ಹಳ್ಳಿಗಳಲ್ಲಿ ನಿಧಾನವಾಗಿ ಏರುತ್ತಿದೆ ಪಂಚಾಯತ್ ಚುನಾವಣೆ ಬಿಸಿ
ಮೀಸಲಾತಿಗೆ ಮೊದಲೇ ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಬಿರುಸಿನ ತಾಲೀಮು
Team Udayavani, Jun 2, 2023, 8:10 AM IST
ದಾವಣಗೆರೆ: ರಾಜ್ಯ ವಿಧಾನಸಭೆ ಚುನಾವಣೆ ಈಗಷ್ಟೇ ಮುಗಿದು ಚುನಾವಣಾ ರಾಜಕಾರಣ ತಣ್ಣಗಾಗುತ್ತಿದ್ದಂತೆ ಹಳ್ಳಿಗಳಲ್ಲೀಗ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ರಾಜಕಾರಣದ ಬಿಸಿ ಏರುತ್ತಿದೆ.
ರಾಜ್ಯದ 5948 ಗ್ರಾಪಂಗಳ ಎರಡನೇ ಅವಧಿಗೆ (2020ನೇ ಸಾಲಿನ ಚುನಾವಣೆ ನಂತರದ) ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ನಿಗದಿಪಡಿಸಲು ರಾಜ್ಯ ಚುನಾವಣಾ ಆಯೋಗ ವಾರದ ಹಿಂದಷ್ಟೇ (ಮೇ 25ರಂದು) ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದ್ದು, ಜಿಲ್ಲಾಧಿಕಾರಿಗಳು ಮೀಸಲಾತಿ ನಿಗದಿ ಪ್ರಕ್ರಿಯೆಗೆ ಸಿದ್ಧತೆ ನಡೆಸಿದ್ದಾರೆ.
ಇತ್ತ ಹಳ್ಳಿಗಳಲ್ಲಿ ಎರಡನೇ ಅವಧಿಗೆ ತಮ್ಮ ಗ್ರಾಪಂನಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಯಾವ ವರ್ಗಕ್ಕೆ ಮೀಸಲಾಗಬಹುದು, ಯಾವ ವರ್ಗಕ್ಕೆ ಮೀಸಲಾತಿ ಸಿಕ್ಕರೆ ಯಾರು ಅಧ್ಯಕ್ಷ-ಉಪಾಧ್ಯಕ್ಷರಾಗಲು ಹೆಚ್ಚು ಅವಕಾಶಗಳಿವೆ, ಯಾರನ್ನು ಬೆಂಬಲಿಸಬೇಕೆಂಬ ಲೆಕ್ಕಾಚಾರ ಜೋರಾಗಿದೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೆಲ ಸದಸ್ಯರು ಈಗಲೇ ತಮ್ಮ ಬೆಂಬಲಕ್ಕಾಗಿ ಸದಸ್ಯರನ್ನು ನಾನಾ ರೀತಿಯಲ್ಲಿ ಆಕರ್ಷಿಸುವ ಕಸರತ್ತಿಗೂ ಮುಂದಾಗಿದ್ದಾರೆ.
ಭಾರೀ ತುರುಸು: ಪ್ರಸ್ತುತ ರಾಜ್ಯದಲ್ಲಿ ಆಡಳಿತ ಪಕ್ಷ ಬದಲಾಗಿರುವುದರಿಂದ ಗ್ರಾಪಂ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಯ್ಕೆ ಭಾರೀ ಕುತೂಹಲ ಕೆರಳಿಸಿದೆ. ಗ್ರಾಪಂ ಸದಸ್ಯರು ಆಯ್ಕೆಯಾದ ಮೊದಲ ಅವಧಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತದಲ್ಲಿತ್ತು. ಪ್ರಸ್ತುತ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದೆ. ಹೀಗಾಗಿ ಈ ಬಾರಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ತುರುಸಿನೊಂದಿಗೆ ಹಲವು ಕುತೂಹಲದ ಬೆಳವಣಿಗೆಗೂ ಸಾಕ್ಷಿಯಾಗುವ ನಿರೀಕ್ಷೆ ಗರಿಗೆದರಿದೆ.
ಗ್ರಾಪಂ ಚುನಾವಣೆಗಳು ರಾಜಕೀಯ ಪಕ್ಷಗಳ ಚಿಹ್ನೆಯ ಮೇಲೆ ನಡೆಯದೇ ಇದ್ದರೂ ಗ್ರಾಪಂ ಸದಸ್ಯರು ರಾಜಕೀಯ ಪಕ್ಷಗಳ ಬೆಂಬಲಿತರಾಗಿಯೇ ಸ್ಪರ್ಧಿಸಿ, ಗುರುತಿಸಿಕೊಳ್ಳುತ್ತಾರೆ. ಹೀಗಾಗಿ ಸಹಜವಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಯ್ಕೆಯಲ್ಲಿಯೂ ಹಳ್ಳಿ ರಾಜಕಾರಣ ರಾಜ್ಯ ರಾಜಕಾರಣವನ್ನು ಮೀರಿಸುವಂತೆ ನಡೆಯುವುದು ಗುಟ್ಟಾಗಿ ಉಳಿದಿಲ್ಲ. ಗ್ರಾಪಂ ಮೊದಲ ಅವಧಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರೇ ರಾಜ್ಯದಲ್ಲಿ ಹೆಚ್ಚು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ಈಗ ಕಾಂಗ್ರೆಸ್ ಆಡಳಿತ ಬಂದಿದ್ದು ಕಾಂಗ್ರೆಸ್ ಶಾಸಕರೇ ಹೆಚ್ಚಾಗಿರುವುದರಿಂದ ಅಲ್ಲೆಲ್ಲ ಈಗ ಕಾಂಗ್ರೆಸ್ ಬೆಂಬಲಿತರು ಹೆಚ್ಚಿನ ಪ್ರಮಾಣದಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಅಲಂಕರಿಸುವ ಸಾಧ್ಯತೆ ಇದೆ. ಜತೆಗೆ ಈ ಬಾರಿ ಹಿಂದೆಂದಿಗಿಂತ ಹೆಚ್ಚು ಗ್ರಾಪಂ ಸದಸ್ಯರ ಪಕ್ಷಾಂತರ ನಡೆಯುವ ಲೆಕ್ಕಾಚಾರವಿದೆ.
ರೆಸಾರ್ಟ್ ರಾಜಕಾರಣಕ್ಕೂ ಸಜ್ಜು: ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಯಾವ ಮೀಸಲಾತಿ ಬರಬಹುದು. ಯಾವ ವರ್ಗಕ್ಕೆ ಮೀಸಲಾತಿ ಬಂದರೆ ಯಾರನ್ನು ಬೆಂಬಲಿಸಬೇಕೆಂಬ ಚರ್ಚೆ ಹಳ್ಳಿಗಳಲ್ಲಿ ಜೋರಾಗಿದೆ. ಇನ್ನು ಕೆಲ ಸದಸ್ಯರು ತಮ್ಮನ್ನು ಯಾರೆಲ್ಲ ಬೆಂಬಲಿಸಬಹುದೆಂದು ಲೆಕ್ಕಾಚಾರದಲ್ಲಿ ಮಗ್ನರಾಗಿದ್ದಾರೆ. ಕೆಲ ಪ್ರಬಲ ಆಕಾಂಕ್ಷಿಗಳು ತಮಗೆ ಅನುಕೂಲವಾಗುವ ಮೀಸಲಾತಿ ಬಂದರೆ ಬೆಂಬಲಿಸುವಂತೆ ಸದಸ್ಯರ ಮನವೊಲಿಸುವ ಕಾರ್ಯ ಮುಂದುವರಿಸಿದ್ದಾರೆ. ಇನ್ನು ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲ ಸದಸ್ಯರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ. ಅಗತ್ಯ ಬಿದ್ದರೆ ರೆಸಾರ್ಟ್ ರಾಜಕಾರಣಕ್ಕೂ ರೆಡಿ ಎನ್ನುವ ರೀತಿಯಲ್ಲಿ ಕೆಲ ಬಲಾಡ್ಯ ಸದಸ್ಯರು ಕಾರ್ಯಪ್ರವೃತ್ತರಾಗಿರುವುದು ಹಳ್ಳಿ ರಾಜಕಾರಣ ರಾಜ್ಯ ರಾಜಕಾರಣವನ್ನು ಮೀರಿಸುವ ಲಕ್ಷಣ ಗೋಚರಿಸುತ್ತಿದೆ.
ಒಟ್ಟಾರೆ ಹಳ್ಳಿಗಳಲೀಗ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾಗುವ ಮೊದಲೇ ಅಧಿಕಾರ ತಮ್ಮ ಕೈಗೆ ಹಿಡಿಯಲು ಯಾವೆಲ್ಲ ತಂತ್ರಗಾರಿಕೆ ನಡೆಸಬೇಕು ಎಂಬ ತಾಲೀಮು ಶುರುವಾಗಿದೆ.
ಮೀಸಲಾತಿಗಾಗಿ ಹರಕೆ!
ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಇಂಥದ್ದೇ ವರ್ಗಕ್ಕೆ ಬರುವಂತಾಗಬೇಕು ಜತೆಗೆ ಗ್ರಾಪಂ ಅಧಿಕಾರ ತಮ್ಮ ಕೈಗೆ ಸುಲಭವಾಗಿ ಸಿಗುವಂತಾಗಬೇಕೆಂದು ಕೆಲ ಸದಸ್ಯರು ದೇವರಲ್ಲಿ ಹರಕೆ ಹೊರುತ್ತಿರುವ ಘಟನೆಗಳು ಸಹ ಅಲ್ಲಲ್ಲಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೊದಲ ಅವಧಿಯಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಪಕ್ಷವೇ ಬೇರೆ. ಎರಡನೇ ಅವಧಿ ಆಯ್ಕೆ ವೇಳೆ ಆಡಳಿತದಲ್ಲಿರುವ ಪಕ್ಷವೇ ಬೇರೆಯಾಗಿರುವುದರಿಂದ ಈ ಬಾರಿ ತಂತ್ರಗಾರಿಕೆ, ರಾಜ್ಯ ರಾಜಕಾರಣ ಮೀರಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಮೀಸಲಾತಿ ಪ್ರಕಟಗೊಳ್ಳುವ ಮೊದಲೇ ಅಧಿಕಾರ ತಮ್ಮವರ ಕೈಯಲ್ಲೇ ಹಿಡಿದಿಟ್ಟುಕೊಳ್ಳುವ ಲೆಕ್ಕಾಚಾರ ಶುರುವಾಗಿದೆ.
-ಸಂಕನಗೌಡ, ಹಿರೇಕೌಂಶಿ ಗ್ರಾಪಂ ಸದಸ್ಯ
-ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.