England-Australia: ಇಂದಿನಿಂದ ಆ್ಯಶಸ್
Team Udayavani, Jun 16, 2023, 7:27 AM IST
ಎಜ್‌ಬಾಸ್ಟನ್: ಬಹುನಿರೀಕ್ಷಿತ 2023ರ ಆ್ಯಶಸ್ ಸರಣಿ ಜೂ. 16ರಿಂದ ಆರಂಭವಾಗಲಿದ್ದು ಇಂಗ್ಲೆಂಡ್ ತಂಡವು ಎಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ. ವಿಶ್ವದ ಬಲಿಷ್ಠ ತಂಡಗಳಾಗಿರುವ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ತಂಡದ ಆಟಗಾರರು ಮುಂದಿನ ಒಂದೂವರೆ ತಿಂಗಳು ಭರ್ಜರಿ ಆಟದ ಪ್ರದರ್ಶನ ನೀಡಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ.
ಡಬ್ಲ್ಯುಟಿಸಿ ಫೈನಲ್‌ನಲ್ಲಿ ಭಾರತವನ್ನು 209 ರನ್ನುಗಳಿಂದ ಸೋಲಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಪ್ರಶಸ್ತಿ ಗೆದ್ದಿರುವ ಆಸ್ಟ್ರೇಲಿಯ ತಂಡವು ಆ್ಯಶಸ್ ಸರಣಿಯಲ್ಲೂ ಅದ್ಭುತ ಪ್ರದರ್ಶನ ನೀಡಲು ಉತ್ಸುಕವಾಗಿದೆ. 2017ರ ಬಳಿಕ ಆ್ಯಶಸ್ ಸರಣಿಯನ್ನು ಉಳಿಸಿಕೊಂಡಿರುವ ಆಸ್ಟ್ರೇಲಿಯ ತಂಡವು ಉತ್ತಮ ಫಾರ್ಮ್ನಲ್ಲಿದೆ.
ಇದೇ ವೇಳೆ ಇಂಗ್ಲೆಂಡ್ ತಂಡವು ಕಳೆದೊಂದು ವರ್ಷದಿಂದ ಆಕ್ರಮಣಕಾರಿ ಆಟದ ಪ್ರದರ್ಶನ ನೀಡುತ್ತ ಬಂದಿದೆ. ಹೊಸ ನಾಯಕ ಬೆನ್ ಸ್ಟೋಕ್ಸ್ ಮತ್ತು ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಅವರ ಮಾರ್ಗದರ್ಶನದಲ್ಲಿ ತಂಡ ಉತ್ತಮ ಸಾಧನೆಗೈಯಲು ಹಾತೊರೆಯುತ್ತಿದೆ. 2022ರ ಜೂನ್ ಬಳಿಕ ತಂಡ ಯಾವುದೇ ಸರಣಿಯನ್ನು ಕಳೆದುಕೊಂಡಿಲ್ಲ. ಕಳೆದ 13 ಟೆಸ್ಟ್ ಪಂದ್ಯಗಳಲ್ಲಿ 11ರಲ್ಲಿ ಇಂಗ್ಲೆಂಡ್ ಜಯ ಸಾಧಿಸಿದ ಸಾಧನೆ ಮಾಡಿದೆ.
ಇಂಗ್ಲೆಂಡ್ ತಂಡವು ಈಗಾಗಲೇ ಆಟವಾಡುವ ತಂಡವನ್ನು ಪ್ರಕಟಿಸಿದ್ದು ಜೇಮ್ಸ್ ಆ್ಯಂಡರ್ಸನ್ ತಂಡಕ್ಕೆ ಮರಳಿದ್ದಾರೆ. ಒಲಿ ರಾಬಿನ್ಸನ್ ಮತ್ತು ಮೊಯಿನ್ ಅಲಿ ಅವರನ್ನು ಕೂಡ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆಸ್ಟ್ರೇಲಿಯ ತಂಡವು ಡಬ್ಲ್ಯುಟಿಸಿ ಫೈನಲ್‌ನಲ್ಲಿ ಆಡಿದ ಬಳಕವನ್ನೇ ಉಳಿಸಿಕೊಳ್ಳುವ ನಿರೀಕ್ಷೆಯಿದೆ.
ಎಜ್‌ಬಾಸ್ಟನ್‌ನಲ್ಲಿ ಒಟ್ಟಾರೆ 56 ಪಂದ್ಯಗಳು ನಡೆದಿವೆ. ಮೊದಲು ಬೌಲಿಂಗ್ ಮಾಡಿದ ತಂಡಗಳು 21 ಪಂದ್ಯಗಳಲ್ಲಿ ಗೆದ್ದಿವೆ. ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 306 ಆಗಿದೆ. ಟೆಸ್ಟ್‌ನ ಮೂರನೇ ಮತ್ತು ಐದನೇ ದಿನ ಮಳೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.