ನೋವಿನ ಮಾತ್ರೆ ತಂದಿಟ್ಟ ನೋವು!
Team Udayavani, May 14, 2023, 4:15 PM IST
ಎಷ್ಟೋ ಬಾರಿ, ನಾವು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆಲ್ಲ “ಸ್ವಯಂ ಚಿಕಿತ್ಸೆ’ ಮಾಡಿಕೊಳ್ಳುವುದು ಸಾಮಾನ್ಯ. ಅದರಲ್ಲೂ ತಲೆನೋವು, ಬೆನ್ನುನೋವು, ಮೈಕೈ ನೋವುಗಳಿಗೆಲ್ಲ ನಮ್ಮಲ್ಲಿ ಗುಳಿಗೆ ಸದಾ ಸಿದ್ಧವಿರುತ್ತದೆ! ಔಷಧ ಅಂಗಡಿಗಳಲ್ಲಿ ಇವು ಸುಲಭವಾಗಿ ಲಭ್ಯವೂ ಇವೆ. ಹಲವು ಬಾರಿ ಸಾಮಾನ್ಯ ನೋವಿನಿಂದ ಮುಕ್ತಿ ಪಡೆಯಲು ಇದೊಂದು ಸರಳ ದಾರಿಯಂತೆ ಕಂಡರೂ ಕೆಲವೊಮ್ಮೆ ಎಂತಹ ಪ್ರಾಣಾಂತಿಕ ಅಪಾಯವನ್ನು ತಂದೊಡ್ಡಬಲ್ಲುದು ಎಂಬುದಕ್ಕೆ ಇತ್ತೀಚಿನ ಒಂದು ಘಟನೆಯನ್ನು ಉದಾಹರಣೆಯಾಗಿ ಕೊಡಲಾಗಿದೆ.
45 ವರ್ಷದ ವ್ಯಕ್ತಿಯೊಬ್ಬರು ತೀವ್ರ ಹೊಟ್ಟೆನೋವಿನಿಂದ ಆಸ್ಪತ್ರೆಗೆ ಬರುತ್ತಾರೆ. ಸೂಕ್ಷ್ಮವಾಗಿ ತಪಾಸಣೆ ಮಾಡಿದಾಗ, ಅವರು ಉದರದೊಳಗಿನ ತೀವ್ರ ಸೋಂಕಿನಿಂದ ನರಳುತ್ತಿರುವ ಸೂಚನೆ ಸಿಕ್ಕಿತು. ಸೋಂಕಿನ ಮೂಲವನ್ನ ಹುಡುಕಲಿಕ್ಕಾಗಿ ರೋಗಿಯನ್ನು ಎಕ್ಸ್‌ರೇ ಪರೀಕ್ಷೆಗೆ ಒಳಪಡಿಸಿದಾಗ, ಅವರ ಉದರದಲ್ಲಿನ ಕರುಳು ಘಾಸಿಕೊಂಡು ಅದರಲ್ಲಿ ತೂತು ಉಂಟಾಗಿ ಕರುಳಿನಲ್ಲಿನ ಕಲ್ಮಶ ಹೊರಬಂದು ಸೋಂಕಿಗೆ ಕಾರಣವಾಗಿತ್ತು. ಕರುಳಿನ ಒಳಭಾಗದಲ್ಲಿಯೇ ಇದ್ದು ನೈಸರ್ಗಿಕವಾಗಿ ಮಲದ್ವಾರದ ಮೂಲಕ ಹೊರಹೋಗಬೇಕಾಗಿದ್ದ ಕಲ್ಮಶ ಉದರದ ಒಳಭಾಗದಲ್ಲಿ ಪಸರಿಸಿದರೆ ಏನಾದೀತು ಎಂಬುದನ್ನು ಯಾರಾದರೂ ಊಹಿಸಬಹುದು. ಇದೊಂದು ಪ್ರಾಣಾಂತಿಕ ಸಮಸ್ಯೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಈ ಸಮಸ್ಯೆಯ ಪರಿಹಾರ ಶಸ್ತ್ರಚಿಕಿತ್ಸೆಯಿಂದ ಮಾತ್ರ ಸಾಧ್ಯ. ಶಸ್ತ್ರಕ್ರಿಯೆ ಮಾಡದೇ ಇದ್ದಲ್ಲಿ ಸಾವು ನಿಶ್ಚಿತ.
ಇಲ್ಲಿ , ಅದುವರೆಗೆ ಆರೋಗ್ಯದಿಂದಲೇ ಇದ್ದ ವ್ಯಕ್ತಿಯ ಆರೋಗ್ಯ ಇದ್ದಕ್ಕಿದ್ದಂತೆ ಬಿಗಡಾಯಿಸಿದ್ದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ರೋಗಿಯನ್ನೇ ವಿಚಾರಿಸಿದಾಗ ಅವರು ಉಪವಾಸ ಆಚರಿಸುತ್ತಿರುವ ಬಗ್ಗೆ ತಿಳಿಸಿದರು. ಉಪವಾಸದಿಂದ ಕರುಳು ತೂತಾಗುವ ಸಾಧ್ಯತೆಯಿಲ್ಲ. ತುಸು ವಿಶದವಾಗಿ ವಿಚಾರಿಸಿದಾಗ ಸಮಸ್ಯೆಯ ಮೂಲದ ಅರಿವಾಯಿತು! ಉಪವಾಸ ಆಚರಿಸುತ್ತಿರುವ ಸಮಯದಲ್ಲಿಯೇ “ಬೆನ್ನು ನೋವು’ ಎಂಬ ಕಾರಣ ನೋವು ನಿವಾರಕ ಗುಳಿಗೆಯನ್ನು ರೋಗಿ ಸೇವಿಸಿದ್ದರು. ಈ ಮೊದಲು ಕೂಡ ಆ ರೀತಿಯ ಮಾತ್ರೆ ಸೇವಿಸಿ, ಏನೂ ತೊಂದರೆ ಆಗದೇ ಇದ್ದಿದ್ದರಿಂದ ತನ್ನ ಈಗಿನ ಪರಿಸ್ಥಿತಿಗೆ ತಾನು ಸೇವಿಸಿದ ನೋವಿನ ಮಾತ್ರೆ ಕಾರಣವಾಗಿರಬಹುದು ಎಂಬುದು ಅವರಿಗೆ ಹೊಳೆದಿರಲಿಲ್ಲ!
ನೋವು ನಿವಾರಕ ಮಾತ್ರೆ ಒಂದು ರೀತಿಯಲ್ಲಿ ಎರಡು ಅಲಗಿನ ಖಡ್ಗವಿದ್ದಂತೆ. ಇದರ ಸೇವನೆಯಿಂದ ನೋವು ಕಡಿಮೆಯಾಗುವುದು ಹೌದಾದರೂ ವೈದ್ಯರ ಸಲಹೆಯಿಲ್ಲದೆ ಎರ್ರಾಬಿರ್ರಿ ಸೇವಿಸುವುದರಿಂದ ಅಪಾಯಕಾರಿಯೂ ಆಗ ಬಲ್ಲುದು. ನೋವು ನಿವಾರಕ ಗುಳಿಗೆಯಲ್ಲಿನ ತೀಕ್ಷ್ಣ ರಾಸಾ ಯನಿಕ ಜಠರ ಹಾಗೂ ಸಣ್ಣ ಕರುಳಿನ ಆದಿಭಾಗದ ಭಿತ್ತಿಯನ್ನು ಘಾಸಿಗೊಳಿಸುವ ಅಡ್ಡ ಪರಿಣಾಮ ಹೊಂದಿರುತ್ತದೆ. ಇದ್ದರಿಂದ, ನೋವು ನಿವಾರಕ ಗುಳಿಗೆಗಳನ್ನು ಆಹಾರ ಸೇವನೆಯ ಅನಂತರವೇ ತೆಗೆದುಕೊಳ್ಳಬೇಕು. ಆಗ ಆಹಾರದೊಂದಿಗೆ ಬೆರೆತು ಔಷದದ ತೀಕ್ಷ್ಣತೆ ಕಡಿಮೆಯಾಗುತ್ತದೆ. ಅಲ್ಲದೆ ನೋವಿನ ಮಾತ್ರೆ ನೋವನ್ನು ಕಡಿಮೆ ಮಾಡಬಹುದೇ ಹೊರತು ನೋವಿಗೆ ಕಾರಣವಾದ ಆರೋಗ್ಯ ಸಮಸ್ಯೆಯನ್ನು ಪರಿಹರಿಸದು. ಆದ್ದರಿಂದ ವೈದ್ಯರ ಸಲಹೆಯಿಲ್ಲದೆ ಈ ಮಾತ್ರೆಗಳನ್ನು “ಸ್ವಯಂ” ಸೇವಿಸುವುದು ಸಲ್ಲದು. ದೀರ್ಘಕಾಲೀನ ಸೇವನೆಯಿಂದ ಮೂತ್ರ ಜನಕಾಂಗ (ಕಿಡ್ನಿ)ವೂ ಘಾಸಿಗೊಳ್ಳುತ್ತದೆ ಎಂಬುದೂ ಗಮನಾರ್ಹ.
ಮೇಲಿನ ಘಟನೆಯಲ್ಲಿ ಉದಾಹರಿಸಿದ ವ್ಯಕ್ತಿ ವೈದ್ಯರ ಸಲಹೆಯಿಲ್ಲದೆ, ಬರಿ ಹೊಟ್ಟೆಯಲ್ಲಿ ನೋವಿನ ಮಾತ್ರೆಯನ್ನು ಸೇವಿಸಿದ್ದರು. ರಾಸಾಯನಿಕ ತನ್ನ ಕೆಲಸ ಮಾಡಿಯೇ ಮಾಡಿತು. ಬೆಂಕಿ ಗೊತ್ತಿಲ್ಲದೇ ಮುಟ್ಟಿದವನನ್ನು ಸುಡುವಂತೆ ಕರುಳನ್ನು ಸುಟ್ಟಿತು.
ಮುಂದೇನಾಯಿತು ? ಅದೃಷ್ಟವಶಾತ್, ಅವರು ಹೊಟ್ಟೆನೋವು ಕಾಣಿಸಿಕೊಂಡ ಕೂಡಲೇ, ಅದಕ್ಕೂ “ಸ್ವಯಂ ಚಿಕಿತ್ಸೆ’ ಮಾಡಿಕೊಳ್ಳದೇ ಆಸ್ಪತ್ರೆಗೆ ಬಂದುದರಿಂದ ಸೂಕ್ತ ಸಮಯದಲ್ಲಿ ಸಮಸ್ಯೆ ಮೂಲ ಪತ್ತೆಯಾಯಿತು. ಶಸ್ತ್ರಚಿಕಿತ್ಸೆಯ ಅನಿವಾರ್ಯತೆಯನ್ನು ವೈದ್ಯರು ರೋಗಿಗೆ ಹಾಗೂ ಅವರ ಮನೆಯವರಿಗೆ ಮನವರಿಕೆ ಮಾಡಿಕೊಟ್ಟರು. ವಿಷಯದ ಗಂಭೀರತೆಯನ್ನು ಅರಿತ ರೋಗಿ ಹಾಗೂ ಮನೆಯವರು ತಕ್ಷಣ ಶಸ್ತ್ರಕ್ರಿಯೆಗೆ ಅನುಮತಿ ನೀಡಿದರು. ಇದರಿಂದ ರೋಗಿ ಆಸ್ಪತ್ರೆಗೆ ಬಂದು ನಾಲ್ಕಾರು ಗಂಟೆಯೊಳಗಾಗಿ ಶಸ್ತ್ರಕ್ರಿಯೆ ನಡೆದೂ ಹೋಯಿತು! ಸಣ್ಣ ಕರುಳಿನ ಆದಿಭಾಗದಲ್ಲಿ ಅಲ್ಸರ್ ಕಾಯಿಲೆ ಉಲ್ಬಣಗೊಂಡು ತೂತು ಉಂಟಾಗಿತ್ತು. ಅಲ್ಲಿಂದ ಸೋರಿದ ಕಲ್ಮಶವನ್ನು ಮೊದಲಾಗಿ ಶುಚಿಗೊಳಿಸಿ ಕರುಳನ್ನು ತೊಳೆಯಲಾಯಿತು. ತದನಂತರ ಕರುಳಿನ ರಂಧ್ರವನ್ನು ಹೊಲಿಗೆಯ ಮೂಲಕ ಮುಚ್ಚಲಾಯಿತು. ರೋಗಿಯ ಆರೋಗ್ಯ ಹದಗೆಡುವ ಮೊದಲೇ ಚಿಕಿತ್ಸೆ ನಡೆದದ್ದರಿಂದ ಅವರು ಶೀಘ್ರವಾಗಿ ಚೇತರಿಸುವಂತಾಯಿತು.
ಶಸ್ತ್ರಕ್ರಿಯೆ ಮಾಡಿದ ಮೂರ್‍ನಾಲ್ಕು ದಿನದೊಳಗೆ ರೋಗಿ ಚೇತರಿಸಿ ಆಹಾರ ಸೇವಿಸಲಾರಂಭಿಸಿದರೂ, ಅಲ್ಸರ್ ಕಾಯಿಲೆಯ ಚಿಕಿತ್ಸೆ ಇನ್ನೂ 4 ವಾರಗಳ ಕಾಲ ಮುಂದುವರಿಸಬೇಕೆಂದು ತಿಳಿಸಿ, ಅವರಿಗೆ ಸೂಕ್ತ ಮಾತ್ರೆ ಹಾಗೂ ಪಥ್ಯದ ಬಗ್ಗೆ ವಿವರಿಸಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು.
ಇಲ್ಲಿಗೆ “ನೋವಿನ ಮಾತ್ರೆಯ ಮಹಾತೆ¾’ ಮುಗಿಯಿತು! ಇದನ್ನು ವಿವರಿಸಿದ ಕಾರಣವೇನೆಂದರೆ, ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಗಳಿಗೂ, ಸುಲಭೋಪಾಯವೆಂದು ಬಗೆದು ಔಷಧ ಅಂಗಡಿಯಿಂದ ತಾವೇ ಖರೀದಿಸಿ “ಸ್ವಯಂ ಚಿಕಿತ್ಸೆ’ ಮಾಡಿಕೊಳ್ಳುವ ಪರಿಪಾಠದ ಬಗ್ಗೆ ಜನರನ್ನು ಎಚ್ಚರಿಸುವುದು.
-ಡಾ. ಶಿವಾನಂದ ಪ್ರಭು
ಸಹ ಪ್ರಾಧ್ಯಾಪಕರು,
ಮಕ್ಕಳ ಶಸ್ತ್ರ ಚಿಕಿತ್ಸಾ ತಜ್ಞರು
ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆ, ಕಟೀಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.