ಸಂಧಾನ: ಮತದಾನ ಬಹಿಷ್ಕಾರ ವಾಪಸ್
Team Udayavani, May 3, 2023, 3:45 PM IST
ದೊಡ್ಡಬಳ್ಳಾಪುರ: ಅರಣ್ಯ ಇಲಾಖೆ ಕಿರುಕುಳ ಖಂಡಿಸಿ ಚುನಾವಣೆ ಬಹಿಷ್ಕರಿಸಿದ್ದ ದೇವನಹಳ್ಳಿ ವಿಧಾನ ಕ್ಷೇತ್ರದ ವ್ಯಾಪ್ತಿಗೆ ಸೇರಿರುವ ತಾಲೂಕಿನ ತೂಬಗೆರೆ ಹೋಬಳಿ ಕೆಳಗಿನನಾಯಕರಾಂಡಹಳ್ಳಿ ಗ್ರಾಮಸ್ಥರೊಂದಿಗೆ ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಎನ್.ತೇಜಸ್ ಕುಮಾರ್ ಅವರ ಸಂಧಾನದ ಬಳಿಕ ಬಹಿಷ್ಕಾರವನ್ನು ಹಿಂಪಡೆದಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ಕಿರುಕುಳ: ಗ್ರಾಮದ ಸರ್ವೇ ನಂಬರ್ 8 ರಲ್ಲಿ ಅರಣ್ಯ ಇಲಾಖೆ ಹೊರತು ಪಡಿಸಿದ್ದ ಜಾಗದಲ್ಲಿ 50ಕ್ಕೂ ಹೆಚ್ಚು ಮಂದಿ ಉಳುಮೆ ಮಾಡಿಕೊಂಡಿದ್ದಾರೆ. ಕಂದಾಯ ಇಲಾಖೆ ನೀಡಿರುವ ಸಾಗುವಳಿ ಚೀಟಿಯೂ ಇದೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಭೂಮಿ ನೀಡಲು ಸಾಧ್ಯವಾಗದಿದ್ದರೆ ಗ್ರಾಮದ ಎಲ್ಲರಿಗೂ ದಯಾಮರಣಕ್ಕೆ ಅವಕಾಶ ನೀಡಿ ಎಂದು ಮುಖಂಡರಾದ ಕೃಷ್ಣನಾಯಕ, ಎನ್. ಪ್ರಸಾದ್, ರಾಜಾರಾಮನಾಯಕ, ಎಸ್.ಎಸ್.ಘಾಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾರತಿಬಾಯಿ ಅಧಿಕಾರಿ ಗಳ ಮುಂದೆ ಮನವಿ ಮಾಡಿಕೊಂಡರು.
ಜೂನ್ ತಿಂಗಳಲ್ಲಿ ವಿಚಾರಣೆ: ಗ್ರಾಮಸ್ಥರೊಂದಿಗೆ ಮಾತನಾಡಿದ ಚುನಾವಣಾಧಿಕಾರಿ ಎನ್.ತೇಜಸ್ ಕುಮಾರ್ ಉಪವಿಭಾಗಾಧಿಕಾರಿಗಳ ನ್ಯಾಯಾಲ ಯದಲ್ಲಿ ಇರುವ ಪ್ರಕರಣ ಜೂನ್ ತಿಂಗಳಲ್ಲಿ ವಿಚಾ ರಣೆಗೆ ಬರಲಿದೆ. ಚುನಾವಣೆ ಮುಗಿದ ಬಳಿಕ ಕಂದಾಯ ಹಾಗೂ ಅರಣ್ಯ ಇಲಾಖೆ ನೇತೃತ್ವದಲ್ಲಿ ಜಂಟಿ ಸರ್ವೇ ನಡೆಸಲಾಗುವುದು. ಅಲ್ಲಿ ಯವರೆಗೆ ಅರಣ್ಯ ಇಲಾಖೆ ಸೇರಿದಂತೆ ಕಂದಾಯ ವಿಭಾಗದ ಯಾವ ಅಧಿಕಾರಿಗಳು ಕೂಡ ರೈತರಿಗೆ ತೊಂದರೆ ನೀಡದಂತೆ ಹಾಗೂ ಯಾವುದೇ ರೀತಿಯ ದೂರು ದಾಖಲಿ ಸದಂತೆ ಸೂಚನೆ ನೀಡಲಾಗುವುದು. ವಿವಾದವನ್ನು ಕಾನೂನು ಚೌಕಟ್ಟಿನಲ್ಲಿ ಪರಿಶೀಲಿಸಿ ಇತ್ಯರ್ಥ ಮಾಡಲಾಗುವುದು ಎಂದು ಭರವಸೆ ನೀಡಿದರು.
ಉಪವಿಭಾಗಾಧಿಕಾರಿಗಳ ಭರವಸೆ: ಉಪವಿಭಾಗಾ ಧಿಕಾರಿಗಳ ಭರವಸೆಗೆ ಒಪ್ಪಿಗೆ ನೀಡಿರುವುದರಿಂದ ಚುನಾವಣಾ ಬಹಿಷ್ಕಾರವನ್ನು ಹಿಂಪಡೆದಿರುವುದಾಗಿ ತಿಳಿಸಿದ ಮುಖಂಡರಾದ ಎನ್.ಪ್ರಸಾದ್, ಸಮಸ್ಯೆ ಬಗೆಹರಿಸುವ ಭರವಸೆ ಯನ್ನು ನಂಬಿದ್ದೇವೆ. ಅಧಿಕಾರಿಗಳ ಭರವಸೆ ಈಡೇರದೇ ಇದ್ದರೆ ನಮ್ಮ ಹೋರಾಟ ಮುಂದುವರೆಯಲಿದೆ. 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆ ಯನ್ನು ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದರು.
ಗ್ರಾಮಸ್ಥರೊಂದಿಗೆ ನಡೆದ ಸಭೆಯಲ್ಲಿ ದೊಡ್ಡ ಬಳ್ಳಾಪುರ ತಹಶೀಲ್ದಾರ್ ಮೋಹನಕುಮಾರಿ, ದೇವನಹಳ್ಳಿ ತಹಶೀಲ್ದಾರ್ ಶಿವರಾಜ್, ವಲಯ ಅರಣ್ಯಾಧಿಕಾರಿ ಮುನಿರಾಜು, ಎಎಸ್‌ಐ ಕೃಷ್ಣಪ್ಪ, ಕಂದಾಯ ನಿರೀಕ್ಷಕಿ ಲಕ್ಷ್ಮಮ್ಮ, ಗ್ರಾಮ ಲೆಕ್ಕಾಧಿಕಾರಿ ರಾಜಶೇಖರ್ ಸೇರಿದಂತೆ ಮತ್ತಿತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.