40% commission ಸರ್ಕಾರದ ಬಗ್ಗೆ ಸರ್ವಾಂತರ್ಯಾಮಿ ಪ್ರಧಾನಿ ಮೌನವೇಕೆ: ಪ್ರಿಯಾಂಕಾ
ಸಶಕ್ತ ನಂದಿನಿ ಬದಲಿಗೆ ಗುಜರಾತಿನ ಅಮುಲ್ ತರುವ ಹುನ್ನಾರ
Team Udayavani, May 3, 2023, 3:31 PM IST
ವಿಜಯಪುರ : ಕರ್ನಾಟಕದಲ್ಲಿದ್ದ ಸರ್ಕಾರವೊಂದನ್ನು ಮೂರುವರೆ ವರ್ಷದ ಹಿಂದೆ ಶಾಸಕರ ಖರೀದಿ ಮೂಲಕ ಕೆಡವಿದ ಬಿಜೆಪಿ, ಶೇ.40 ಕಮೀಷನ್ ಸರ್ಕಾರ ರಚಿಸಿದೆ. ಗುತ್ತೇದಾರರು, ರೈತರು ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸರ್ವಾಂತರ್ಯಾಮಿ, ಸಶಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಮೌನಾಗಿ ಇರುವುದೇಕೆ. ಇದನ್ನು ಕರ್ನಾಟಕದ ಜನ ಪ್ರಶ್ನಿಸಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕರೆ ನೀಡಿದರು.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಭಾಷಣ ಮಾಡಿದ ಅವರು, ಗುತ್ತಿಗೆದಾರರು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರೂ ಅಭಿವೃದ್ಧಿ ಮಂತ್ರ ಜಪಿಸುವ ಪ್ರಧಾನಿ, ಶೇ.40 ರ ಭ್ರಷ್ಟ ಸರ್ಕಾರದ ಬಗ್ಗೆ ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ. ರೈತರ ಆತ್ಮಹತ್ಯೆ ಮೋದಿ ಅವರ ಕಣ್ಣಿಗೆ ಕಾಣುತ್ತಿಲ್ಲ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕ ರಾಜ್ಯದ ಜನರು ಸುಶಿಕ್ಷಿತರು, ತಾಂತ್ರಿಕ ಜ್ಞಾನ ಹೊಂದಿದ್ದಾರೆ. ಭವಿಷ್ಯದಲ್ಲಿ ಅವರು ಇಡೀ ಜಗತ್ತಿನೊಂದಿಗೆ ವ್ಯವಹರಿಸುವ ಶಕ್ತಿ ಹೊಂದಿದ್ದಾರೆ ಎಂದು ನನ್ನ ನನಗೆ ಬಾಲ್ಯದಲ್ಲಿ ಹೇಳುತ್ತಿದ್ದರು. ಆಗ ಕರ್ನಾಟಕದ ಬಗ್ಗೆ, ನನ್ನ ತಂದೆ ಹೇಳುತ್ತಿದ್ದ ಮಾತು ಅರ್ಥವಾಗದ ವಯಸ್ಸು. ಆದರೀಗ ಕರ್ನಾಟಕ ರಾಜ್ಯದ ಜನರ ಶಕ್ತಿ ಅರಿವಾಗುತ್ತಿದೆ. ಆದರೆ ಏನು ಮಾಡುವುದು ಬೆಂಗಳೂರು ತೊರೆದು ಬೃಹತ್ ಕಂಪನಿಗಳು ಚೆನ್ನೈ, ಹೈದರಾಬಾದ್ ಕಡೆ ಮುಖಮಾಡಿವೆ. ಕರ್ನಾಟಕದ ಜನ ನಿಮ್ಮ ನಾಡಿನ ಮೂಲ ಸಂಸ್ಕೃತಿ ಉಳಿಸಿಕೊಳ್ಳಲು, ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.
ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರು ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿ ಬದಲಿಗೆ ಧರ್ಮ, ಜಾತಿಗಳ ವಿಷಯದ ಚರ್ಚಿಸಿ ಭಾವನಾತ್ಮಕವಾಗಿ ನಿಮ್ಮನ್ನು ಮಾಧ್ಯಮಗಳ ಮೂಲಕ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಾರೆ. ನೀವೂ ಕೂಡ ಅವರ ಮಾತಿಗೆ ಮರುಳಾಗುತ್ತಿರಿ. ಪರಿಣಾಮ ಬೆಲೆ ಏರಿಕೆ, ಉದ್ಯೋಗ ನೇಮಕದಲ್ಲಿ ಭ್ರಷ್ಟಾಚಾರ, ಅಭಿವೃದ್ಧಿ ಹೀನತೆಯಂಥ ಸರ್ಕಾರ ರಚನೆಗೆ ಕಾರಣವಾಗುತ್ತೀರಿ. ಹೀಗಾಗಿ ಕರ್ನಾಟಕ ರಾಜ್ಯದ ಜನರು ಈ ಬಾರಿ ನಿಮ್ಮ ಹಾಗೂ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತದ ಸುಭದ್ರ ಸರ್ಕಾರ ರಚನೆಯ ಶಕ್ತಿ ನೀಡಿ ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಯಾರೂ ಕೆಡವಲು ಸಾಧ್ಯವಿಲ್ಲದ ಪೂರ್ಣ ಬಹುಮತದ ಸರ್ಕಾರ ರಚನೆ ಅವಕಾಶ ನೀಡಬೇಕು. ಆಗ ಸರ್ಕಾರ ನಡೆಸುವವರಿಗೆ ಸರ್ಕಾರದ ರಕ್ಷಣೆ ಕಡೆಗೆ ಯೋಚಿಸದೇ ರಾಜ್ಯದ ಅಭಿವೃದ್ಧಿ ಕಡೆಗೆ ಚಿತ್ತವಿಡಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದರು.
ನಾನು ನಿಮ್ಮ ಮತವನ್ನು ಕೇಳುವುದಿಲ್ಲ, ನಿಮ್ಮ ಹಾಗೂ ನಿಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಬಲಿಷ್ಠ ಸರ್ಕಾರ ರಚನೆ ಮಾಡಿಕೊಳ್ಳಿ ಎಂದು ಕೋರುತ್ತೇನೆ. ನಿಮ್ಮ ಮತ ನಿಮಗಾಗಿ, ನಿಮ್ಮ ನೆಮ್ಮದಿ ಜೀವನಕ್ಕಾಗಿ ಮೀಸಲಿರಲಿ ಎಂಬ ಜಾಗೃತಿ ನಿಮಗೆ ಬರಬೇಕಿದೆ ಎಂದರು.
ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರಿಗೆ ಸಮಸ್ಯೆಗಳ ಮೇಲೆ ಚರ್ಚೆ ಮಾಡುವುದು ಗೊತ್ತೇ ಇಲ್ಲ. ಕರ್ನಾಟಕದಲ್ಲಿ ಕಳೆದ ಮೂರುವರೆ ವರ್ಷದಲ್ಲಿ ಶಾಸಕರ ಖರೀದಿ ಮೂಲಕ ಅನೈತಿಕವಾಗಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಒಂದೂವರೆ ಲಕ್ಷ ಕೋಟಿ ಹಣ ಲೂಟಿ ಹೊಡೆದಿದೆ. ಬಿಜೆಪಿ ಸರ್ಕಾರ ಲೂಟಿ ಹೊಡೆದ ಈ ಹಣದಲ್ಲಿ ಸಾವಿರಾರು ಸ್ಮಾರ್ಟ್ ಕ್ಲಾಸ್ ಸಹಿತ ಶಾಲೆ, ಲಕ್ಷಾಂತರ ಸೂರಿಲ್ಲದ ಜನರಿಗೆ ಮನೆ, ಇಎಸ್ಐ ಸೇರಿದಂತೆ ನೂರಾರು ಆಸ್ಪತ್ರೆ ಸ್ಥಾಪಿಸುವ ಅವಕಾಶವನ್ನು ಕರ್ನಾಟಕದಲ್ಲಿ ಸರ್ಕಾರ ನಡೆಸುತ್ತಿರುವವರು ಲೂಟಿ ಹೊಡೆದಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಅನ್ನಭಾಗ್ಯ, ಆರೋಗ್ಯ ಭಾಗ್ಯ, ಪಶುಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ಹತ್ತಾರು ಯೋಜನೆ ರೂಪಿಸಿ, ಎಲ್ಲ ವರ್ಗದ ಜನರ ಹಿತದೃಷ್ಟಿ ಹೊಂದಲಾಗಿತ್ತು. ಇವು ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಮಾಡಿದ್ದು ಎಂದು ನಾವು ನಮ್ಮ ಅಭಿವೃದ್ಧಿ ವಿವರಿಸುತ್ತೇವೆ ಎಂದರು.
ಕರ್ನಾಟಕ ಹಾಲು ಉತ್ಪಾದನೆಯಲ್ಲಿ ಮುಂಚೂಣಿ ಹಾಗೂ ನಂದಿನಿ ಸಶಕ್ತವಾಗಿತ್ತು. ರೈತರಿಗೆ ಕಾಂಗ್ರೆಸ್ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿತ್ತು. ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ ಮೂಲಕ ಹಾಲು ನೀಡಲಾಗುತ್ತಿತ್ತು. ಇದೀಗ ಬಿಜೆಪಿ ಸರ್ಕಾರದಲ್ಲಿ ಗುಜರಾತ್ ಮೂಲದ ಅಮುಲ್ ತರುವ ಹುನ್ನಾರ ನಡೆಸಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಇದ್ದ ಹಾಲು ಉತ್ಪಾದನೆ ಸಾಮರ್ಥ್ಯ ಬಿಜೆಪಿ ಸರ್ಕಾರದಲ್ಲಿ ಏಕೆ ಇಲ್ಲವಾಯ್ತು ಎಂಬುದನ್ನು ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸರ್ಕಾರಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ದೊಡ್ಡ ದೊಡ್ಡ ಸಾರ್ವಜನಿಕ ಉದ್ದಿಮೆಗಳನ್ನು ಬಂಡವಾಳ ಶಾಹಿ ವ್ಯವಸ್ಥೆಗೆ ಮಾರಿ, ಸ್ಥಳೀಯ ನಿರುದ್ಯೋಗ ಸೃಷ್ಟಿಗೆ ಕಾರಣವಾಗಿದ್ದಾರೆ.
ಜಿ ಎಸ್ ಟಿ ಹೆಸರಿನಲ್ಲಿ ಸಣ್ಣಪುಟ್ಟ ಉದ್ಯಮಗಳನ್ನು ಹಾಳುಮಾಡಿದ್ದು, ಇಡೀ ಉದ್ಯಮ ವಲಯವೇ ಕಂಗಾಲಾಗುವಂತೆ ಮಾಡಿದ್ದಾರೆ. ಜನಸಾಮಾನ್ಯರ ಜೀವನವನ್ನು ಕಂಗೆಡಿಸಿದ್ದಾರೆ. ಭ್ರಷ್ಟಾಚಾರ, ಆಡಳಿತ ವೈಫಲ್ಯ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ನಾಯಕರು ಯಾವ ಮುಖ ಇಟ್ಟುಕೊಂಡು ನಿಮ್ಮ ಮುಂದೆ ಬರುತ್ತಿದ್ದಾರೆ. ಜನರಿಗೆ ಮುಖ ತೋರಿಸಲು ಇವರಿಗೆ ಅರ್ಹತೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಇಂಡಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಯಶವಂತ್ರಾಯಗೌಡ ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮೇಲ್ಮನೆ ವಿಪಕ್ಷ ಸಚೇತಕ ಪ್ರಕಾಶ ರಾಠೋಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.