ಮಾನಸಿಕ ಒತ್ತಡ ನಿಯಂತ್ರಣಕ್ಕೆ ಯೋಗದಲ್ಲಿ ಇದೆ ಮದ್ದು…
Team Udayavani, Jun 17, 2023, 7:35 AM IST
ಸಾಮಾನ್ಯವಾಗಿ ಯೋಗಕ್ಕೆ ಸಂಬಂಧಪಟ್ಟ ಗ್ರಂಥಗಳನ್ನು ಅವಲೋಕಿಸಿದಾಗ ತಿಳಿದುಬರುವ ಸಂಗತಿ ಎಂದರೆ, ಮುಖ್ಯವಾಗಿ 3 ಗ್ರಂಥಗಳನ್ನು ಆಧಾರವಾಗಿ ತೆಗೆದುಕೊಂಡು ಈ ವಿಷಯವನ್ನು ವಿವರಿಸಬಹುದು.
1.ಯೋಗಃ ಚಿತ್ತವೃತ್ತಿ ನಿರೋಧಃ.. ಪತಂಜಲಿ ಸೂತ್ರ.
2.ಯೋಗಃ ಮನಃ ಪ್ರಶಮನ ಉಪಾಯಃ… ಯೋಗವಾಸಿಷ್ಠ
3.ಯೋಗಃ ಸಮತ್ವಂ ಉಚ್ಯತೆ.. ಭಗವದ್ಗೀತ.
ಈ 3 ಗ್ರಂಥಗಳು ಯೋಗಕ್ಕೆ ಸಂಬಂಧಪಟ್ಟಂತೆ ಪ್ರಸಿದ್ಧಿ ಪಡೆದಿವೆ. ಪ್ರಮುಖವಾಗಿ ಮನಸ್ಸನ್ನೇ ಆಧಾರವಾಗಿಟ್ಟುಕೊಂಡು ತಿಳಿಸಲು ಹೊರಟಿವೆ. ಯೋಗಾಸನಗಳು ದೇಹವನ್ನು ಸಮತೋಲನಗೊಳಿಸಿದರೆ, ಪ್ರಾಣಾಯಾಮ -ಧ್ಯಾನ ಮನಸ್ಸಿನ ಸಮತೋಲನ ಗೊಳಿಸುತ್ತದೆ. ಯೋಗವೆಂದರೆ ಜೋಡಿಸು, ಕೂಡಿಸು ಎಂದು ಅರ್ಥ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ, ಮನಸ್ಸಿನ ಸಮತೋಲನ ಹೇಗೆ ಸಾಧ್ಯವೆಂದು ತಿಳಿದುಕೊಳ್ಳೋಣ.
ನಕಾರಾತ್ಮಕ ಸಂಗತಿಗಳು ನಮ್ಮ ಸಮಾಧಾನವನ್ನು ಹರಣಗೊಳಿಸುವುದರ ಜತೆಗೆ ನಿದ್ದೆಯನ್ನೂ ಭಂಗಗೊಳಿಸುತ್ತದೆ. ಹೀಗೆ ನಿರಂತರವಾಗಿ ಸಾಗಿದಾಗ ಮನಸ್ಸಿನಲ್ಲಿ ಮೂಡಿದ ನಕಾರಾತ್ಮಕ ಭಾವನೆಗಳು ದೇಹದಲ್ಲಿ ವ್ಯಾಧಿಯಾಗಿ ಪರಿವರ್ತನೆ ಪಡೆಯುತ್ತದೆ.
ಇಂತಹ ವ್ಯಾಧಿಗಳು ವೈಜ್ಞಾನಿಕ ಚಿಕಿತ್ಸೆಯಿಂದ ಶರೀರದ ಆರೋಗ್ಯ ನಿರ್ವಹಣೆಗೊಳಿಸುತ್ತದೆ. ಆದರೆ ಸಂಪೂ ರ್ಣ ವಾಗಿ ವ್ಯಾಧಿಯನ್ನು ವಾಸಿ ಮಾಡಲು ಆಗುವುದಿಲ್ಲ. ಜೀವನಪೂರ್ತಿ ಔಷಧಗಳಿಂದ ಕಾಯಿಲೆಗಳನ್ನು ನಿರ್ವಹಿಸಬೇಕಾಗುತ್ತದೆ.
ಉದಾಹರಣೆ: ರಕ್ತದೊತ್ತಡ, ಮಧುಮೇಹ, ಮಂಡಿ ನೋವು, ಬೆನ್ನು ನೋವು, ಅಜೀರ್ಣತೆ, ಮಲಬದ್ಧತೆ, ಉಸಿರಾಟದ ತೊಂದರೆ, ಕೊಲೆಸ್ಟ್ರಾಲ್, ಥೈರಾಯ್ಡ್ ಇಂತಹ ಅನೇಕ ಕಾಯಿಲೆಗಳು ಜೀವನಪೂರ್ತಿ ನಮ್ಮನ್ನು ಬಾಧಿಸುತ್ತವೆ.
ಇಂತಹ ಕಾಯಿಲೆಗಳಿಗೆ ಇಂದಿನ ನಮ್ಮ ಜೀವನ ಶೈಲಿಯಾದ ಮನಸ್ಸಿನ ಒತ್ತಡವೇ ಕಾರಣ. ಈ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯವಾದ ಸಂಗತಿ ಕೂಡ, ಮನಸ್ಸಿನ ಒತ್ತಡ ಹೆಚ್ಚಿಸುತ್ತದೆ. ಇಂತಹ ಅಸಮತೋಲನ ಮನಸ್ಸನ್ನು ಸಮತೋಲನಗೊಳಿಸಲು ಯೋಗ ಸೂತ್ರಗಳು ಸಹಕಾರಿ.
ನಕಾರಾತ್ಮಕ ಯೋಚನೆಗಳನ್ನು ನಿರಸ್ತ್ರಗೊಳಿಸಲು ಪತಂಜಲಿ ಯೋಗಸೂತ್ರ, ಮನಸ್ಸನ್ನು ಸಮಾಧಾನಗೊಳಿಸುವ ತಂತ್ರ ಯೋಗವಾಸಿಷ್ಠ, ಮನಸ್ಸನ್ನು ಸಮತ್ವಗೊಳಿಸುವ ಭಗವದ್ಗೀತೆ ಈ ಮೂರು ಸೂತ್ರಗಳು ಮನಸ್ಸಿನ ಸ್ವಸ್ಥತೆ ಹೆಚ್ಚಿಸುತ್ತದೆ. ವಿಜ್ಞಾನ ಲೋಕಕ್ಕೆ ಸವಾಲಾಗಿರುವ ಈ ಒತ್ತಡದ ನಿರ್ವಹಣೆಗೆ ಈ ಯೋಗ ಸೂತ್ರಗಳು ಕಂಡುಕೊಂಡ ಅತ್ಯಂತ ಸರಳ ಉಪಾಯ. ಉಸಿರಾಟದ ಈ ಸೂತ್ರ ಮನಸ್ಸನ್ನು ಆರೋಗ್ಯ ಪೂರ್ಣವಾಗಿ ಸಾಧಿಸಲು ಸ್ವಾಮಿ ವಿವೇಕಾನಂದ ಯೋಗ ಸಂಸ್ಥೆ ಸಾಬೀತುಗೊಳಿಸಿದೆ.
3 ಕಾಲಮಾನಗಳ ಒತ್ತಡಗಳು
ಒತ್ತಡ ಸಾಮಾನ್ಯ ಕ್ರಿಯೆ ಎಂದು ಅನೇಕ ಜನರಿಗೆ ಭಾಸವಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಲು ಈ ಒತ್ತಡವನ್ನು 3 ಭಾಗಗಳಾಗಿ ವಿಂಗಡಿಸಬಹುದು.
1.ವರ್ತಮಾನ ಕಾಲದ ಒತ್ತಡ: ನಾವು ಕೆಲಸ ಮಾಡುವ ಕಾರ್ಯಕ್ಷೇತ್ರ, ಕುಟುಂಬದ ಜತೆ ವ್ಯವಹಾರ, ಬಂಧುಗಳು, ಸಮಾಜದೊಡನೆ ಮಾಡುವ ವ್ಯವಹಾರ. ಈ ಹಂತದಲ್ಲಿ ನಮಗೆ ವಿರುದ್ಧವಾದ ಘಟನೆಗಳು ಆದಾಗ ಒತ್ತಡ ಅನಿವಾರ್ಯವೆಂದು ತಿಳಿಯುತ್ತೇವೆ. ಉದಾ: ಸಿಗ್ನಲ್‌ನಲ್ಲಿ ಸಿಕ್ಕಿಹಾಕಿಕೊಂಡಾಗ, ಟ್ರಾಫಿಕ್ ಜಾಮ್ ಆದಾಗ ಒತ್ತಡ ಸಹಜ ಎನ್ನುತ್ತೇವೆ. ಆದರೆ ಆ ಸಮಯದಲ್ಲಿ ಅದನ್ನು ನಿರ್ವಹಿಸುವ ರೀತಿ ನಮಗೆ ತಿಳಿಯದೆ ಒತ್ತಡವೇ ಸಹಜ ಜೀವನ ಎನ್ನುತ್ತೇವೆ. ಕೆಲಸ ಮಾಡುವ ಕಾರ್ಯಕ್ಷೇತ್ರದಲ್ಲಿ ನಮ್ಮ ಬಾಸ್ ನಮ್ಮ ಮಿತಿಗೆ ಮೀರಿ ಕೆಲಸ ವಹಿಸಿದರೆ, ನಮ್ಮ ದಕ್ಷತೆ ಗುರುತಿಸದೆ ಹೋದರೆ, ನಮ್ಮ ಸುತ್ತಮುತ್ತಲಿನ ಸಹಪಾಠಿಗಳು ನಮ್ಮ ಸ್ವಭಾವಕ್ಕೆ ವಿರುದ್ಧವಾಗಿ ವರ್ತಿಸಿದರೆ. ಈ ಎಲ್ಲ ಸಂಗತಿಗಳಲ್ಲಿ ಒತ್ತಡ ಸಹಜವಾಗಿರುತ್ತದೆ.
2. ಗತಕಾಲದ ಒತ್ತಡ: ನಿನ್ನೆ ನಡೆದ ಘಟನೆ ಅಥವಾ ಒಂದು ವಾರದ ಹಿಂದಿನ ಘಟನೆ ಅಥವಾ ಒಂದು ತಿಂಗಳ ಹಿಂದೆ ಅಥವಾ ಒಂದು ಸಂವತ್ಸರದ ಹಿಂದೆ ನಡೆದ ಘಟನೆಯನ್ನು ಮುಂನ್ನೆಲೆಗೆ ತಂದು ಆ ವಿಚಾರವನ್ನು ಪುನರಾವೃತ್ತಿ ಮಾಡುತ್ತಾ ಮನಸ್ಸು ಒತ್ತಡಕ್ಕೆ ಒಳಗಾಗುತ್ತದೆ.
3.ಭವಿಷ್ಯತ್ ಕಾಲದ ಒತ್ತಡ: ಭವಿಷ್ಯತ್ ಕಾಲವನ್ನು ಕಲ್ಪಿಸಿಕೊಂಡು ಒತ್ತಡಕ್ಕೆ ಒಳಗಾಗುವುದು ಸಹಜ ಆಗಿದೆ. ಉದಾ: ಕೊರೊನಾ ಸಂದರ್ಭದಲ್ಲಿ ಮನೆಯಲ್ಲಿ ಕುಳಿತು ಮುಂದಿನ ಜೀವನದ ಗತಿಯನ್ನು ಕಲ್ಪಿಸಿಕೊಂಡು ಅತಿಯಾದ ಒತ್ತಡಕ್ಕೆ ಒಳಗಾಗಿ ಗಾಬರಿಯಾಗಿ, ಭಯಭೀತರಾಗಿರುವುದು ಸಾಬೀತಾಗಿದೆ.
3 ಕಾಲದಲ್ಲಿ ಮನುಷ್ಯನನ್ನು ಬಾಧಿಸುವ ಈ ಒತ್ತಡಕ್ಕೆ ಈ ಯೋಗ ಗ್ರಂಥಗಳಿಂದ ಪರಿಹಾರ ಪಡೆದುಕೊಳ್ಳಬಹುದು. ರಾಮಾಯಣ ಕಾಲದಲ್ಲಿ ರಾಮನು ಚಿಂತಾಕ್ರಾಂತನಾಗಿ ಇದ್ದಾಗ, ವಸಿಷ್ಠ ಮುನಿಗಳು ಪ್ರಾಣಾಯಾಮದ ಸಕಲ ವಿದ್ಯೆಯನ್ನು ಕಲಿಸಿ ಒತ್ತಡದಿಂದ ಹೊರಗೆ ಕರೆದುಕೊಂಡು ಬಂದಿರುವುದು ಯೋಗವಾಸಿಷ್ಠ ಗ್ರಂಥದಲ್ಲಿ ಕಾಣುತ್ತೇವೆ. ಮಹಾಭಾರತ ಕಾಲದಲ್ಲಿ ಅರ್ಜುನನನ್ನು ಆ ದುಃಖದಿಂದ ಹೊರಗೆ ಕರೆದುಕೊಂಡು ಬಂದು ಯುದ್ಧಕ್ಕೆ ಪ್ರೇರೇಪಿಸಿರುವುದನ್ನು ಭಗವದ್ಗೀತೆಯಲ್ಲಿ ಕಾಣುತ್ತೇವೆ.
ಈ ರೀತಿಯಾಗಿ ಗತಕಾಲ, ಭವಿಷ್ಯತ್ ಕಾಲ, ವರ್ತಮಾನ ಕಾಲದ ಒತ್ತಡವನ್ನು ಪತಂಜಲಿ ಸೂತ್ರದ ಅಪರಿಗ್ರಹವೆಂಬ ಯಮವನ್ನು ಹಿಡಿದು ಗತಕಾಲದ ಒತ್ತಡವನ್ನು ನಿವಾರಿಸಬಹುದು. ಈಶ್ವರ ಪ್ರಣಿಧಾನಿ ಎಂಬ ನಿಯಮ ಹಿಡಿದು ಭವಿಷ್ಯದ ದುಃಖ ನಿವಾರಿಸಬಹುದು. ಪ್ರಾಣಾಯಾಮದಿಂದ ವರ್ತಮಾನದ ಒತ್ತಡ ನಿವಾರಿಸಬಹುದು. ಈ ರೀತಿ ಅನೇಕ ವಿಧದ ಪ್ರಾಣಾಯಾಮಗಳ ಅಭ್ಯಾಸದಿಂದ ಶಾರೀರಿಕ ಕಾಯಿಲೆಗಳನ್ನು ನಿವಾರಿಸಬಹುದು. ಯೋಗಾಸನಗಳನ್ನು ಮಾಡುವಾಗ ಆಸನದ ಭಂಗಿಯ ಕಡೆ ಹೆಚ್ಚು ಗಮನ ಕೊಡದೆ ಉಸಿರಾಟದೊಂದಿಗೆ ಶಾರೀರಿಕ ವ್ಯಾಯಾಮಗಳನ್ನು ಮಾಡಿದಾಗ ಶಾರೀರಿಕ ಕಾಯಿಲೆಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಸರಳವಾದ ಉಸಿರಾಟದೊಡಗಿನ ವ್ಯಾಯಾಮ ದೇಹದಲ್ಲಿನ ಅನೇಕ ಕಾಯಿಲೆಗಳನ್ನು ನಿಯಂತ್ರಿಸುತ್ತದೆ. ಇನ್ನು ಮಾನಸಿಕ ಆರೋಗ್ಯವನ್ನು “ನಾದ ಅನುಸಂಧಾನ’, “ಆವರ್ತನ ಧ್ಯಾನ’, “ನಾಡಿಶೋಧನ” ಎನ್ನುವ ವಿವಿಧ ಪ್ರಾಣಾಯಾಮಗಳು ಮನಸ್ಸಿನ ಪ್ರಸನ್ನತೆಯನ್ನು ಹೆಚ್ಚಿಸುತ್ತದೆ.
ಕರಿಬಸಪ್ಪ, ಸ್ವಾಮಿ ವಿವೇಕಾನಂದ ಯೋಗ ವಿ.ವಿ., ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.