ದಿಗ್ಗಜರ ವಿದಾಯದ ಬಳಿಕ…; ಭಾರತದ ಭವಿಷ್ಯದ ಟೆಸ್ಟ್ ತಂಡ ಹೀಗೆ ಇರುತ್ತದೆ..
ಕೀರ್ತನ್ ಶೆಟ್ಟಿ ಬೋಳ, Jun 15, 2023, 6:04 PM IST
ಪರಿವರ್ತನೆ ಜಗದ ನಿಯಮ. ಕ್ರಿಕೆಟ್ ಲೋಕದಲ್ಲಿ ಹಲವು ತಂಡಗಳು ಪರವರ್ತನೆ ಸಮಯದಲ್ಲಿ ಎಡವಿ ತಮ್ಮ ಛಾಪು ಕಳೆದುಕೊಂಡ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಬ್ರಿಯಾನ್ ಲಾರ, ಚಂದ್ರಪಾಲ್, ರಾಮ್ ನರೇಶ್ ಸರವಣ್ ಅವರಂತ ಬಲಾಢ್ಯರನ್ನು ಕಳೆದುಕೊಂಡ ವಿಂಡೀಸ್ ನ ಟೆಸ್ಟ್ ತಂಡ ಸದ್ಯ ಹೇಗಿದೆ ಗೊತ್ತೇ ಇದೆ. ಜಯವರ್ಧನೆ, ಮುರಳೀಧರನ್, ಸಂಗಕ್ಕರ, ದಿಲ್ಶನ್ ರಂತಹ ಆಟಗಾರರ ವಿದಾಯದ ಬಳಿಕ ಹಳೆ ಚಾರ್ಮಿಗೆ ಮರಳಲು ಶ್ರೀ ಲಂಕಾ ತಂಡವು ಹೆಣಗಾಡುತ್ತಿದೆ.
ಟಿ20 ಕ್ರಿಕೆಟ್ ಕೂಟದ ಸಂತೆಯಲ್ಲಿ ಕಳೆದು ಹೋಗುತ್ತಿರುವ ಕ್ರಿಕೆಟ್ ಲೋಕವು ತನ್ನ ಮೂಲ ಮಾದರಿಯಾದ ಟೆಸ್ಟ್ ಕ್ರಿಕೆಟ್ ನ್ನು ಇನ್ನೂ ಬೆಳೆಸಬೇಕಾದರೆ ಭಾರತದಂತಹ ತಂಡಗಳ ಪ್ರದರ್ಶನ ಅತೀ ಮುಖ್ಯ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಸೋತ ಬಳಿಕ ಭಾರತ ಟೆಸ್ಟ್ ತಂಡದಲ್ಲಿ ಬದಲಾವಣೆ ಆಗಬೇಕು ಎಂಬ ಕೂಗು ಜೋರಾಗಿದೆ. ಇದರ ಹೊರತಾಗಿಯೂ ಇನ್ನು ಕೆಲವೇ ವರ್ಷಗಳಲ್ಲಿ ಟೀಂ ಇಂಡಿಯಾ ದೊಡ್ಡ ಬದಲಾವಣೆಗೆ ತೆರೆದುಕೊಳ್ಳಬೇಕಾದ ಅನಿವಾರ್ಯತೆಯಿದೆ. ಅದಕ್ಕೆ ಕಾರಣ ಈಗಿರುವ ಪ್ರಮುಖ ಆಟಗಾರರ ವಯಸ್ಸು.
ತಂಡದ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಅಶ್ವಿನ್, ರವಿ ಜಡೇಜಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್ ಸದ್ಯ 34-35-36ರ ವಯಸ್ಸಿನವರು. ಇನ್ನು ಕೆಲವೇ ವರ್ಷಗಳಲ್ಲಿ ಇವರು ಕ್ರಿಕೆಟ್ ಗೆ ವಿದಾಯ ಹೇಳುವವರು. ಈ ದೊಡ್ಡ ದಿಗ್ಗಜ ಗುಂಪು ವಿದಾಯ ಹೇಳಿದರೆ ತಂಡ ಹೊಸ ಹರಿವಿಗೆ ತೆರೆದುಕೊಳ್ಳಲೇಬೇಕು. ಇಲ್ಲಿ ಎಡವಟ್ಟಾಗದಂತೆ ನೋಡಿಕೊಳ್ಳಬೇಕು. ಯಾಕೆಂದರೆ ವಿಂಡೀಸ್, ಲಂಕಾದ ಉದಾಹರಣೆ ನಮ್ಮ ಕಣ್ಣ ಮುಂದಿದೆ.
ಭಾರತದ ಬೆಂಚ್ ಸ್ಟ್ರೆಂತ್ ಬಲಿಷ್ಠವಾಗಿದೆ. ನಿಯಮಿತ ಓವರ್ ಮಾದರಿಯಲ್ಲಿ ಈ ಬೆಂಚ್ ಸ್ಟ್ರೆಂಚ್ ನ ಪ್ರಯೋಗವೂ ನಡೆದಿದೆ. ಆದರೆ ಟೆಸ್ಟ್ ಮಾದರಿಯಲ್ಲಿ ಇನ್ನಷ್ಟೇ ಆಗಬೇಕಿದೆ. ಅದು ಸುಲಭ ಸಾಧ್ಯವೂ ಅಲ್ಲ. ಹಾಗಾದರೆ ಭಾರತದ ಭವಿಷ್ಯದ ಟೆಸ್ಟ್ ತಂಡ ಹೇಗಿರಲಿದೆ ಎನ್ನುವ ಬಗ್ಗೆ ಒಂದು ನೋಟ ಇಲ್ಲಿದೆ.
ಅಗ್ರ ಕ್ರಮಾಂಕ
ಕಳೆದೆರಡು ವರ್ಷಗಳಿಂದ ತಂಡದಲ್ಲಿರುವ ಶುಭ್ಮನ್ ಗಿಲ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಅಲ್ಲದೆ ತನ್ನ ಬ್ಯಾಟಿಂಗ್ ಶೈಲಿ ಮತ್ತು ಕಲಾತ್ಮಕ ಆಟದಿಂದ ಭಾರತ ತಂಡದ ಭವಿಷ್ಯ ಎಂದು ದಿಗ್ಗಜರಿಂದಲೇ ಕರೆಯಲ್ಪಟ್ಟವರು. ತನ್ನ ಆಟವನ್ನು ಮುಂದುವರಿಸಿದರೆ ಗಿಲ್ ಮುಂದಿನ ಹಲವು ವರ್ಷಗಳ ಕಾಲ ಭಾರತ ತಂಡದಲ್ಲಿ ಗಟ್ಟಿಯಾಗಿ ನೆಲೆಯೂರುವುದು ಪಕ್ಕ. ಗಿಲ್ ಮುಂದಿನ ದಿನಗಳಲ್ಲಿ ಟೀಂ ಇಂಡಿಯಾ ನಾಯಕರಾದರೂ ಅದು ಅಚ್ಚರಿ ಏನಿಲ್ಲ.
ಗಿಲ್ ಜತೆಗೆ ಸದ್ಯ ರೋಹಿತ್ ಆರಂಭಿಕರಾಗಿ ಆಡುತ್ತಿದ್ದಾರೆ. ರೋಹಿತ್ ಬಳಿಕ ಮೊದಲ ನೋಟ ಕೆಎಲ್ ರಾಹುಲ್ ಕಡೆಗೆ ಹರಿಸುವುದು ಸಾಮಾನ್ಯ. 30 ವರ್ಷದ ರಾಹುಲ್ ತಂಡದ ಒಳಗೆ ಹೊರಗೆ ಹಾರುತ್ತಲೇ ಇದ್ದಾರೆ. ಅನುಭವಿ ಆಟಗಾರನ ಮೊರೆ ಹೋಗಬೇಕಾದರೆ 47 ಟೆಸ್ಟ್ ಅನುಭವಿ ರಾಹುಲ್ ಮೊದಲ ಆಯ್ಕೆ. ಉಳಿದಂತೆ ಕರ್ನಾಟಕ ಬ್ಯಾಟರ್ ಮಯಾಂಕ್ ಅಗರ್ವಾಲ್ ಕೂಡಾ ಇದ್ದಾರೆ. ಆದರೆ ಅವರಿಗೆ ಈಗಲೇ 32 ವರ್ಷ. ಸದ್ಯ ಅವರೂ ಫಾರ್ಮ್ ನಲ್ಲಿಲ್ಲ.
ಇವರಿಬ್ಬರಲ್ಲದೆ 23 ವರ್ಷದ ಪೃಥ್ವಿ ಶಾ ಇದ್ದಾರೆ. ಆದರೆ ಕಠಿಣ ಸ್ವರೂಪದ ಆಟಕ್ಕೆ ಬೇಕಾದ ಟೆಕ್ನಿಕ್ ನಲ್ಲಿ ಅವರ ಕೊರತೆ ಮತ್ತು ಇತರ ಕಾರಣಗಳು ಅವರನ್ನು ಆಯ್ಕೆಯಿಂದ ದೂರ ಇಡಲಾಗುತ್ತಿದೆ. ಉಳಿದಂತೆ 27 ವರ್ಷದ ಅಭಿಮನ್ಯು ಈಶ್ವರನ್ ಮತ್ತು 32 ವರ್ಷದ ಪ್ರಿಯಾಂಕ್ ಪಾಂಚಾಲ್ ಹಲವು ವರ್ಷಗಳಿಂದ ಬಾಗಿಲು ತಟ್ಟುತ್ತಿದ್ದಾರೆ.
ಉಳಿದಂತೆ 21 ವರ್ಷದ ಯಶಸ್ವಿ ಜೈಸ್ವಾಲ್ ಐಪಿಎಲ್ ಮಾತ್ರವಲ್ಲದೆ ದೇಶಿಯ ಕೂಟದಲ್ಲೂ ತಮ್ಮ ಪ್ರದರ್ಶನ ತೋರಿದ್ದಾರೆ. ಅವರೂ ಮುಂದಿನ ದಿನಗಳಲ್ಲಿ ಕಠಿಣ ಸ್ಪರ್ಧೆ ಒಡ್ಡಲಿದ್ದಾರೆ.
ಚೇತೇಶ್ವರ ಪೂಜಾರ ಅವರ ಬಳಿಕ ಮೂರನೇ ಕ್ರಮಾಂಕದಲ್ಲಿ ಗಿಲ್ ಕೂಡಾ ಆಡಬಹುದು. 2021ರಲ್ಲಿ ಗಿಲ್ ಒಮ್ಮೆ ಮೂರನೇ ಕ್ರಮಾಂಕದಲ್ಲಿ ಆಡಿದ್ದರು. ಅಲ್ಲದೆ 29 ವರ್ಷದ ಅನುಭವಿ ಹನುಮ ವಿಹಾರಿ ಕೂಡಾ ಸ್ಪರ್ಧೆಯಲ್ಲಿದ್ದು, ಅವರೂ ಪೂಜಾರ ಕ್ರಮಾಂಕದಲ್ಲಿ ಆಡಬಹುದು. ಜೈಸ್ವಾಲ್ ಅವರನ್ನು ಇಲ್ಲಿ ಪ್ರಯೋಗ ಮಾಡಬಹುದು.
ಮಧ್ಯಮ ಕ್ರಮಾಂಕ
ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಜಾಗ ತುಂಬಬಲ್ಲ ಸರಿಯಾದ ಆಟಗಾರನೆಂದರೆ ಶ್ರೇಯಸ್ ಅಯ್ಯರ್. 28 ವರ್ಷದ ಅಯ್ಯರ್ ಈಗಾಗಲೇ ಟೆಸ್ಟ್ ಕೌಶಲ್ಯ ಪ್ರದರ್ಶಿಸಿದ್ದಾರೆ. ಫಿಟ್ ನೆಸ್ ಕಾಯ್ದುಕೊಂಡರೆ ಅಯ್ಯರ್ ನಾಯಕ ಸ್ಥಾನದ ಸ್ಪರ್ಧಿಯೂ ಹೌದು.
ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್ ಅವರು ಮುಂದಿನ ದಿನಗಳಲ್ಲಿ ಟೆಸ್ಟ್ ತಂಡಕ್ಕೆ ಅನಿವಾರ್ಯವಾಗಬಹುದು. ಬಾಜ್ ಬಾಲ್ ತಂತ್ರ ಅನುಸರಿಸಿ ಇಂಗ್ಲೆಂಡ್ ತಂಡ ಯಶಸ್ಸು ಗಳಿಸಿದ ಬಳಿಕ ಇತರ ತಂಡಗಳೂ ಈ ತಂತ್ರದ ಮೊರೆ ಹೋಗಬಹುದು. ಆ ಸಮಯದಲ್ಲಿ ಸೂರ್ಯ ಸರಿಯಾದ ಆಟಗಾರನಾಗುತ್ತಾರೆ. ರಹಾನೆ ಸ್ಥಾನವನ್ನು ಸೂರ್ಯ ತುಂಬಬಹುದು.
ಅಲ್ಲದೆ ಮತ್ತೊಬ್ಬ ಮುಂಬೈ ಆಟಗಾರ ಸರ್ಫರಾಜ್ ಖಾನ್ ಕೂಡಾ ಸತತವಾಗಿ ದೇಶಿಯ ಕ್ರಿಕೆಟ್ ನಲ್ಲಿ ತನ್ನ ಪ್ರದರ್ಶನದ ಮೂಲಕ ಸದ್ದು ಮಾಡುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ ಕೂಡಾ ಕೆಲವೇ ಸಮಯದಲ್ಲಿ ತಂಡ ಸೇರಬಹುದು. 29 ವರ್ಷದ ರಜತ್ ಪಟಿದಾರ್ ಕೂಡಾ ಸ್ಪರ್ಧೆಯಲ್ಲಿದ್ದಾರೆ.
ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೆ ಟೆಸ್ಟ್ ಆಡುತ್ತಾರಾ ಎನ್ನುವುದು ಯಕ್ಷ ಪ್ರಶ್ನೆ. ಡಬ್ಲ್ಯೂ ಟಿಸಿ ಫೈನಲ್ ಆಡಲು ಹಾರ್ದಿಕ್ ಗೆ ಬುಲಾವ್ ನೀಡಲಾಗಿತ್ತಾದರೂ ಅವರು ಆಡಲಿಲ್ಲ. ಒಂದು ವೇಳೆ ಹಾರ್ದಿಕ್ ಟೆಸ್ಟ್ ಗೆ ಮರಳಿದರೆ ಆಲ್ ರೌಂಡರ್ ಕೋಟಾದಲ್ಲಿ ಅವರು ಆಡಲಿದ್ದಾರೆ. 31 ವರ್ಷದ ಶಾರ್ದೂಲ್ ತಂಡದಲ್ಲಿ ಇನ್ನು ಕೆಲವು ವರ್ಷ ಮುಂದುವರಿಲಿದ್ದಾರೆ.
ವಿಕೆಟ್ ಕೀಪರ್
ಸದ್ಯ ಅಪಘಾತದಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ರಿಷಭ್ ಪಂತ್ ಮತ್ತೆ ತಂಡ ಸೇರಲಿದ್ದಾರೆ. ಸದ್ಯ ಕೀಪರ್ ಆಗಿರುವ ಭರತ್ ಅವರ ಕೀಪಿಂಗ್ ಟೆಕ್ನಿಕ್ ಚೆನ್ನಾಗಿದ್ದರೂ ಬ್ಯಾಟಿಂಗ್ ಅಷ್ಟಕ್ಕಷ್ಟೇ. ಹೀಗಾಗಿ ಪಂತ್ ಬಂದಾಗ ಭರತ್ ಜಾಗ ತೆರವು ಮಾಡಬೇಕು. ಪಂತ್ ಅವರನ್ನು ಭವಿಷ್ಯದ ಟೆಸ್ಟ್ ನಾಯಕನ ದೃಷ್ಟಿಯಲ್ಲಿಯೂ ನೋಡಲಾಗುತ್ತಿದೆ. ಇಶಾನ್ ಕಿಶನ್ ಕೂಡಾ ಆಯ್ಕೆಗೆ ಲಭ್ಯವಿದ್ದಾರೆ.
ಸ್ಪಿನ್ನರ್ ಗಳು
ಸದ್ಯ ಟೀಂ ಇಂಡಿಯಾ ಸ್ಪಿನ್ನರ್ ಗಳಾದ ಅಶ್ವಿನ್ ಮತ್ತು ಜಡೇಜಾ ಮುಂದಿನ ಕೆಲವೇ ವರ್ಷಗಳಲ್ಲಿ ವಿದಾಯ ಹೇಳಲಿದ್ದಾರೆ. ಮುಂದಿನ ಸ್ಪಿನ್ನರ್ ಆಯ್ಕೆ ಬಂದಾಗ ಈಗ ಮೂರನೇ ಸ್ಪಿನ್ನರ್ ಆಗಿರುವ ಅಕ್ಷರ್ ಪಟೇಲ್ ಮುಂಚೂಣಿಯಲ್ಲಿ ಇದ್ದಾರೆ. ಬ್ಯಾಟಿಂಗ್ ನಲ್ಲೂ ಅದ್ಭುತ ಸುಧಾರಣೆ ಕಂಡಿರುವ ಎಡಗೈ ಸ್ಪಿನ್ನರ್ ಅಕ್ಷರ್ ಅವರು ಜಡೇಜಾ ಸ್ಥಾನ ತುಂಬುವುದು ಬಹುತೇಕ ಖಚಿತ.
ಆದರೆ ಅಶ್ವಿನ್ ಸ್ಥಾನ ತುಂಬುವ ಆಟಗಾರರು ಸದ್ಯ ಭಾರತದ ಬತ್ತಳಿಕೆಯಲ್ಲಿಲ್ಲ. ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮದ್, ಜಯಂತ್ ಯಾದವ್ ಇದ್ದರೂ ಅವರು ಅಶ್ವಿನ್ ಗೆ ಹೋಲಿಕೆಯಲ್ಲ. ಈಗಾಗಲೇ ಟೆಸ್ಟ್ ಆಡಿರುವ 28 ವರ್ಷದ ಕುಲದೀಪ್ ಯಾದವ್ ಮತ್ತೆ ಟೆಸ್ಟ್ ನಲ್ಲಿ ಮಿಂಚಬಹುದು. ಅಶ್ವಿನ್- ಜಡ್ಡು ಜೋಡಿಯ ಅನುಪಸ್ಥಿತಿ ಚೈನಾಮನ್ ಸ್ಪಿನ್ನರ್ ಗೆ ಅವಕಾಶದ ಬಾಗಿಲು ತೆರೆಯಬಹುದು. ಇವರಲ್ಲದೆ 23 ವರ್ಷದ ರಾಹುಲ್ ಚಾಹರ್, 29 ವರ್ಷದ ಸೌರಭ್ ಕುಮಾರ್, 25 ವರ್ಷದ ಶಮ್ಸ್ ಮಲಾನಿ ಮತ್ತು ಕುಮಾರ್ ಕಾರ್ತಿಕೇಯ ಕೂಡಾ ಮುಂದಿನ ದಿನಗಳಲ್ಲಿ ಪರಿಗಣಿಸಬಹುದಾದ ಆಯ್ಕೆಗಳು.
ವೇಗದ ದಾಳಿ
ಇತ್ತೀಚಿನ ದಿನಗಳಲ್ಲಿ ಭಾರತ ಟೆಸ್ಟ್ ಕ್ರಿಕೆಟ್ ನಲ್ಲಿ ಪ್ರಗತಿ ಸಾಧಿಸಲು ವೇಗದ ಬೌಲರ್ ಗಳ ಕೊಡುಗೆ ಬಹುಮೂಲ್ಯ. ಸದ್ಯ ತಂಡದಲ್ಲಿರುವ ಮೊಹಮ್ಮದ್ ಸಿರಾಜ್ (29 ವರ್ಷ) ಮತ್ತು ಜಸ್ಪ್ರೀತ್ ಬುಮ್ರಾ (29 ವರ್ಷ) ಮುಂದಿನ ಹಲವು ವರ್ಷ ತಂಡದಲ್ಲಿ ಆಡಬಹುದು. ಬುಮ್ರಾ ಅವರ ಫಿಟ್ ನೆಸ್ ಮುಖ್ಯವಾಗುತ್ತದೆ.
31 ವರ್ಷದ ಜಯದೇವ್ ಉನಾದ್ಕತ್ ತಂಡದಲ್ಲಿದ್ದು, ಇನ್ನೂ ಹಲವು ವರ್ಷ ರೇಸ್ ನಲ್ಲಿರಲಿದ್ದಾರೆ. ಉಳಿದಂತೆ 27 ವರ್ಷದ ಪ್ರಸಿಧ್ ಕೃಷ್ಣ, 31 ವರ್ಷದ ನಟರಾಜನ್, 26 ವರ್ಷದ ಕುಲದೀಪ್ ಸೆನ್ ಆಯ್ಕೆಗಾರರ ಗಮನ ಸೆಳೆಯುವವರು.
ಸದ್ಯ ಕೌಂಟಿ ಆಡುತ್ತಿರುವ 23 ವರ್ಷದ ಅರ್ಶದೀಪ್ ಸಿಂಗ್ ಮುಂದಿನ ದಿನಗಳಲ್ಲಿ ಭಾರತದ ತಂಡಕ್ಕೆ ಪ್ರಮುಖ ಆಸ್ತಿಯಾಗಬಲ್ಲ ಬೌಲರ್. ಎಡಗೈ ವೇಗಿ ಮತ್ತು ಇನ್ನೂ ಯುವ ಬೌಲರ್ ಎನ್ನುವುದು ಅರ್ಶದೀಪ್ ಗೆ ಪ್ಲಸ್.
ಉಳಿದಂತೆ ಕರ್ನಾಟಕದ ವಿದ್ವತ್ ಕಾವೇರಪ್ಪ, ವಿಜಯ್ ಕುಮಾರ್ ವೈಶಾಖ್ ಮುಂದಿನ ದಿನಗಳಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಬಹುದು. ಆವೇಶ್ ಖಾನ್, ಚೇತನ್ ಸಕಾರಿಯಾ, ಇಶಾನ್ ಪೊರೆಲ್, ಮೊಹ್ಸಿನ್ ಖಾನ್ … ಹೀಗೆ ವೇಗಿಗಳ ಪಟ್ಟಿ ಬೇಳೆಯುತ್ತಲೇ ಹೋಗುತ್ತದೆ.
ಕೀರ್ತನ್ ಶೆಟ್ಟಿ ಬೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.