ಸಿದ್ದೇಗೌಡ ನಮ್ಮ ಅಭ್ಯರ್ಥಿ ಮಾತ್ರ… : ಚಾಮುಂಡೇಶ್ವರಿಯಲ್ಲಿ Siddaramaiah
ಒಮ್ಮೆ ಕಾಂಗ್ರೆಸ್ ಸೇರಿದ ಮೇಲೆ ಅವರು ಕಾಂಗ್ರೆಸಿಗ....
Team Udayavani, Apr 13, 2023, 5:15 PM IST
ಮೈಸೂರು:ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದೇಗೌಡ ನಮ್ಮ ಅಭ್ಯರ್ಥಿ ಮಾತ್ರ, ಇಲ್ಲಿ ನಾನೇ ಸ್ಪರ್ಧೆ ಮಾಡಿದ್ದೇನೆ ಎಂದು ನೀವೆಲ್ಲ ಪರಿಗಣಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.
ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿ,ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಪಕ್ಷದಿಂದ 11 ಜನ ಅಭ್ಯರ್ಥಿಗಳು ಅರ್ಜಿ ಹಾಕಿದ್ದರು, ಈ ಹನ್ನೊಂದೂ ಜನ ಕೂಡ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ, ಆದರೆ ಎಲ್ಲರ ಅಭಿಪ್ರಾಯ ಪಡೆದು ಮಾವಿನಹಳ್ಳಿ ಸಿದ್ದೇಗೌಡರನ್ನು ಅಂತಿಮವಾಗಿ ಹೈಕಮಾಂಡ್ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಇಲ್ಲಿನ ಕಾರ್ಯಕರ್ತರು ಮುಖಂಡರ ಅಭಿಪ್ರಾಯವನ್ನು ಹೈಕಮಾಂಡ್ ಮುಂದೆ ಹೇಳಿದ್ದೆ, ನಿಮ್ಮ ಅಭಿಪ್ರಾಯದ ಮೇರೆಗೆ ಸಿದ್ದೇಗೌಡರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ ಎಂದರು.
ನಾನು ಈ ಸಭೆಗೆ ಬಂದಿರುವ ಮುಖ್ಯ ಉದ್ದೇಶವೇ ನಮ್ಮಲ್ಲಿ ಇರುವ ಎಲ್ಲಾ ಭಿನ್ನಾಭಿಪ್ರಾಯವನ್ನು ಮರೆತು ಒಂದಾಗಿ ಕೆಲಸ ಮಾಡಬೇಕು ಎಂಬುದನ್ನು ಮನವರಿಕೆ ಮಾಡಿಕೊಡಲು. ಸಿದ್ದೇಗೌಡರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ, ಅವರು ವಲಸಿಗ ಎಂಬ ಅಭಿಪ್ರಾಯ ಯಾರಲ್ಲೂ ಬರಬಾರದು ಕಾರಣ ಒಮ್ಮೆ ಕಾಂಗ್ರೆಸ್ ಸೇರಿದ ಮೇಲೆ ಅವರು ಕಾಂಗ್ರೆಸಿಗ. ಇಲ್ಲಿ ಮೂಲ, ವಲಸಿಗ ಎಂಬುದು ಯಾವುದೂ ಇಲ್ಲ. ನಿಮ್ಮೆಲ್ಲರ ಸಹೋದರ, ಈ ಕಾರಣದಿಂದ ತಾವೆಲ್ಲ ಒಗ್ಗಟ್ಟನ್ನು ಪ್ರದರ್ಶಿಸಬೇಕು, ಈ ಮನವಿ ಮಾಡಲು ಇಂದು ಸಭೆ ಕರೆದಿದ್ದೇವೆ. ಇಂದು ಬಹಳಷ್ಟು ಜನ ಮುಖಂಡರು ಬಿಜೆಪಿ ಮತ್ತು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ, ಮುಂದೆ ಸೇರುವವರೂ ಇದ್ದಾರೆ, ಅವರೆಲ್ಲರಿಗೂ ಪಕ್ಷದ ವತಿಯಿಂದ ಮತ್ತು ವೈಯಕ್ತಿಕವಾಗಿ ಹಾರ್ದಿಕ ಸ್ವಾಗತ ಎಂದರು.
ಈ ಚುನಾವಣೆ ರಾಜ್ಯದ ಹಿತದೃಷ್ಟಿಯಿಂದ ಬಹಳ ಪ್ರಾಮುಖ್ಯವಾದುದ್ದು. ನಾವು ಯಾರು ಕೂಡ ಈ ಚುನಾವಣೆಯನ್ನು ಲಘುವಾಗಿ ಪರಿಗಣಿಸಬಾರದು, ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ನಮ್ಮ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ. ಕಳೆದ ಚುನಾವಣೆಯಲ್ಲಿ ಬೇರೆ ಬೇರೆ ರಾಜಕೀಯ ಬೆಳವಣಿಗೆಗಳಿಂದಾಗಿ ಜಿ.ಟಿ ದೇವೇಗೌಡ ಅವರು ನನ್ನನ್ನು ಸೋಲಿಸಿದರು. ಈ ಬಾರಿ ಅಂತಹ ಯಾವುದೇ ರಾಜಕೀಯ ಬೆಳವಣಿಗೆಗಳು ಆಗಿಲ್ಲ, ನಾನು 5 ವರ್ಷ ಮುಖ್ಯಮಂತ್ರಿಯಾಗಿ ಸಾಕಷ್ಟು ಒಳ್ಳೆ ಕೆಲಸಗಳನ್ನು ಮಾಡಿದ್ದರೂ ಕೂಡ ಚಾಮುಂಡೇಶ್ವರಿಯ ಜನ ನನ್ನನ್ನು ಸೋಲಿಸಿದರು ಎಂದರು.
ನಾಡಿನ ಸಾಮರಸ್ಯ ಹಾಳುಮಾಡುವ, ಧರ್ಮ – ಧರ್ಮಗಳನ್ನು ಎತ್ತಿಕಟ್ಟಿ ಸಮಾಜ ಒಡೆಯುವ, ಅಶಾಂತಿ ಸೃಷ್ಟಿಸುವ ಕೋಮುವಾದಿ ಪಕ್ಷ ಬಿಜೆಪಿ ಅಧಿಕಾರಕ್ಕೆ ಬರಬಾರದು, ಬಹುತ್ವದ ಭಾರತ ದೇಶದ ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗಬೇಕು ಎಂಬ ಕಾರಣಕ್ಕೆ ಜೆಡಿಎಸ್ ಗೆ ಬೆಂಬಲ ನೀಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಜಿ.ಟಿ ದೇವೇಗೌಡ ಅವರನ್ನು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಉನ್ನತ ಶಿಕ್ಷಣ ಸಚಿವನಾಗಿ ಮಾಡಲಾಗಿತ್ತು. ಆಮೇಲೆ ಅವರೊಳಗೆ ವೈಮನಸು ಬಂದು ವಾಚಾಮಗೋಚರವಾಗಿ ಬೈದುಕೊಂಡು ತಿರುಗಾಡುತ್ತಾ ಇದ್ದರು. ಆಮೇಲೆ ನನ್ನತ್ರ ಬಂದು “ನಾನು ಕಾಂಗ್ರೆಸ್ ಸೇರಿಕೊಳ್ಬೇಕು ಎಂದುಕೊಂಡಿದ್ದೇನೆ, ನೀವು ಟಿಕೆಟ್ ಕೊಡಿಸಬೇಕು” ಎಂದಿದ್ದರು. ಕೊನೆಗೆ ನನ್ನ ಜತೆಯಲ್ಲೇ ಇದ್ದರು, ಚುನಾವಣೆ ಸಂದರ್ಭದಲ್ಲಿ ಕೆಲಸವನ್ನು ಮಾಡಿದ್ದರು, ಕೊನೆಗೆ ಮತ್ತೆ ಜೆಡಿಎಸ್ ಗೆ ವಾಪಾಸು ಹೋದರು. ಅವರೇ ಬಂದು ಅವರೇ ವಾಪಾಸು ಹೋಗಿದ್ದಾರೆ. ನಾನು ಅವರನ್ನು ಕರೆದಿರಲಿಲ್ಲ ಎಂದರು.
ಕುಮಾರಸ್ವಾಮಿ ಎಷ್ಟೇ ಪಂಚರತ್ನ ಯಾತ್ರೆ ಮಾಡಿದ್ರೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇನ್ನೊಬ್ಬರ ಹೆಗಲಮೇಲೆ ಕೂತುಕೊಂಡು ಅಧಿಕಾರ ಮಾಡಬೇಕು ಎಂದು ಬಯಸುವವರು ಅವರು. ನಾನು ಜೆಡಿಎಸ್ ನಲ್ಲಿದ್ದಾಗ 2004ರಲ್ಲಿ 59 ಜನ ಜೆಡಿಎಸ್ ನಿಂದ ಗೆದ್ದಿದ್ದೆವು. 2005ರಲ್ಲಿ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದರು, ಆಗ ಜೆಟಿಡಿ ನನ್ನ ಜೊತೆ ಬರಲಿಲ್ಲ, ಮಂತ್ರಿ ಮಾಡುತ್ತೇವೆ ಎಂದು ಹೇಳಿದ್ದಕ್ಕೆ ಅಲ್ಲೇ ಉಳಿದುಕೊಂಡರು. ಹುಣಸೂರಿನಲ್ಲಿ ಯಾರು ಗೆಲ್ಲಿಸಿದರು ಎಂದು ಅವರು ಹೇಳಬೇಕು. ದೇವೇಗೌಡರು ಇವರನ್ನು ಮಂತ್ರಿ ಮಾಡಿದರು, ಇವೆರಲ್ಲ ಅವಕಾಶವಾದಿಗಳು. ನಂತರ ಕುಮಾರಸ್ವಾಮಿ ಮುಖ್ಯಮಂತ್ರಿ ಆದರು, ಮತ್ತೆ ಜೆಡಿಎಸ್ 59 ಸ್ಥಾನವನ್ನು ಮುಟ್ಟಿದರೇ? ಇಲ್ಲ ಅಲ್ವಾ? 28 ಸ್ಥಾನಗಳಲ್ಲಿ ಮಾತ್ರ ಗೆದ್ದಿದ್ದು. ಆಮೇಲೆ 40 ಗೆದ್ದರು, ಮತ್ತೆ 37 ಗೆದ್ದರು. ಈಗ 20 ರಿಂದ 22 ಗೆಲ್ಲಬಹುದು. ಹೇಗೆ ಸರ್ಕಾರ ಮಾಡ್ತಾರೆ? ಪಂಚರತ್ನ ಮಾಡಿದ ಕೂಡಲೇ ಬಹುಮತ ಸಿಗುತ್ತಾ? ಅವರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಯಾವ ಪಕ್ಷವೂ ಪೂರ್ಣ ಬಹುಮತ ಪಡೆಯಬಾರದು. ಆಗ ಕುಮಾರಸ್ವಾಮಿ ನನಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟರೆ ನಿಮ್ಮ ಜೊತೆ ಬರುತ್ತೇನೆ ಎಂದು ಷರತ್ತು ಹಾಕುತ್ತಾರೆ, ಈ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಡೆಸಲು ಆಗುತ್ತಾ? ನಾವೆಲ್ಲ ಬೆಂಬಲ ಕೊಟ್ಟರೂ 1 ವರ್ಷ 2 ತಿಂಗಳಿಗೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು ಎಂದರು.
ಹಿಂದೆ ಕುಮಾರಸ್ವಾಮಿಗೆ ನೀವು ಅಮೆರಿಕಾಗೆ ಹೋಗಬೇಡಿ, ಇಲ್ಲಿ ಶಾಸಕರು ಪಕ್ಷಾಂತರ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದ್ದೆ. ನನ್ನ ಮಾತು ಕೇಳಿಲ್ಲ ಹೋಗಿ 9 ದಿನ ಅಮೇರಿಕಾದಲ್ಲಿ ಕೂತುಕೊಂಡರು. ಅಷ್ಟರಲ್ಲಿ ಬಿಜೆಪಿಯವರು ವ್ಯವಹಾರ ಕುದುರಿಸಿ ಎಲ್ಲರನ್ನು ಕೊಂಡುಕೊಂಡರು. ನಂತರ ಸಿದ್ದರಾಮಯ್ಯ ಅವರು ಬಿಜೆಪಿಗೆ ಕಳಿಸಿದರು ಎಂದು ನನ್ನ ಮೇಲೆ ಗೂಬೆ ಕೂರಿಸಲು ಶುರು ಮಾಡಿದರು. ಕಾಂಗ್ರೆಸ್ ನವರನ್ನು ನಾನು ಕಳಿಸಿದ್ದಾದರೆ ಹೆಚ್, ವಿಶ್ವನಾಥ್, ಗೋಪಾಲಯ್ಯ, ನಾರಾಯಣಗೌಡರನ್ನು ಕಳಿಸಿದ್ದು ಯಾರಪ್ಪ? ಹೊಟೇಲ್ ನಲ್ಲಿ ಕೂತು ಆಡಳಿತ ಮಾಡಿದರೆ ಯಾವ ಶಾಸಕರು, ಕಾರ್ಯಕರ್ತರು ಉಳ್ಕೊತಾರೆ. ಯಾರನ್ನೂ ಭೇಟಿ ಮಾಡಲ್ಲ, ಮಂತ್ರಿಗಳು, ಶಾಸಕರನ್ನು ಹೊಟೇಲ್ ಒಳಗೆ ಬಿಡುತ್ತಿರಲಿಲ್ಲ. ಹೀಗಾಗಿ ಸರ್ಕಾರ ಬಿದ್ದುಹೋಯಿತು ಎಂದರು.
ಬಿಜೆಪಿಯವರು ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರು. ಎರಡು ವರ್ಷಕ್ಕೆ ಅವರನ್ನು ಅಧಿಕಾರದಿಂದ ಕಿತ್ತುಹಾಕಿದರು, ಪಾಪ ಯಡಿಯೂರಪ್ಪ ಅಳುತ್ತಾ ಇದ್ರು. ಯಡಿಯೂರಪ್ಪ ಅವರೇ ಹೇಳಿ ಬೊಮ್ಮಾಯಿಯನ್ನು ಮುಖ್ಯಮಂತ್ರಿ ಮಾಡಿಸಿದರು. ಒಂದು ತಿಂಗಳು ಅವರ ಜತೆ ಚನ್ನಾಗಿದ್ದು, ನಂತರ ಇಬ್ಬರ ಮಧ್ಯ ವೈಮನಸ್ಸು ಶುರುವಾಯಿತು. ಬೊಮ್ಮಾಯಿ 6 ಸಚಿವ ಸ್ಥಾನಗಳನ್ನು ಭರ್ತಿ ಮಾಡಲಿಲ್ಲ, ಕಾರಣ ಏನಪ್ಪಾ ಅಂದ್ರೆ ಮಂತ್ರಿ ಮಂಡಲ ವಿಸ್ತರಣೆ ಮಾಡಿದ್ರೆ ಯಡಿಯೂರಪ್ಪ ಅವರ ಮಗ ವಿಜಯೇಂದ್ರನನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳಬೇಕಾಗುತ್ತೆ ಎನ್ನುವುದು. ಒಂದು ಮುಕ್ಕಾಲು ವರ್ಷ ಮಂತ್ರಿಮಂಡಲ ವಿಸ್ತರಣೆ ಮಾಡದೆ ಸರ್ಕಾರ ತಳ್ಳಿದರು ಎಂದರು.
ಈಗ ಎರಡು ಪಕ್ಷದವರು ಸೇರಿಕೊಂಡು ಸಿದ್ದರಾಮಯ್ಯನ್ನ ಮುಗಿಸಬೇಕು ಎಂದು ಹೊರಟಿದ್ದಾರೆ. ಬಿಜೆಪಿ, ಜೆಡಿಎಸ್ ಎಲ್ಲರಿಗೂ ನಾನೇ ಟಾರ್ಗೆಟ್. ಹೀಗೆ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರಲ್ಲ ಈ ನಾಡಿಗೆ ನಾನು ಮಾಡಿರುವ ಅನ್ಯಾಯವಾದರೂ ಏನು? ನನ್ನ ಮೇಲಿನ ಭಯಕ್ಕೆ ನನ್ನನ್ನು ಮುಗಿಸಲು ಹೊರಟಿದ್ದಾರೆ. ರಾಜ್ಯದ ಜನರ ಆಶೀರ್ವಾದ ಇರುವವರೆಗೆ ಯಾರಿಂದಲೂ ನನ್ನನ್ನು ಮುಗಿಸಲು ಸಾಧ್ಯವಿಲ್ಲ. ನಿಮಗೂ ಕೂಡ ಸ್ವಾಭಿಮಾನ ಇರಬೇಕು, ಯಾವುದೇ ಕಾರಣಕ್ಕೂ ನಾವು ಗುಂಪುಗಾರಿಕೆ ಮಾಡಲ್ಲ, ಪಕ್ಷ ದ್ರೋಹ ಮಾಡಲ್ಲ, ನಾವೆಲ್ಲರೂ ಸಿದ್ದರಾಮಯ್ಯನ ಕೈಯನ್ನು ಬಲಪಡಿಸುವ ಕೆಲಸ ಮಾಡುತ್ತೇವೆ ಎಂಬ ಸಂಕಲ್ಪವನ್ನು ಇಂದು ಮಾಡಬೇಕು. ನಿಮಗೆ ನನ್ನ ಮೇಲೆ ಕಿಂಚಿತ್ತಾದರೂ ಅಭಿಮಾನ, ಪ್ರೀತಿ ಇದ್ದರೆ ಬಿಜೆಪಿ ಮತ್ತು ಜೆಡಿಎಸ್ ಅನ್ನು ಸೋಲಿಸುವ ಶಪಥ ಮಾಡಬೇಕು. ನಮ್ಮಲ್ಲಿ ಗುಂಪುಗಳಿರುವ ವಿಚಾರ ನನಗೂ ಗೊತ್ತಿದೆ, ಸಿದ್ದೇಗೌಡರು, ಮರೀಗೌಡರ ಮುಖ ನೋಡಬೇಡಿ, ನನ್ನ ಮುಖ ನೋಡಿ ನೀವೆಲ್ಲ ಜೊತೆಗೂಡಿ ಕೆಲಸ ಮಾಡಬೇಕು ಎಂದರು.
ಇಂದು ಕರ್ನಾಟಕದಲ್ಲಿನ ವಾತಾವರಣ ನೋಡಿದರೆ ಕಾಂಗ್ರೆಸ್ ಪಕ್ಷ 200% ಅಧಿಕಾರಕ್ಕೆ ಬಂದೇ ಬರುತ್ತದೆ. ಬಿಜೆಪಿಯವರು ರಾಜ್ಯವನ್ನು ಹಾಳು ಮಾಡಿದ್ದಾರೆ. ಸ್ವಾತಂತ್ರ್ಯ ನಂತರದಿಂದ 2018ರ ಮಾರ್ಚ್ ವರೆಗೆ ಕರ್ನಾಟಕದ ಮೇಲಿದ್ದ ಒಟ್ಟು ಸಾಲ 2 ಲಕ್ಷದ 42 ಸಾವಿರ ಕೋಟಿ. ಕಳೆದ ಐದೇ ವರ್ಷದಲ್ಲಿ ರಾಜ್ಯದ ಸಾಲ 3 ಲಕ್ಷದ 22 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಇಲ್ಲಿ ಜಿಟಿಡಿಯೋ, ಬಿಜೆಪಿಯ ಇನ್ಯಾರೋ ಮುಖ್ಯವಲ್ಲ, ರಾಜ್ಯವನ್ನು ಉಳಿಸುವುದು ಮುಖ್ಯ. ಈ ಬಿಜೆಪಿಯವರ ದುರಾಡಳಿತದಿಂದಾಗಿ ಪ್ರತೀ ವರ್ಷ 56,000 ಕೋಟಿ ಹಣವನ್ನು ಸಾಲ ಮರುಪಾವತಿ ಮಾಡಬೇಕಾಗಿದೆ. ಈ ಸಾಲ ಹೀಗೆ ಮುಂದುವರೆದರೆ ಕುಡಿಯಲು ನೀರು, ಅಕ್ಕಿ, ಸೇತುವೆ, ರಸ್ತೆ, ಮನೆಗಳನ್ನು ಜನರಿಗೆ ಕೊಡಲು ಆಗುತ್ತದಾ? ಬಿಜೆಪಿ ಮತ್ತು ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರಬೇಕಾ? ಇದನ್ನು ನಿಮ್ಮ ಆತ್ಮಸಾಕ್ಷಿಗೆ ಕೇಳಿನೋಡಿ. ಯಾರೋ ಬರ್ತಾರೆ, ಹೋಗ್ತಾರೆ ನಾವು ಕೂಲಿ ಮಾಡೋದು ತಪ್ಪುತ್ತಾ ಎಂದು ಅಂದುಕೊಂಡು ತಪ್ಪು ನಿರ್ಧಾರ ಮಾಡಬೇಡಿ, ರಾಜ್ಯ ಉಳಿದರೆ ಅಲ್ವಾ ನಾವು, ನೀವೆಲ್ಲ ಉಳಿಯೋದು. ಬಿಜೆಪಿ ಸರ್ಕಾರ ಬಂದ ಮೇಲೆ ಪ್ರತೀ ವರ್ಷ 78,000 ದಿಂದ 80,000 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ. ಹೀಗಿದ್ದಾಗ ಇವರು ರಸ್ತೆಗೆ, ನೀರಾವರಿಗೆ ಎಲ್ಲಿಂದ ದುಡ್ಡು ಕೊಡುತ್ತಾರೆ? ನಮ್ಮ ಸರ್ಕಾರ ಇದ್ದಾಗ ಬಡವರಿಗೆ 7 ಕೆ.ಜಿ ಅಕ್ಕಿ ಕೊಡುತ್ತಿದ್ದೆವು, ಇವರು ಬಂದು 5 ಕೆ.ಜಿ ಮಾಡಿದ್ದಾರೆ. ಜನರ ತೆರಿಗೆ ಹಣದಲ್ಲಿ ಜನರಿಗೆ ಅಕ್ಕಿ ಕೊಡಲು ಇವರಿಗೆ ಸಮಸ್ಯೆ ಏನು? ಈ ಸರ್ಕಾರ 40% ಕಮಿಷನ್ ಹಗರಣದಿಂದ ತುಂಬಿದೆ, ಇಲ್ಲಿ ಒಂದು ಲಕ್ಷ ರೂಪಾಯಿ ಕೆಲಸಕ್ಕೆ 40,000 ಲಂಚ ಕೊಡಬೇಕು. ಕಂಟ್ರಾಕ್ಟರ್ ಗೆ 25,000, ಜಿಎಸ್‌ಟಿಗೆ 18,000 ಕೊನೆಗೆ ಉಳಿಯೋದು 17,000 ಇದರಲ್ಲಿ ಏನು ಕೆಲಸ ಆಗುತ್ತೆ? ಕೆಲಸ ಮಾಡಿದ್ರೂ ಗುಣಮಟ್ಟ ಇರುತ್ತಾ? ಹೀಗೆ ಮಾಡಿ ರಾಜ್ಯವನ್ನೇ ತಿಂದುಬಿಟ್ಟಿದ್ದಾರೆ. ಈಗ ರಾಜ್ಯವನ್ನು ಉಳಿಸಬೇಕಾದುದ್ದು ನಮ್ಮ ಜವಾಬ್ದಾರಿ ಅಲ್ಲವೇ ಎಂದು ಪ್ರಶ್ನಿಸಿದರು.
ಎಸ್,ಸಿ,ಪಿ/ಟಿ,ಎಸ್,ಪಿ ಕಾನೂನು ಜಾರಿಗೆ ತಂದು ಪರಿಶಿಷ್ಟ ಜಾತಿ ಮತ್ತು ವರ್ಗದ ಜನರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಖರ್ಚಾಗುವಂತೆ ಮಾಡಿದ್ದು ನಾನು. ಇಂಥದ್ದೊಂದು ಕಾನೂನು ರೂಪಿಸಿದ್ದು ಕರ್ನಾಟಕದಲ್ಲಿ ಮೊದಲು ನಾನೇ. ಇದನ್ನು ಜನ ಅರ್ಥಮಾಡಿಕೊಳ್ಳಲ್ಲ. ನಮ್ಮ ಸರ್ಕಾರದ ಕಡೆಯ ಬಜೆಟ್ ನಲ್ಲಿ ಈ ಯೋಜನೆಗೆ ನೀಡಿದ್ದ ಹಣ 30,000 ಕೋಟಿ, ನಮ್ಮ ಬಜೆಟ್ ಗಾತ್ರ 2 ಲಕ್ಷದ 2 ಸಾವಿರ ಕೋಟಿ ರೂಪಾಯಿ. ಇಂದು ಬಜೆಟ್ ಗಾತ್ರ 3 ಲಕ್ಷದ 10 ಸಾವಿರ ಕೋಟಿ ರೂಪಾಯಿ ಆಗಿದೆ, ಆದರೆ ಈ ಯೋಜನೆಗೆ ನೀಡಿದ ಹಣ 30,000 ಕೋಟಿಯಲ್ಲೇ ನಿಂತಿದೆ. ಅಂದರೆ ದಲಿತರಿಗೆ ಈ ಸರ್ಕಾರ ಮೋಸ ಮಾಡಿದ್ರೂ ಕೋಪ ಬರಲ್ವಾ? ನಾನು ಹೇಳಿದ್ದು ವಾಸ್ತವ ಲೆಕ್ಕಗಳು, ಇದನ್ನು ಯಾರೂ ಬೇಕಾದರೂ ಬಜೆಟ್ ಪುಸ್ತಕ ನೋಡಿ ಖಾತ್ರಿಪಡಿಸಿಕೊಳ್ಳಬಹುದು. ನಿಮಗೆ ಕೋಪ ಬಂದರೆ ಜಿ.ಟಿ ದೇವೇಗೌಡರು ಮತ್ತು ಬಿಜೆಪಿಯನ್ನು ಕಿತ್ತೆಸೆದು ಸಿದ್ದೇಗೌಡರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಚಾಮುಂಡೇಶ್ವರಿ ನನಗೆ ರಾಜಕೀಯ ಜನ್ಮ ನೀಡಿದ ಕ್ಷೇತ್ರ. ನಂತರ ನಾನು ವರುಣಾಕ್ಕೆ ಹೋದರೆ, ಕಾರಣ ನನ್ನ ಹುಟ್ಟೂರು ಸಿದ್ದರಾಮನಹುಂಡಿ ವರುಣಾ ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ ಕಳೆದ ಬಾರಿ ನಾನು ಇಲ್ಲಿಂದಲೇ ನಿಂತು ನಿವೃತ್ತಿಯಾಗಬೇಕು ಎಂದು ತೀರ್ಮಾನ ಮಾಡಿದ್ದೆ, ಯಾವುದೋ ಕಾರಣಗಳಿಗಾಗಿ ಸೋತುಹೋದೆ. ಈ ಕ್ಷೇತ್ರದ ಅಭಿವೃದ್ಧಿ ಮಾಡಿದ್ದು ನಾನಾ ಅಥವಾ ಜಿಟಿಡಿಯಾ? ಹಾಗಾದರೆ ನಾನು ಹೇಳಿದವರಿಗೆ ನೀವು ಕೈಹಿಡಿಯಬೇಕು ಅಲ್ವಾ? ನಿಮ್ಮ ಭಿನ್ನಾಭಿಪ್ರಾಯಗಳು ಇದಕ್ಕಿಂತ ದೊಡ್ಡದಾ? ನಿಮಗೆ ನನ್ನ ಮೇಲೆ ನಿಜವಾಗಿ ಪ್ರೀತಿ, ಅಭಿಮಾನ ಇದ್ದರೆ ಜಿಟಿ ದೇವೇಗೌಡರಿಗೆ ಒಂದು ಮತವನ್ನೂ ಹಾಕಬೇಡಿ. ನಿಮ್ಮೊಳಗಿನ ಭಿನ್ನಾಭಿಪ್ರಾಯವನ್ನು ಬಿಟ್ಟು ನಾವೆಲ್ಲ ಒಂದೇ ತಾಯಿಯ ಮಕ್ಕಳು ಎಂದು ಕೆಲಸ ಮಾಡಬೇಕು. ನಮ್ಮ ವೈರಿ ಬಿಜೆಪಿ ಮತ್ತು ಜೆಡಿಎಸ್, ನಮ್ಮ ನಮ್ಮಲ್ಲಿ ಇರುವವರು ನಮ್ಮ ವೈರಿಗಳಲ್ಲ. ಇಂದು ಯಾರೆಲ್ಲ ಸಭೆಗೆ ಬಂದಿಲ್ಲ ಅವರೆಲ್ಲರ ಬಳಿ ನಾನು ಮಾತನಾಡುತ್ತೇನೆ. ನಾವು ಕಾಂಗ್ರೆಸ್ ನಲ್ಲಿದ್ದೇವೆ ಎಂದರೆ ಪಕ್ಷದ ಶಿಸ್ತುಗಳಿಗೆ ಬದ್ಧವಾಗಿ ನಡೆದುಕೊಳ್ಳಬೇಕು. ನನ್ನ ಬಳಿ ಅಧಿಕಾರ ಇದ್ದರೆ ತಾನೇ ನಿಮಗೆ ಸಹಾಯ ಮಾಡಲು ಆಗೋದು ಎಂದರು.
ಬಿಜೆಪಿ ಬಂದು ಮೂರು ಮುಕ್ಕಾಲು ವರ್ಷ ಆಯಿತು ಒಂದು ಮನೆ ಕೊಟ್ಟಿದ್ದಾರ? ನಾನು ಮುಖ್ಯಮಂತ್ರಿಯಾಗಿದ್ದಾಗ ಈ ಕ್ಷೇತ್ರದ ಹಳ್ಳಿಗಳಿಗೆ 5,000 ಹಾಗೂ ಪಟ್ಟಣದ ವ್ಯಾಪ್ತಿಗೆ 4,200 ಮನೆಗಳನ್ನು ಕೊಟ್ಟಿದ್ದೆ. ಇವ್ರು ಒಂದು ಮನೆ ಕೊಟ್ಟಿಲ್ಲ, ಬಡವರ ಹೊಟ್ಟೆ ಮೇಲೆ ಹೊಡೆದಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಈ ಯಾವ ಪಕ್ಷ ಬಂದರೂ ಭ್ರಷ್ಟಾಚಾರ ನಿಲ್ಲಲ್ಲ, ಭ್ರಷ್ಟಾಚಾರವನ್ನು ನಿಲ್ಲಿಸಲು ನಮ್ಮಿಂದ ಮಾತ್ರ ಸಾಧ್ಯ. ನಾನು 12 ವರ್ಷ ಹಣಕಾಸಿನ ಮಂತ್ರಿಯಾಗಿದ್ದೆ, ಯಾವನಾದ್ರೂ ಒಬ್ಬ ಗುತ್ತಿಗೆದಾರ ಎನ್‌ಒಸಿ ಪಡೆಯಲು 5 ಪೈಸೆ ಲಂಚ ಕೊಟ್ಟಿದ್ದೇನೆ ಎಂದು ಹೇಳಿದರೆ ಆ ಕ್ಷಣವೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ನಾನು 13 ಬಜೆಟ್ ಗಳನ್ನು ಮಂಡಿಸಿದ್ದೇನೆ. ಒಂದು ಪೈಸೆ ಲಂಚಕ್ಕಾಗಿ ಕೈಚಾಚಿಲ್ಲ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ ಎಂಬ ಹೆಮ್ಮ ನನಗಿದೆ ಎಂದರು.
ಕಳೆದ ಚುನಾವಣೆಯಲ್ಲಿ 165 ಭರವಸೆಗಳನ್ನು ನೀಡಿ ಅದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು, ಜೊತೆಗೆ ಹೆಚ್ಚುವರಿಯಾಗಿ 30 ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೆವು. ನಾವು ನುಡಿದಂತೆ ನಡೆದಿದ್ದೇವೆ. ಈ ಬಾರಿ ಕೂಡ ನಾವು 4 ಪ್ರಮುಖ ಭರವಸೆಗಳನ್ನು ನೀಡಿದ್ದೇವೆ, ಪ್ರತೀ ಮನೆಗೆ ಉಚಿತವಾಗಿ 200 ಯುನಿಟ್ ವಿದ್ಯುತ್, ಗೃಹಲಕ್ಷ್ಮಿ ಯೋಜನೆಯಡಿ ಪ್ರತೀ ಕುಟುಂಬದ ಯಜಮಾನಿಗೆ ತಿಂಗಳಿಗೆ 2000, ಪ್ರತೀ ಬಡ ಕುಟುಂಬದ ಸದಸ್ಯನಿಗೆ ತಲಾ 10 ಕೆ.ಜಿ ಅಕ್ಕಿ ಮತ್ತು ಯುವನಿಧಿ ಯೋಜನೆಯಡಿ ಅಲ್ಲಾ ಪದವೀಧರ ನಿರುದ್ಯೋಗಿ ಯುವ ಜನರಿಗೆ ತಿಂಗಳಿಗೆ 3000, ಡಿಪ್ಲೊಮೊ ಪದವೀಧರರಿಗೆ 1500 ಸಹಾಯಧನ ಕೊಡುತ್ತೇವೆ. ಇದನ್ನು ನಾವು ಅಧಿಕಾರಕ್ಕೆ ಬಂದ ಮೇಲೆ ನೂರಕ್ಕೆ ನೂರು ಜಾರಿ ಮಾಡುತ್ತೇವೆ, ಒಂದು ವೇಳೆ ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಆಗದಿದ್ದರೆ ನಿಮ್ಮ ಬಳಿ ಕ್ಷಮೆ ಕೇಳಿ ಅಧಿಕಾರದಿಂದ ಕೆಳಗಿಳಿಯುತ್ತೇವೆ ಎಂದರು.
ತಾವೆಲ್ಲರೂ ಈ ಬಾರಿ ಚಾಮುಂಡೇಶ್ವರಿಯಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಿ. ಇದೇ ನನ್ನ ಕಡೆಯ ಚುನಾವಣೆ, ನಾನು ಮತ್ತೆ ಚುನಾವಣಾ ರಾಜಕೀಯದಲ್ಲಿ ಇರುವುದಿಲ್ಲ. ವರುಣಾದಿಂದ ನಾನು ಸ್ಪರ್ಧೆ ಮಾಡಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡಿದೆ. ಬಿಜೆಪಿಯವರು ಬೆಂಗಳೂರಿನಿಂದ ಕರೆದುಕೊಂಡು ಬಂದು ನನ್ನ ವಿರುದ್ಧ ನಿಲ್ಲಿಸಿದ್ದಾರೆ, ನನಗೆ ಅವರ ಸ್ಪರ್ಧೆ ಬಗ್ಗೆ ಯಾವ ತಕರಾರು ಇಲ್ಲ. ತೀರ್ಮಾನ ಮಾಡುವುದು ಜನ. ನನಗೆ ವರುಣಾದ ಜನರ ಬೆಂಬಲ ಇದೆ ಎಂಬ ಭರವಸೆ ಇದೆ. ಇದು ನನ್ನ ಅಂತಿಮ ಚುನಾವಣೆ, ಹೀಗಾಗಿ ಹುಟ್ಟಿದ ಊರಿರುವ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತಿದ್ದೇನೆ. ಚಾಮುಂಡೇಶ್ವರಿ ನನಗೆ ರಾಜಕೀಯ ಜನ್ಮ ನೀಡಿದ ಕ್ಷೇತ್ರ, ಹಾಗಾಗಿ ಇಲ್ಲೂ ಕಾಂಗ್ರೆಸ್ ಪಕ್ಷ ಗೆಲ್ಲಬೇಕು ಎಂಬುದು ನನ್ನ ಆಸೆ. ವರುಣಾದಲ್ಲಿ ಗೆದ್ದರೂ ನಾನೇ ಶಾಸಕ, ಇಲ್ಲಿ ಸಿದ್ದೇಗೌಡ ಗೆದ್ದರೂ ಇಲ್ಲಿಯೂ ನಾನೇ ಶಾಸಕ. ಹೀಗೆ ಯಾರೇ ಗೆದ್ರೂ ನಿಮ್ಮ ರಕ್ಷಣೆ ಮತ್ತು ಕ್ಷೇತ್ರದ ಅಭಿವೃದ್ಧಿಯ ಜವಾಬ್ದಾರಿ ನನ್ನದು. ಈಗಲೂ ನನಗೆ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಪ್ರೀತಿ, ಅಭಿಮಾನ ಗೌರವ ಇದೆ ಎಂದರು.
ಈ ಬಾರಿಯ ಚುನಾವಣೆಯಲ್ಲಿ ಯಾರು ನಿಮ್ಮನ್ನು ಕರೆಯಲಿ, ಬಿಡಲಿ ನೀವು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕಾದುದ್ದು ನಿಮ್ಮ ಕರ್ತವ್ಯ. ಯಾರು ಕೆಲಸ ಮಾಡುತ್ತಾರೆ, ಮಾಡಲ್ಲ ಎಂಬುದು ನನಗೆ ಗೊತ್ತಾಗುತ್ತೆ, ಯಾರಿಗೆ ಕೆಲಸ ಮಾಡಲು ಆಗಲ್ಲ ಅವರಿಗೆ ನನ್ನ ಮೇಲೆ ಪ್ರೀತಿ ಇಲ್ಲ ಎಂದರ್ಥ. ಸಿದ್ದೇಗೌಡರು ಮೊದಲ ಬಾರಿ ಚುನಾವಣೆಗೆ ನಿಂತಿದ್ದಾರೆ, ಅವರು ತಮ್ಮ ಶಕ್ತಿ ಮೀರಿ ಪ್ರಯತ್ನ ಮಾಡುತ್ತಾರೆ. ನೀವು ಸಿಟ್ಟು ಮಾಡಿಕೊಳ್ಳದೆ ಅವರ ಜೊತೆ ನಿಂತು ಗೆಲ್ಲಿಸುವ ಕೆಲಸ ಮಾಡಬೇಕು. 17ನೇ ತಾರೀಖು ಸಿದ್ದೇಗೌಡರು ನಾಮಪತ್ರ ಸಲ್ಲಿಸುತ್ತಾರೆ, ನೀವೆಲ್ಲ ಅವರ ಜತೆ ಹೋಗಿ ಬೆಂಬಲಕ್ಕೆ ನಿಂತು ಚುನಾವಣೆಯಲ್ಲಿ ಗೆಲ್ಲಿಸಿ ವಿಧಾನಸಭೆಗೆ ಕಳಿಸುವ ಕೆಲಸ ಮಾಡಬೇಕು ಎಂದು ಕೈಮುಗಿದು ಮನವಿ ಮಾಡುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.