ರೊಮ್ಯಾಂಟಿಕ್ ಆ್ಯಕ್ಷನ್ ‘ಲವ್..ಲಿ’ ಹಾಡು ಬಂತು
Team Udayavani, Jun 13, 2023, 12:56 PM IST
ನಟ ವಸಿಷ್ಠ ಸಿಂಹ ಅಭಿನಯದ ರೊಮ್ಯಾಂಟಿಕ್ ಆ್ಯಕ್ಷನ್ ಕಥಾಹಂದರದ “ಲವ್ ಲಿ’ ಸಿನಿಮಾ ಬಿಡುಗಡೆಗೆ ತಯಾರಾಗುತ್ತಿದೆ. ಈಗಾಗಲೇ ಸದ್ದಿಲ್ಲದೆ “ಲವ್ ಲಿ’ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ನಡೆಸುತ್ತಿರುವ ಚಿತ್ರತಂಡ, ಸಿನಿಮಾದ ಹಾಡನ್ನು ಬಿಡುಗಡೆ ಮಾಡುವ ಮೂಲಕ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.
ಇತ್ತೀಚೆಗೆ ನಡೆದ “ಲವ್ ಲಿ’ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದ ನಟ ಕಂ ನಿರ್ದೇಶಕ ರವಿಚಂದ್ರನ್, ಉಪೇಂದ್ರ, ನೆನಪಿರಲಿ ಪ್ರೇಮ್, ನಟಿಯರಾದ ಪ್ರಿಯಾಂಕಾ ಉಪೇಂದ್ರ, ಹರಿಪ್ರಿಯಾ ಮೊದಲಾದವರು ಸಿನಿಮಾದ ಹಾಡನ್ನು ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ನಾಯಕ ನಟ ವಸಿಷ್ಠ ಸಿಂಹ, “ಹೊಸಥರದ ಸಿನಿಮಾ ಮಾಡಬೇಕು ಎಂಬ ಕನಸನ್ನು ಇಟ್ಟುಕೊಂಡು ಬಹುತೇಕ ಹೊಸಬರೇ ಸೇರಿಕೊಂಡು ಮಾಡಿರುವ ಸಿನಿಮಾವಿದು. ರೌಡಿಸಂ, ಲವ್, ಆ್ಯಕ್ಷನ್, ಸೆಂಟಿಮೆಂಟ್ ಎಲ್ಲವೂ ಈ ಸಿನಿಮಾದ ಕಥೆಯಲ್ಲಿದೆ. ತುಂಬ ಚೆನ್ನಾಗಿ ಸಿನಿಮಾ ಮೂಡಿ ಬರುತ್ತಿದ್ದು, ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗಲಿದೆ. ಸಿನಿಮಾದ ಟೈಟಲ್ಲೇ ಹೇಳುವಂತೆ, ಸಿನಿಮಾ ಕೂಡ “ಲವ್ ಲೀ’ ಆಗಿಯೇ ಬಂದಿದೆ’ ಎಂಬ ಭರವಸೆ ವ್ಯಕ್ತಪಡಿಸಿದರು.
ನಾಯಕಿ ಸ್ಟೆಫಿ ಪಟೇಲ್ ಮಾತನಾಡಿ, “ಇದು ಕನ್ನಡದಲ್ಲಿ ನನಗೆ ಮೊದಲ ಸಿನಿಮಾ. ತುಂಬಾ ವೃತ್ತಿಪರ ತಂಡದ ಜೊತೆ ಕೆಲಸ ಮಾಡಿದ ಅನುಭವ ಈ ಸಿನಿಮಾದಲ್ಲಿ ಸಿಕ್ಕಿದೆ. ಸಾಮಾನ್ಯವಾಗಿ ಹುಡುಗರು ಪ್ರೀತಿಸುವಂತೆ ಹುಡುಗಿಯರ ಹಿಂದೆ ಬೀಳುತ್ತಾರೆ. ಆದರೆ ಈ ಸಿನಿಮಾದಲ್ಲಿ ನನ್ನನ್ನು ಪ್ರೀತಿಸುವಂತೆ ಹುಡುಗನ ಹಿಂದೆ ಬೀಳುತ್ತೇನೆ. ಅದು ಹೇಗೆ ಎನ್ನುವುದನ್ನು ಸಿನಿಮಾದಲ್ಲೇ ನೋಡಬೇಕು. ಮೊದಲ ಕನ್ನಡ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇದೆ’ ಎಂದರು.
“ಅಭುವನಸ ಕ್ರಿಯೇಶನ್ಸ್’ ಬ್ಯಾನರಿನಲ್ಲಿ ರವೀಂದ್ರ ಕುಮಾರ್ ಬಂಡವಾಳ ಹೂಡಿ ನಿರ್ಮಿಸುತ್ತಿರುವ “ಲವ್ ಲಿ’ ಸಿನಿಮಾಕ್ಕೆ ಯುವ ಪ್ರತಿಭೆ ಚೇತನ್ ಕೇಶವ್ ನಿರ್ದೇಶನ ಮಾಡುತ್ತಿದ್ದಾರೆ. “ಲವ್ ಲಿ’ ಸಿನಿಮಾದಲ್ಲಿ ನಾಯಕ ವಸಿಷ್ಠ ಸಿಂಹ ಅವರಿಗೆ ಮುಂಬೈ ಬೆಡಗಿ ಸ್ಟೆಫಿ ಪಟೇಲ್ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಅಚ್ಯುತ ಕುಮಾರ್, ದತ್ತಣ್ಣ, ಸಮೀಕ್ಷಾ, ಮಾಳವಿಕಾ ಮೊದಲಾದವರು “ಲವ್ ಲಿ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ಅಶ್ವಿನ್ ಕೆನಡಿ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದು, ಕೆ. ಕಲ್ಯಾಣ್ ಸಾಹಿತ್ಯವಿದೆ. ಆಡಿಯೋ ಬಿಡುಗಡೆ ವೇಳೆ ಹಾಜರಿದ್ದ ಚಿತ್ರದ ನಿರ್ದೇಶಕ ಚೇತನ್ ಕೇಶವ್, ಇತರ ಕಲಾವಿದರು ಮತ್ತು ತಂತ್ರಜ್ಞರು ಸಿನಿಮಾದ ಅನುಭವಗಳನ್ನು ಹಂಚಿಕೊಂಡರು. ಸದ್ಯ ಆಡಿಯೋ ಬಿಡುಗಡೆ ಮೂಲಕ “ಲವ್ ಲಿ’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ಆಗಸ್ಟ್ ವೇಳೆಗೆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.