ಹಳೇ ಮೈಸೂರು ಪ್ರಾಂತದಲ್ಲಿ ಜೆಡಿಎಸ್‌ಗೆ ಟಕ್ಕರ್ ಕೊಟ್ಟ BJP
Team Udayavani, Apr 17, 2023, 7:41 AM IST
ಮೈಸೂರು: ಭಾರತೀಯ ಜನತಾಪಕ್ಷದ ಪಾಲಿಗೆ ಇದು ಕಳೆದ ಬಾರಿಯ ಚಿತ್ರಣವಂತೂ ಖಂಡಿತ ಅಲ್ಲವೇ ಅಲ್ಲ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಮಣಿಸಲು ಹಳೇ ಮೈಸೂರು ಪ್ರಾಂತದಲ್ಲಿ ಜೆಡಿಎಸ್ ಬೆನ್ನಿಗೆ ಬಿಜೆಪಿ ನಿಂತಿತ್ತು. ಈ ಬಾರಿ ಈ ಪ್ರದೇಶದ ಅನೇಕ ಕ್ಷೇತ್ರಗಳಲ್ಲಿ ತನ್ನಲ್ಲಿರುವ ಪ್ರಬಲ ಅಭ್ಯರ್ಥಿಗಳನ್ನೇ ಕಣಕ್ಕೆ ಹೂಡಿ ಅಖಾಡದಲ್ಲಿ ಸೆಟೆದು ನಿಂತಿದೆ.
ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಈ ಬಾರಿ ಹಳೇ ಮೈಸೂರು ಪ್ರಾಂತದಲ್ಲಿ ಕಳೆದ ಬಾರಿಯಂತೆ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆಯೇ ಎಂಬ ಗಹನವಾದ ಚರ್ಚೆ ಅನೇಕ ತಿಂಗಳಿನಿಂದ ನಡೆದಿತ್ತು. ಬಿಜೆಪಿ ಹುರಿಯಾಳುಗಳ ಮೊದಲ ಎರಡು ಪಟ್ಟಿಗಳ ಬಿಡುಗಡೆ ಅನಂತರ ಬಹಳ ಸ್ಪಷ್ಟವಾಗಿ ಗೋಚರವಾಗುವುದು ಕಾಂಗ್ರೆಸ್-ಜೆಡಿಎಸ್ ಮಧ್ಯೆ ನೇರ ಪೈಪೋಟಿ ಇರುವ ಅನೇಕ ಕ್ಷೇತ್ರಗಳಲ್ಲಿ ಈಗ ತ್ರಿಕೋನ ಸ್ಪರ್ಧೆ ಕಂಡು ಬರಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡನ್ನೂ ಎದುರಿಸಿ ಬಿಜೆಪಿ ನಿಂತಿದೆ.
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿಜೆಪಿ ತನ್ನಲ್ಲಿರುವ ಬಲಶಾಲಿ ಅಭ್ಯರ್ಥಿಗಳನ್ನೇ ಅನೇಕ ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಸಿದೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಉದ್ದೇಶಪೂರ್ವಕವಾಗಿಯೇ ದುರ್ಬಲ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿತ್ತು. ಇದಕ್ಕೆ ಕಾರಣವೂ ಸ್ಪಷ್ಟವಾಗಿತ್ತು. ಆಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಹಳೇ ಮೈಸೂರು ಭಾಗದಲ್ಲಿ ಬಲಿಷ್ಠವಾಗಿರುವ ಜೆಡಿಎಸ್‌ಗೆ ತನ್ನ ಶಕ್ತಿಯನ್ನು ಬಿಜೆಪಿ ಧಾರೆ ಎರೆದಿತ್ತು. ಬಿಜೆಪಿ ಮತಗಳು ಜೆಡಿಎಸ್‌ಗೆ ವರ್ಗವಾಗುವಂತೆ ಬಿಜೆಪಿ ನೋಡಿಕೊಂಡಿತು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಸ್ಪರ್ಧಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಂತೂ ಬಿಜೆಪಿ ಮತಗಳು ಜೆಡಿಎಸ್‌ಗೆ ಶಿಫ್ಟ್ ಆಗಿದ್ದವು. ಸಿದ್ದರಾಮಯ್ಯ ಅವರ ಸುಮಾರು 36 ಸಾವಿರ ಮತಗಳ ಅಂತರದ ಹೀನಾಯ ಸೋಲಿಗೆ ಇದೂ ಒಂದು ಪ್ರಮುಖ ಕಾರಣವಾಗಿತ್ತು.
ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಬಿಜೆಪಿಯೇ ರಾಜ್ಯದಲ್ಲಿ ಅಧಿಕಾರದಲ್ಲಿದೆ. ತನ್ನ ಕಟುಟೀಕಾಕಾರನಾದ ಜೆಡಿಎಸ್‌ಗೆ ಬಿಜೆಪಿಯ ಸಾಥ್ ಇಲ್ಲವಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಇಬ್ಬರಿಗೂ ಟಕ್ಕರ್ ಕೊಡಲು ಬಹುತೇಕ ಕ್ಷೇತ್ರಗಳಲ್ಲಿ ಹೋರಾಟ ನಡೆಸುವ ಅಭ್ಯರ್ಥಿಗಳನ್ನೇ ಬಿಜೆಪಿ ಕಣಕ್ಕಿಳಿಸಿದೆ. ಈ ಕಸರತ್ತು ನಡೆಸಿದ್ದರೂ ಹಳೇ ಮೈಸೂರು ಪ್ರಾಂತದ ಭಾಗದ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲದಿರಬಹುದು. ಇದರಿಂದ ಕಾಂಗ್ರೆಸಿಗೆ ಅನುಕೂಲವೂ ಆಗಬಹುದು. ಆದರೆ ಸಮರದ ಅಂಗಳದಲ್ಲಿ ಸೆಣಸಾಟದ ಮೂಲಕ ತನ್ನ ಪಕ್ಷದ ಬಲವನ್ನು ಹೆಚ್ಚಿಸಿಕೊಳ್ಳಬಹುದು. ಕಾರ್ಯಕರ್ತರಲ್ಲಿ ಉತ್ಸಾಹ, ಚೈತನ್ಯವನ್ನು ತುಂಬಬಹುದು. ಬಿಜೆಪಿಯ ಈ ಹೋರಾಟ ಪಕ್ಷದ ಬಲವರ್ಧನೆಗೆ ನೆರವಾಗಬಹುದು. ಗ್ರಾಮೀಣ ಪ್ರದೇಶದಲ್ಲಿ ತಳಮಟ್ಟದಲ್ಲಿ ಬಿಜೆಪಿಯ ಬೇರುಗಳನ್ನು ಗಟ್ಟಿ ಮಾಡಿಕೊಳ್ಳಬಹುದು ಎಂಬುದು ಬಿಜೆಪಿಯ ದೂರದೃಷ್ಟಿ ಚಿಂತನೆ. ಬಿಜೆಪಿಯ ಈ ಸಮರ ಕಾಂಗ್ರೆಸಿಗಿಂತ ಜೆಡಿಎಸ್‌ಗೆ ಹೆಚ್ಚು ಪೆಟ್ಟು. ಜೆಡಿಎಸ್‌ಗೆ ಕಾಂಗ್ರೆಸ್ ಜೊತೆ ನೇರ ಹಣಾಹಣಿ ಬೇಕಿತ್ತು.
ಮೈಸೂರು ಜಿಲ್ಲೆಯ ತಿ.ನರಸೀಪುರ (ಪರಿಶಿಷ್ಟ ಜಾತಿ-ಮೀಸಲು), ಹುಣಸೂರು, ಎಚ್.ಡಿ.ಕೋಟೆ (ಪರಿಶಿಷ್ಟ ಪಂಗಡ-ಮೀಸಲು), ಪಿರಿಯಾಪಟ್ಟಣ, ಕೆ.ಆರ್.ನಗರ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ಮೇಲುಕೋಟೆ, ಮಂಡ್ಯ, ನಾಗಮಂಗಲ, ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ, ಕನಕಪುರ, ಚನ್ನಪಟ್ಟಣ, ಚಿಕ್ಕಬಳ್ಳಾಪುರ ಜಿಲ್ಲೆಯ ಕ್ಷೇತ್ರಗಳಲ್ಲಿ ಬಿಜೆಪಿ ಬಲಿಷ್ಟ ಅಭ್ಯರ್ಥಿಗಳನ್ನೇ ಅಖಾಡಕ್ಕೆ ಇಳಿಸಿದೆ. ಹಾಸನ ಜಿಲ್ಲೆಯ ಬೇಲೂರು, ಅರಕಲಗೂಡು, ಸಕಲೇಶಪುರ, ಮೈಸೂರು ಜಿಲ್ಲೆಯ ತಿ.ನರಸೀಪುರ, ಹುಣಸೂರು, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರಗಳು ಈ ಹಿಂದೆ ಒಮ್ಮೆ ಬಿಜೆಪಿ ಗೆದ್ದ ಕ್ಷೇತ್ರಗಳೇ.
ಹಳೇ ಮೈಸೂರು ಭಾಗದ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ವರಿಷ್ಠರಿಗೆ ಈಗ ಒಂದು ಸಂಗತಿ ಮನವರಿಕೆಯಾಗಿದೆ. ಅದು-ಬಿಜೆಪಿ ಬೆಳೆಯಬೇಕಿದ್ದರೆ ಮೊದಲು ಜೆಡಿಎಸ್ ಮಣಿಸಬೇಕು.
~ ಕೂಡ್ಲಿ ಗುರುರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.