ಬದಲಾವಣೆ ಪ್ರಯೋಗದಿಂದ ಬಿಜೆಪಿ ಬಲವರ್ಧನೆ ಖಚಿತ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Team Udayavani, Apr 16, 2023, 8:30 AM IST
ಬೆಂಗಳೂರು: ಬದಲಾವಣೆ ಕಾಲದ ಅಗತ್ಯ. ಪಕ್ಷಕ್ಕೆ ಶಕ್ತಿ ಇರುವಾಗಲೇ ಹೊಸ ನಾಯಕತ್ವ ಸೃಷ್ಟಿಸುವ ಸಾಹಸಕ್ಕೆ ಕೈ ಹಾಕ ಬೇಕಾಗುತ್ತದೆ. ಈ ಪ್ರಯೋಗ ಮುಂದಿನ ಹತ್ತು ವರ್ಷಗಳಲ್ಲಿ ಬಿಜೆಪಿಗೆ ಇನ್ನಷ್ಟು ಬಲ ತಂದು ಕೊಡುತ್ತದೆ ಎಂಬುದರಲ್ಲಿ ಅನು ಮಾನ ಬೇಡ. ಇದು ನಮ್ಮ ವರಿಷ್ಠರು ಪ್ರಜ್ಞಾಪೂರ್ವಕವಾಗಿ ತೆಗೆದುಕೊಂಡ ದಿಟ್ಟ ನಿಲುವು. ಬದಲಾವಣೆಯ ಚರ್ಚೆಯ ಜತೆಗೆ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.
“ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ “ಬದಲಾವಣೆ – ಪ್ರಯೋಗ ಬಿಜೆಪಿ ತೆಗೆದುಕೊಂಡ ಈ ಕ್ಷಣದ ನಿರ್ಧಾರವಲ್ಲ. ಸಾಕಷ್ಟು ಯೋಚಿಸಿ ಕೈಗೊಂಡ ತೀರ್ಮಾನ. ಬೇಸರಿಸಿದವರನ್ನು ಮನವೊಲಿಸುತ್ತೇವೆ. ಇಷ್ಟಾದ ಮೇಲೂ ಪಕ್ಷ ಬಿಡುತ್ತೇನೆ ಎನ್ನುವವರಿಗೆ ಶುಭವಾಗಲಿ’ ಎಂದಿದ್ದಾರೆ.
– ಹಿರಿಯರ ಬೇಸರ ಹೇಗೆ ನಿಭಾಯಿಸುತ್ತೀರಿ?
ಬದಲಾವಣೆ, ಪ್ರಯೋಗಕ್ಕೆ ಸಂಬಂಧಪಟ್ಟಂತೆ ಪಕ್ಷ ಸ್ಪಷ್ಟ ನಿಲುವನ್ನು ಹೊಂದಿದೆ. ಕೇವಲ ಈ ಒಂದು ಚುನಾವಣೆಯ ಟಿಕೆಟ್ ಹಂಚಿಕೆಗೆ ಸೀಮಿತವಾಗಿ ಪಕ್ಷ ಈ ತೀರ್ಮಾನ ಕೈಗೊಂಡಿಲ್ಲ. ಭವಿಷ್ಯದ ನಾಯಕತ್ವ ನಿರ್ಮಾಣವೇ ಇದರ ಹಿಂದಿರುವ ನೈಜ ಉದ್ದೇಶ. ಸಣ್ಣ ಸಮುದಾಯದಿಂದ ಬಂದ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವನಾಯಕರಾಗಿ ಬೆಳೆದ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಹಾಗೆಂದು ಹಿರಿಯರನ್ನು ಸಾರಾಸಗಟಾಗಿ ನಿರ್ಲಕ್ಷಿéಸಿಲ್ಲ. ಅವರ ಅನುಭವವನ್ನು ಪಕ್ಷ ಬಳಸಿಕೊಳ್ಳುತ್ತದೆ.
– ಈ ರೀತಿಯ ಪ್ರಯೋಗಗಳು ಚುನಾವಣೆಯ ಹೊಸ್ತಿಲಲ್ಲಿ ಫಲಿತಾಂಶ ಬದಲಾಯಿಸುತ್ತದೆಯೇ?
ಯಾಕಿಲ್ಲ? ಗುಜರಾತ್, ಉತ್ತರ ಪ್ರದೇಶದಲ್ಲಿ ಹೊಸಬರಿಗೆ ಅವಕಾಶ ಮಾಡಿಕೊಟ್ಟೂ ಅಧಿಕಾರಕ್ಕೆ ಬಂದಿದ್ದೇವೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ನಾನು ಸಕ್ರಿಯವಾಗಿ ಭಾಗಿಯಾಗಿದ್ದೆ. ಹೀಗಾಗಿ ಈ ಪ್ರಯೋಗ ಹಾಗೂ ಫಲಿತಾಂಶವನ್ನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ಬದಲಾವಣೆಯ ಬಗ್ಗೆ ನಮ್ಮೆಲ್ಲ ಹಿರಿಯ ನಾಯಕರಿಗೂ ಸಾಕಷ್ಟು ಮುಂಚಿತವಾಗಿ ಗೌರವಯುತವಾಗಿ ತಿಳಿಸಲಾಗಿತ್ತು. ಹಿರಿಯರಾದ ಜಗದೀಶ್ ಶೆಟ್ಟರ್ ಅವರಿಗೂ ಈ ಬಗ್ಗೆ ವರಿಷ್ಠರೇ ಸೂಚಿಸಿದ್ದರು.
– ವಂಶವಾದದ ವಿಷಯದಲ್ಲಿ ಬಿಜೆಪಿಯ ಬೋಧನೆ ಮತ್ತು ಪಾಲನೆಯಲ್ಲಿ ವೈರುಧ್ಯವಿಲ್ಲವೇ? ಕುಟುಂಬದ ಕುಡಿಗಳಿಗೆ ಟಿಕೆಟ್ ಕೊಟ್ಟ ಹಲವು ಉದಾಹರಣೆಗಳಿವೆ.
ನಾವು ವಂಶವಾದದ ಹಿನ್ನೆಲೆಯಲ್ಲಿ ಯಾರಿಗೂ ಟಿಕೆಟ್ ನೀಡಿಲ್ಲ. ರಾಜಕೀಯ ಕುಟುಂಬದ ಹಿನ್ನೆಲೆ ಇರುವವರಿಗೆ ಟಿಕೆಟ್ ನೀಡಿದ್ದರೂ ಅವರಲ್ಲಿ ಬಹುತೇಕರು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು. ಬೇರೆ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಿದ್ದಾರೆ. ಸಂಘಟನೆಯಲ್ಲೂ ಕಷ್ಟ ಪಟ್ಟಿದ್ದಾರೆ. ಅವರ್ಯಾರೂ ನೇರವಾಗಿ ಚುನಾವಣೆಗೆ ಬಂದವರಲ್ಲ.
– ಪ್ರಯೋಗದ ಮಾತು ಸರಿ, ಆದರೆ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಗೆಲ್ಲಿಸಬೇಕೆಂದು ಜನರ ಬಳಿ ಹೋಗುವುದಕ್ಕೆ ನಿಮ್ಮ ಕಾರ್ಯಸೂಚಿ ಏನು?
ಅಭಿವೃದ್ಧಿಯೇ ನಮ್ಮ ಮೂಲಮಂತ್ರ, ಅದೇ ನಮ್ಮ ಕಾರ್ಯಸೂಚಿ. ಕೇಂದ್ರ ಹಾಗೂ ರಾಜ್ಯದಲ್ಲಿ ಪ್ರತ್ಯೇಕ ಸರಕಾರಗಳಿದ್ದಾಗ ನಡೆಯುವ ಹೊಯ್ದಾಟದ ಬಗ್ಗೆ ನಾವು ಸಾಕಷ್ಟು ಉದಾಹರಣೆ ನೀಡಬಹುದು. ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಅಧಿಕಾರದಲ್ಲಿದ್ದಾಗ ಏನಾಯ್ತು ? ಕೇಂದ್ರ ಸರಕಾರದ ಧೋರಣೆ ಹಾಗೂ ಯೋಜನೆ ಜಾರಿ ವಿಷಯದಲ್ಲಿ ಸಹಕರಿಸಲೇ ಇಲ್ಲ. ನರೇಂದ್ರ ಮೋದಿಯವರನ್ನು ರಾಷ್ಟ್ರದ ಪ್ರಧಾನಿ ಎಂದು ಪರಿಗಣಿಸಲಿಲ್ಲ. ಬದಲಾಗಿ ಬಿಜೆಪಿ ಪ್ರಧಾನಿ ಎಂದು ಭಾವಿಸಿ ಹಠಕ್ಕೆ ಬಿದ್ದು ಅಸಹಕಾರ ನೀಡಿದರು. ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಾಗಲೂ ಅದೇ ಪರಿಪಾಠ ಮುಂದುವರಿಯಿತು. ರಾಜ್ಯದ ರೈತರಿಗೆ ಅನುಕೂಲ ಕಲ್ಪಿಸುವ ಪಿಎಂ ಕಿಸಾನ್ ಯೋಜನೆಗೆ ಫಲಾನುಭವಿಗಳ ಪಟ್ಟಿ ಕಳುಹಿಸುವುದರಲ್ಲೂ ರಾಜಕೀಯ ನಡೆಸಿದರು. ಕೇವಲ 17 ಜನ ಫಲಾನುಭವಿಗಳ ಪಟ್ಟಿಯನ್ನು ಅಂದಿನ ಮೈತ್ರಿ ಸರಕಾರ ಕಳುಹಿಸಿತ್ತು. ಇದು ರಾಜ್ಯದ ರೈತರಿಗೆ ಮಾಡಿದ ಅನ್ಯಾಯವಲ್ಲವೇ? ಹೀಗಾಗಿ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ ಅಧಿಕಾರಕ್ಕೆ ಬರಬೇಕು.
– ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ತ್ರಿವಳಿಗಳಾದ ಯಡಿಯೂರಪ್ಪ, ಅನಂತಕುಮಾರ್, ಈಶ್ವರಪ್ಪ ಅವರಿಲ್ಲದೇ ಎದುರಿಸುತ್ತಿರುವ ಮೊದಲ ಚುನಾವಣೆ ಇದು. ಸವಾಲು ಎಷ್ಟರ ಮಟ್ಟಿಗಿದೆ?
ನಮ್ಮ ಪಕ್ಷಕ್ಕೆ ಈ ಮೂರೂ ನಾಯಕರ ಮೇಲೆ ಗೌರವವಿದೆ. ಅನಂತ್ ಕುಮಾರ್ ಅವರು ಈಗ ನಮ್ಮ ಜತೆ ಇಲ್ಲ. ಯಡಿಯೂರಪ್ಪನವರು ಚುನಾವಣಾ ರಾಜಕಾರಣದಲ್ಲಿ ಇಲ್ಲವಾದರೂ ಪಕ್ಷದ ಪರಮೋಚ್ಚ ಸಂಸದೀಯ ಮಂಡಳಿ ಸೇರಿದಂತೆ ನೀತಿ-ನಿರೂಪಣೆಗೆ ಸಂಬಂಧಪಟ್ಟ ಹಲವು ಸಮಿತಿಯಲ್ಲಿದ್ದಾರೆ. ಅದೇ ರೀತಿ ಈಶ್ವರಪ್ಪನವರ ರಾಜಕೀಯ ಅನುಭವವನ್ನೂ ಪಕ್ಷ ಬಳಸಿಕೊಳ್ಳುತ್ತದೆ. ಬಿಜೆಪಿ ಒಂದು ಸಮುದ್ರ. ಇಲ್ಲಿ ಹಳಬರು, ಹೊಸಬರು ಎಲ್ಲರೂ ಇರುತ್ತಾರೆ. ಕಾಲಕ್ರಮೇಣ ಎಲ್ಲವೂ ಬದಲಾಗಬೇಕು. ಬದಲಾವಣೆ ಕಾಲದ ಅಗತ್ಯವೂ ಹೌದು. ಕಾಲಾಯ ತಸ್ಮೈ ನಮಃ…
– ವರಿಷ್ಠರ ಸೂಚನೆ ಹೊರತಾಗಿಯೂ ಬಂಡಾಯ-ಬೇಸರ ನಿಂತಿಲ್ಲ. ಇದನ್ನು ಸರಿಪಡಿಸುವ ಕೆಲಸ ಆಗುತ್ತಿಲ್ಲ ಏಕೆ ?
ಇಲ್ಲ . ಬೇಸರಗೊಂಡವರನ್ನು ಸಮಾಧಾನ ಪಡಿಸಲು ಹಾಗೂ ಮನವೊಲಿಸಲು ಸಾಕಷ್ಟು ಕೆಲಸಗಳು ಆಗುತ್ತಿವೆ. ಜಗದೀಶ್ ಶೆಟ್ಟರ್ ಜತೆಗೆ ಖುದ್ದು ಸಿಎಂ ಬೊಮ್ಮಾಯಿ ಹಾಗೂ ಪ್ರಹ್ಲಾದ್ ಜೋಷಿ ಮಾತನಾಡಿದ್ದಾರೆ. ನಮ್ಮದು ವೈಚಾರಿಕ ನೆಲೆಗಟ್ಟಿನ ಪಕ್ಷ. ಸಿದ್ಧಾಂತವನ್ನು ಧಿಕ್ಕರಿಸಿ ಎಲ್ಲರೂ ಪಕ್ಷ ಬಿಟ್ಟು ಹೋಗಲು ಸಾಧ್ಯವಿಲ್ಲ. ಒಂದು ವ್ಯವಸ್ಥೆಯಲ್ಲಿ ಕೆಲವು ಗಟ್ಟಿ ಕಾಳುಗಳು, ಕೆಲವು ಜೊಳ್ಳು ಇರುತ್ತವೆ. ಗಾಳಿ ಬಂದಾಗ ಜೊಳ್ಳು ಹಾರಿ ಹೋಗಲೇಬೇಕು. ಲಕ್ಷ್ಮಣ ಸವದಿಯವರು ಚುನಾವಣೆಯಲ್ಲಿ ಸೋತಿದ್ದರೂ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ಆದರೂ ಪಕ್ಷ ತೊರೆದಿದ್ದಾರೆ. ಬಿಜೆಪಿ ಯಾರಿಗೂ ಅನ್ಯಾಯ ಮಾಡಿಲ್ಲ. ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಪಕ್ಷ ಬಿಡುತ್ತಿರುವವರಿಗೆಲ್ಲ ಸ್ಥಾನಮಾನ ನೀಡಲಾಗಿತ್ತು. ಇಷ್ಟಾದ ಮೇಲೂ ಪಕ್ಷ ತೊರೆಯುವವರಿಗೆ ರಾಜ್ಯದ ಜನ ಪಾಠ ಕಲಿಸುತ್ತಾರೆ.
– ಶೋಭಾ ಕರಂದ್ಲಾಜೆ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವ ಚರ್ಚೆ ನಡೆಯುತ್ತಿದೆಯಲ್ಲ?
ನಾನು ಖಂಡಿತ ರಾಜ್ಯ ರಾಜಕಾರಣಕ್ಕೆ ವಾಪಸ್ ಆಗುವುದಿಲ್ಲ. ನನಗೆ ಆಸಕ್ತಿಯೂ ಇಲ್ಲ. ಚುನಾವಣಾ ನಿರ್ವಹಣೆ ಹೊಣೆಯನ್ನು ವರಿಷ್ಠರು ನೀಡಿದ್ದಾರೆ. ಹೀಗಾಗಿ ನಿರ್ವಹಿಸುತ್ತಿದ್ದೇನೆ. ಅದೇ ಕಾರಣಕ್ಕೆ ನಾನು ರಾಜ್ಯ ರಾಜಕಾರಣಕ್ಕೆ ವಾಪಸ್ ಆಗುತ್ತೇನೆ ಎಂಬ ವ್ಯಾಖ್ಯಾನ ನಡೆಸಬೇಕಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಕೆಲಸ ಮಾಡುವುದು ನನ್ನ ಭಾಗ್ಯ. ಭಾರತವನ್ನು ವಿಶ್ವದ ಪ್ರಮುಖ ರಾಷ್ಟ್ರದ ಸಾಲಿಗೆ ತಂದು ನಿಲ್ಲಿಸಿದ ಮೋದಿ ಸಂಪುಟದಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಮೇ 13ರವರೆಗೆ ಮಾತ್ರ ನಾನು ರಾಜ್ಯ ಬಿಜೆಪಿ ವಿದ್ಯಮಾನಗಳಲ್ಲಿ ಇರುತ್ತೇನೆ.
– ರಾಘವೇಂದ್ರ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದರ್ಶನ್
New Bill: ಇನ್ನು ಪಂಚಾಯತ್‌ರಾಜ್ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ
BYV vs Yatnal: ರಾಜ್ಯ ಬಿಜೆಪಿಯಲ್ಲಿ ಬಣ ಕದನ ಮತ್ತಷ್ಟು ಉಲ್ಬಣ
Grant: ರಸ್ತೆ ಅಭಿವೃದ್ಧಿಗೆ ಪಕ್ಷಾತೀತವಾಗಿ ಶಾಸಕರಿಗೆ 2 ಸಾವಿರ ಕೋ.ರೂ.: ಮುಖ್ಯಮಂತ್ರಿ
Kannada ಸಾಹಿತ್ಯ ಸಮ್ಮೇಳನ 2 – 3 ವರ್ಷಕ್ಕೊಮ್ಮೆ ನಡೆಯಲಿ
MUST WATCH
ಹೊಸ ಸೇರ್ಪಡೆ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Mangaluru: ವೆನ್ಲಾಕ್‌ನಲ್ಲಿ ದೊರೆಯಲಿದೆ ಕಿಮೋಥೆರಪಿ
Ullal: ತೊಕ್ಕೊಟ್ಟು ಜಂಕ್ಷನ್ – ಭಟ್ನಗರ ರಸ್ತೆಯಲ್ಲಿ ಉಲ್ಟಾ ಸಂಚಾರ!
Kasganj: ವಿವಾಹಿತನಿಗೆ ಪೊಲೀಸ್ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.