ಪಠ್ಯ ಬದಲಾವಣೆಯೊ, ಬದಲಾವಣೆಗಾಗಿ ಪಠ್ಯವೋ…
Team Udayavani, Jun 10, 2023, 6:05 AM IST
” …ಕೂಸು ಬಡವಾಯಿತು ಎಂಬಂತೆ ಪಠ್ಯ ಪರಿಷ್ಕರಣ ವಿಷಯ ಶೈಕ್ಷಣಿಕ ಸಂಸ್ಥೆಗಳನ್ನು, ಸಾಮಾಜಿಕ ಸ್ವಾಸ್ಥ್ಯವನ್ನು ಕಲುಷಿತಗೊಳಿಸುತ್ತಿದೆಯೇ ಎಂದು ಪ್ರಶ್ನಿಸುವಂತೆ ಮಾಡಿದೆ. ಯಾವಾಗ ಸಾಕ್ಷರತೆ ಪ್ರಮಾಣ ಕಡಿಮೆ ಇತ್ತೂ ಆವಾಗೆಲ್ಲ ಪಠ್ಯ ಪರಿಷ್ಕರಣೆ, ಪಾಠ ಬದಲಾವಣೆಗಳೆಲ್ಲ ಶೈಕ್ಷಣಿಕ ಚಟುವಟಿಕೆಗಳ ಭಾಗವಾಗಿ ಮಾಮೂಲಿನಂತೆ ಅದರ ಪಾಡಿಗೆ ನಡೆಯುತ್ತಿತ್ತು. ಸವಾಲುಗಳೇನಿದ್ದರೂ ತರಗತಿ ಕೋಣೆಗೆ ಮತ್ತು ಶೈಕ್ಷಣಿಕ ಆವರಣಕ್ಕಷ್ಟೇ ಸೀಮಿತವಾಗಿತ್ತು. ಪರಿಷ್ಕರಣೆ ಮತ್ತು ಬದಲಾವಣೆ ನಿರಂತರ. ಕಾಲಕಾಲಕ್ಕೆ ನಡೆಯುತ್ತಿದ್ದ ಪರಿಷ್ಕಾರ ಇರಬಹುದು ಇಲ್ಲವೇ ಬದಲಾವಣೆಗಳಿರಬಹುದು ಶಿಕ್ಷಣ ತಜ್ಞರ, ಸಿದ್ಧಾಂತಿಗಳ, ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಮಟ್ಟಕ್ಕಷ್ಟೆ ಸೀಮಿತವಾಗಿ ಚರ್ಚೆ, ವಿಮರ್ಶೆ ನಡೆದು ಅಂತಿಮಗೊಳ್ಳುತ್ತಿತ್ತು. ಶೈಕ್ಷಣಿಕ ವ್ಯವಸ್ಥೆ ಮತ್ತು ವರ್ಷ ಸುಸೂತ್ರವಾಗಿ ಸಾಗುತ್ತಿತ್ತು.
ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆದುರಾಗುವ ಸವಾಲುಗಳು ಮತ್ತು ಅಡ್ಡಿಗಳಷ್ಟು ಬೇರೆ ಯಾವುದೇ ಕ್ಷೇತ್ರಗಳಿಗೆ ಎದುರಾಗುವುದಿ ಲ್ಲವೆಂದು ಅನ್ನಿಸುತ್ತಿದೆ. ಯಾವ ವ್ಯವಸ್ಥೆಯನ್ನು ಸಮಗ್ರ ಸಮಾಜದ ಪ್ರತಿ ಬಿಂಬ ಎಂದು ಕರೆಯಲಾಗುತ್ತಿತ್ತೂ…ಅದೇ ಶೈಕ್ಷಣಿಕ ಕ್ಷೇತ್ರವು ಇಂದು ಬದಲಾವಣೆ, ಅಭಿವೃದ್ಧಿ ಮತ್ತು ಆಧುನಿಕತೆಯ ಹೆಸರಲ್ಲಿ ತೀರಾ ಮಾಲಿ ನ್ಯಕ್ಕೆ ಒಳಗಾಗುತ್ತಿದೆ. ಕೆಳಮಟ್ಟದ ರಾಜಕೀಯ ಮತ್ತು ಬೌದ್ಧಿಕ ನಿತ್ರಾ ಣದಿಂದ ನಲುಗುತ್ತಿದೆ. ಏನೂ ಓದದೆ, ಶೈಕ್ಷಣಿಕ ಅನುಭವಗಳೂ ಇಲ್ಲದೆ ಪಕ್ಷಪಾತ ಧೋರಣೆಯಿಂದ, ಜಾತಿ, ಮತ, ಪಕ್ಷ , ಪಂಗಡ, ಧರ್ಮ, ವರ್ಗವೇ ಮೊದಲಾದ ಪೂರ್ವಗ್ರಹ, ಅಪಕ್ವ ಮತ್ತು ಈರ್ಷೆಯಂತಹ ಮನೋಭಾವಗಳ ಪ್ರಭಾವವೇ ಅಂತಿಮವಾಗಿಬಿಟ್ಟಿದೆ. ಪಠ್ಯ ಪರಿಷ್ಕರಣೆ ಬದಲಾವಣೆ ಅಂದರೆ ಸಾಕು… ಬೆಂಕಿ ಉಗುಳುವ, ಹಚ್ಚುವ, ಇಡೀ ಸಮಾಜವನ್ನು ಖಂಡಖಂಡವಾಗಿ ತುಂಡರಿಸುವ ವಿತಂಡವಾದಗಳೇ ಮೇಳೈಸಿ ಬಿಡುತ್ತವೆ. ಪಠ್ಯ ಪರಿಷ್ಕರಣೆಯೂ ಹಾಗೆ…ವಿವಾದ ರಹಿತ, ನಿಷ್ಪಕ್ಷಪಾತ, ಸಾಮಾಜಿಕ ನ್ಯಾಯ ಮುಂತಾದ ಸಾಮುದಾಯಿಕ ಉತ್ತರ ದಾಯಿತ್ವದಿಂದಲೇ ಅಂತಿಮವಾಗಬೇಕು. ಕೊನೆಗೂ ಒಂದಷ್ಟು ಭಿನ್ನ ವಾದ ಇದ್ದರೂ ವ್ಯವಸ್ಥೆ ಸುಧಾರಿಸಿಕೊಳ್ಳುತ್ತದೆ, ಜನ ಒಪ್ಪಿಕೊಳ್ಳು ತ್ತಾರೆ.
ಪರಿಷ್ಕರಣೆ ಏಕೆಂಬ ಯೋಚನೆ ಬೇಕು: ಸದ್ಯದ ಪರಿಸ್ಥಿತಿಯಲ್ಲಿ ಪಠ್ಯ ಪರಿಷ್ಕರಣೆ ಎಂದರೆ ಅಂತ್ಯವಿಲ್ಲದ ಸಮಸ್ಯೆಗಳನ್ನೇ ಹುಟ್ಟುಹಾಕುವ ಪ್ರಕ್ರಿಯೆಯಾಗಿಬಿಟ್ಟಿದೆ. ಏಕೆಂದರೆ ಇಡಿಯಾಗಿ ಗ್ರಹಿಸಲಾರದ, ಶೈಕ್ಷಣಿಕ ಒಳನೋಟಗಳಿಲ್ಲದ, ಆವರದಲ್ಲೇ ಸುತ್ತುಬರುವ ಜನವರ್ಗವನ್ನು ಸೃಷ್ಟಿ ಮಾಡಿಬಿಟ್ಟಿದ್ದೇವೆ. ತಮ್ಮ ತಮ್ಮ ಜಾತಿ ವರ್ಗಗಳ ತಂಡ ಕಟ್ಟಿಕೊಂಡು, ನಾಯಕ ಸ್ಥಾನವನ್ನು ಉಳಿಸಿ ಬೆಳೆಸುವುದೇ ಆತ್ಯಂತಿಕ ನಿಲುವಾಗಿದೆ. ಏನೇ ಮಾಡಿ ಅಥವಾ ಹೇಳಿ; ಅದು ಯಾರು ಹೇಳಿದ್ದು ಎನ್ನುವುದರಿಂ ದಲೇ ವಾದ ಶುರುವಿಟ್ಟುಕೊಳ್ಳುತ್ತದೆ. ಯಾಕೆ ಹೇಳಿದ್ಧಾರೆ, ಅದರಲ್ಲೇ ನಿದೆ…ಎಂಬ ಚಿಕಿತ್ಸಕ, ವಿಮರ್ಶಕ, ಸಂತುಲಿತ ದೃಷ್ಟಿಕೋನದ ಸುಳಿವೇ ಇರುವುದಿಲ್ಲ. ಚರ್ಚೆಯ ಮೂಲಕ ಪರಿಹಾರ ಕಂಡುಕೊಳ್ಳುವ ಸಾಮ ಯಿಕ ಬುದ್ಧಿ, ಸ್ವೀಕಾರಶೀಲತೆಯೇ ಇಲ್ಲ. ಕೊನೆಗೆ ವಿಷಯ ಬಿಟ್ಟು ವ್ಯಕ್ತಿ ಮತ್ತು ಸಮುದಾಯವನ್ನೇ ಗುರಿಯಾಗಿಸತೊಡಗುತ್ತಾರೆ. ಏನೇ ಆದರೂ ಬಿಡೆನೆಂಬ ವಾದ, ಪ್ರತಿವಾದ, ಹೋರಾಟ, ಆರ್ಭಟ… ಇನ್ನೂ ಎನೇನೋ. ಏನು ಮಾಡುವುದು ಹೇಳಿ… ಶಿಕ್ಷಕರು, ನಾಳಿನ ಪ್ರಜೆಗಳು ಅನುಭವಿಸುವುದರ ಹೊರತಾಗಿ ಅನ್ಯಮಾರ್ಗವೆಮಗಿಲ್ಲವೆನ್ನುತ್ತಾ ಪರಿಮಾರ್ಜನೆಗೆ ತೊಡಗುತ್ತಾರೆ.
ಶೈಕ್ಷಣಿಕವಾಗಿ ಪಠ್ಯ ಪರಿಷ್ಕರಣೆ ಬದಲಾವಣೆ ಆಗಬೇಕಾದ್ದು ಸಹಜವೆ. ಆದರೆ ಅದರ ಹೆಸರಲ್ಲಾಗುವ ಒಡೆಯುವ ಕಾರ್ಯ ವಿದೆಯಲ್ಲ ಅದು ಅಸಹಜ.
ಪಠ್ಯ ಪರಿಷ್ಕರಣೆಗೆ ಸ್ವತಂತ್ರ ಸಮಿತಿ ಬೇಕು: ಪ್ರತೀ ಬಾರಿಯೂ ಶಾಲಾ ಪಠ್ಯ ಬದಲಾಯಿಸುವ ನಿಟ್ಟಿನಲ್ಲಿ ಅಥವಾ ಪರಿಷ್ಕರಣೆಯ ಸಂದರ್ಭದಲ್ಲಿ ಪರಿಷ್ಕರಣ ಸಮಿತಿಯ ರಚನೆಯು ಆಯಾ ಸಂದರ್ಭದಲ್ಲಿನ ಆಡಳಿತಗಾರರ ಮರ್ಜಿ ಗನುಗುಣವಾಗಿ ಏಕೆ ನಡೆಯಬೇಕು? ಸಮಿತಿಗೊಂದು ಸ್ವತಂತ್ರ ಸಂಸ್ಥಾ ಸ್ವರೂಪ ಕೊಡಬಹುದಲ್ಲ? ಆಯಾ ತರಗತಿ ಗನುಗುಣವಾಗಿ ಸುದೀರ್ಘ ಅನುಭವ ಮತ್ತು ತಜ್ಞತೆಯುಳ್ಳ ಶಿಕ್ಷಕರ ಅಭಿಪ್ರಾಯ ಮತ್ತು ಅನುಭವಗಳನ್ನು (ತಳಮಟ್ಟದಿಂದಲೆ) ಕ್ರೋಡೀ ಕರಿಸಬಹುದಲ್ಲ? ಆಯಾ ವಿಷಯಕ್ಕನುಗುಣವಾಗಿ ಆಯಾ ಪಾಠಗಳಿಗೆ ಉದ್ದೇಶಗಳಿವೆ.
ಯಾವ ಪಠ್ಯ ವಿಷಯವೇ ಇರಬಹುದು ಅದನ್ನು ನಿರ್ದಿಷ್ಟ ಪಾಠದಲ್ಲಿ, ಆ ತರಗತಿಗೆ ಯಾಕೆ ಅಳವಡಿಸುವುದು ಎಂಬುದರ ಜತೆಗೆ ಪುನರಾವರ್ತನೆ ಆಗದ ಹಾಗೆ ನೋಡಿಕೋಳ್ಳಬೇಡವೇ? ಒಂದು ತರಗತಿಯಲ್ಲಿ ಅಳವಡಿಸಿರುವ ಪಾಠ ಇನ್ನೊಂದು ತರಗತಿಯಲ್ಲೂ ಅಳವಡಿಸುವ ಅಗತ್ಯವಿದೆಯೇ? ಪ್ರತೀ ತರಗತಿಯಲ್ಲಿ, ಪ್ರತೀ ವಿಷ ಯದಲ್ಲಿ ಪ್ರತೀ ಪಾಠವನ್ನು ಅಳವಡಿಸುವ ಅಗತ್ಯವಿದೆಯೇ? ಯಾ ವುದೇ ಪಠ್ಯವು ಎಲ್ಲ ಭಾಷಾ ಪಾಠದಲ್ಲೂ ಬೇಕು, ಸಮಾಜ ವಿಜ್ಞಾನ ಪಾಠ ದಲ್ಲೂ ಬೇಕು ಎನ್ನಲಾದೀತೇ? ಗಣಿತದಲ್ಲಿ ಏನು?, ವಿಜ್ಞಾನದಲ್ಲಿ ಏನು? ಎಂಬ ವಿಷಯ ಚರ್ಚೆಗೇ ಬರುವುದಿಲ್ಲ. ಹಿಂದೆಲ್ಲ ಪಠ್ಯ ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕು ಎಂಬ ಧೋರಣೆ ಇತ್ತು. ಹಾಗಾಗಿ ಪಾಠಗಳ ಪುನರಾವರ್ತನೆ ಸಹಜವಾಗಿತ್ತು. ಈಗ ಹಾಗಿಲ್ಲ; ಯಾವ ತರಗತಿಯಲ್ಲಿ ಯಾವ ಪಾಠ ಓದಿದ್ದಿ ಎಂಬುದು ಮುಖ್ಯವೇ ಅಲ್ಲ. ಯಾವ ತರಗತಿಯಲ್ಲಿ, ಯಾವ ಪಾಠದಿಂದ ಯಾವ ಕೌಶಲ ಮತ್ತು ಮೌಲ್ಯಗಳನ್ನು ತಿಳಿದುಕೊಂಡಿದ್ದಿ, ಬದುಕಿಗೆ ಎಷ್ಟು ಅನ್ವಯಿಸಿಕೊಂಡಿದ್ದಿ ಎಂಬುದೇ ಮುಖ್ಯ. ಹೋಗಲಿ; ಆ ಪಾಠ ಅಳವಡಿಸಿ, ಈ ಪಾಠ ಭಾಗ ವನ್ನು ಸೇರಿಸಬೇಡಿ ಎಂದು ಶಿಫಾರಸು ಅಥವಾ ಆಗ್ರಹ ಮಾಡುವ ನಮ್ಮಲ್ಲಿ ಆ ಪಾಠ ವಿಷಯದ ಅಥವಾ ವ್ಯಕ್ತಿಯಲ್ಲಿರುವ ಗುಣಗ್ರಾಹಿತ್ವ ಮತ್ತು ಸಾಮಾಜಿಕ ಸ್ವಾಸ್ಥ ಪರಿಕಲ್ಪನೆ ಎಷ್ಟಿದೆಯೆಂಬ ಅರಿವಾದರೂ ಇದೆಯೇ?
ಪಾಠ ಬೋಧನೆ ಮತ್ತು ಗುಣಪೋಷಣೆ: ಮುಖ್ಯವಾಗಿ ಪಠ್ಯಭಾರಯಾವ್ಯಾವ ತರಗತಿಗೆ ಎಷ್ಟು ಇರಬೇಕು, ಪಠ್ಯಗಳು ಮಾಹಿತಿ ರೂಪದಲ್ಲಿ ಇರಬೇಕೇ, ಪರಿಚಯ ರೂಪದಲ್ಲಿ ಇರಬೇಕೇ, ಪ್ರಕ್ರಿಯಾಧಾರಿತ ಗುಣಪೋಷಣೆಗೆ ಇರಬೇಕೇ, ಅಂಕಾಧಾರಿತ ಪಾಸು -ಫೈಲು ಘೋಷಣೆಗೆ ಇರಬೇಕೇ? ಪಾಠಗಳು ಕನಿಷ್ಠ ಕಲಿಕಾ ಮಟ್ಟ ಸಾಧನೆಗೋ…ಒಂದನೇ ತರಗತಿಯ ವಿದ್ಯಾರ್ಥಿಯನ್ನು ಎರಡೊ, ಮೂರೊ (ಸಾಧ್ಯವಾದರೆ ಉನ್ನತ ತರಗತಿಗೇ) ತರಗತಿ ಮಟ್ಟದ ಬುದ್ಧಿ ವಂತನನ್ನು… ಅತೀ ಬುದ್ಧಿವಂತನನ್ನು ತಯಾರು ಮಾಡಲಿರುವುದೋ… ಯಾರಾದರೂ ಹೇಳಬಹುದೇ?
ಚರಿತ್ರೆಯ ವಿಷಯವಂತೂ ಇನ್ನೂ ಸಂಕೀರ್ಣ. ಯಾವುದು ಚರಿತ್ರೆ -ಯಾವುದು ಚರಿತ್ರೆ ಅಲ್ಲ, ಯಾವುದು ಸುಳ್ಳು – ಯಾವುದು ಸತ್ಯ ಯಾ ರಿಗೂ ಬೇಡ. ಗತ ಕಾಲದ ಸಂಗತಿಗಳನ್ನು ಇದ್ದ ಹಾಗೇ ಹೇಳಬೇಕಲ್ಲದೆ ನಮಗೆ ಬೇಕಾದ ರೀತಿಯಲ್ಲಿ ಅಥವಾ ನನ್ನ ಯೋಚನೆಗೆ, ಅಭಿರುಚಿಗೆ ಸರಿ ಹೊಂದುವಂತೆ ಹೇಳಲಾದೀತೇ? ಚರಿತ್ರೆ ಎಂದರೆ ಒಂದರ್ಥದಲ್ಲಿ ಶೋಧಿಸು ಎಂದು. ಇಂದಿನ ಪಠ್ಯಗಳಲ್ಲಿ ಇಂಥ ಶೋಧನೆ ನಿಜವಾಗಿ ಯೂ ನಡೆಯುತ್ತಿದೆಯೇ?
ಪಠ್ಯ ಮತ್ತು ಕಲಿಕಾ ಹೊರೆ: ಇವತ್ತು ಬಹಳ ಮುಖ್ಯವಾಗಿ ಪಠ್ಯ ಹಾಗೂ ಕಲಿಕಾ ಹೊರೆಯ ಬಗ್ಗೆ ಚರ್ಚೆ ಆಗಬೇಕಾಗಿದೆ. ಆಯಾ ತರಗತಿಯ ಪಾಠವನ್ನು ಬೋಧಿಸುವುದರ ಮೂಲಕ, ಅಧ್ಯಯನದ ಮೂಲಕ ವಿದ್ಯಾ ರ್ಥಿಗಳು ಕಲಿಯಬೇಕಾದ್ದು, ಸಾಧಿಸಬೇಕಾದ್ದು ಮತ್ತು ಕಳಕೊಳ್ಳಬೇಕಾ ದ್ದು ಏನು? ಎಂಬ ಬಗ್ಗೆ ವಿಮರ್ಶೆ ನಡೆಯಬೇಕಾಗಿದೆ. ಪಾಠ ಬೋಧನೆ ಮತ್ತು ಬೋಧನ ವ್ಯವಸ್ಥೆಯ ಬಗ್ಗೆ ಮಾತನಾಡುವವರು ಬೇಕಾಗಿದ್ದಾರೆ. ತರಗತಿ ಕೋಣೆಗಳಲ್ಲಿ ನಮ್ಮ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿ ಕೊಳ್ಳಲಾಗುತ್ತದೋ ಅಥವಾ ಫಸ್ಟ್ ಕ್ಲಾಸ್, ಹೈ ಕ್ಲಾಸ್…ಎನ್ನುತ್ತಾ ಅಂಕ ತೆಗೆಸಲು, ಓಟಕ್ಕೆ ನಿಲ್ಲಿಸಲು ಮಶಿನ್‌ನಂತೆ ಮಕ್ಕಳನ್ನು ತಿರುಗಿಸಲಾ ಗುತ್ತದೊ…? ಅಥವಾ ಸಂತಸ ಕಲಿಕೆ, ಸಹಯೋಗಿ ಕಲಿಕೆಯ ಮೂಲಕ ಮಾನವತೆ ಮತ್ತು ಜೀವನ ಕೌಶಲಗಳನ್ನು ಪೋಷಿಸಿ ಬೆಳೆಸಲಾಗುತ್ತದೋ? ಈ ಬಗ್ಗೆ ಚರ್ಚೆ, ವಾದ ಆಗಬೇಕು, ಹೋರಾಟ ನಡೆಯಬೇಕು.
ಪಠ್ಯದಲ್ಲಿ ಬದಲಾವಣೆ, ಪರಿಷ್ಕರಣೆ ಆಗಲಿ. ಅದಕ್ಕಿಂತಲೂ ಮೊದಲು ಓದಿದ, ತಿಳಿವಳಿಕೆಯುಳ್ಳ ನಾಗರಿಕರಾಗಿರುವ ನಾವು ನಮ್ಮನ್ನು ಬದಲಾಯಿ ಸಿಕೊಳ್ಳಬೇಡವೇ, ಪರಿಷ್ಕರಣೆಗೆ ಒಳಪಡಿಸಬೇಡವೇ…? ಎಂಬ ಪ್ರಶ್ನೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡೀತು.
ರಾಮಕೃಷ್ಣ ಭಟ್ ಚೊಕ್ಕಾಡಿ ಬೆಳಾಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.