Karnataka: ಅನ್ನಭಾಗ್ಯ ಜಾರಿ ಶತಸಿದ್ಧ- CM ಸಿದ್ದರಾಮಯ್ಯ
ಅಕ್ಕಿ ಜತೆಗೆ ರಾಗಿ, ಜೋಳ ವಿತರಣೆಗೂ ಚಿಂತನೆ
Team Udayavani, Jun 20, 2023, 7:51 AM IST
ಬೆಂಗಳೂರು: ಬಡವರಿಗೆ ಅಕ್ಕಿ ನೀಡುವ ವಿಷಯದಲ್ಲಿ ಯಾರು ಎಷ್ಟೇ ರಾಜಕಾರಣ ಮಾಡಿ ದರೂ ನಮ್ಮ ಸರಕಾರ ಅನ್ನಭಾಗ್ಯ ಯೋಜನೆ ಜಾರಿ
ಗೊಳಿಸುವುದು ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗೃಹ ಕಚೇರಿ “ಕೃಷ್ಣಾ’ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 1ರಿಂದ ರಾಜ್ಯದ ಜನರಿಗೆ ಅಕ್ಕಿಯನ್ನು ನೀಡಲು ಸರಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ಕೇಂದ್ರದಲ್ಲಿ ಅಕ್ಕಿಯ ದಾಸ್ತಾನು ಲಭ್ಯವಿದೆ. ಅವರು ರಾಜ್ಯಕ್ಕೆ ಅಕ್ಕಿ ನೀಡಲು ಮನಸ್ಸು ಮಾಡಬೇಕಿದೆ. ಎಂಎಸ್‌ಪಿ ಮೂಲಕ ಅಕ್ಕಿ ಖರೀದಿಸುವುದಕ್ಕೆ ನಾವು ಸಿದ್ಧರಿದ್ದೇವೆ. ಕೇಂದ್ರ ಸರಕಾರ ಬಡವರಿಗೆ ಅಕ್ಕಿ ಕೊಡುವ ವಿಚಾರದಲ್ಲೂ ರಾಜಕಾರಣ ಹಾಗೂದ್ವೇಷ ಮಾಡುತ್ತಿದೆ. ಕೇಂದ್ರ ಸರಕಾರವೇನೂ ಭತ್ತ ಬೆಳೆಯಲು ಜಮೀನು ಇಟ್ಟುಕೊಂಡಿಲ್ಲ. ಅವರೂ ರಾಜ್ಯಗಳಿಂದಲೇ ಅಕ್ಕಿಯನ್ನು ಪಡೆದಿದ್ಧಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಷನಲ್ ಕೋ-ಆಪರೇಟಿವ್ ಕನ್ಸೂಮರ್ಸ್ ಫೆಡರೇಷನ್ (ಎನ್‌ಸಿಸಿಎಫ್), ನ್ಯಾಷನಲ್ ಅಗ್ರಿಕಲ್ಚರಲ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ (ನಾಫೆಡ್ ) ಹಾಗೂ ಕೇಂದ್ರೀಯ ಭಂಡಾರ ಸಂಸ್ಥೆಗಳು ಭಾರತ ಸರಕಾರಕ್ಕೆ ಸೇರಿದ್ದು, ಈ ಮೂರು ಸಂಸ್ಥಗಳಿಂದ ಅಕ್ಕಿ ಖರೀದಿಸಲು ದರಪಟ್ಟಿ ಕರೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಎಫ್ಸಿಐನಿಂದ ಪಡೆಯುವುದಕ್ಕೆ 34 ರೂ. ಅಕ್ಕಿ, 2.60 ರೂ. ಸಾಗಾಣಿಕೆ ವೆಚ್ಚ ಸೇರಿ ಒಂದು ಕೆ.ಜಿ. ಅಕ್ಕಿಗೆ ಒಟ್ಟು 36.40 ರೂ. ವೆಚ್ಚವಾಗುತ್ತದೆ. ಈ ಮೂರು ಸಂಸ್ಥೆಗಳು ನಮೂದಿಸುವ ದರ, ಸರಬರಾಜು ಮಾಡುವ ಪ್ರಮಾಣಗಳ ವಿವರ ಪಡೆಯಲಾಗು ವುದು. ಟೆಂಡರ್ ಮೂಲಕ ಅಕ್ಕಿ ಪಡೆಯಲೂ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ವಾರ್ಷಿಕ 10,092 ಕೋ. ರೂ.
ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ವಿತರಿಸಲು ಒಂದು ತಿಂಗಳಿಗೆ 840 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ. ವರ್ಷಕ್ಕೆ 10,092 ಕೋಟಿ ರೂ. ಬೇಕಾಗುತ್ತದೆ. ಸರಕಾರ ಈ ವೆಚ್ಚವನ್ನು ಭರಿಸಿ ಅಕ್ಕಿಯನ್ನು ವಿತರಿಸಲು ಸಿದ್ಧವಿದೆ. ಅಕ್ಕಿಯ ದಾಸ್ತಾನು ಲಭ್ಯವಿದ್ದರೂ ಕೇಂದ್ರ ಸರಕಾರ ಅಕ್ಕಿ ನೀಡಲು ಒಪ್ಪುತ್ತಿಲ್ಲ. ರಾಜ್ಯ ಬಿಜೆಪಿ ನಾಯಕರು ಬಡವರಿಗೆ ಅನುಕೂಲವಾಗಲು ಅಕ್ಕಿಯನ್ನು ವಿತರಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಬಹುದಲ್ಲವೇ ಎಂದು ಪ್ರಶ್ನಿಸಿದರು.
ಪಂಜಾಬ್‌ನಿಂದ ಅಕ್ಕಿ ಖರೀದಿ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳು ಚರ್ಚಿಸಿದ್ದಾರೆ. ರಾಜ್ಯ ತಿಳಿಸುವ ದರಕ್ಕೆ ಅಕ್ಕಿ ನೀಡಲು ಪಂಜಾಬ್ ಸರಕಾರದೊಂದಿಗೆ ಮತ್ತೂಮ್ಮೆ ಚರ್ಚಿಸಲಾಗುವುದು. ಆದರೆ ಕೇಂದ್ರ ಸರಕಾರ ನಮ್ಮ ಈ ಯೋಜನೆಗೆ ಸಹಕರಿಸಬೇಕು. ಸಹಕಾರ ಒಕ್ಕೂಟದ ಬಗ್ಗೆ ಪ್ರಧಾನಿ ಮೋದಿ ಪದೇಪದೆ ಹೇಳುತ್ತಾರೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಕೇಂದ್ರ ಸರಕಾರಕ್ಕೆ ತೆರಿಗೆ ಬರುವುದು ರಾಜ್ಯಗಳಿಂದ ಎಂದು ತಿರುಗೇಟು ನೀಡಿದರು.
ಕರ್ನಾಟಕಕ್ಕೆ ನೀರು ಬಿಡಬಾರದೆಂದು ಮಹಾರಾಷ್ಟ್ರದ ರೈತರು ಬ್ಯಾರೇಜ್ ಮುಚ್ಚಿ ಪ್ರತಿಭಟನೆ ಮಾಡುತ್ತಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿನ ರೈತರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದರು.
ಗೊಂದಲವಿಲ್ಲ
ಸರಕಾರ ಐದು ವರ್ಷಗಳ ಅವಧಿ ಮುಗಿಸುತ್ತದೆಯೇ ? ಅಧಿಕಾರ ಹಂಚಿಕೆ ಬಗ್ಗೆ ಗೊಂದಲಗಳಿಲ್ಲವೇ ಮುಂತಾದ ಪ್ರಶ್ನೆಗಳಿಗೆ ಉತ್ತರಿಸಿದ ಸಿಎಂ, ಅಧಿಕಾರ ಹಂಚಿಕೆ ಬಗ್ಗೆ ಗೊಂದಲಗಳು ನಮ್ಮಲ್ಲಿಲ್ಲ ಎಂದು ಸ್ಪಷ್ಟ ಪಡಿಸಿದರು.
ರಾಗಿ-ಜೋಳ ವಿತರಣೆಗೆ ಚಿಂತನೆ
ರಾಜ್ಯದಲ್ಲಿ 6 ತಿಂಗಳವರೆಗೆ ತಲಾ 2 ಕೆ.ಜಿ. ಕೊಡುವಷ್ಟು ಮಾತ್ರ ರಾಗಿ, ಜೋಳ ದಾಸ್ತಾನು ಇದೆ. ಹಳೆ ಮೈಸೂರು ಭಾಗದ ಜನರಿಗೆ 2 ಕೆ.ಜಿ. ರಾಗಿ ಹಾಗೂ ಹೈದರಾಬಾದ್ ಕರ್ನಾಟಕ ಹಾಗೂ ಮುಂಬಯಿ ಕರ್ನಾಟಕದ ಭಾಗದ ಜನರಿಗೆ 2 ಕೆ.ಜಿ. ಜೋಳ ನೀಡಬಹುದು. ಇನ್ನುಳಿದ 3 ಕೆ.ಜಿ. ಅಕ್ಕಿಯನ್ನು ರಾಜ್ಯದ ಜನರಿಗೆ ನೀಡಬೇಕಾಗುತ್ತದೆ ಎಂದು ಪರ್ಯಾಯ ಸಾಧ್ಯತೆಗಳ ಬಗ್ಗೆ ತಿಳಿಸಿದರು.
ಹೇಳಿದ ಸಮಯಕ್ಕೇ ಅಕ್ಕಿ ನೀಡುತ್ತೇವೆ
ಹುಬ್ಬಳ್ಳಿ: ಕೇಂದ್ರ ಸರಕಾರ ಅಕ್ಕಿ ನೀಡದಿದ್ದರೂ ಬೇರೆ ರಾಜ್ಯಗಳಿಂದ ಖರೀದಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಬಹುತೇಕ ನಾವು ಹೇಳಿದ ಸಮಯದಲ್ಲೇ ಜನರಿಗೆ ಅಕ್ಕಿ ಕೊಡುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಯಾವುದೇ ಗ್ಯಾರಂಟಿ ಯೋಜನೆಯಲ್ಲೂ ಗೊಂದಲ ಇಲ್ಲ. ಅವು ಸುಮಾರು 60 ಸಾವಿರ ಕೋಟಿ ರೂ. ವೆಚ್ಚದಲ್ಲಿ ಆಗುತ್ತಿರುವ ಕಾರ್ಯಕ್ರಮಗಳು. ಅವುಗಳನ್ನು ಸಮಯಮಿತಿಯಲ್ಲಿ ಅನುಷ್ಠಾನಕ್ಕೆ ತರುತ್ತೇವೆ ಎಂದರು. ಮುಖ್ಯಮಂತ್ರಿ ಚರ್ಚೆ ವಿಚಾರ ಕುರಿತು ಮಾತನಾಡುವುದಿಲ್ಲ. ವಿದ್ಯುತ್ ಬಿಲ್ ಹೆಚ್ಚಳದಿಂದ ಕೈಗಾರಿಕೋದ್ಯಮಿಗಳಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಮುಂದಿನ ದಿನಗಳಲ್ಲಿ ಸರಕಾರ ಗಮನ ಹರಿಸಲಿದೆ ಎಂದರು.
ಅಕ್ಕಿಗಾಗಿ ಪ್ರತಿಭಟನೆ ಅರ್ಥಹೀನ
ಚಿತ್ರದುರ್ಗ: ದೇಶದಲ್ಲಿ ಸಮಗ್ರವಾಗಿ ಏನಾಗಬೇಕು ಎಂಬ ಬಗ್ಗೆ ಮೊದಲು ಯೋಚಿಸಬೇಕು. ಆದರೆ ಗ್ಯಾರಂಟಿ ಮೇಲೆ ಅ ಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಅಕ್ಕಿ ಉತ್ಪಾದನೆ, ಸಂಗ್ರಹ ಎಷ್ಟಿದೆ, ಭವಿಷ್ಯದಲ್ಲಿ ಹೇಗೆ ನಿರ್ವಹಿಸಬೇಕು ಎನ್ನುವ ಯೋಚನೆಯೇ ಇಲ್ಲದೆ ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸರಕಾರ ಮುಂದಿನ ದಿನಗಳಲ್ಲಿ ಎಂತಹ ಸ್ಥಿತಿ ಬರಲಿದೆ, ಹೇಗೆ ನಿಭಾಯಿಸಬೇಕು ಎನ್ನುವ ಲೆಕ್ಕಾಚಾರದಲ್ಲಿ ದಾಸ್ತಾನು ಇಟ್ಟಿರುತ್ತದೆ. ಆದರೆ ಕಾಂಗ್ರೆಸ್ ಅಕ್ಕಿಗಾಗಿ ಪ್ರತಿಭಟನೆಗೆ ಮುಂದಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸಿದ್ಧಾಂತದ ಮೇಲೆ ಅಧಿ ಕಾರಕ್ಕೆ ಬಂದಿಲ್ಲ, ಗ್ಯಾರಂಟಿಗಳ ಮೇಲೆ ಬಂದಿದೆ. ಕೊಟ್ಟಿರುವ ಭರವಸೆಗಳನ್ನು ಪೂರೈಸದಿದ್ದರೆ ಭವಿಷ್ಯದಲ್ಲಿ ನಾಮಾವಶೇಷ ಆಗುತ್ತಾರೆ ಎಂದರು.
ಮಾನವೀಯತೆ ಮರೆತ ಕೇಂದ್ರ ಸರಕಾರ
ಶಿವಮೊಗ್ಗ: ಕೇಂದ್ರ ಹಾಗೂ ರಾಜ್ಯದ ನಡುವೆ ಹೊಂದಾಣಿಕೆ ಇರಬೇಕು. ಆದರೆ ಕೇಂದ್ರ ಸರಕಾರ ಮಾನವೀಯತೆಯನ್ನೇ ಮರೆತಿದೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಂದು ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕೇಳುತ್ತಿರೋದು ಹೊಟ್ಟೆಗೆ ಅನ್ನ ಹೊರತು ಬೇರೇನೂ ಅಲ್ಲ. ಅದಕ್ಕೆ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ. ಈಗ ಬಿಜೆಪಿಯವರು 15 ಕೆ.ಜಿ. ಅಕ್ಕಿ ಕೊಡಿ ಎನ್ನುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು. ನಾವು ಜು.12ರಿಂದ ಅಕ್ಕಿ ಕೊಡುವುದು ಖಚಿತ. ಕೇಂದ್ರಕ್ಕೆ 3 ಲಕ್ಷ ಕೋಟಿ ರೂ.ಯಷ್ಟು ಜಿಎಸ್ಟಿ ತೆರಿಗೆ ರಾಜ್ಯದಿಂದಲೇ ಹೋಗುತ್ತದೆ. ಆದರೆ ಅವರು ನಮಗೆ 50-60 ಸಾವಿರ ಕೋಟಿ ಕೊಡುತ್ತಾರಷ್ಟೇ. ಇಷ್ಟು ಜಿಎಸ್ಟಿ ಪಡೆಯುವಾಗ ಕೇಂದ್ರಕ್ಕೂ ಮಾನವೀಯತೆ ಇರಬೇಕಲ್ವ ಎಂದರು.
ಬ್ರಿಟಿಷ್ ಜನತಾ ಪಾರ್ಟಿ:
ಗ್ಯಾರಂಟಿ ಸರಕಾರ ಉಳಿಯದು ಎಂದು ಬಿಎಸ್‌ವೈ ಹೇಳಿದ್ದಾರೆ. ಆದರೆ ಜೀವಮಾನದಲ್ಲಿ ಯಾವತ್ತಾದರೂ ಕರ್ನಾಟಕದಲ್ಲಿ ಸ್ವಂತ ಶಕ್ತಿ ಮೇಲೆ ಬಿಜೆಪಿಯವರು ಕೆಲಸ ಮಾಡಿದ್ದಾರಾ? ಬಿಜೆಪಿ ಅಂದರೆ ಬ್ಯುಸಿನೆಸ್ ಜನತಾ ಪಾರ್ಟಿ, ಬ್ರಿಟಿಷ್ ಜನತಾ ಪಾರ್ಟಿ. ಇಂತಹ ಬಿಜೆಪಿ ಸರಕಾರ ಬೇಡ ಎಂದು ಜನರೇ ನಿರ್ಧರಿಸಿ ನಮ್ಮನ್ನು
ಅಧಿಕಾರಕ್ಕೇರಿಸಿದ್ದಾರೆ ಎಂದು ಹೇಳಿದರು. ಶಿಕ್ಷಕರ ನೇಮಕಾತಿ ಹಗರಣದ ಬಗ್ಗೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ನಾನು ಮಾತನಾಡು
ವುದಿಲ್ಲ. ನನಗೆ ಮಾಡಲು ಬೇರೆಯದ್ದೇ ಕೆಲಸಗಳಿವೆ ಎಂದರು.
ರಾಜ್ಯ ಸರಕಾರಕ್ಕೆ ತೊಂದರೆ ಕೊಡುವ ಉದ್ದೇಶದಲ್ಲಿ ಬಡವರಿಗೆ ಅಕ್ಕಿ ನೀಡದಿರಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಪುಕ್ಕಟೆಯಾಗಿ ಅಕ್ಕಿ ನೀಡಿ ಎಂದು ನಾವು ಅವರಿಗೆ ಕೇಳಿರಲಿಲ್ಲ. ಭಾರತೀಯ ಆಹಾರ ನಿಗಮದಲ್ಲಿ ರೈತರಿಂದ ದವಸ ಧಾನ್ಯಗಳನ್ನು ಖರೀದಿಸಿ ದಾಸ್ತಾನು ಮಾಡುವ ವ್ಯವಸ್ಥೆ ಇದೆ. ಸದ್ಯ ದಾಸ್ತಾನಿನಲ್ಲಿ ಅಕ್ಕಿ ಇದ್ದು, ಆರಂಭದಲ್ಲಿ ನೀಡಲು ಒಪ್ಪಿದವರು, ಬಳಿಕ ನಿರಾಕರಿಸಿದ್ಧಾರೆ.
-ಡಿ.ಕೆ.ಶಿವಕುಮಾರ್, ಡಿಸಿಎಂ
ಚುನಾವಣೆ ಪೂರ್ವದಲ್ಲಿ ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಈಗ ಷರತ್ತುಗಳನ್ನು ವಿ ಧಿಸುವ ಮೂಲಕ ಪಲಾಯನ ಮಾಡುತ್ತಿದೆ. ಅಕ್ಕಿಗೆ ಸಂಬಂಧಿಸಿದಂತೆ ಕೇಂದ್ರದ ಮೇಲೆ ಗೂಬೆ ಕೂರಿಸಲು ಹೊರಟಿದೆ. ಕೇಂದ್ರ ಸರಕಾರ ಈಗ ಐದು ಕೆಜಿ ಅಕ್ಕಿ ನೀಡುತ್ತಿದೆ. ಇದರ ಜತೆಗೆ ರಾಜ್ಯ 10 ಕೆಜಿ ಅಕ್ಕಿ ಸೇರಿಸಿ 15 ಕೆಜಿ ಅಕ್ಕಿಯನ್ನು ಪ್ರತಿ ವ್ಯಕ್ತಿಗೆ ನೀಡಬೇಕು.
-ಬಿ.ವೈ. ರಾಘವೇಂದ್ರ, ಸಂಸದ
ಬಡವರಿಗೆ 10 ಕೆ.ಜಿ. ಅಕ್ಕಿ ನೀಡಲು ಮುಂದಾದಾಗ ಅಕ್ಕಿ ನೀಡುವುದಿಲ್ಲ ಎನ್ನುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ಎಫ್‌ಸಿಐನಲ್ಲಿ ಸಾಕಷ್ಟು ಅಕ್ಕಿ ಬಳಕೆಯಿಲ್ಲದೆ ಕೊಳೆಯುತ್ತಿದೆ. ಈಗ ದೇಶದಲ್ಲಿ ಯಾವುದೇ ಸಂಕಷ್ಟದ ಸ್ಥಿತಿಯೂ ಇಲ್ಲ. ಮೊದಲು ಅಕ್ಕಿ ಕೊಡಲು ಒಪ್ಪಿ ಕೊನೆ ಕ್ಷಣದಲ್ಲಿ ಯಾಕೆ ಇಲ್ಲ ಎನ್ನುತ್ತಿದೆ ಎಂಬುದಕ್ಕೆ ಪ್ರಧಾನಿ ಮೋದಿ ಉತ್ತರಿಸಬೇಕು.
-ಡಾ| ಶರಣಪ್ರಕಾಶ ಪಾಟೀಲ್, ಸಚಿವ
ಐದು ಕೆಜಿ ಅಕ್ಕಿ ಕೊಡುವುದು ಕೇಂದ್ರ ಸರಕಾರವೆಂದು ಪ್ರಥಮ ಬಾರಿಗೆ ಸತ್ಯ ಹೇಳಿದ್ದಕ್ಕೆ ಸಿದ್ದರಾಮಯ್ಯ ಅವರಿಗೆ ಧನ್ಯವಾದ. ಮೋದಿ ಅವರ 5 ಕೆಜಿಗೆ 10 ಕೆಜಿ ಸೇರಿಸಿ ರಾಜ್ಯ ಸರಕಾರ ಕೊಡಬೇಕು. ಕೇಂದ್ರ ನೀಡುವ ಅಕ್ಕಿಯನ್ನು ಕೊಡಲು ನೀವು ಚುನಾವಣೆ ಗೆದ್ದು ಬರಬೇಕಾ? ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಿ. ಅಕ್ಕಿ ಸಿಗದಿದ್ದರೆ ಫಲಾನುಭವಿಗಳ ಖಾತೆಗೆ ಹಣ ಜಮೆ ಹಾಕಿ.
-ಪ್ರತಾಪ ಸಿಂಹ, ಸಂಸದ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.