ರೇವಣ್ಣ ಸ್ಪರ್ಧೆ ಮಾಡಲೇ ಕೂಡದು ಎಂದು ಜಿದ್ದಿಗೆ ಬಿದ್ದವರಂತೆ ಸ್ವರೂಪ್‌ಗೆ ಟಿಕೆಟ್ ಕೊಡುವ ನಿರ್ಧಾರ ಮಾಡಿದಂತಿದೆ. ಹಾಗಾಗಿ ಭವಾನಿ ಅವರು ಹಾಸನದಲ್ಲಿ, ಎಚ್.ಡಿ.ರೇವಣ್ಣ ಅವರು ಹೊಳೆನರಸೀಪುರದಲ್ಲಿ ಪಕ್ಷೇತರರಾಗಿ ಸ್ಪರ್ಧೆಗಿಳಿಯಲಿ. ಹಾಸನ ಜಿಲ್ಲೆಯಲ್ಲಿ ಒಂದು ಕ್ಷೇತ್ರದ ಟಿಕೆಟ್ ಹಂಚಿಕೆ ನಿರ್ಧರಿಸುವ ಅವಕಾಶವೂ ನಿಮಗೆ ಇಲ್ಲದಿದ್ದರೆ ಮುಂದೆ ನಿಮ್ಮ ಕುಟುಂಬದ ವಿರುದ್ಧ ಕುಮಾರಸ್ವಾಮಿ ಅವರು ಇನ್ನೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಹಾಗಾಗಿ ಈಗಲೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಿ ಎಂದು ಶುಕ್ರವಾರ ನಡೆದ ಸಭೆಯಲ್ಲಿ ಬೆಂಬಲಿಗರು ಆಗ್ರಹಿಸಿ ದ್ದಾರೆ.
ಸ್ವರೂಪ್ ಅವರ ತಂದೆ ಎಚ್.ಎಸ್.ಪ್ರಕಾಶ್ ಅವರನ್ನು ದೇವೇಗೌಡರು ಹಾಸನ ನಗರಸಭೆ ಅಧ್ಯಕ್ಷರನ್ನಾಗಿ ಮಾಡಿ, 6 ಬಾರಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ಕೊಟ್ಟಿದ್ದರು. ಎಚ್.ಎಸ್.ಪ್ರಕಾಶ್ ಅವರು 4 ಬಾರಿ ಶಾಸಕರಾಗಿದ್ದರು. ಎಚ್.ಎಸ್.ಪ್ರಕಾಶ್ ಅವರ ಸಹೋದರ ಎಚ್.ಎಸ್.ಅನಿಲ್ ಕುಮಾರ್ ಅವರೂ ಎರಡೂವರೆ ವರ್ಷ ಹಾಸನ ನಗರಸಭೆ ಅಧ್ಯಕ್ಷರಾಗಿದ್ದರು. ಸ್ವರೂಪ್ ಅವರು ಜಿಪಂ ಸದಸ್ಯರಾಗಿ, ಉಪಾಧ್ಯಕ್ಷರಾಗಿದ್ದರು. ಸಂಜೀವಿನಿ ಸಹಕಾರಿ ಆಸ್ಪತ್ರೆಯ ಆಡಳಿತ ಮಂಡಳಿ ಅಧ್ಯಕ್ಷರೂ ಆಗಿದ್ದಾರೆ. ಇಷ್ಟೆಲ್ಲ ಅವಕಾಶಗಳನ್ನು ದೇವೇಗೌಡರ ಕುಟುಂಬ ನೀಡಿದೆ. ಆದರೆ ಒಮ್ಮೆ ಹಾಸನ ಕ್ಷೇತ್ರದಲ್ಲಿ ದೇವೇಗೌಡರ ಕುಟುಂಬದ ಸದಸ್ಯರಿಗೆ ಸ್ಪರ್ಧಿಸಲು ಅವಕಾಶ ಕೊಡದೆ ಸ್ವರೂಪ್ ಅವರು ಪಟ್ಟು ಹಿಡಿದು ಕುಟುಂಬದ ಒಡಕಿಗೆ ಕಾರಣರಾಗುತ್ತಿದ್ದಾರೆ. ಅದಕ್ಕೆ ಕುಮಾರಸ್ವಾಮಿ ಕುಮ್ಮಕ್ಕು ನೀಡುತ್ತಿದ್ದಾರೆ. ಹಾಗಾಗಿ ದಿಟ್ಟ ನಿರ್ಧಾರ ಕೈಗೊಳ್ಳಿ ಎಂದು ಬೆಂಬಲಿಗರು ಆಗ್ರಹ ಪಡಿಸಿದ್ದಾರೆಂದು ಹೇಳಲಾಗಿದೆ.
ಬೆಂಬಲಿಗರ ಒತ್ತಾಯಗಳನ್ನು ಕೇಳಿಸಿಕೊಂಡ ರೇವಣ್ಣ ಅವರು, ಎಚ್.ಎಸ್.ಪ್ರಕಾಶ್ ಕುಟುಂಬದವರಿಗೆ 3 ದಶಕಗಳ ಕಾಲ ಬೆಂಬಲಿಸುತ್ತಾ ಬಂದಿದ್ದರೂ ನನ್ನ ಪತ್ನಿ ಸ್ಪರ್ಧೆಗೆ ಅಡ್ಡಗಾಲು ಆಗುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು ಎಂದು ಹೇಳಿದರೆಂದು, ಆದರೆ ಮುಂದಿನ ನಿರ್ಧಾರಗಳನ್ನು ಮಾತ್ರ ರೇವಣ್ಣ ಪ್ರಕಟಿಸದೆ ಮೌನ ವಹಿಸಿದ್ದಾರೆ. ಶನಿವಾರವೂ ಹಾಸನಕ್ಕೆ ಆಗಮಿಸಿದ್ದ ರೇವಣ್ಣ, ಬೆಂಬಲಿಗರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.
ಸೋಮವಾರ ಹಾಸನದಲ್ಲಿ ಭವಾನಿ ಅವರು ಜೆಡಿಎಸ್ ಮಹಿಳಾ ಕಾರ್ಯಕರ್ತರ ಸಮಾವೇಶವನ್ನು, ಆನಂತರ ಅಲ್ಪಸಂಖ್ಯಾತರ ಸಮಾವೇಶವನ್ನು ನಡೆಸಲು ಸಿದ್ಧತೆ ನಡೆಸಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಭವಾನಿ ಅವರು ಬಂಡಾಯವಾಗಿ ಸ್ಪರ್ಧೆಗಿಳಿಯಲು ಸಜ್ಜಾಗಿರುವಂತೆ ಕಾಣುತ್ತಿದೆ. ಭವಾನಿ ಅವರ ನಿರ್ಧಾರಗಳಿಗೆ ಪುತ್ರರಾದ ಪ್ರಜ್ವಲ್ ಮತ್ತು ಸೂರಜ್ ಅವರು ಬೆಂಬಲವಾಗಿ ನಿಂತಿದ್ದಾರೆಂದು ಹೇಳಲಾಗಿದೆ. ಇಷ್ಟೆಲ್ಲ ಬೆಳವಣಿಗೆಗಳ ನಡುವೆ ರೇವಣ್ಣ ಅವರು ಮೌನವಾಗಿದ್ದು ಉಭಯ ಸಂಕಟಕ್ಕೆ ಸಿಲುಕಿರುವಂತಿದೆ.
ಪ್ರತಿಷ್ಠೆಯಾಗಿ ಮಾರ್ಪಟ್ಟ ಟಿಕೆಟ್ ವಿವಾದ
ಹಾಸನ ಕ್ಷೇತ್ರದ ಟಿಕೆಟ್ ವಿವಾದ ಈಗ ಕುಮಾರಸ್ವಾಮಿ ಹಾಗೂ ರೇವಣ್ಣ ಅವರ ಕುಟುಂಬದವರ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ. ಆದರೆ ಭವಾನಿ ರೇವಣ್ಣ ಅವರು ಪಕ್ಷೇತರರಾಗಿ ಸ್ಪರ್ಧೆಗಿಳಿಯುವ ಮಟ್ಟಕ್ಕೆ ಇಳಿಯಲಾರರು, ಅದಕ್ಕೆ ರೇವಣ್ಣ ಅವಕಾಶ ಕೊಡಲಾರರು, ಇವೆಲ್ಲ ಒತ್ತಡ ತಂತ್ರಗಳು. ಚುನಾವಣೆಯಲ್ಲಿ ಟಿಕೆಟ್ ಪಡೆಯಬೇಕಾದಾಗ ಇವೆಲ್ಲ ಸಾಮಾನ್ಯ ಎಂಬುದು ಜೆಡಿಎಸ್ ಮುಖಂಡರ ನಂಬಿಕೆ. ಆದರೆ ಹಟಕ್ಕೆ ಬಿದ್ದು ಭವಾನಿ ಪಕ್ಷೇತರರಾಗಿ ಸ್ಪರ್ಧೆಗಿಳಿದರೆ ಜಿಲ್ಲೆಯ ಉಳಿದ ಕ್ಷೇತ್ರಗಳ ಮೇಲೂ ದುಷ್ಪರಿಣಾಮ ಬೀರಬಹುದು.
~ ಎನ್. ನಂಜುಂಡೇಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
MUST WATCH
ಹೊಸ ಸೇರ್ಪಡೆ
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.