ನವ ಕಾಶ್ಮೀರಕ್ಕೆ ಸಾಕ್ಷಿಯಾದ ಜಗತ್ತು – ಶ್ರೀನಗರದಲ್ಲಿ ಐತಿಹಾಸಿಕ G-20 ಪ್ರವಾಸೋದ್ಯಮ ಸಭೆ
Team Udayavani, May 23, 2023, 7:26 AM IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕಾರ್ಯಕ್ರಮವೊಂದಕ್ಕೆ ಕಣಿವೆ ನಾಡು ಸಾಕ್ಷಿಯಾಗಿದೆ. ಶ್ರೀನಗರದಲ್ಲಿ 3 ದಿನಗಳ ಐತಿಹಾಸಿಕ ಜಿ20 ಪ್ರವಾಸೋದ್ಯಮ ಕಾರ್ಯಪಡೆಯ ಸಭೆ ಸೋಮವಾರ ಆರಂಭವಾಗಿದೆ.
ಸೋಮವಾರ ಬೆಳಗ್ಗೆಯೇ ಸುಮಾರು 60 ಮಂದಿ ವಿದೇಶಿ ಪ್ರತಿನಿಧಿಗಳು ಆಗಮಿಸಿದ್ದು, ಅವರು ಬರುವ ದಾರಿಯುದ್ದಕ್ಕೂ ಎನ್‌ಎಸ್‌ಜಿ, ಮರೈನ್ ಕಮಾಂಡೋಗಳ ಭದ್ರತೆ ಏರ್ಪಡಿಸಲಾಗಿತ್ತು. ಉಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ ನಗರದಾದ್ಯಂತ ಚೆಕ್‌ಪೋಸ್ಟ್‌ಗಳನ್ನು ಹಾಕಿ, ಪ್ರತಿಯೊಂದು ವಾಹನಗಳನ್ನೂ ತಪಾಸಣೆ ಮಾಡಲಾಗುತ್ತಿತ್ತು.
ಮೊದಲ ದಿನದ ಸಭೆ ಸಂಪನ್ನ:
ಬಿಗಿಭದ್ರತೆಯ ನಡುವೆ ನಡೆದ ಮೊದಲ ದಿನದ ಸಭೆ ನಿರ್ವಿಘ್ನವಾಗಿ ಮುಗಿದಿದೆ. “ಆರ್ಥಿಕ ಮತ್ತು ಸಾಂಸ್ಕೃತಿಕ ಸಂರಕ್ಷಣೆಗಾಗಿ ಸಿನಿಮಾ ಪ್ರವಾಸೋದ್ಯಮ’ ಎಂಬ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ, “ಕೇಂದ್ರ ಸರ್ಕಾರವು ಸದ್ಯದಲ್ಲೇ ರಾಷ್ಟ್ರೀಯ ಪ್ರವಾಸೋದ್ಯಮ ನೀತಿಯನ್ನು ಘೋಷಿಸಲಿದ್ದು, ಜಾಗತಿಕ ಪ್ರವಾಸೋದ್ಯಮ ಹೂಡಿಕೆ ಸಮ್ಮೇಳನವನ್ನು ನಡೆಸುವ ಕುರಿತೂ ಚಿಂತನೆ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ. ಜತೆಗೆ, ಕೇಂದ್ರ ಸರ್ಕಾರವು ಪ್ರವಾಸೋದ್ಯಮದಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ಕಲ್ಪಿಸಿದೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾತನಾಡಿ, “ಇಂಥ ಸಭೆಯನ್ನು ಹಿಂದೆ ಎಂದಾದರೂ ಆಯೋಜಿಸಿದ್ದರೆ, ಇಸ್ಲಾಮಾಬಾದ್‌ನಿಂದ ಪ್ರತಿಭಟನೆಗೆ ಕರೆ ಬಂದಿರುತ್ತಿತ್ತು. ಶ್ರೀನಗರದ ಅಂಗಡಿಗಳೆಲ್ಲ ಮುಚ್ಚಿರುತ್ತಿದ್ದವು. ಆದರೆ, ಈಗ ಹರತಾಳದ ಕರೆ ಬಂದರೂ ಅದನ್ನು ಮಾಡುವವರಿಲ್ಲ. ಅಂಥದ್ದೊಂದು ವಿಶೇಷ ಬದಲಾವಣೆ ಇಲ್ಲಿ ಆಗಿದೆ’ ಎಂದಿದ್ದಾರೆ. ಇದೇ ವೇಳೆ, ಕಾಶ್ಮೀರವು ಮತ್ತೆ ಪ್ರವಾಸೋದ್ಯಮದ ಸ್ವರ್ಗವಾಗಿ ಕಂಗೊಳಿಸಲಿದೆ ಎಂದು ಭಾರತದ ಜಿ20 ಶೆರ್ಪಾ ಅಮಿತಾಭ್ ಕಾಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಟು ನಾಟು ಹಾಡಿಗೆ ಹೆಜ್ಜೆ
ಜಿ20 ಸಭೆಯ ಭಾಗವಾಗಿ ನಡೆದ ಸಿನಿಮಾ ಸಂಬಂಧಿತ ವಿಚಾರ ಸಂಕಿರಣದಲ್ಲಿ ಆರ್‌ಆರ್‌ಆರ್ ನಟ ರಾಮ್‌ಚರಣ್ ಕೂಡ ಭಾಗಿಯಾಗಿದ್ದರು. ಆಸ್ಕರ್ ವಿಜೇತ “ನಾಟು ನಾಟು’ ಹಾಡಿಗೂ ಅವರು ಹೆಜ್ಜೆ ಹಾಕಿದರು. ಈ ವೇಳೆ ಮಾತನಾಡಿದ ನಟ ರಾಮ್‌ಚರಣ್, ಸಿನಿಮಾ ಶೂಟಿಂಗ್‌ಗೆ ಭಾರತದಲ್ಲೇ ಅತ್ಯಂತ ತಣ್ಣಗಿನ ಹಾಗೂ ಪ್ರಶಸ್ತ ಸ್ಥಳವೆಂದರೆ ಕಾಶ್ಮೀರ. ನಾನು 2ನೇ ತಲೆಮಾರಿನ ನಟ. ನನ್ನ ಅಪ್ಪಾಜಿಯೂ ಕಾಶ್ಮೀರದಲ್ಲಿ ಅತಿ ಹೆಚ್ಚು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು ಎಂದು ಹೇಳುತ್ತಾ, ಕಾಶ್ಮೀರದ ಸೌಂದರ್ಯವನ್ನು ಬಣ್ಣಿಸಿದರು.
ಹತಾಶ ಪಾಕ್
ಶ್ರೀನಗರದ ಜಿ20 ಸಭೆಗೆ ವ್ಯಕ್ತವಾಗಿರುವ ಬೆಂಬಲದಿಂದ ಪಾಕ್ ಹತಾಶೆಗೀಡಾಗಿದೆ. ಸಭೆ ಬಗ್ಗೆ ಪ್ರತಿಕ್ರಿಯಿಸಿರುವ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ, “ಶ್ರೀನಗರದಲ್ಲಿ ಜಿ20 ಸಭೆ ನಡೆಸುತ್ತಿರುವುದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ. ವಿಶ್ವಸಂಸ್ಥೆಯ ನಿರ್ಣಯವನ್ನು ಉಲ್ಲಂ ಸಿ, ಸಮಾವೇಶ ನಡೆಸುವ ಮೂಲಕ ಭಾರತವು ಕಾಶ್ಮೀರಿಗರ ಧ್ವನಿಯನ್ನು ಹತ್ತಿಕ್ಕಲಾಗದು’ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.