mobileಗಾಗಿ ಜಲಾಶಯದಿಂದ 3 ದಿನಗಳ ಕಾಲ ನೀರನ್ನು ಪಂಪ್ ಮಾಡಿದ ಅಧಿಕಾರಿ!
1 ಲಕ್ಷ ರೂ. ಮೌಲ್ಯದ ಸ್ಮಾರ್ಟ್‌ಫೋನ್... 21 ಲಕ್ಷ ಲೀಟರ್ ನೀರು ಖಾಲಿ...!!!
Team Udayavani, May 26, 2023, 2:29 PM IST
ರಾಯ್ ಪುರ : ಛತ್ತೀಸ್‌ಗಢದಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ, ಸರಕಾರಿ ಅಧಿಕಾರಿಯೊಬ್ಬ ಜಲಾಶಯದಲ್ಲಿ ಬಿದ್ದಿದ್ದ ತನ್ನ ದುಬಾರಿ ಮೊಬೈಲ್ ಫೋನ್ ಅನ್ನು ಮರುಪಡೆಯಲು ಜಲಾಶಯದಿಂದ 21 ಲಕ್ಷ ಲೀಟರ್ ನೀರನ್ನು ಖಾಲಿ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಂಕೇರ್ ಜಿಲ್ಲೆಯ ಕೊಯಿಲಿಬೀಡಾ ಬ್ಲಾಕ್‌ನ ಆಹಾರ ಅಧಿಕಾರಿ ರಾಜೇಶ್ ವಿಶ್ವಾಸ್ ಅವರು ಖೇರ್ಕಟ್ಟಾ ಅಣೆಕಟ್ಟಿನಲ್ಲಿ ರಜೆಯನ್ನು ಆನಂದಿಸುತ್ತಿದ್ದಾಗ ಆಕಸ್ಮಿಕವಾಗಿ 1 ಲಕ್ಷ ರೂ. ಮೌಲ್ಯದ ಸ್ಮಾರ್ಟ್‌ಫೋನ್ 15 ಅಡಿ ಆಳದ ನೀರಿನಿಂದ ತುಂಬಿರುವ ಪ್ರದೇಶದಲ್ಲಿ ಬೀಳಿಸಿದ್ದಾರೆ. ನಂತರ ಸ್ಥಳೀಯರು ಧುಮುಕಿದರೂ ಹೊರತೆಗೆಯುವ ಪ್ರಯತ್ನ ವಿಫಲವಾಯಿತು.
ಅಧಿಕಾರಿಯು ಮೂರು ದಿನಗಳ ಕಾಲ ನಿರಂತರವಾಗಿ ಎರಡು 30hp ಡೀಸೆಲ್ ಪಂಪ್‌ಗಳನ್ನು ಬಳಸಿ 21 ಲಕ್ಷ ಲೀಟರ್ ನೀರನ್ನು ಖಾಲಿ ಮಾಡಿದ್ದಾರೆ. ನೀರು 1,500 ಎಕರೆ ಕೃಷಿ ಭೂಮಿಗೆ ನೀರುಣಿಸಲು ಸಾಕಾಗುತ್ತದೆ ಎಂದು ಹೇಳಲಾಗಿದೆ.
ಸೋಮವಾರ ಸಂಜೆಯಿಂದ ಪಂಪ್‌ಗಳು ನೀರನ್ನು ಹಾರಿಸಲಾರಂಭಿಸಿದವು ಮತ್ತು ಗುರುವಾರದವರೆಗೆ ಕಾರ್ಯನಿರ್ವಹಿಸಿದವು. ದೂರಿನ ಮೇರೆಗೆ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತಡೆದಿದ್ದಾರೆ. ಆದರೆ, ಆರು ಅಡಿ ಆಳದವರೆಗೆ ಅಂದರೆ ಸುಮಾರು 21 ಲಕ್ಷ ಲೀಟರ್ ನೀರನ್ನು ಅದಾಗಲೇ ಪಂಪ್ ಮಾಡಲಾಗಿತ್ತು. ಪ್ರದೇಶವು ಬೇಸಿಗೆಯಲ್ಲಿಯೂ ಸಹ 10 ಅಡಿ ಆಳದ ನೀರನ್ನು ಹೊಂದಿರುತ್ತದೆ ಮತ್ತು ಪ್ರಾಣಿಗಳು ಇದನ್ನು ಹೆಚ್ಚಾಗಿ ಕುಡಿಯುತ್ತವೆ ಎಂದು ತಿಳಿದು ಬಂದಿದೆ.
ನೀರು ಬಳಕೆಗೆ ಯೋಗ್ಯವಾಗಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದು, ಸ್ಥಳೀಯ ಉಪವಿಭಾಗಾಧಿಕಾರಿಯಿಂದ ಪೂರ್ವ ಮೌಖಿಕ ಅನುಮತಿಯನ್ನು ಪಡೆದಿದ್ದೆ ಎಂದು ರಾಜೇಶ್ ವಿಶ್ವಾಸ್ ಹೇಳಿದ್ದಾರೆ.
ಆಳವಾದ ನೀರಿನಲ್ಲಿ ಮೂರು ದಿನಗಳ ಕಾಲ ಮುಳುಗಿದ್ದ ಫೋನ್ ಈಗ ಕಾರ್ಯನಿರ್ವಹಿಸುತ್ತಿಲ್ಲ. ಘಟನೆ ಕುರಿತು ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ರಮಣ್ ಸಿಂಗ್ ಅವರು ಸಿಎಂ ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದು “ಸರ್ವಾಧಿಕಾರಿ” ರಾಜ್ಯ ಸರ್ಕಾರದ ಅಡಿಯಲ್ಲಿ ಅಧಿಕಾರಿಗಳು ಈ ಪ್ರದೇಶವನ್ನು ತಮ್ಮ ಪೂರ್ವಜರ ಆಸ್ತಿ ಎಂದು ಪರಿಗಣಿಸುತ್ತಿದ್ದಾರೆ. ವಿಪರೀತ ಬಿಸಿಲಿನಲ್ಲಿ ಜನರು ನೀರಿನ ಟ್ಯಾಂಕರ್‌ಗಳ ಮೇಲೆ ಅವಲಂಬಿತರಾಗಿದ್ದಾರೆ ಮತ್ತು ಅಧಿಕಾರಿಯೊಬ್ಬರು 21 ಲಕ್ಷ ಲೀಟರ್ ನೀರನ್ನು ಹರಿಸುತ್ತಾರೆ ಎಂದು ಕಿಡಿ ಕಾರಿದ್ದಾರೆ.
ಪತ್ರಕರ್ತರು ಪ್ರಶ್ನಿಸಿದಾಗ, ರಾಜ್ಯ ಕ್ಯಾಬಿನೆಟ್ ಸಚಿವ ಅಮರಜೀತ್ ಭಗತ್ ಅವರು ಘಟನೆಯ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಘಟನೆಯನ್ನು ನಾನು ಖಂಡಿತವಾಗಿ ಗಮನಿಸುತ್ತೇನೆ ಮತ್ತು ಸತ್ಯಾಸತ್ಯತೆಯ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.