ಪ್ರತಿವರ್ಷ 2 ಸಾವಿರ ಎಚ್‌ಐವಿ ಕೇಸು ಹೆಚ್ಚಳ
Team Udayavani, Jun 25, 2023, 3:08 PM IST
ಬೆಂಗಳೂರು: ರಾಜ್ಯದಲ್ಲಿ ಎಚ್‌ಐವಿ ಸೋಂಕಿತರ ಪ್ರಮಾಣವು ಪ್ರತಿ ವರ್ಷ 2 ಸಾವಿರದಷ್ಟು ಏರಿಕೆಯಾಗು ತ್ತಿರು ವುದು ಆತಂಕಕ್ಕೀಡು ಮಾಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಏಡ್ಸ್ ಫ್ರಿವೆನ್‌ಷನ್ ಸೊಸೈಟಿ ಎಚ್‌ಐವಿ ಪರೀಕ್ಷೆ ಹೆಚ್ಚಿಸುವ ಮೂಲಕ ಮಾರಕ ರೋಗ ಕಡಿವಾಣಕ್ಕೆ ಹೊಸ ಯೋಜನೆ ರೂಪಿಸಿದೆ.
ಮಾರಣಾಂತಿಕ ಕಾಯಿಲೆಗಳಲ್ಲಿ ಒಂದಾದ ಎಚ್ ಐವಿ ಸೋಂಕು ನಿಯಂತ್ರಿಸಲು ಸರ್ಕಾರವು ಹಲವಾರು ಯೋಜನೆ ಜಾರಿಗೆ ತಂದರೂ ಸೊಂಕಿಗೆ ತುತ್ತಾಗುವವರ ಸಂಖ್ಯೆ 13,338ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 2020- 21ರಲ್ಲಿ 10,095ರಷ್ಟಿದ್ದ ಎಚ್‌ಐವಿ ಸೋಂಕಿತರು, 2021-22ರಲ್ಲಿ 11,178ಕ್ಕೆ ಹೆಚ್ಚಾಗಿದ್ದಾರೆ. ಜನರಲ್ಲಿ ಅರಿವು ಮೂಡಿಸದಿರುವುದು, ಅಸುರಕ್ಷಿತ ಲೈಂಗಿಕ ಸಂಪರ್ಕಗಳೇ ಎಚ್‌ಐವಿ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂಬುದು ಸಮೀಕ್ಷೆಯಲ್ಲಿ ಗೊತ್ತಾಗಿದೆ. ಇದರ ಬೆನ್ನಲ್ಲೇ ರಾಜ್ಯ ಏಡ್ಸ್ ಫ್ರಿವೆನ್‌ಷನ್ ಸೊಸೈಟಿಯು ಎಚ್ ಐವಿ ಬಗ್ಗೆ ಮುಂಜಾಗ್ರತೆ ವಹಿಸಲು ಸೂಚನೆ ಕೊಟ್ಟಿದೆ.
ಏನಿದು ಹೊಸ ಯೋಜನೆ?: ರಾಜ್ಯ ಏಡ್ಸ್ ಫ್ರಿವೆನ್‌ಷನ್ ಸೊಸೈಟಿಯು ಎಚ್‌ಐವಿ ಪ್ರಮಾಣ ತಗ್ಗಿಸಲು ಹೊಸ ಯೋಜನೆ ಜಾರಿಗೊಳಿಸಿದೆ. ಇದರ ಪ್ರಕಾರ ಲೈಂಗಿಕ ಕಾರ್ಯಕರ್ತೆಯರು, ಟ್ರಕ್ ಚಾಲಕರು, ಮಾದಕ ವ್ಯಸನಿಯರು, ಮಂಗಳಮುಖೀಯರು, ದಿನ ಕೂಲಿ ಕಾರ್ಮಿಕರು ಸೇರಿದಂತೆ ಹೆಚ್ಚಾಗಿ ಅಸುರಕ್ಷಿತ ಲೈಂಗಿಕ ಸಂಪರ್ಕ ಹೊಂದುವ ವರ್ಗದವರನ್ನು ಪಟ್ಟಿಮಾಡಿ ಎಚ್‌ಐವಿ ಪರೀಕ್ಷೆಗೊಳಪಡಿಸಲಾಗುತ್ತಿದೆ. ಈ ವರ್ಗದ ಶೇ.100ರಲ್ಲಿ ಶೇ.90 ಜನರಿಗೆ ಎಚ್‌ಐವಿ ಪರೀಕ್ಷೆಗೊಳಪಡಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಪೈಕಿ ಎಚ್‌ಐವಿ ಪಾಸಿಟಿವ್ ಬಂದವರ ವಿಳಾಸ, ಹಿನ್ನೆಲೆ ಕಲೆ ಹಾಕಿ ಸೂಕ್ತ ಸಲಹೆ ನೀಡಿ ಎಚ್‌ಐವಿ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಇವರಿಗೆ ಎಆರ್‌ಟಿ ಸೆಂಟರ್‌ಗಳಲ್ಲಿ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಿ, ಸಮಯಕ್ಕೆ ಸರಿಯಾಗಿ ಔಷಧ ಪೂರೈಸಿ ಎಚ್‌ಐವಿಯಿಂದ ಅನಾರೋಗ್ಯ ಉಂಟಾಗದಂತೆ ನೋಡಿ ಕೊಳ್ಳಲಾಗುತ್ತಿದೆ. ಈ ಯೋಜನೆಯು ಶೇ.86 ಕಾರ್ಯರೂಪಕ್ಕೆ ಬಂದಿದೆ.
ಎಚ್‌ಐವಿ ಸೋಂಕಿತರಿಗೆ ತಲುಪುತ್ತಿಲ್ಲ ಸೌಲಭ್ಯ: ಎಚ್‌ಐವಿ ಸೋಂಕಿಗೆ ಒಳಗಾದವರಿಗೆ ರಾಜ್ಯದಲ್ಲಿರುವ 71 ಎಆರ್‌ಟಿ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗು ತ್ತಿದೆ. ಆದರೆ, ಈ ಕೇಂದ್ರಗಳಲ್ಲಿ ಶುಚಿತ್ವ, ನರ್ಸ್‌ಗಳು, ಮೆಡಿಸಿನ್ ಕೊರತೆ ಕಾಡುತ್ತಿದೆ. ಸೂಕ್ತ ನಿರ್ವಹಣೆ ಇಲ್ಲ ಎಂಬ ಆರೋಪವಿದೆ. ಹೀಗಾಗಿ ಇಲ್ಲಿ ಚಿಕಿತ್ಸೆ ಪಡೆಯಲು ಜನ ಹಿಂದೇಟು ಹಾಕುತ್ತಿದ್ದಾರೆ. ರಾಜೀವ್ ಗಾಂಧಿ ವಸತಿ ಯೋಜನೆಯಡಿ ವಸತಿ, ಚಿಕಿತ್ಸೆಗೆ ಉಚಿತ ಪ್ರಯಾಣ ಭತ್ಯೆ, ಎಚ್‌ಐವಿ ಸೋಂಕಿತ ವಿದ್ಯಾರ್ಥಿಗಳಿಗೆ ಉಚಿತ ಕಾಲೇಜು ಶಿಕ್ಷಣ, ವಿದ್ಯಾರ್ಥಿ ವೇತನ, ಧನಶ್ರೀ ಯೋಜನೆಯಡಿ 40 ಸಾವಿರ ರೂ. ಸಾಲ, ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಎಲ್ಲ ಆಸ್ಪತ್ರೆಗಳಲ್ಲೂ ಉಚಿತ ಪರೀಕ್ಷೆಗಳು, ಉಚಿತ ರೈಲ್ವೆ ಪ್ರಯಾಣ, ಉಚಿತ ರಕ್ತದ ಸೇವೆಗಳಂತಹ ಹಲವು ಸೌಲಭ್ಯ ಕಲ್ಪಿಸಲಾಗಿದೆ.
ಆದರೆ, ಸೋಂಕಿತರ ಪೈಕಿ ಶೇ.40 ಜನರಿಗೆ ಸೌಲಭ್ಯಗಳು ತಲುಪುತ್ತಿಲ್ಲ. ಉಳಿದ ಶೇ.30 ಜನರಿಗೆ ಈ ಯೋಜನೆಗಳ ಮಾಹಿತಿಯೇ ಇಲ್ಲ. ಶೇ.10 ಜನ ಸೌಲಭ್ಯ ಪಡೆ ಯಲು ಇಚ್ಛಿಸಿಲ್ಲ ಎಂದು ಮೂಲಗಳು ದೃಢಪಡಿಸಿವೆ.
ಯಾವ ಜಿಲ್ಲೆಯಲ್ಲಿ ಅತ್ಯಧಿಕ ಸೋಂಕು ?: ಬೆಂಗಳೂರಿನಲ್ಲಿ 2,242 ರಾಜ್ಯದಲ್ಲೇ ಅತ್ಯಧಿಕ ಎಚ್‌ಐವಿ ಪ್ರಕರಣ ಪತ್ತೆಯಾಗಿದೆ. ಬೆಳಗಾವಿ 1,253, ಬಾಗಲಕೋಟೆ 904, ಮೈಸೂರು 830, ವಿಜಯಪುರ 631, ತುಮಕೂರು 500, ಬಳ್ಳಾರಿ 542, ಧಾರವಾಡ 432, ಹಾಸನ 443, ರಾಯಚೂರು 424, ಕಲಬುರಗಿ 425, ದಕ್ಷಿಣ ಕನ್ನಡ 347, ಕೋಲಾರ 416, ಉಡುಪಿ ಜಿಲ್ಲೆಯಲ್ಲಿ 251ಜನರಲ್ಲಿ ಎಚ್‌ಐವಿ ಸೋಂಕು ಕಂಡು ಬಂದಿದೆ.
ಎಚ್ಚರಿಕೆ ಅಗತ್ಯ ?:
● ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಎಚ್ ಐವಿ ಹರಡಬಹುದು.
● ಸೋಂಕಿತ ವ್ಯಕ್ತಿಯ ಸೂಜಿ, ಸಿರಿಂಜ್ ಬಳಕೆ ಬೇಡ.
● ಸೋಂಕಿತ ವ್ಯಕ್ತಿಯ ರಕ್ತ ಪಡೆಯಬಾರದು.
● ಸೋಂಕುಳ್ಳ ತಾಯಿಯಿಂದ ಮಗುವಿಗೆ ಬರಬಹುದು.
● ಎಚ್‌ವಿ ಸೋಂಕಿತ ಮಾಹಿತಿಗಾಗಿ 1097ಕ್ಕೆ ಕರೆ ಮಾಡಬಹುದು.
ರಾಜ್ಯದಲ್ಲಿ ಎಚ್‌ಐವಿ ನಿಯಂತ್ರಣಕ್ಕೆ ಸರ್ಕಾರವು ಸಾಕಷ್ಟು ಕ್ರಮಕೈಗೊಂಡಿದೆ. ಪರಿಣಾಮ ದೇಶದಲ್ಲಿ ಎಚ್‌ಐವಿ ಸೋಂಕಿತರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದ ಕರ್ನಾಟಕ ಸದ್ಯ 17ನೇ ಸ್ಥಾನದಲ್ಲಿದೆ. ವಿವಿಧ ಯೋಜನೆ ಮೂಲಕ ಎಚ್‌ಐವಿ ನಿಯಂತ್ರಿಸಲಾಗುತ್ತಿದೆ. ●ಡಾ.ವಿ.ರಮೇಶ್ ಚಂದ್ರ ರೆಡ್ಡಿ, ರಾಜ್ಯ ಏಡ್ಸ್ ಪ್ರಿವೆನ್‌ಷ್‌ನ್ ಸೊಸೈಟಿಯ ಅಪರ ಯೋಜನಾ ನಿರ್ದೇಶಕ
– ಅವಿನಾಶ ಮೂಡಂಬಿಕಾನ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.