ಕೊನೆಗೂ ಫಲಿಸದ ತಂತ್ರಗಾರಿಕೆ: ಲಿಂಗಾಯತ ಮತ ಗಳಿಕೆಯಲ್ಲಿ BJPಗೆ ನಷ್ಟ, ಕಾಂಗ್ರೆಸ್ ಗೆ ಲಾಭ…
ಬೊಮ್ಮಾಯಿ ಸೇರಿದಂತೆ ಹಲವು ಪ್ರಮುಖ ನಾಯಕರು ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ.
Team Udayavani, May 13, 2023, 5:11 PM IST
ಜಿದ್ದಾಜಿದ್ದಿನ ಪೈಪೋಟಿಯಿಂದ ಕೂಡಿದ್ದ ರಾಜ್ಯ ರಾಜಕಾರಣದ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡುವ ಮೂಲಕ ಅಧಿಕಾರದ ಗದ್ದುಗೆ ಏರುವಂತಾಗಿದೆ. ಚುನಾವಣೆಯಲ್ಲಿ ಲಿಂಗಾಯತ ಮತದಾರರನ್ನು ಸೆಳೆಯುವ ಬಿಜೆಪಿಯ ತಂತ್ರಗಾರಿಕೆ ಯಾವುದೇ ಫಲ ನೀಡಿಲ್ಲ. ಅದರ ಬದಲು ಕಾಂಗ್ರೆಸ್ ಮತಗಳಿಕೆಯಲ್ಲಿ ಯಶಸ್ಸು ಗಳಿಸಿದೆ ಎಂಬುದು ಫಲಿತಾಂಶದ ವಿಶ್ಲೇಷಣೆಯಲ್ಲಿ ಕಂಡುಬಂದಿದೆ.
ಲಿಂಗಾಯತ ಮತ; ಬಿಜೆಪಿಗೆ ನಷ್ಟ, ಕಾಂಗ್ರೆಸ್ ಗೆ ಲಾಭ
ಲಿಂಗಾಯತರು ಕರ್ನಾಟಕದ ಒಟ್ಟು ಜನಸಂಖ್ಯೆಯ ಶೇ.17ರಷ್ಟಿದ್ದಾರೆ. ಈ ಸಂಖ್ಯೆ ಸುಮಾರು 78 ಸ್ಥಾನಗಳಲ್ಲಿನ ಫಲಿತಾಂಶವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದ್ದು, ಈ 78 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ 59 ಸ್ಥಾನಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ಬಿಜೆಪಿ 19 ಕ್ಷೇತ್ರದಲ್ಲಿ ಜಯಗಳಿಸಿದೆ.
ಪ್ರಭಾವಿ ಲಿಂಗಾಯತ ಸಮುದಾಯವು ಬಿಜೆಪಿಯ ಪ್ರಮುಖ ಬೆಂಬಲಿಗರು ಎಂದು ಪರಿಗಣಿಸಲ್ಪಟ್ಟಿದ್ದು, ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಪ್ರಮುಖ ನಾಯಕರು ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ.
ಲಿಂಗಾಯತರು ಪ್ರಾಬಲ್ಯ ಇರುವಲ್ಲಿ ಭಾರತೀಯ ಜನತಾ ಪಕ್ಷ 28 ಸ್ಥಾನಗಳನ್ನು ಕಳೆದುಕೊಂಡಿದ್ದು, ಕಾಂಗ್ರೆಸ್ ಗೆ 29 ಸ್ಥಾನಗಳು ಲಾಭವಾಗಿದೆ. ಚುನಾವಣೆ ಪೂರ್ವದಲ್ಲಿ ಲಿಂಗಾಯತರನ್ನು ಸೆಳೆಯುವ ಪ್ರಯತ್ನದ ಹೊರತಾಗಿಯೂ ಬಿಜೆಪಿ ಕಳಪೆ ಪ್ರದರ್ಶನ ತೋರಿಸಿರುವುದು ಫಲಿತಾಂಶದಲ್ಲಿ ಕಂಡು ಬಂದಿದೆ ಎಂದು ವರದಿ ವಿವರಿಸಿದೆ.
ಮಾರ್ಚ್ ತಿಂಗಳಿನಲ್ಲಿ ಮುಸ್ಲಿಮರಿಗೆ ನಾಲ್ಕು ಶೇಖಡಾ ಮೀಸಲಾತಿಯನ್ನು ರದ್ದುಗೊಳಿಸಿ, ಪ್ರಭಾವಿ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಕ್ಕೆ ಮೀಸಲಾಯತಿಯನ್ನು ಮರುಹಂಚಿಕೆ ಮಾಡುವ ನಿರ್ಧಾರವನ್ನು ಕೈಗೊಂಡಿತ್ತು. ಇದು ರಾಜ್ಯದಲ್ಲಿ ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.
ಬಿಜೆಪಿ ಸರ್ಕಾರದ ಮೀಸಲಾತಿ ಹಂಚಿಕೆ ನಿರ್ಧಾರ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಲಾಗಿತ್ತು. ಧರ್ಮದ ಆಧಾರದ ಮೇಲಿನ ಮೀಸಲಾತಿ ಸಂವಿಧಾನ ಬಾಹಿರ ಎಂಬುದಾಗಿ ಕೋರ್ಟ್ ನಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ವಾದ ಮಂಡಿಸಿತ್ತು.
ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಲಿಂಗಾಯತರು ಮತ್ತು ಒಕ್ಕಲಿಗರ ಬೆಂಬಲ ಪಡೆಯುವ ನಿಟ್ಟಿನಲ್ಲಿ ಆಡಳಿತರೂಢ ಬಿಜೆಪಿ ಮೀಸಲಾಯಿ ನೀಡುವ ಪ್ರಯತ್ನಕ್ಕೆ ಕೈಹಾಕಿತ್ತು. ಜಗದೀಶ್ ಶೆಟ್ಟರ್ ಅವರಿಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಾಗ ಮತ್ತೆ ಲಿಂಗಾಯತ ವಿಚಾರ ಮುನ್ನಲೆಗೆ ಬಂದಿತ್ತು. ಏತನ್ಮಧ್ಯೆ 2023ರ ಸಾಲಿನ ಚುನಾವಣೆಯಲ್ಲಿ ಲಿಂಗಾಯತರು ಸಂಪೂರ್ಣವಾಗಿ ಬಿಜೆಪಿ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದರು.
ಶೇ.100ರಷ್ಟು ಲಿಂಗಾಯತ ಸಮುದಾಯವು ನಮ್ಮೊಂದಿಗಿದೆ. ಆದರೆ ಕಾಂಗ್ರೆಸ್ ಪಕ್ಷ ತಮ್ಮ ಲಾಭಕ್ಕಾಗಿ ಕೆಲವೊಂದು ವಿವಾದವನ್ನು ಹುಟ್ಟುಹಾಕುತ್ತಿದೆ. ಬಹುತೇಕ ಲಿಂಗಾಯತ ಸ್ವಾಮೀಗಳು ನಮ್ಮೊಂದಿ(ಬಿಜೆಪಿ)ಗೆ ಇದ್ದಾರೆ. ಈ ಬಾರಿ ಬಿಜೆಪಿ ಪಕ್ಷವನ್ನು ಬೆಂಬಲಿಸುವುದಾಗಿ ತನ್ನಲ್ಲಿ ತಿಳಿಸಿರುವುದಾಗಿ ಯಡಿಯೂರಪ್ಪ ಹೇಳಿದ್ದರು. ಆದರೆ ಈ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ಬಿಜೆಪಿಯಿಂದ ದೂರ ಸರಿದು, ಕಾಂಗ್ರೆಸ್ ನತ್ತ ವಾಲಿರುವುದು ಸ್ಪಷ್ಟವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.