ಮಾನ್ಸೂನ್‌ ರಾಗ: ಒಳಗೂ ಹೊರಗೂ ಅದೇ ಆಲಾಪ

ಇನ್ನು ನಾಲ್ಕು ತಿಂಗಳು ಹಗಲಿನಲ್ಲೂ ಕತ್ತಲೆಯೇ !

Team Udayavani, Jun 11, 2023, 7:46 AM IST

rain update

ಹೊರಗೆ ಕತ್ತಲಾಗಿದೆ, ಒಳಗೂ ಸಹ. ನಿನ್ನೆ ಸಂಜೆಯವರೆಗೂ ಇದ್ದ ಬೆಳಕು ಈಗ ಮಾಯ. ರಾತ್ರಿ ಹೇಗಿದ್ದರೂ ಕತ್ತಲು. ಇನ್ನು ನಾಲ್ಕು ತಿಂಗಳು ಹಗಲಿನಲ್ಲೂ ಕತ್ತಲೆಯೇ. ಹಾಗೆಂದು ಹೊಸ ಅತಿಥಿ ಬಂದು ಇಷ್ಟರಲ್ಲಿ ಮೂರು ದಿನ ಕಳೆಯಬೇಕಿತ್ತು. ಆದರೂ ಬಂದಿಲ್ಲ. ತನ್ನೂರು ಬಿಟ್ಟಿರುವುದು ನಿಜ, ನನ್ನೂರಿಗೆ ಬಂದು ಮುಟ್ಟಿಲ್ಲ. ಮೋಡಗಳು ಮಸಿ ಬಳಿದುಕೊಂಡು ನಿಂತಿವೆ, ಗಾಳಿಯೂ ತಂಪಾಗುತ್ತಿದೆ. ಆಕಾಶವೂ ಮಬ್ಬು ಮಬ್ಬು. ದೂರದಲ್ಲೆಲ್ಲೋ ಅತಿಥಿ ಬಂದ ಬಗ್ಗೆ ಮಾತು. ನಮ್ಮಲ್ಲಿಗೂ ಬರಲಿಕ್ಕೆ ಒಂದಿಷ್ಟು ತಾಸು ಬೇಕಾದೀತು. ಅಷ್ಟರಲ್ಲಿ ಉಳಿದಿದ್ದೆಲ್ಲವೂ ಸಜ್ಜಾಗಬೇಕು. ನಾಳೆಯಿಂದ ಏನಿದ್ದರೂ ಮಾನ್ಸೂನ್‌ ರಾಗದ ಆಲಾಪನೆಯಷ್ಟೇ.

ಮೊದಲ ಮಳೆ ದಿಢೀರನೇ ಬಂದಿತ್ತು. ಇಂದಿನಿಂದ ಮಳೆ ಎಂಬುದು ಗೊತ್ತಿತ್ತಾದರೂ ಅಪ್ಪ ಪೇಟೆಗೆ ಕೊಡೆಯೊಂದಿಗೆ ಹೋಗಿರಲಿಲ್ಲ. ಹಗಲು ಇದ್ದಂತೆಯೇ ಒಮ್ಮೆಲೆ ಕಪ್ಪಾಯಿತು. ಪೇಟೆಯಲ್ಲಿ ದಾರಿದೀಪಗಳಿಲ್ಲದೇ ನಡೆಯುವುದೇ ಕಷ್ಟ ಎನ್ನುವ ಹಾಗೆ. ಮಯ್ಯರ ಅಂಗಡಿಯಲ್ಲಿ ಕುಳಿತಿದ್ದ ಅಪ್ಪ ಒಮ್ಮೆ ಹೊರಗೆ ಬಂದು ಆಕಾಶದತ್ತ ಕಂಡು, ಮಳೆ ಸುರಿಯುವುದರೊಳಗೆ ಮನೆ ಸೇರಲು ಬೀಸು ಬೀಸಾಗಿ ನಡೆಯತೊಡಗಿದ. ಹತ್ತು ಹೆಜ್ಜೆ ಹಾಕುವಷ್ಟರಲ್ಲೇ ಮಳೆಗಾಲದ ಮೊದಲ ಮಳೆ ಸುರಿಯತೊಡಗಿತು. ಮಳೆಯಲ್ಲೇ ನೆನೆದುಕೊಂಡು ಮನೆ ಸೇರಿದ್ದ ಅಪ್ಪನಿಗೆ ಅಮ್ಮ ಗದರಿಸಿದ್ದೂ ನೆನಪಿದೆ. “ಮೊದಲ ಮಳೆಯಲ್ಲಿ ನೆನೆಯೋದೇ? ನಾಳೆಯಿಂದಲೆ ಎಲ್ಲ ಕಾಯಿಲೆ ಶುರುವಾಗುತ್ತೆ. ಮನೆಯಲ್ಲಿ ಒಬ್ಬರಿಗೆ ಬಂದರೆ ಸಾಕು, ಎಲ್ಲರಿಗೂ ಬರದೇ ಇರುತ್ತದೆಯಾ? ಮಳೆಗಾಲ ಮುಗಿಯುವುದರೊಳಗೆ ಒಬ್ಬರದಲ್ಲ ಒಬ್ಬರದ್ದು ಯೋಗ ಕ್ಷೇಮ ನೋಡ್ತಾ ಇದ್ದರೆ ಮುಗೀತು” ಎಂದಿದ್ದಳು. ಅಪ್ಪ ಅದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳದೇ “ನಿನ್ನೆ ತೆಗೆದಿಟ್ಟು ಕೊಡೆಗಳನ್ನೆಲ್ಲ ಹೊರಗಿಡು. ನಾಳೆಯಿಂದ ಬೇಕಾಗುತ್ತಲ್ಲ’ ಎಂದು ಮಾತನ್ನು ಬೇರೆಡೆಗೆ ಹೊರಳಿಸಿದ್ದ.

“ಈಗಿನಿಂದಲೇ ಮಳೆ ಸುರಿಯಲಿ’ ಎಂದುಕೊಳ್ಳುತ್ತಲೇ ಹಾಸಿಗೆಯಿಂದ ಏಳುತ್ತಿದ್ದೆವು. ಮಳೆಗಾಲವಲ್ಲವೇ? ಹೇಗಿದ್ದರೂ ಮೋಡ ಸದಾ ಮುಸುಕಿರುತ್ತಿತ್ತು. ಮಳೆಗೆ ಮನಸ್ಸು ಬರಬೇಕಿತ್ತಷ್ಟೇ. ಹಲ್ಲುಜ್ಜಿ ಮುಖ ತೊಳೆಯುವಾಗಲೂ ಕಾಣುತ್ತಿದ್ದುದು ಹೊರಗಿನ ಅಂಗಳವನ್ನೇ. ಮಳೆ ಆರಂಭವಾಗಿದ್ದರೆ ಸಂತೋಷ. ಸ್ನಾನ ಮುಗಿಸಿ ಬಂದಾಗಲೂ ಮಳೆ ಶುರುವಾಗಿಲ್ಲವೆಂದರೆ ಬೇಸರವಾಗುತ್ತಿತ್ತು. ಬಿಸಿ ಗಂಜಿ ಊಟ ಮುಗಿಸಿಕೊಂಡು ಏಳುವಾಗ ಸಣ್ಣ ಗುಡುಗಿನ ಶಬ್ದ ಬಂದರೂ “ಇವತ್ತೂ ಮಳೆ ಅನ್ಸುತ್ತೆ. ಶಾಲೆಗೆ ಹೋಗಲೇಬೇಕಾ? ಮಳೆ ಜೋರಾದರೆ ಏನು ಮಾಡೋದು? ನೀನು ಬರ್ತೀಯಾ? ಎಂದು ಅಕ್ಕನಿಗೋ, ಅಮ್ಮನಿಗೋ ಕೇಳುತ್ತಿದ್ದೆವು. ಅವಳು ಇಲ್ಲ, ಕೆಲಸ ಇದೆ ಎಂದೇನಾದರೂ ಹೇಳಿದರೆ “ಹಾಗಾದರೆ ಶಾಲೆಗೆ ಹೋಗೋಲ್ಲ” ಎಂದು ಪೂರ್ಣ ವಿರಾಮ ಇಡುತ್ತಿದ್ದೆವು. ಕೆಲವೊಮ್ಮೆ ನಮಗೆ ಸಹಕರಿಸುವಂತೆ ಅಂಗಳದಲ್ಲಿ ಮಳೆಯ ಸದ್ದೂ ಜೋರಾಗುತ್ತಿತ್ತು.

ಶಾಲೆ ಇಲ್ಲದ ಹೊತ್ತು ಕಳೆಯೋದು ಹೇಗೆ? ಪಕ್ಕದ ಮನೆಯ ಗೆಳೆಯರೊಂದಿಗೆ ಸೇರಿ ನೋಟ್‌ ಪುಸ್ತಕದ ಹಾಳೆ ಹರಿದು ದೋಣಿ ಮಾಡಿ ಬಿಡುತ್ತಿದ್ದೆವು. ಅದು ಒಂದಿಷ್ಟು ದೂರ ಹೋಗಿ ನಿಂತ ಮೇಲೆ ಮುಖ ಪೆಚ್ಚು ಮಾಡಿಕೊಂಡು ನಿಲ್ಲುತ್ತಿದ್ದೆವು. ಇದನ್ನೆಲ್ಲ ಗಮನಿಸುತ್ತಿದ್ದ ಅಮ್ಮ ಒಮ್ಮೆ, “ಹೋಗಿ ಓದಿಕೊಳ್ಳಿ. ಶಾಲೆಗೆ ರಜೆ ಹಾಕಿದ್ದು ಮಳೆಯಲ್ಲಿ ಆಡಲಿಕ್ಕಲ್ಲ” ಎಂದು ಹೇಳುತ್ತಿದ್ದಳು. ಆಯಿತೆಂದು ಒಪ್ಪಿಕೊಳ್ಳುತ್ತಿದ್ದ ನಮ್ಮ ಪುಸ್ತಕದ ಮತ್ತೆರಡು ಹಾಳೆಗಳು ದೋಣಿಗಳ ಅವತಾರ ಪಡೆದು ನೀರಿಗಿಳಿಯುತ್ತಿದ್ದವು. ಅವುಗಳಿಗೂ ಮಳೆಯಲ್ಲಿ ನೆನೆಯುವ ಆಸೆ. ನೆನೆದೂ ಅವು ಮುಳುಗಿದರೆ ನಾವು ನೆನೆದೂ ನೆನೆದೂ ಮನೆಯೊಳಗೆ ಬಂದು ಅಮ್ಮನ ಬೈಗುಳದಲ್ಲಿ ಮುಳುಗುತ್ತಿದ್ದೆವು!.

ಬೃಹತ್ತಾದ ಕಲ್ಲಿನ ಬೆಟ್ಟ. ಸುತ್ತಲೆಲ್ಲ ಅಲ್ಲಲ್ಲಿ ಸಣ್ಣ ಪುಟ್ಟ ಗಿಡಗಳು. ಬಿಸಿಲು ನೆತ್ತಿಗೇರಿ ಇಡೀ ವಾತಾವರಣವೇ ಕಾದ ಕಾವಲಿಯ ಮೇಲಿನಂತಾಗಿತ್ತು. ಈಗ ಒಂದೆರಡು ಹನಿಗಳು ಮಳೆ ಬಂದರೆ ಎಂದು ಬೆಟ್ಟ ನೆನಪಿಸಿಕೊಂಡಿತು. ಪಕ್ಕದಲ್ಲಿದ್ದ ಒಂದು ಗಿಡ ಬೆಟ್ಟವನ್ನು ಕುರಿತು, “ಕೆಲವು ಹನಿಗಳು ಬಂದರೆ ನನಗೇ ಸಾಕಾಗುವುದಿಲ್ಲ. ನಿನಗೆಲ್ಲಿ ಸಾಕು?” ಎಂದು ಕೇಳಿತು. ಅದಕ್ಕೆ ಬೆಟ್ಟ, ಆ ಹನಿಗಳು ನನಗಲ್ಲ, ನಿಮಗೇ ಎಂದಿತು. ಅಷ್ಟರಲ್ಲಿ ಮಳೆಯೂ ಆಗಮಿಸಿತು. ಸುರಿಯುವ ಮೊದಲು ಬೆಟ್ಟಕ್ಕೆ “ಅವುಗಳ (ಗಿಡಗಳ) ಮೇಲೆ ನಾನು ಸುರಿದರೆ ನಿನಗೇನು ಲಾಭ?” ಎಂದು ಕೇಳಿತು. ಅದಕ್ಕೆ ಪೂರಕವಾಗಿ ಗಿಡಗಳೂ, “ಹೇಗಿದ್ದರೂ ನಿನಗೆ ಹಸಿವು, ಬಾಯಾರಿಕೆ ಇಲ್ಲವಲ್ಲ? ನಿನ್ನ ಮೇಲೆ ಮಳೆ ಸುರಿದರೂ ವ್ಯರ್ಥವೇ’ ಎಂದಿತು. ಅದಕ್ಕೆ ಬೆಟ್ಟವೂ, ಅದಕ್ಕೇ ನಿಮ್ಮ ಮೇಲೆ ಸುರಿಯಲಿ ಎಂದದ್ದು. ಆದರೆ ಮಳೆ ಬೀಸುವಾಗ ಬರುವ ತಂಪಿನ ಗಾಳಿ ನನಗಿರಲಿ, ಹನಿಗಳು ನಿಮಗಿರಲಿ” ಎಂದಿತು. ಮಳೆಗೆ ಖುಷಿಯಾಗಿ ಸುರಿಯತೊಡಗಿತು. ಬೆಟ್ಟದ ಮೇಲೂ ಬಿದ್ದ ನೀರು ಗಿಡದ ಬುಡದತ್ತ ಹರಿಯಿತು.

ಮಹಾನ್‌ ಸಂಗೀತಗಾರ ತಾನ್‌ಸೇನ್‌ ರಾಗಗಳಿಂದಲೇ ದೀಪವನ್ನೂ ಉರಿಸುತ್ತಿದ್ದ, ಮಳೆಯನ್ನೂ ಸುರಿಸುತ್ತಿದ್ದನಂತೆ. ಅವನೊಬ್ಬ ಅಪ್ರತಿಮ ಸಂಗೀತಗಾರನಾಗಿದ್ದ. ಅವನ ಸಾಧನೆ ಬಗೆಗಿನ ಪ್ರಶಂಸೆ ಕೇಳಿ ರಾಜ ಅಕ್ಬರ್‌ ತನ್ನ ಆಸ್ಥಾನಕ್ಕೆ ಕರೆಸಿದನಂತೆ. ತಾನ್‌ಸೇನ್‌ನ ಸಂಗೀತವನ್ನು ಕೇಳಿ ಸಂಭ್ರಮಿಸಿದ ಅಕ್ಬರ್‌ ಹತ್ತಾರು ಉಡುಗೊರೆಗಳನ್ನು ಕೊಟ್ಟನಂತೆ. ಇವೆಲ್ಲವನ್ನೂ ಕಂಡ ಆಸ್ಥಾನದ ಇತರ ವಿದ್ವಾಂಸರು ತಾನ್‌ಸೇನ್‌ ಇನ್ನಷ್ಟು ದಿನ ಇಲ್ಲೇ ಇದ್ದರೆ ನಮಗೆ ಉಳಿಗಾಲವಿಲ್ಲ ಎಂದು ಯೋಚಿಸಿ ಒಂದು ಉಪಾಯ ಮಾಡಿದರಂತೆ. ಅವರಾಗಿಯೇ ತಾನ್‌ ಸೇನ್‌ ತನ್ನ ರಾಗಗಳಿಂದಲೇ ದೀಪವನ್ನೂ ಬೆಳಗಿಸುತ್ತಾನೆ, ಮಳೆಯನ್ನೂ ಸುರಿಸುತ್ತಾನೆ ಎಂದು ವದಂತಿ ಹಬ್ಬಿಸಿದರಂತೆ.

ಇದನ್ನು ಕೇಳಿ ಉಲ್ಲಸಿತನಾದ ಅಕ್ಬರ್‌ , ಆ ಮಹಾಗಳಿಗೆಯನ್ನು ಅನುಭವಿಸಲು ಸಿದ್ಧನಾಗಿ ತಾನ್‌ಸೇನ್‌ನ ಸಂಗೀತ ಕಛೇರಿಗೆ ದಿನ ನಿಗದಿ ಮಾಡಿದನಂತೆ. ಇದನ್ನು ಕೇಳಿ ತಾನ್‌ಸೇನ್‌ ದಿಗಿಲುಗೊಂಡನಾದರೂ ರಾಜನ ಆಸೆಯನ್ನು ಧಿಕ್ಕರಿಸುವಂತಿಲ್ಲ ಎಂದುಕೊಂದು ಒಂದಿಷ್ಟು ಕಾಲಾವಕಾಶ ಕೇಳಿದನಂತೆ. ಈ ಮಧ್ಯೆ ತನ್ನ ಮಗಳಲ್ಲಿ ವಿಷಯವನ್ನು ತಿಳಿಸಿ, ಅವಳಿಗೆ ಮೇಘ ಮಲ್ಹಾರ ರಾಗವನ್ನು ಕಲಿಸಿದನಂತೆ. ಯಾಕೆಂದರೆ ದೀಪಕ್‌ ರಾಗವನ್ನು ಸರಿಯಾಗಿ ಹಾಡಿದರೆ ಬರೀ ದೀಪವಷ್ಟೇ ಹೊತ್ತಿಕೊಳ್ಳುವುದಿಲ್ಲ, ಸುತ್ತಲಿನ ತಾಪಮಾನ ಹೆಚ್ಚಾಗಿ ಬೆಂಕಿ ಹೊತ್ತಿಕೊಳ್ಳುತ್ತದೆ. ಹಾಗಾದರೆ ದೊಡ್ಡ ಅಪಾಯ. ಆಗ ಮಗಳು ಮೇಘ ಮಲ್ಹಾರ ಹಾಡಿದರೆ ಮಳೆ ಸುರಿದು ವಾತಾವರಣ ತಂಪಾಗುತ್ತದೆ ಎಂಬುದು ಲೆಕ್ಕಾಚಾರವಾಗಿತ್ತು.

ಅದರಂತೆ ಆ ದಿನವೂ ಬಂದಿತು. ಪ್ರತ್ಯೇಕವಾದ ವೇದಿಕೆಯಲ್ಲಿ ಕಛೇರಿಯೂ ಆರಂಭವಾಯಿತು. ತಾನ್‌ಸೇನ್‌ ದೀಪಕ್‌ ರಾಗವನ್ನು ಹಾಡತೊಡಗಿದ. ದೀಪಗಳು ಹೊತ್ತಿದವು. ಜತೆಗೆ ಸುತ್ತಲಿನ ತಾಪಮಾನವೂ ಹೆಚ್ಚತೊಡಗಿತು. ಒಂದು ಹಂತ ತಲುಪಿದಾಗ ಮಗಳು ಮೇಘ ಮಲ್ಹಾರ ಹಾಡತೊಡಗಿದಳು. ಮಳೆಯೂ ಸುರಿಯತೊಡಗಿತಂತೆ. ಹಾಗಾಗಿ ತಾನ್‌ಸೇನ್‌ ಸಂಗೀತ ಸಾಮ್ರಾಟನೆಂದೇ ಪ್ರಖ್ಯಾತಿ. ಅಕ್ಬರ್‌ ತನ್ನ ಸ್ಥಾನದ ನವರತ್ನಗಳಲ್ಲಿ ತಾನ್‌ಸೇನ್‌ನನ್ನೂ ಒಬ್ಬನೆಂದು ಗೌರವಿಸಿದ್ದನಂತೆ.

ಕೇರಳಕ್ಕೆ ಮುಂಗಾರು ಬಂದಿದೆ. ನಮ್ಮೂರಿನ ಮೆಟ್ಟಿಲಿನ ಬಳಿಯೂ ಬಂದ ಸುದ್ದಿಯಿದೆ. ಮೂರು ದಿನಗಳಷ್ಟು ತಾಪಮಾನ ಈಗಿಲ್ಲ. ಮೋಡ ಮುಸುಕು ಸರಿಸಿ ಸುರಿದರೆ ಮುಂಗಾರು ಶುರು. ಆ ಕ್ಷಣಗಳೂ ಇನ್ನೇನೂ ಬಂದು ಬಿಡುತ್ತವೆ. ಸಂಗೀತಕ್ಕೆ ಸಮಾಧಾನಿಸುವ ಗುಣವಿರುವುದು ದಿಟ. ಅದರಲ್ಲಿ ಅನುಮಾನವೂ ಇಲ್ಲ, ಶಕ್ಯವೂ ಸಲ್ಲ. ಅದಕ್ಕೆ ಸಾವಿರಾರು ಉದಾಹರಣೆಗಳಿವೆ. ಈ ಬಾರಿ ಮತ್ತೆ ಪ್ರಯತ್ನಿಸೋಣ. ಮಳೆ ರಾಗಗಳನ್ನು ಹಚ್ಚಿಕೊಂಡು ಕುಳಿತುಕೊಳ್ಳೋಣ ಒಂದಷ್ಟು ಹೊತ್ತು. ರಾಗಗಳನ್ನು ಆಸ್ವಾದಿಸೋಣ. ಅಷ್ಟರಲ್ಲಿ ಮಳೆಯೂ ಬರತೊಡಗುತ್ತದೆ. ಒಳಗೆ ಮಳೆ ರಾಗದ ಆಲಾಪನೆ. ಹೊರಗೆ ಮಳೆಯದ್ದೇ ಆಲಾಪನೆ. ಎರಡೂ ಸಂಗೀತವೇ. ತಲೆದೂಗೋಣ, ಮನಸಾರೆ ನೆನೆಯೋಣ “ಮಳೆಗಳಲ್ಲಿ”.

-ಅರವಿಂದ ನಾವಡ

ಟಾಪ್ ನ್ಯೂಸ್

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.