Mangaluru: ರನ್‌ವೇ ರೀಕಾರ್ಪೆಂಟಿಂಗ್ ಕಾಮಗಾರಿ ಪೂರ್ಣ: ನಾಳೆಯಿಂದ ವಿಮಾನಯಾನ ಯಥಾಸ್ಥಿತಿಗೆ
Team Udayavani, May 31, 2023, 7:20 AM IST
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2.45 ಕಿ.ಮೀ. ಉದ್ದದ ರನ್‌ವೇ ಮರುನಿರ್ಮಾಣ (ರೀಕಾರ್ಪೆಂಟಿಂಗ್) ಕಾಮಗಾರಿ ಮೇ 28ರಂದು ಪೂರ್ಣಗೊಂಡಿದೆ. ಈಗಾಗಲೇ ತಜ್ಞರ ತಂಡ ಪ್ರಾಥಮಿಕ ಸಮೀಕ್ಷೆ ನಡೆಸಿದ್ದು, ಅಂತಿಮ ಸಮೀಕ್ಷೆಯ ಬಳಿಕ ಜೂ. 1ರಿಂದ ಹಗಲು ವೇಳೆಯಲ್ಲೂ ನಿಲ್ದಾಣದ ಕಾರ್ಯಾಚರಣೆ ಆರಂಭವಾಗಲಿದೆ.
ವಿಮಾನಯಾನ ಸುರಕ್ಷಾ ಮಾನದಂಡಗಳ ಪ್ರಕಾರ ಕಾಮಗಾರಿ ಕೈಗೊಳ್ಳಲಾಗಿದ್ದು, ಮಾ. 10ರಂದು ಆರಂಭವಾದ ಈ ಕಾಮಗಾರಿ 75 ದಿನಗಳಲ್ಲಿ ಮುಗಿಸಲಾಗಿದೆ. ಗಟ್ಟಿಯಾದ ರನ್‌ವೇಯಲ್ಲಿ ಡಾಮರಿನ ಮೇಲ್ಪದರವನ್ನು ಅಳವಡಿಸುವ ಈ ವಿಶೇಷ ಕಾಮಗಾರಿ ದೇಶದಲ್ಲಿ ಮೊದಲ ಬಾರಿ ನಡೆದಿದೆ.
ಮಂಗಳೂರು ವಿಮಾನ ನಿಲ್ದಾಣವು ಕರ್ನಾಟಕದ ಎರಡನೇ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುವ ನಿಲ್ದಾಣವಾಗಿದೆ. ಪ್ರತೀ ದಿನ 36 ವಿಮಾನಗಳು ಸಂಚಾರ ನಿರ್ವಹಿಸುತ್ತವೆ. ಕಾಮಗಾರಿ ಹಿನ್ನೆಲೆಯಲ್ಲಿ ಮಾ. 10ರಿಂದ ವಿಮಾನ ನಿಲ್ದಾಣವನ್ನು ಪ್ರತೀ ದಿನ ಬೆಳಗ್ಗೆ 9.30ರಿಂದ ಸಂಜೆ 6ರ ವರೆಗೆ ಎಂಟೂವರೆ ಗಂಟೆಗಳ ಬಂದ್ ಮಾಡಲಾಗಿತ್ತು. ಹೀಗಾಗಿ ಹಗಲು ವಿಮಾನ ಯಾನ ಇರಲಿಲ್ಲ. ದಿನದ ಉಳಿದ 14.5 (ಸಂಜೆ 6.30ರಿಂದ ಮರುದಿನ ಬೆಳಗ್ಗೆ 9.30ರ ವರೆಗೆ) ಗಂಟೆಗಳ ಅವಧಿಯಲ್ಲಿ ಸರಾಸರಿ 18 ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ ಎಂಐಎ ರನ್‌ವೇಯನ್ನು ತೆರೆದಿತ್ತು.
ಭವಿಷ್ಯದ ಕಾರ್ಯಾಚರಣೆಗಳ ಸುರಕ್ಷೆ ಯನ್ನು ಗಮನದಲ್ಲಿಟ್ಟುಕೊಂಡು, ರನ್‌ವೇ ಸೆಂಟರ್ ಲೈಟಿಂಗ್ ಅಳವಡಿಸಿದೆ. ನಿಲ್ದಾಣವನ್ನು ಭಾರತದ ಸುರಕ್ಷಿತ ಟೇಬಲ್‌ಟಾಪ್ ವಿಮಾನ ನಿಲ್ದಾಣವಾಗಿಯೂ ನಿರೂಪಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.