ಮಾತನು ಆಡುವ ಕಲೆಯ ಕಲಿಸುವ Yakshagana


Team Udayavani, Apr 16, 2023, 8:34 AM IST

yakshagana

ಕರ್ನಾಟಕ ಕರಾವಳಿಯ ಜನತೆಯ ಕನ್ನಡ ಮಾತು-ಬರಹಗಳಿಗೆ ಸಾಮಾನ್ಯ ವಾಗಿ ಮೆಚ್ಚುಗೆಯ ಮಾತು ಕೇಳಿ ಬರುತ್ತಲೇ ಇರುತ್ತದೆ. ಭಾಷಾಶುದ್ಧಿ, ಪಕ್ವತೆ, ಅಲ್ಪಪ್ರಾಣ ಮಹಾಪ್ರಾಣಗಳ ಪರಿಪೂರ್ಣ ಉಚ್ಚಾರ, ಬೌದ್ಧಿಕ ಸಾಮರ್ಥ್ಯ ಸಹಿತವಾದ ವ್ಯಾಖ್ಯಾನಗಳು, ವ್ಯಾಕರಣ ಶುದ್ಧಿ.. ಹೀಗೆ ಈ ಮೆಚ್ಚುಗೆಯ ಮಾತು ವ್ಯಕ್ತವಾಗುತ್ತಾ ಇರುತ್ತದೆ.

ಕರಾವಳಿಯ ಈ ಕನ್ನಡ ಭಾಷಾ ಪರಿಶುದ್ಧಿಯ ಸಾಮರ್ಥ್ಯಕ್ಕೆ ಇಲ್ಲಿನ ಯಕ್ಷಗಾನದ ಬಹು ಶತಮಾನಗಳ ಪರಂ ಪರೆಯ ಮಹತ್ವದ ಕೊಡುಗೆ ಅಂತರ್ಗತ ವಾಗಿದೆ ಎಂದು ವಿಶ್ವಾಸದಿಂದ ವರ್ಣಿಸ ಬಹುದು. ಇಲ್ಲಿನ ಬಹು ಮಂದಿ ಹೀಗೆ ಯಕ್ಷಗಾನ- ತಾಳಮದ್ದಲೆಯ ಭಾಗವತಿಕೆ- ಅರ್ಥಗಾರಿಕೆ ಕೇಳುತ್ತಲೇ ಬೆಳೆಯುವವರು. ಸಹಜವಾಗಿ ಪ್ರಭಾವಿತರಾಗಿರುವವರು.

ಆಯಾ ಪ್ರದೇಶದ ಅನನ್ಯವಾದ ಸಾಂಸ್ಕೃತಿಕ, ಜನಪದೀಯ ಪರಂಪರೆಗಳು ಆಯಾ ಪ್ರದೇಶದ ಜನರ ನಡೆನುಡಿಯನ್ನು ಪ್ರಭಾವಿಸುತ್ತದೆ ಎಂದು ಮಾನವಶಾಸ್ತ್ರ ತಜ್ಞರು ಹೇಳುತ್ತಾರೆ. ಅದಕ್ಕೆ ಪೂರಕವಾದ ನಿದರ್ಶನ ಇಲ್ಲಿದೆ. ಯಕ್ಷಗಾನ ಸಂಪತ್ತಿನ ತಿಟ್ಟುಗಳು, ಪ್ರಸಂಗಗಳು, ಪ್ರಯೋಗಗಳು, ಹಿಮ್ಮೇಳ- ಮುಮ್ಮೇಳ, ಬಣ್ಣಗಾರಿಕೆ, ಕಲಾವಿದರ ಪರಂ ಪರೆ, ತಾಳಮದ್ದಲೆಗಳು, ಯಕ್ಷಗಾನ ಸಂಬಂ ಧಿತ ಅಕಾಡೆಮಿ ಸಹಿತ, ಸಂಘಟನೆಗಳು, ತರಬೇತಿ- ಅಧ್ಯಯನಗಳ, ಕಮ್ಮಟಗಳು, ಸಂಶೋಧನಾ ಗ್ರಂಥಗಳು, ವಿಚಾರ ಸಂಕಿರಣಗಳು, ಸಮ್ಮೇಳನಗಳು, ಸೇವಾ ಕಾರ್ಯಗಳು, ಪತ್ರಿಕೆ- ಟಿವಿ ಸಹಿತ ಎಲ್ಲ ಮಾಧ್ಯಮಗಳಲ್ಲಿ ಯಕ್ಷಗಾನದ ಕಾರ್ಯಕ್ರಮಗಳು, ಟ್ರಸ್ಟ್‌ಗಳು ಮುಂತಾದ ಅನೇಕಾನೇಕ ವ್ಯವಸ್ಥೆಗಳ ಬಗ್ಗೆ ವಿವರಣೆ ಇಲ್ಲಿನ ಉದ್ದೇಶವಲ್ಲ.

ಆದರೆ ಯಕ್ಷವೃಕ್ಷದ ಈ ಎಲ್ಲ ಬೇರು- ಟಿಸಿಲು- ಎಲೆ- ನೆರಳು- ಆಸರೆ- ಹೂವು-ಹಣ್ಣುಗಳೆಲ್ಲ ಕನ್ನಡ ಭಾಷಾ ಬಳಕೆಗೆ ಚಿನ್ನದ ಸ್ಪರ್ಶ ನೀಡುತ್ತಿವೆ ಎಂದರೆ ಉತ್ಪ್ರೇಕ್ಷೆಯಾಗಲಾರದು.

ಕನ್ನಡದ ಪ್ರಸಂಗಗಳ ಜತೆಯಲ್ಲಿ ಈಗಿನ ಕಲಾನುಕಾಲದಲ್ಲಿ ತುಳು, ಕೊಂಕಣಿ, ಇಂಗ್ಲಿಷ್‌ ಮುಂತಾದ ಭಾಷೆಗಳಲ್ಲೂ ಪ್ರದರ್ಶನ ನಡೆಯುತ್ತದೆ. ಸುಮಾರು ಅರ್ಧ ಸಹಸ್ರಮಾನದ ಕನ್ನಡ ಪ್ರಸಂಗಗಳಲ್ಲಿ ಕಲಾನುಕಾಲದಲ್ಲಿ ಬದಲಾವಣೆಗಳಾಗುತ್ತಾ ಬಂದಿದೆ. ದೊಂದಿ ಬೆಳಕಲ್ಲಿ ನಡೆಯುತ್ತಿದ್ದ ಪ್ರದರ್ಶನಗಳು ವಿದ್ಯುತ್‌ ಆವಿಷ್ಕಾರದ ಬಳಿಕ ಆ ಬೆಳಕಲ್ಲಿ ಝಗಮಗಿಸುತ್ತಿವೆ. ಸೇವಾರ್ಥ ಪ್ರದರ್ಶನಗಳು, ಟಿಕೆಟ್‌ ಸಹಿತ ಟೆಂಟ್‌ಗಳಲ್ಲಿ ಪ್ರದರ್ಶನಗಳು, ಮಳೆಗಾಲದಲ್ಲಿ ಮುಂಬಯಿ, ಬೆಂಗಳೂರು ಮುಂತಾದೆಡೆಗೆ ಸಭಾಂಗಣ ಗಳಲ್ಲಿ ಪ್ರದರ್ಶನ, ಈಗ ವಿದೇಶಗಳಲ್ಲೂ ಸತತ ಪ್ರದರ್ಶನ ಸಹಿತ ತಿರುಗಾಟಕ್ಕೆ ಅನೇಕ ಹೊಸತನಗಳ ಆಯಾಮಗಳು. ಇವೆಲ್ಲ ಪ್ರದರ್ಶನಗಳಿಂದ ವೀಕ್ಷಕ, ಪ್ರೇಕ್ಷಕರ ಸಂಖ್ಯೆ ವೃದ್ಧಿಸುತ್ತಲೇ ಬಂದಿದೆ. ಕನ್ನಡ ಪ್ರಸಂಗಗಳ ಬಗ್ಗೆ ಉಲ್ಲೇಖೀಸುವುದಾದರೆ ಕನ್ನಡ ನಾಡು ನುಡಿಗೆ ಅಪಾರ ಕೊಡುಗೆ ದೊರೆಯುತ್ತಿದೆ. ಪ್ರದರ್ಶನ ಕಲೆಯೊಂದು ಇಷ್ಟು ಪ್ರಭಾವ ಬೀರುತ್ತದೆ ಎಂದಾದರೆ ಅದು ಯಕ್ಷಗಾನ ಅಂತ ಹೆಮ್ಮೆಯಿಂದ ಹೇಳಬಹುದು.

ಎಂಬತ್ತರ ದಶಕದ ಮಧ್ಯಭಾಗದಲ್ಲಿ ಚಂದ್ರನ್‌ ಪ್ರಕರಣ ಸಂಭವಿಸಿದಾಗ ಸ್ವಲ್ಪಮಟ್ಟಿನ ಸಮಯದ ಹೊಂದಾಣಿಕೆ ಅನಿವಾರ್ಯವಾಯಿತು; ಇತ್ತೀಚೆಗಿನ ಕೊರೊನಾ ಸಂದರ್ಭ ಕೂಡ. ಆದರೆ ಇವೆಲ್ಲ ಒಂದಷ್ಟು ದಿನ ಮಾತ್ರ. ಯಕ್ಷವೈಭವ ತತ್‌ಕ್ಷಣ ಎಂಬಂತೆ ಮರು ರಾರಾಜಿಸಿದೆ. ಕ್ಯಾಸೆಟ್‌, ಆಕಾಶವಾಣಿ ಇತ್ಯಾದಿಗಳೆಲ್ಲ ಈ ಕಲೆಗೆ ಪ್ರೋತ್ಸಾಹಕವಾಗಿದೆ.

ರಾತ್ರಿಪೂರ್ತಿ ಯಕ್ಷಗಾನ ನೋಡಿದ ಎಳೆಯರು ಮರುದಿನ ಸಂಜೆ ತಮ್ಮ ಮನೆಗಳ ಪಕ್ಕದಲ್ಲಿ ಈ ಪ್ರಸಂಗಗಳ ಒಂದಿಷ್ಟು ಪುನರಾವರ್ತನೆ ನಡೆಸುವ ಪರಿಪಾಠವಿತ್ತು; ನಿದ್ದೆ ಕಣ್ಣಲ್ಲಿ ಕೂಡ ! ಈ ಮೂಲಕ ಪೌರಾಣಿಕ ಪಾತ್ರಗಳಿಗೆ ಅವರು ಪರಕಾಯ ಪ್ರವೇಶಗೈದು, ನೆನಪಿನಲ್ಲಿ ಉಳಿದ ಸಂಭಾಷಣೆಗಳನ್ನು ಹೇಳುವುದು, ಕೆಲವರು ಕುಣಿಯುವುದು, ಗೊತ್ತಿದ್ದಷ್ಟು ಹಾಡುವುದು… ಹೀಗೆ ಬಹುತೇಕ ಎಳೆಯರು ಸಂಭಾಷಣೆಯಲ್ಲಿ ಮತ್ತು ಪೌರಾಣಿಕ ಕಥಾನಕಗಳ ಜ್ಞಾನ ಸಂಪನ್ನರಾದರು. ತತ್‌ಕ್ಷಣ ಉತ್ತರಿಸುವ ಪ್ರತ್ಯುತ್ಪನ್ನಮತಿ ಪ್ರಾಪ್ತಿಸಿ ಕೊಂಡರು. ಸಹಜವಾಗಿಯೇ ಭಾಷಾಶುದ್ಧಿ ಸಿದ್ಧಿಸಿಕೊಂಡರು.
ಯಕ್ಷ ಕಲಾವಿದರ ಪ್ರೌಢಿಮೆಯೇ ಹಾಗೆ. ಕನ್ನಡ ಭಾಷೆಯನ್ನು ಅವರು ಬಳಸಿಕೊಳ್ಳುವ ಪರಿಯೇ ಹಾಗೆ.

ಒಂದು ಪ್ರಸಂಗವನ್ನು ಸತತ ಒಂದು ವಾರ ಪ್ರದರ್ಶಿಸಿದರು ಅಂತ ಭಾವಿಸಿ ಕೊಳ್ಳೋಣ. ಅದೇ ಕಲಾವಿದರು ಅದೇ ಪಾತ್ರ ವನ್ನು ಅಭಿನಯಿಸುತ್ತಾರೆ. ಆದರೆ ಈ ದಿನದ ಸಂಭಾಷಣಾ ವೈಖರಿ ನಾಳೆ ಇರುವುದಿಲ್ಲ. ಪ್ರತೀ ದಿನ ಆ ಪಾತ್ರಕ್ಕೆ ಅದರ ಕಥಾನಕದ ಚೌಕಟ್ಟಿ ನೊಳಗೆ ಹೊಸ ವ್ಯಾಖ್ಯಾನ ಹೊಮ್ಮುತ್ತದೆ. ಹೊಸ ಭಾಷಾ ವೈಖರಿಯು ಗಮನ ಸೆಳೆಯುತ್ತದೆ. ಕನ್ನಡ ಪದಪುಂಜಗಳು ಹೊಸ ಶಕ್ತಿಯಿಂದ ರಾರಾಜಿಸುತ್ತದೆ. ವೀಕ್ಷಕರು, ಕೇಳುಗರು ಈ ಭಾಷಾ ಸಂಪತ್ತಿನ ಫ‌ಲಾನುಭವಿಗಳು. ಕರಾವಳಿಯ ಬಹುತೇಕ ಸೃಷ್ಟಿಶೀಲ ಸಾಧಕರು ಈ ಪ್ರಭಾವವನ್ನು ಸಾರ್ವಜನಿಕವಾಗಿಯೇ ವ್ಯಕ್ತಪಡಿಸುವುದಿದೆ. ಇದು ಕನ್ನಡ ಮಾತನು ಪರಿಪೂರ್ಣವಾಗಿ ಆಡುವ ಅಥವಾ ಬರೆಯುವ ಸಾಮರ್ಥ್ಯಕ್ಕೆ ಧನಾತ್ಮಕವಾದ ವೇಗವರ್ಧಕ.

ಪ್ರಾಸಬದ್ಧವಾಗಿ ಮಾತನಾಡುವ ಅಥವಾ ಬರೆಯುವ ಕಲೆಯನ್ನೂ ಯಕ್ಷಗಾನ ಪ್ರಭಾವಿಸುತ್ತಿರುವ ಬಗ್ಗೆ ಅನೇಕಾನೇಕ ದೃಷ್ಟಾಂತಗಳನ್ನು ನೀಡಬಹುದಾಗಿದೆ.

ಈಗ ಕೀರ್ತಿಶೇಷರಾಗಿರುವ ಪ್ರಸಿದ್ಧ ಕಲಾವಿದರೋರ್ವರ ಸಂಭಾಷಣೆ ಯನ್ನು ಇಲ್ಲಿ ಉಲ್ಲೇಖೀಸಬಹುದು. ಅದು ಕರ್ಣಾರ್ಜುನ ಪ್ರಸಂಗ. ಅವರು ಕರ್ಣನ ಪಾತ್ರಧಾರಿ. ಕರ್ಣನ ಜನ್ಮವೃತ್ತಾಂತವನ್ನು ಶ್ರೀಕೃಷ್ಣ ವಿವರಿಸುವ ಸಂದರ್ಭ. ತಾನಿಬ್ಬರೂ ಒಂದೇ ಎಂಬರ್ಥದ ಮಾತನ್ನು ಶ್ರೀಕೃಷ್ಣ ಹೇಳಿದಾಗ ಕರ್ಣನ ಪ್ರತ್ಯುತ್ಪನ್ನಮತಿ ಸಹಿತವಾದ ಮಾತಿದು: ಶ್ರೀಕೃಷ್ಣಾ , ನೀನಾದರೊ, ಕಾರುಣ್ಯ ಸಿಂಧು, ನಾನಾದರೋ ಅದರಲ್ಲೊಂದು ಬಿಂದು, ನೀ ಹೇಳುತಿರುವೆ ನಾವಿಬ್ಬರೂ ಬಂಧು, ನೀ ಕೇಳುತಿರುವೆ ಹೇಗಯ್ನಾ ನಾವಿಬ್ಬರೂ ಒಂದು!? ಸಹಜವಾಗಿಯೇ ಇದು ಭಾಷಾ ಬಳಕೆಯ ಹೊಸ ಸ್ವರೂಪಕ್ಕೆ ಸ್ಫೂರ್ತಿಯಾಗುತ್ತದೆ.

ಸಮಕಾಲೀನವಾಗಿ ಯಕ್ಷಗಾನದ ಸರ್ವರಂಗದಲ್ಲಿ ಈಗ ಯುವಕರು- ಯುವತಿಯರು ಬಹುಸಂಖ್ಯೆಯಲ್ಲಿ ಸಕ್ರಿಯರು, ಕನ್ನಡ ಭಾಷಾ ಪ್ರವೀಣರು. ಇದು ಯಕ್ಷಗಾನದ ಕೊಡುಗೆ.

ಅಂದಹಾಗೆ: ಯಕ್ಷ ವಿದ್ವಾಂಸರೋರ್ವರು ನೀಡಿರುವ ಮಾಹಿತಿ ಯಂತೆ- ಕಳೆದ ನೂರು ವರ್ಷಗಳಲ್ಲಿ ದೇವಿಮಹಾತ್ಮೆಯು ಯಕ್ಷಗಾನ, ತಾಳಮದ್ದಲೆ, ಭಾಗಶಃ ಕಥಾನಕ, ಪ್ರಾತ್ಯಕ್ಷಿಕೆ ಮುಂತಾದ ಸ್ವರೂಪಗಳಲ್ಲಿ ಸುಮಾರು ಒಂದೂವರೆ ಲಕ್ಷ ಪ್ರದರ್ಶನ ಕಂಡಿರಬಹುದು. ಈ ಪ್ರಸಂಗದ ಪ್ರತೀ ವೀಕ್ಷಣೆಯು ಹೊಸತನದ ಸ್ಪಂದನೆ ನೀಡುತ್ತದೆ ಎಂಬುದೇ ವಿಶೇಷ.

~ ಮನೋಹರ ಪ್ರಸಾದ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.