ದ್ವೀಪರಾಷ್ಟ್ರದಲ್ಲಿಲ್ಲ ಈಜುಗಾರರು…!
Team Udayavani, Apr 9, 2023, 6:34 AM IST
ಎತ್ತ ಕಣ್ಣು ಹಾಯಿಸಿದರೂ ನೀರೇ ನೀರು. ಸುತ್ತಲೂ ನೀರಿನಿಂದ ಆವೃತವಾಗಿರುವ ಪ್ರದೇಶದಲ್ಲಿ ನಮ್ಮ ಮನೆಯಿದೆ ಅಂದು ಕೊಳ್ಳೋಣ. ಆಹಾ! ಎಷ್ಟು ಸುಂದರ ಅನಿಸು ತ್ತದೆ. ದಿನವೂ ಪ್ರಕೃತಿಯ ಪ್ರಶಾಂತ ವಾತಾವರಣ ವನ್ನು ಸವಿಯಬಹುದು, ನೀರಿನಲ್ಲಿ ಆಟವಾಡ ಬಹುದು, ಈಜಬಹುದು. ಆದರೆ ಎಲ್ಲ ಕಡೆಯೂ ನೀರಿರುವಾಗ ನಮಗೆ ಈಜಲು ಬಾರದಿದ್ದರೆ…?
ಮಾಲ್ದೀವ್ಸ್ ದೇಶದ ಹೆಸರನ್ನು ನೀವೆಲ್ಲ ಕೇಳಿರುತ್ತೀರಿ. ಹಿಂದೂ ಮಹಾಸಾಗರದ ಮಧ್ಯದಲ್ಲಿರುವ ದ್ವೀಪಗಳ ರಾಷ್ಟ್ರ. ಭಾರತದ ನೆರೆಯ ದೇಶವೂ ಹೌದು. ಭಾರತದ ಲಕ್ಷದ್ವೀಪದ ದಕ್ಷಿಣಕ್ಕಿರುವ ಮಿನಿಕೋಯ್ ಹಾಗೂ ಚಾಗೋಸ್ ಆರ್ಚಿಪೆಲಾಗೋ ಮಧ್ಯದಲ್ಲಿದೆ. ದ್ವೀಪ ರಾಷ್ಟ್ರವೆಂದರೆ ನೀರಿನ ಮಧ್ಯೆಯಿರು ವಂತದ್ದು. ಮಾಲ್ದೀವ್ಸ್ ಶೇ.99ರಷ್ಟು ನೀರಿ ನಿಂದಲೇ ಸುತ್ತುವರಿದಿದೆ. ಆದರೆ ಆರಂಭದಲ್ಲಿ ಹೇಳಿದ ಹಾಗೆ ನೀರಿನ ಸಂಪತ್ತಿರುವ ಈ ದೇಶದಲ್ಲಿ ಹೆಚ್ಚಿನ ಜನರಿಗೆ ಈಜಲೇ ಬರುವುದಿಲ್ಲ ಎಂಬುದು ವಿಪರ್ಯಾಸವಾದರೂ ಸತ್ಯ. ಅದರಲ್ಲೂ ಯುವಜನಾಂಗ ಹಾಗೂ ಹೆಣ್ಣು ಮಕ್ಕಳಿಗೆ ಈಜು ಕರಗತವಾಗಿಲ್ಲ.
ದ್ವೀಪಗಳೇ ಜೀವನಾಧಾರ
ನೀರಿನಿಂದಲೇ ಆವೃತವಾಗಿರುವ ಮಾಲ್ದೀವ್ಸ್‌ನಲ್ಲಿ ಜನರು ತಮ್ಮ ದೈನಂದಿನ ದುಡಿಮೆಗೆ ದ್ವೀಪಗಳನ್ನೇ ಆಶ್ರಯಿಸಿದ್ದಾರೆ. ದ್ವೀಪಗಳಲ್ಲಿಯೇ ಇವರ ದುಡಿಮೆ, ಬದುಕು. ನಿತ್ಯ ಜೀವನ ಸಾಗುವುದೇ ಈ ದ್ವೀಪಗಳಲ್ಲಿ ಇವರು ಮಾಡುವ ಕಾಯಕ ಮತ್ತು ದುಡಿಮೆ ಯಿಂದ. ಮಾಲ್ದೀವ್ಸ್‌ನ ರಾಜಧಾನಿ ಮಾಲೆ ಸುಮಾರು 1,900ಕ್ಕಿಂತಲೂ ಹೆಚ್ಚು ಸಣ್ಣ ಸಣ್ಣ ದ್ವೀಪಗಳನ್ನು ಹೊಂದಿವೆ. ಇವೆಲ್ಲ ಹವಳ ದ್ವೀಪಗಳು. ಅಂದರೆ ಇವು ತಗ್ಗು ಪ್ರದೇಶಗಳು. ಸಮುದ್ರ ಮಟ್ಟಕ್ಕಿಂತ ಕೆಲವು ಮೀಟರ್‌ಗಳಷ್ಟೇ ಎತ್ತರದಲ್ಲಿವೆ. ಹಾಗಾಗಿ ಇಲ್ಲಿ ಆಳವಾದ ಸಮುದ್ರಗಳಿಲ್ಲ. ಸಹಜ ವಾಗಿಯೇ ಮೀನುಗಾರಿಕೆ ಮತ್ತು ಪ್ರವಾಸೋದ್ಯಮಕ್ಕೆ ಈ ಪ್ರದೇಶಗಳು ಅತ್ಯಂತ ಪ್ರಶಸ್ತ.
ಹೆಣ್ಣುಮಕ್ಕಳ ಬಗೆಗೆ ಅತಿಯಾದ ಕಾಳಜಿ
ಈ ನೆಲದ ಸಂಪ್ರದಾಯ ಕೂಡಿರುವುದೇ ನೀರಿನೊಂದಿಗೆ. ಆದರೂ ಕೆಲವು ಸಾಂಪ್ರದಾಯಿಕ ಕಟ್ಟುಪಾಡುಗಳಿಂದ ಇಲ್ಲಿನ ಹೆಣ್ಣು ಮಕ್ಕಳಿಗೆ ನೆಲದ ಸೌಂದರ್ಯವನ್ನು ಸವಿಯಲಾಗುತ್ತಿಲ್ಲ. ಹೆಣ್ಣುಮಕ್ಕಳನ್ನು ಈಜಲು ಕಳುಹಿಸಲು ಮುಜುಗರ, ಗಂಡಸರ ಜತೆ ಈಜು ಬೇಡ, ಹೆಣ್ಣು ಮಕ್ಕಳು ಮನೆಯಲ್ಲೇ ಇರಬೇಕು ಎಂಬ ಸಾಂಪ್ರದಾಯಿಕ ಕಟ್ಟುಪಾಡುಗಳಿಂದ ಪೋಷಕರು ಹೆಣ್ಣುಮಕ್ಕಳನ್ನು ಈಜಿನಿಂದ ದೂರವಿಡುತ್ತಿದ್ದಾರೆ. ಜತೆಗೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಕುಟುಂಬಗಳಲ್ಲಿ ತಂದೆ-ತಾಯಿ ಈರ್ವರು ಬೇರೆ ಬೇರೆ ಉದ್ಯೋಗದಲ್ಲಿ ರುವುದರಿಂದ ತಮ್ಮ ಮಕ್ಕಳನ್ನು ಈಜು ತರಗತಿಗಳಿಗೆ ಕಳುಹಿಸಲು ಮತ್ತು ಅವರಿಗೆ ಈಜನ್ನು ಹೇಳಿಕೊಡಲು ಸಮಯವಿಲ್ಲದಂತಾಗಿದೆ.
ಹೆಣ್ಣು ಮಕ್ಕಳೆಡೆಗಿನ ಅತಿಯಾದ ಜಾಗ್ರತೆ, ಅವರನ್ನು ಈಜಲು ಕಳುಹಿಸಿದರೆ ಬಿಸಿಲಿನಿಂದ ಅವರ ಚರ್ಮ ಹಾಗೂ ಸೌಂದರ್ಯಕ್ಕೆ ತೊಡಕಾಗಬಹುದು ಎಂಬ ಹೆತ್ತವರ ಆಲೋಚನೆಗಳು ಕೂಡ ಹೆಣ್ಣುಮಕ್ಕಳನ್ನು ಈಜಿನಿಂದ ವಂಚಿತವನ್ನಾಗಿಸಿವೆ.
ಸಂಪ್ರದಾಯಕ್ಕೆ ಕಟ್ಟುಬಿದ್ದ ಜನರು
ಈಜಲು ಬಯಸುವವರು ಸಮುದ್ರದ ಆಳದಲ್ಲಿ ಮುಳುಗುವ ಭಯವಿಲ್ಲದೇ ಇಲ್ಲಿನ ಹವಳ ದ್ವೀಪಗಳಲ್ಲಿ ಆರಾಮವಾಗಿ ಈಜಬಹುದು. ಆದರೂ ಇಲ್ಲಿನ ಕೆಲವು ಕಟ್ಟುಪಾಡುಗಳು ಯುವಜನರನ್ನು ಅದರಲ್ಲೂ ಹೆಣ್ಣುಮಕ್ಕಳನ್ನು ಈಜಿನಿಂದ ದೂರವಿಟ್ಟಿದೆ. ಮೊದಲೆಲ್ಲ ಮಹಿಳೆಯರು ಬಟ್ಟೆ, ಪಾತ್ರೆಗಳನ್ನು ತೊಳೆಯಲು ಹೊರಗಡೆ ಹೋಗುವಾಗ ಮಕ್ಕಳನ್ನು ಕರೆದುಕೊಂಡು ನೀರಿನಲ್ಲಿ ಆಡವಾಡಲು ಬಿಡುತ್ತಿದ್ದರು. ಆದರೆ ಕೆಲವು ವರ್ಷಗಳ ಹಿಂದಿನಿಂದ ಅದು ನಿಂತಿದೆ. ಇಲ್ಲಿ ಈಜು ಹೇಳಿಕೊಡುವ ಶಾಲೆಗಳಿದ್ದರೂ ಅಲ್ಲಿಗೆ ಮಕ್ಕಳನ್ನು ಕಳುಹಿಸುವವರು ಕಡಿಮೆಯೇ. ಅದರಲ್ಲೂ ಹೆಣ್ಣು ಮಕ್ಕಳನ್ನು ಈಜಲು ಕಳುಹಿಸಿದರೆ ಏನು ಆಗಿಬಿಡುವುದೋ ಎಂಬ ಯೋಚನೆಯಿಂದ ಹೆತ್ತವರು ತಮ್ಮ ಮಕ್ಕಳಿಗೆ ಈಜಿನ ತರಬೇತಿ ನೀಡುತ್ತಿಲ್ಲ.
ಈಜು ಶಿಕ್ಷಣದಿಂದ ವಂಚಿತರಾಗುತ್ತಿರುವ ಇಲ್ಲಿನ ಹೆಣ್ಣುಮಕ್ಕಳಿಗೆ ಇದು ಮಾಲ್ದೀವ್ಸ್‌ನ ದೊಡ್ಡ ಉದ್ಯಮಗಳಾದ ಮೀನುಗಾರಿಕೆ ಹಾಗೂ ಪ್ರವಾಸೋದ್ಯಮದಿಂದಲೂ ದೂರವಿರಿಸಿದೆ. 2012ರ ಸಮೀಕ್ಷೆಯ ಪ್ರಕಾರ ಇಲ್ಲಿನ 15ರಿಂದ 16 ವರ್ಷದ ಮಕ್ಕಳ ಪೈಕಿ ಶೇ.10ರಷ್ಟು ಮಂದಿ ಮಾತ್ರ ಈಜು ಬಲ್ಲವರಾಗಿದ್ದಾರೆ. ಅದರಲ್ಲೂ ಹೆಣ್ಣಮಕ್ಕಳಲ್ಲಿನ ಆತ್ಮವಿಶ್ವಾಸದ ಕೊರತೆ ಮತ್ತು ಭಯ ಅವರನ್ನು ಈಜಿನಿಂದ ದೂರವೇ ಇರಿಸಿದೆ.
ಕೆಲಸಗಾರರ ಕೊರತೆ
ಮೀನುಗಾರಿಕೆ ಹಾಗೂ ಪ್ರವಾಸೋದ್ಯಮ ಇಲ್ಲಿನ ಜನರ ಪ್ರಮುಖವಾದ ವೃತ್ತಿ ಮತ್ತು ಉದ್ಯಮ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರವಾಸೋದ್ಯಮ ಶೇ.25ಕ್ಕಿಂತಲೂ ಅಧಿಕ ಪಾಲನ್ನು ಹೊಂದಿದೆ. ಆದರೆ ಈಜಲು ಬಾರದೇ ಇಲ್ಲಿನ ಮಹಿಳೆಯರು ಈ ಕ್ಷೇತ್ರದಲ್ಲಿ ದುಡಿಯಲು ಆಗುತ್ತಿಲ್ಲ. ಇವೆಲ್ಲದರ ಮಧ್ಯೆ ಇವೆರಡು ಕ್ಷೇತ್ರಗಳು ಕೂಡ ಅಗತ್ಯ ಸಂಖ್ಯೆಯ ಮತ್ತು ಕುಶಲ ಕೆಲಸಗಾರರಿಲ್ಲದೆ ಸೊರಗುತ್ತಿದೆ.
ಮಾಲ್ದೀವ್ಸ್‌ನಲ್ಲಿ ಈಜು ಮೂಲಭೂತ ಆದ್ಯತೆ. 2019ರ ಅಂಕಿಂಶದ ಪ್ರಕಾರ ಈಜು ಬಾರದೇ 1 ಲಕ್ಷಕ್ಕೆ ಶೇ.3.2ರಷ್ಟು ಮಂದಿ ಸಾವನ್ನಪ್ಪಿದ್ದಾರೆ. ಆದರೆ ಇದೀಗ ದೇಶದ ಜನರ ಆಲೋಚನಾ ಕ್ರಮ ಬದಲಾಗಿದೆ. ಸಾಂಪ್ರದಾಯಿಕ ಕಟ್ಟುಪಾಡುಗಳಿಂದ ನಿಧಾನವಾಗಿ ಹೊರಬರತೊಡಗಿದ್ದಾರೆ. ಹೆತ್ತವರು, ಹೆಣ್ಣು ಮಕ್ಕಳನ್ನೂ ಕೂಡ ಈಜು ತರಬೇತಿ ಪಡೆ ಯಲು ಕಳುಹಿಸುತ್ತಿದ್ದಾರೆ. ಸಹಜವಾಗಿಯೇ ದೇಶದಲ್ಲಿ ಹಲವು ಈಜು ತರಬೇತಿ ಕೇಂದ್ರಗಳು ತಲೆ ಎತ್ತಿವೆ. ಉದ್ಯಮ ಕ್ಷೇತ್ರದಲ್ಲೂ ಮಹಿಳೆಯರಿಗೆ ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತಿದೆ.
- ವಿಧಾತ್ರಿ ಭಟ್ ಉಪ್ಪುಂದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.