Arasinamakki: ಗ್ರಾಮಸ್ಥರ ಪ್ರತಿಭಟನೆ; ಸ್ಥಳಕ್ಕೆ ಅಧಿಕಾರಿಗಳ ಭೇಟಿ
Team Udayavani, May 17, 2023, 3:26 PM IST
ಬೆಳ್ತಂಗಡಿ: ಅರಸಿನಮಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ರೆಖ್ಯ ಗ್ರಾಮದ ಪೆಂಚಾರು ಹರಿಯುವ ತೋಡಿನ ಬಳಿ ಅರಸಿನಮಕ್ಕಿ ಪೇಟೆಯ ತ್ಯಾಜ್ಯವನ್ನು ಎಸೆಯುತ್ತಿದ್ದಾಗ ಗ್ರಾಮಸ್ಥರು ತಡೆ ಹಿಡಿದು ಧರಣಿ ನಡೆಸಿದ್ದಾರೆ.
ಇಲ್ಲಿ ಪ್ರತೀ ವರ್ಷವೂ ತ್ಯಾಜ್ಯವನ್ನು ಎಸೆಯಲಾಗುತ್ತಿತ್ತು. ರಾತ್ರಿ ವೇಳೆ ಬಂದು ಎಸೆದು ಹೋಗುತ್ತಿದ್ದರೂ, ಕಾದು ಕುಳಿತಿದ್ದರೂ ಸಿಗುತ್ತಿರಲಿಲ್ಲ. ಸುಮಾರು 30ರಿಂದ 40 ಲೋಡ್ ತ್ಯಾಜ್ಯ ಎಸೆಯಲಾಗಿದೆ. ಅರಣ್ಯ ಇಲಾಖೆ ತ್ಯಾಜ್ಯ ಎಸೆದವರನ್ನು ಹಿಡಿಯಲು ಪ್ರಯತ್ನಿಸಿದ್ದರೂ ವಿಫಲವಾಗಿದ್ದರು. ಅರಸಿನಮಕ್ಕಿ ಉಪ್ಪರಸಡ್ಕದಿಂದ ಪಿಲಿಕಲ, ತಾರೆತಪಡು³, ಕೆರೆಜಾಲು, ಮೊರಂತಡ್ಕ ಸಹಿತ ಮೂರು ಕಿ.ಮೀ. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಕಸ ಎಸೆಯಲಾಗುತ್ತಿತ್ತು.
ಈ ಕುರಿತು ತ್ಯಾಜ್ಯ ವಾಹನ ತಡೆಗಟ್ಟಲು ಸ್ಥಳೀಯರು ಪ್ರಯತ್ನಿಸಿದರೂ ಸಿಕ್ಕಿರಲಿಲ್ಲ. ಮಂಗಳವಾರ ಅರಸಿನಮಕ್ಕಿ ವಿಭಾಗದ ಉಪವಲಯ ಅರಣ್ಯಾಧಿಕಾರಿ ಸಂತೋಷ್ ಸಹಿತ ಸಿಬಂದಿ, ಗ್ರಾಮಸ್ಥ ರಾದ ನಾರಾಯಣ, ಪ್ರಕಾಶ್, ವೇಣು ಗೋಪಾಲ್, ಕಂಬೊಳಿ ಇತರರು ತ್ಯಾಜ್ಯ ಎಸೆಯುವಾಗ ತಡೆಹಿಡಿದು ಧರಣಿ ನಡೆಸಿದ್ದಾರೆ.
ಈ ಕುರಿತು ಅರಣ್ಯ ಇಲಾಖಾಧಿಕಾರಿ ಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬಂದಿ ಬಂದು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಮೇಲೆ ಧರಣಿಯನ್ನು ಹಿಂಪಡೆಯಲಾಗಿದೆ.
ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸದೆ ಸ್ಥಳಕ್ಕೂ ಭೇಟಿ ನೀಡದೆ ಉಡಾಫೆ ಉತ್ತರ ನೀಡಿರುತ್ತಾರೆ.
ಗ್ರಾ.ಪಂ.ನಿಂದ ತ್ಯಾಜ್ಯ ವಿಲೇವಾರಿಗೆ 5 ಕಡೆ ಸ್ಥಳ ಗುರುತಿಸಲಾಗಿತ್ತು, ಇದಕ್ಕೆ 2 ವರ್ಷಗಳಿಂದ ಆಕ್ಷೇಪವೆತ್ತುತ್ತಾ ಬರಲಾಗಿದೆ. ಇದು ಉದ್ದೇಶಪೂರಿತ ಧರಣಿಯಾಗಿದೆ. ಈಗಾಗಲೇ ಬಿದ್ದಿರುವ ಕಸ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅರಸಿನಮಕ್ಕಿ ಗ್ರಾ.ಪಂ.ಅಧ್ಯಕ್ಷ ನವೀನ್ ಹೇಳಿದರು.
ತ್ಯಾಜ್ಯ ತೆರವು ಮಾಡಲಾಗಿದೆ
ಪ್ರವಾಸಿಗರು, ಸಾರ್ವಜನಿಕರು ಕಸ ಎಸೆಯುವುದು ನಮ್ಮ ಗಮನಕ್ಕೂ ಬಂದಿತ್ತು. ಪೇಟೆಯ ಚರಂಡಿ ಸ್ವತ್ಛಗೊಳಿಸಿದ ಮಣ್ಣನ್ನು ಗ್ರಾ.ಪಂ.ನಿಂದ ಎಸೆಯಲಾಗಿತ್ತು. ತ್ಯಾಜ್ಯ ಎಸೆಯಲು ಕಸದ ಹೊಂಡ ರಚಿಸಲಾಗಿದೆ. ಎಸೆದಿರುವ ತ್ಯಾಜ್ಯ ತೆರವುಮಾಡಲಾಗಿದೆ ಎಂದು ಅರಸಿನಮಕ್ಕಿ ಪಿಡಿಒ ರವಿ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.