ಮಹಿಳಾ ಪಡೆಗಳಿಗೆ ಬಲ ತುಂಬಲು ಖಾಕಿ ಸಿದ್ಧ
Team Udayavani, May 22, 2023, 10:57 AM IST
ರಾಜ್ಯ ರಾಜಧಾನಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕುವುದೇ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿದೆ. ಇತ್ತೀಚಿನ ಕೆಲ ವರ್ಷಗಳಿಂದ ಮಹಿಳೆಯರ ಸುರಕ್ಷತೆಗೆ ಒತ್ತು ನೀಡಲು ಪೊಲೀಸ್ ಇಲಾಖೆಯು ಸಾಕಷ್ಟು ರೂಪು ರೇಷೆಗಳನ್ನು ಹಾಕಿಕೊಂಡಿತ್ತು. ಅದರಂತೆ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ರಾಣಿ ಚೆನ್ನಮ್ಮ ಪಡೆ, ಸೇಫ್ಟಿ ಐಲ್ಯಾಂಡ್, ನೆರವು, ಪಿಂಕ್ ಹೊಯ್ಸಳ, ಸುರಕ್ಷಾ ಆ್ಯಪ್‌ನಂತರ ಮಹಿಳಾ ಸುರಕ್ಷತಾ ಯೋಜನೆಗಳಲ್ಲಿನ ನ್ಯೂನ್ಯತೆಗಳನ್ನು ಪರಿಶೀಲಿಸಿ ಹೆಚ್ಚಿನ ಬಲ ತುಂಬಲು ಮುಂದಾಗಿದೆ. ಸದ್ಯ ಮಹಿಳಾ ಸುರಕ್ಷತೆಗಳಿಗಾಗಿ ಜಾರಿಯಲ್ಲಿರುವ ವಿವಿಧ ಯೋಜನೆಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಉದಯವಾಣಿ “ಸುದ್ದಿ ಸುತ್ತಾಟ’ದ ಮೂಲಕ ಬೆಳಕು ಚೆಲ್ಲಿದೆ.
ಬೆಂಗಳೂರು: ಸಿಲಿಕಾನ್ ಸಿಟಿ, ಐಟಿ-ಬಿಟಿ ಹಬ್, ಉದ್ಯಾನನಗರಿ ಎಂಬ ಖ್ಯಾತಿಗೆ ಒಳಪಟ್ಟಿರುವ ರಾಜ್ಯ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಯೇ ಸವಾ ಲಾಗಿ ಪರಿಣಮಿಸಿದೆ. ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಹಿಳೆ ಮತ್ತು ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಗೆ, ಕಾಮುಕರಿಗೆ ಭೀತಿ ಮತ್ತು ಮಹಿಳೆಯರು, ಮಕ್ಕಳಲ್ಲಿ ಭದ್ರತೆಯ ಭಾವನೆ ಮೂಡಿಸಲು ಮಹಿಳೆಯ ರಿಗಾಗಿ ಇರುವ ವಿವಿಧ ಯೋಜನೆಗಳಿಗೆ ಇನ್ನಷ್ಟು ಬಲ ತುಂಬಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ರಾಣಿ ಚೆನ್ನಮ್ಮ ಪಡೆ, ಸೇಫ್ಟಿ ಐಲ್ಯಾಂಡ್, ನೆರವು, ಪಿಂಕ್ ಹೊಯ್ಸಳ, ಸುರಕ್ಷಾ ಆ್ಯಪ್ ಅನ್ನು ಇನ್ನಷ್ಟು ಪರಿಣಾಮಕಾರಿ ಜಾರಿಗೆ ತರಲು ಸಿದ್ಧತೆ ಕೈಗೊಂಡಿದೆ.
ಪಿಂಕ್ ಹೊಯ್ಸಳ: ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಹಿಳೆ ಮತ್ತು ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು, ಕಾಮುಕರಿಗೆ ಭೀತಿ ಮತ್ತು ಮಹಿಳೆ, ಮಕ್ಕಳಲ್ಲಿ ಭದ್ರತೆಯ ಭಾವನೆ ಮೂಡಿಸಲು ಬೆಂಗಳೂರು ಪೊಲೀಸರ “ಪಿಂಕ್ ಹೊಯ್ಸಳ’ ರಸ್ತೆಗಿಳಿದಿದ್ದು, ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಸಿದ್ಧತೆಗಳು ನಡೆದಿವೆ. ಹೆಚ್ಚಿನ ಮಹಿಳಾ ಸಿಬ್ಬಂದಿಗಳನ್ನು ನಿಯೋಜಿಸಿ ಇನ್ನಷ್ಟು ಬಲ ತುಂಬಲು ಪೊಲೀಸ್ ಇಲಾಖೆ ಮುಂದಾಗಿದೆ. ಮಹಿಳೆಯರು ಹೆಚ್ಚಿರುವ ನಗರದ ಮಹಿಳಾ ಶಾಲಾ- ಕಾಲೇಜುಗಳು, ಪೇಯಿಂಗ್ ಗೆಸ್ಟ್‌ಗಳು, ಲೇಡಿಸ್ ಹಾಸ್ಟೆಲ್, ಗಾರ್ಮೆಂಟ್ಸ್‌ಗಳು, ಕ್ಲಬ್‌ಗಳ ಬಳಿ ಪುಂಡರು ಕಿರುಕುಳ ನೀಡಲು ಮುಂದಾಗುವ ಪ್ರಕರಣಗಳು ಹೆಚ್ಚುತ್ತಿದೆ.
ಅಂತಹ ಪ್ರದೇಶಗಳನ್ನು ಗಮನದಲ್ಲಿರಿಸಿ ಕೊಂಡು ಪಿಂಕ್ ಹೊಯ್ಸಳದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಗಸ್ತು ತಿರುಗಲಿದ್ದಾರೆ. ಬೆಂಗಳೂರಿನಲ್ಲಿ ಮಹಿಳೆಯರಿಗೆ ಅಸುರಕ್ಷಿತ ಎನಿಸುವ ಸ್ಥಳಗಳಲ್ಲಿಯೂ ವಾಹನಗಳು ಗಸ್ತು ತಿರುಗುತ್ತವೆ. ಆಯಾ ವ್ಯಾಪ್ತಿಯಲ್ಲಿ ರುವ ಠಾಣೆಗಳಲ್ಲಿ ಪೊಲೀಸರಿಗೆ ಮಹಿಳೆಯರ ವಿರುದ್ಧದ ಕಿರುಕುಳ, ದೌರ್ಜನ್ಯ ಪ್ರಕರಣಗಳು ವರದಿಯಾಗುವ ಸ್ಥಳಗಳ ಬಗ್ಗೆ ಮಾಹಿತಿ ತಿಳಿದಿರುತ್ತದೆ. ಇಂತಹ 50 ಸ್ಥಳಗಳನ್ನು ಗುರುತಿಸಿ ಪೊಲೀಸರು ಪಿಂಕ್ ಹೊಯ್ಸಳದಲ್ಲಿ ಗಸ್ತು ತಿರುಗುವ ಮೂಲಕ ಮಹಿಳೆಯರಿಗೆ ಸದಾ ಸುರಕ್ಷತೆ ಭಾವನೆ ಬರುವಂತೆ ಮಾಡಲಿದ್ದಾರೆ.
ಇನ್ನು ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪಿಂಕ್ ಹೊಯ್ಸಳ ಸಿಬ್ಬಂದಿಯೇ ಅವರನ್ನು ಕರೆತರುವ ಹಾಗೂ ಕರೆದುಕೊಂಡು ಹೋಗಲಿದ್ದಾರೆ. ಪಿಂಕ್ ಹೊಯ್ಸಳ ವಾಹನದಲ್ಲಿ ಕನಿಷ್ಠ ಓರ್ವ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿ ಉಪ ಪೊಲೀಸ್ ಆಯುಕ್ತರ ವಿಭಾಗದಲ್ಲಿ (ಡಿಸಿಪಿ) ಕನಿಷ್ಠ 4ರಿಂದ 8 ಪಿಂಕ್ ಹೊಯ್ಸಳ ವಾಹನಗಳಿವೆ. ಬೆಂಗಳೂರಿನ 8 ವ್ಯಾಪ್ತಿಗಳಲ್ಲಿ ಕನಿಷ್ಠ 50 ಪಿಂಕ್ ಹೊಯ್ಸಳಗಳು ಕಾರ್ಯನಿರ್ವಹಿಸುತ್ತಿವೆ. ಕಂಟ್ರೋಲ್ ರೂಂನಿಂದ ಬರುವ ಮಾಹಿತಿ ನಿರ್ವಹಿಸಲು ರಿಯಲ್ ಟೈಮ್ ಮೊಬೈಲ್ ಡೇಟಾ ಟರ್ಮಿನಲ್ (ಎಂಡಿಟಿ) ಇರಲಿದೆ. ಮಹಿಳೆಯರಿಗೆ ಕಿರುಕುಳ ಸೇರಿದಂತೆ ಅಪರಾಧ ಸ್ವರೂಪದ ತೊಂದರೆಗಳಾಗಿ ಕಂಟ್ರೋಲ್ ರೂಂಗೆ ಮಾಹಿತಿ ಬಂದರೆ ಅದನ್ನು ಪಿಂಕ್ ಹೊಯ್ಸಳ ವಾಹನದ ಸಿಬ್ಬಂದಿಯೇ ನಿರ್ವಹಿಸುತ್ತಾರೆ. ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿಯ ಕೊರತೆ ಇದೆ. ಹೀಗಾಗಿ, ಪಿಂಕ್ ಹೊಯ್ಸಳಗಳಿಗೆ ಲಭ್ಯವಿರುವ ಮಹಿಳಾ ಸಿಬ್ಬಂದಿಯನ್ನೇ ಬಳಸಿಕೊಳ್ಳಲಾಗುತ್ತಿದೆ.
ರಾಣಿ ಚೆನ್ನಮ್ಮ ಪಡೆ: ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುವ ಅಪರಾಧ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು ಮಹಿಳಾ ಅಧಿಕಾರಿಗಳನ್ನು ಒಳಗೊಂಡ “ರಾಣಿ ಚೆನ್ನಮ್ಮ ಪಡೆ’ ಎಂಬ ವಿಶೇಷ ತಂಡ ರಚಿಸಿದ್ದಾರೆ. ಈ ತಂಡದಲ್ಲಿ 31 ಮಹಿಳಾ ಪೊಲೀಸರಿರಲಿದ್ದು, ಇವುಗಳಿಗೆ ಬಲ ತುಂಬಿಸುವ ನಿಟ್ಟಿನಲ್ಲಿ ಇಲ್ಲಿನ ಸಿಬ್ಬಂದಿಗೆ ಕರಾಟೆ, ಯೋಗ, ದೈಹಿಕ ವ್ಯಾಯಾಮಗಳನ್ನು ಕಲಿಸಿ ಕೊಡಲಾಗಿದೆ. ಇವರು ಕೆಲ ಕಾಲೇಜು ಗಳಿಗೆ ತೆರಳಿ ವಿದ್ಯಾರ್ಥಿನಿಯರಿಗೆ ಕೆಲ ಕೌಶಲ್ಯ ತಿಳಿಸಿಕೊಡುವ ಮೂಲಕ ಆತ್ಮವಿಶ್ವಾಸ ತುಂಬಲಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ, ಮಹಿಳೆಯರಿಗೆ ಸ್ವಯಂ ರಕ್ಷಣಾ ತಂತ್ರಗಳ ಬಗ್ಗೆ ತರಬೇತಿ ನೀಡುವುದು, ಮಹಿಳೆಯರು, ಮಕ್ಕಳಿಗೆ ಸಂಬಂಧಿಸಿದಂತೆ ಇರುವ ಕಾನೂನುಗಳ ಬಗ್ಗೆ ಅರಿವು ಮೂಡಿಸುವುದು ಸೇರಿದಂತೆ ವಿವಿಧ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಸಾಮಾಜಿಕ ಮಾಧ್ಯಮ ಮತ್ತು ಸೈಬರ್ ಅಪರಾಧಗಳ ಬಗ್ಗೆ ಈ ಪಡೆ ಕಣ್ಣಿಡಲಿದೆ. ಮಹಿಳೆಯರಿಂದ, ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರ ರಾಣಿ ಚನ್ನಮ್ಮ ಪಡೆ ಕಾರ್ಯ ನಿರ್ವಹಿಸಲಿದೆ. ತರಬೇತಿ ಪಡೆದಿರುವ ಮಹಿಳೆಯರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಇವರಿಗೆ ಆರೋಪಿಗಳನ್ನು ನಿಯಂತ್ರಿಸುವ ಹಾಗೂ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಬೇಕಾಗುವ ಸೂಕ್ತ ತರಬೇತಿಯನ್ನು ಕೊಡಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿದವರ ವಿರುದ್ಧ ಕ್ರಮ ವಹಿಸಲು ಈ ಹಿಂದೆ ಓಬವ್ವ ಪಡೆ ನಿರ್ಮಿಸಲಾಗಿತ್ತು. ಆದರೆ, ಪ್ರಸ್ತುತ ಇದು ನಾಮಾವಶೇಷವಾಗಿದೆ.
ಬೆಂಗಳೂರಿನಲ್ಲಿ ಅವತರಿಸಿದ್ದ ಓಬವ್ವ ಪಡೆಯು ಮಹಿಳೆ ಯರಿಗೆ ಕಿರುಕುಳ, ಲೈಂಗಿಕ ದೌರ್ಜನ್ಯ ಎಸಗುವವರ ಮೇಲೆ ವಿಶೇಷ ನಿಗಾ ವಹಿಸಿ ಕಿಡಿಗೇಡಿಗಳನ್ನು ಮಟ್ಟ ಹಾಕುವ ಕೆಲಸವನ್ನು ಮಾಡುತ್ತಿತ್ತು. ರಾಣಿ ಚೆನ್ನಮ್ಮ ಪಡೆಯ ಮಹಿಳಾ ಸಿಬ್ಬಂದಿ ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದ್ದಾರೆ. ಅವರಿಗೆ ಪ್ರತ್ಯೇಕ ವಾಹನ ಕೂಡ ನೀಡಲಾಗುತ್ತದೆ. ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು, ಮಹಾರಾಣಿ, ಸೆಂಟ್ರಲ್ ಕಾಲೇಜು, ವಿಶ್ವೇಶ್ವರಯ್ಯ ತಾಂತ್ರಿಕ ಎಂಜಿನಿಯರಿಂಗ್ ಕಾಲೇಜುಗಳ ಬಳಿ ಈ ಪಡೆಯ ಮಹಿಳಾ ಸಿಬ್ಬಂದಿ ಕಾಲೇಜು ಆರಂಭ ಹಾಗೂ ಮುಕ್ತಾಯ ಸಂದರ್ಭದಲ್ಲಿ ಗಸ್ತು ತಿರುಗಲಿದ್ದಾರೆ. ಒಂದು ವೇಳೆ ಬಸ್ ಅಥವಾ ನಡೆದು ಹೋಗುವ ಯುವತಿಯರ ಜತೆ ಅನುಚಿತವಾಗಿ ವರ್ತಿಸಿದರೆ, ಸ್ಥಳದಲ್ಲೇ ಬಂಧಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಿದ್ದಾರೆ.
ಮಹಿಳಾ ಪಡೆಗಳಿಗೆ ಶಕ್ತಿ: ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ತಂತ್ರಜ್ಞಾನದ ಸಹಾಯದಿಂದ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲು ಯೋಜನೆ ರೂಪಿಸಿಕೊಂಡಿದೆ. ಹೆಚ್ಚುವರಿಯಾಗಿ ಬೆಂಗಳೂರು ನಗರದಲ್ಲಿ 4,500 ಸಿಸಿಕ್ಯಾಮರಾ ಅಳವಡಿಸಲು ಸಿದ್ಧತೆ ನಡೆಸಿದೆ. ಮಹಿಳಾ ಪಡೆಗಳಲ್ಲಿ ಶಕ್ತಿ ತುಂಬುವ ನಿಟ್ಟಿನಲ್ಲಿ ಸುಧಾರಿತ ಪರಿಕರಗಳನ್ನು ಆಯಾ ಪಡೆಗಳಿಗೆ ನೀಡಲು ಚಿಂತನೆ ನಡೆಸಲಾಗಿದೆ.
ನೆರವು ಕೇಂದ್ರದಿಂದ ಸ್ಪಂದನೆ: ನಗರದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ ತಡೆಯಲು, ತುರ್ತು ವೇಳೆ ಸ್ಪಂದಿಸಲು ನೆರವು ಕೇಂದ್ರ ಸ್ಥಾಪಿಸಲಾಗಿದೆ. ಇವುಗಳ ಮೂಲಕ ಸಂತ್ರಸ್ತ ಮಹಿಳೆಯರು ಈ ಕೇಂದ್ರಗಳಿಗೆ ಭೇಟಿ ನೀಡಿ ನೇರವಾಗಿ ತಮಗಾದ ಅನ್ಯಾಯದ ವಿರುದ್ಧ ದೂರು ನೀಡಲು ಅವಕಾಶವಿದೆ. ಠಾಣೆಗೆ ದೂರು ಕೊಡುವ ಬದಲು ನೆರವು ಕೇಂದ್ರಗಳಲ್ಲಿ ದೂರು ದಾಖಲಿಸಬಹುದಾಗಿದೆ. ಈ ಕೇಂದ್ರವು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದ್ದು, 3 ಪಾಳಿಯಲ್ಲಿ ಮಹಿಳಾ ಸಿಬ್ಬಂದಿ ಇರಲಿದ್ದಾರೆ. ಇದರಿಂದ ಮಹಿಳೆಯರು ಠಾಣೆಯಿಂದ ಠಾಣೆಗೆ ಅಲೆಯ ಬೇಕಾಗಿಲ್ಲ. ಇವುಗಳನ್ನು ರಾಜ್ಯಾದ್ಯಂತ ವಿಸ್ತರಿಸಲು ಚಿಂತನೆ ನಡೆಸಲಾಗಿದೆ. ರಕ್ಷಣೆಗೆ ಸುರಕ್ಷಾ ತಂತ್ರಾಂಶ: ಕೆಲ ದಿನಗಳಿಂದ ಸುರಕ್ಷಾ ಆ್ಯಪ್ ಚಟುವಟಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಇದನ್ನು ಇನ್ನಷ್ಟು ಮೇಲ್ದರ್ಜೆಗೇರಿಸಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.
ಮಹಿಳೆಯರ ಸುರಕ್ಷತೆಗಾಗಿ ರಾಜ್ಯದಲ್ಲಿ 2017ರಲ್ಲಿ “ಸುರಕ್ಷಾ ಆ್ಯಪ್’ ಅನ್ನು ಪರಿಚಯಿಸಲಾಗಿತ್ತು. ಈ ಆ್ಯಪ್ ಈಗಾಗಲೇ ಸುಮಾರು 1 ಲಕ್ಷಕ್ಕೂ ಅಧಿಕ ಮಹಿಳೆಯರು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಮಹಿಳೆಯು ತುರ್ತು ಪರಿಸ್ಥಿತಿಯಲ್ಲಿ ಸಿಲುಕಿಕೊಂಡಾಗ, ಸುರಕ್ಷಾ ಆ್ಯಪ್ ಬಳಕೆ ಮಾಡಿದರೇ ತಕ್ಷಣಕ್ಕೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಹಾಯ ಮಾಡುತ್ತಾರೆ. ಮುಖ್ಯವಾಗಿ ಮಹಿಳೆಯರು ಆ್ಯಂಡ್ರಾಯ್ಡ ಮೊಬೈಲ್‌ನಲ್ಲಿ ಪ್ಲೇ ಸ್ಟೋರ್‌ಗೆ ಹೋಗಿ ಸುರಕ್ಷಾ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಈ ಆ್ಯಪ್‌ನಲ್ಲಿರುವ ರೆಡ್ ಬಟನ್ ಪ್ರಸ್ ಮಾಡಿದರೇ ತಕ್ಷಣಕ್ಕೆ ಅಲ್ಲಿಯ ಮಾಹಿತಿ ಕಂಟ್ರೋಲ್ ರೂಂಗೆ ರವಾನೆಯಾಗಲಿದೆ. ಮಹಿಳೆಯ ಇಬ್ಬರು ಕುಟುಂಬ ಸದಸ್ಯರಿಗೆ ಅಥವಾ ಸ್ನೇಹಿತರಿಗೆ ತುರ್ತು ಪರಿಸ್ಥಿತಿ ಇರುವ ಬಗ್ಗೆ ಸಂದೇಶ ಹೋಗುತ್ತದೆ. ಆಗ ಫೋನ್ ಜಿಪಿಎಸ್ ಆಧಾರದ ಮೇಲೆ ಸ್ಥಳಕ್ಕೆ ಪೊಲೀಸರು ಆಗಮಿಸಿ ರಕ್ಷಣೆ ಮಾಡಲಿದ್ದಾರೆ.
ಸೇಫ್ಟಿ ಐಲ್ಯಾಂಡ್: ಸೇಪ್ಟಿ ಐಲ್ಯಾಂಡ್ ಎಂಬುದು ಬೆಂಗಳೂರು ನಗರ ಪೊಲೀಸರು ಮಹಿಳೆಯರಿಗೆ ಹೆಚ್ಚಿನ ರೀತಿಯಲ್ಲಿ ಸುರಕ್ಷತೆ ಒದಗಿಸಲು ಕೈಗೊಂಡಿರುವ ಯೋಜನೆಯಾಗಿದೆ. ಬೆಂಗಳೂರಿನ ಎಂಜಿ ರಸ್ತೆ, ಕಬ್ಬನ್‌ಪಾರ್ಕ್ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಸೇಫ್ಟಿಐಲ್ಯಾಂಡ್ ಬೂತ್‌ಗಳನ್ನು ನಿಯೋಜಿಸಲಾಗಿದೆ. ತೊಂದರೆಗೊಳಗಾದ ಮಹಿಳೆಯರು ಸೇಫ್ಟಿ ಐಲ್ಯಾಂಡ್ ಕೇಂದ್ರಕ್ಕೆ ಬಂದು ಇಲ್ಲಿರುವ ಒಂದು ಬಟನ್ ಒತ್ತಿದರೆ ಸಾಕು. ಇಲ್ಲಿ ಅಳವಡಿಸಿರುವ ಕ್ಯಾಮರಾ ಇವರತ್ತ ತಿರುಗಲಿದೆ. ಕೂಡಲೇ ಕಂಟ್ರೋಲ್ ರೂಂ ಸಿಬ್ಬಂದಿ ಇವರ ಜತೆಗೆ ಸಂಭಾಷಣೆ ನಡೆಸಿ ಸಮಸ್ಯೆ ಆಲಿಸಲಿದ್ದಾರೆ. ಇದಾದ ಕೆಲ ನಿಮಿಷಗಳಲ್ಲೇ ಹೊಯ್ಸಳ ವಾಹನವು ಇಲ್ಲಿಗೆ ಬಂದು ದೂರು ಕೊಟ್ಟ ಮಹಿಳೆಯನ್ನು ಭೇಟಿಯಾಗಿ ಸಮಸ್ಯೆ ಆಲಿಸಲಿದೆ. ಮೊಬೈಲ್ ಸುಲಿಗೆ, ಕಳ್ಳತನ, ದರೋಡೆ, ವೇಶ್ಯಾವಾಟಿಕೆಗೆ ಪ್ರಚೋದನೆ, ಮಹಿಳೆಯರಿಗೆ ಕಿರುಕುಳ, ದರೋಡೆ ಇನ್ನಿತರೆ ಅಪರಾಧಗಳು ನಡೆದಾಗಲೂ ಸಂತ್ರಸ್ತರು ಇಲ್ಲಿ ದೂರು ನೀಡಬಹುದು.
ಬೆಂಗಳೂರು ನಗರದಲ್ಲಿ ಮಹಿಳೆಯರ ಸುರಕ್ಷತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ಸುಧಾರಿತ ತಂತ್ರಜ್ಞಾನದ ಮೂಲಕ ಮಹಿಳೆಯರಿಗೆ ಅನುಕೂಲವಾಗುವ ಹೊಸ ಯೋಜನೆ ರೂಪಿಸಲಾಗಿದೆ. ಇದರಿಂದ ಸಾಕಷ್ಟು ಮಹಿಳೆಯರಿಗೆ ಅನುಕೂಲವಾಗಿದೆ.– ಕಲಾ ಕೃಷ್ಣಸ್ವಾಮಿ, ಡಿಸಿಪಿ, ಪೂರ್ವ ಸಂಚಾರ ವಿಭಾಗ.
– ಅವಿನಾಶ್ ಮೂಡಂಬಿಕಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.