ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಇನ್ನೂ ಸಿಕ್ಕಿಲ್ಲ ನ್ಯಾಯ
Team Udayavani, Jun 28, 2023, 2:06 PM IST
ಚಾಮರಾಜನಗರ: ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 2021ರ ಮೇ ತಿಂಗಳಲ್ಲಿ ಆಕ್ಸಿಜನ್ ಕೊರತೆಯಿಂದ ಉಂಟಾಗಿದ್ದ ದುರಂತ ಪ್ರಕರಣದ ಮರುತನಿಖೆ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ದೊರಕುವ ಆಶಾಭಾವನೆ ಮೂಡಿಸಿದೆ.
ಮಂಗಳವಾರ ಸಿಎಂ ಆಫ್ ಕರ್ನಾಟಕ ಟ್ವಿಟರ್ ಪುಟದಲ್ಲಿ ಸಿದ್ದರಾಮಯ್ಯ ಅವರು ಮಾಧ್ಯಮ ಹೇಳಿಕೆ ನೀಡಿದ್ದು, ಚಾಮರಾಜನಗರದ ಆಕ್ಸಿಜನ್ ದುರಂತ ಮರುತನಿಖೆ ನಡೆಸಲಾಗುವುದು. ಅಂದಿನ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಅಲ್ಲಿ ಸತ್ತಿರುವುದು ಇಬ್ಬರೇ ಎಂದಿದ್ದರು. ಆದರೆ, ಸತ್ತವರ ಸಂಖ್ಯೆ ಮೂವತ್ತಕ್ಕೂ ಹೆಚ್ಚಿತ್ತು. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಮೃತರ ಕುಟುಂಬಗಳಿಗೆ ನ್ಯಾಯ ಕೊಡಿಸುತ್ತೇವೆ ಎಂದು ತಿಳಿಸಿದ್ದಾರೆ. ಇನ್ನೊಂದೆಡೆ, ಮೈಸೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ತನಿಖೆಯಾಗಬೇಕಿರುವ ಚಾರ್ಜ್ ಫ್ರೇಮ್ ಅನ್ನು ಸಿದ್ಧ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಈ ಬೆಳವಣಿಗೆ. ಅನ್ಯಾಯಕ್ಕೊಳಗಾದ ಸಂತ್ರಸ್ತರ ಕುಟುಂಬಗಳಿಗೆ ಕಗ್ಗತ್ತಲಿನ ನಡುವೆ ಕಂಡಿರುವ ಆಶಾಕಿರಣವಾಗಿದೆ.
2021ರ ಮೇ 2ರ ರಾತ್ರಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್‌ಗಳಿಲ್ಲದೇ ನಾಲ್ಕು ಗಂಟೆಗಳ ಕಾಲ ಆಮ್ಲಜನಕ ಪೂರೈಕೆಯೇ ಸ್ಥಗಿತವಾದ ಸಂದರ್ಭದಲ್ಲಿ ಉಂಟಾದ ದುಷ್ಪರಿಣಾಮದಿಂದ ಒಟ್ಟು 36 ಮಂದಿ ಮೃತಪಟ್ಟಿದ್ದರು. ಜಿಲ್ಲೆಯಲ್ಲಿ ನಡೆದ ದೊಡ್ಡ ದುರಂತಗಳ ಸಾಲಿಗೆ ಈ ಪ್ರಕರಣ ಸೇರಿದ್ದು, ಸೂಕ್ತ ಸಮಯದಲ್ಲಿ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡುವಲ್ಲಿ ಜಿಲ್ಲಾಡಳಿತ ತೋರಿದ ನಿರ್ಲಕ್ಷ್ಯವೇ ಈ ಘೋರ ದುರಂತಕ್ಕೆ ಕಾರಣವಾಗಿತ್ತು.
ಘಟನೆಯ ಕುರಿತು ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿತ್ತು. ಘಟನೆ ನಡೆದು ಎರಡು ವರ್ಷವಾದರೂ ಈ ಘಟನೆಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಹಿಂದಿನ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳ ಲಿಲ್ಲ. ಸಂತ್ರಸ್ತರಿಗೆ ನ್ಯಾಯಯುತ ಪರಿಹಾರವನ್ನೂ ನೀಡಲಿಲ್ಲ. ಇಬ್ಬರೇ ಸತ್ತಿರುವುದು ಎಂದು ಅಂದಿನ ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿಕೆ ನೀಡಿದ್ದರು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್ ಅವರು ಮೃತರ ಮನೆಗಳಿಗೆ ಹೋಗಿ ಸಾಂತ್ವನ ಕೂಡ ಹೇಳಲಿಲ್ಲ. ಈ ದುರಂತಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸಣ್ಣ ಕ್ರಮವನ್ನೂ ಜರುಗಿಸಲಿಲ್ಲ. ಕೊನೆ ಪಕ್ಷ ಸಸ್ಪೆಂಡ್ ಕೂಡ ಮಾಡಲಿಲ್ಲ.
ಅಂದು ನಡೆದಿದ್ದೇನು?: ಘಟನೆ ನಡೆದ ಸಂದರ್ಭದಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 150 ಕೋವಿಡ್ ಹಾಸಿಗೆಗಳಿದ್ದು, ಇದರಲ್ಲಿ 100 ಹಾಸಿಗೆಗಳು ಆಮ್ಲಜನಕ ಪೂರೈಕೆ ವ್ಯವಸ್ಥೆ ಹೊಂದಿದ್ದವು. 2021ರ ಮೇ 2ರ ರಾತ್ರಿ ಆಮ್ಲಜನಕ ದಾಸ್ತಾನು ಮುಗಿಯ ಬಹುದೆಂಬ ಮುನ್ಸೂಚನೆ ಸಿಕ್ಕಿತ್ತು. ಜಿಲ್ಲಾಡಳಿತಕ್ಕೆ ರಾತ್ರಿಯ ವೇಳೆಗೆ ಆಮ್ಲಜನಕ ಮುಗಿಯುವ ವಿಷಯವನ್ನೂ ಆರೋಗ್ಯಾಧಿಕಾರಿಗಳು ಅಂದು ಬೆಳಗ್ಗೆ ತಿಳಿಸಿದ್ದರು. ಆದರೂ, ಅಂದಿನ ಜಿಲ್ಲಾಧಿಕಾರಿಯವರು ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಭಾನುವಾರ ರಾತ್ರಿ 10.30ರಲ್ಲಿ ಸಿಲಿಂಡರ್ ಮುಗಿಯುತ್ತಾ ಬರುವ ಮುನ್ಸೂಚನೆ ವೈದ್ಯರಿಗೆ ದೊರಕಿತು. ರಾತ್ರಿ 11.15ರ ವೇಳೆಗೆ ರೋಗಿಗಳಿಗೆ ನೀಡಿದ್ದ ಆಮ್ಲಜನಕ ಪೂರೈಕೆ ಸ್ಥಗಿತವಾಯಿತು. ಈ ಸಮಯದಲ್ಲಿ ಆಮ್ಲಜನಕ ಅವಲಂಬಿತರಾಗಿದ್ದ ರೋಗಿಗಳು ಉಸಿರಾಡಲು ಕಷ್ಟವಾಗಿ ಒಬ್ಬೊಬ್ಬರಾಗಿ ಮೃತರಾದರು. ರೋಗಿಗಳ ಬಂಧುಗಳು ಆತಂಕಗೊಂಡು ಆರ್ತನಾದ ಮಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಆಮ್ಲಜನಕ ಪೂರೈಕೆ ನಿಂತಿದ್ದ ಅವಧಿಯಲ್ಲಿ ಹಾಗೂ ಮತ್ತೆ ಆಮ್ಲಜನಕ ನೀಡಿದ ನಂತರವೂ ಚೇತರಿಸಿಕೊಳ್ಳಲಾಗದೇ ಒಟ್ಟು 36 ಮಂದಿ ಮೃತಪಟ್ಟರು.
ಹೈಕೋರ್ಟ್ ನ್ಯಾಯಮೂರ್ತಿಗಳ ವರದಿಗೂ ಬೆಲೆ ನೀಡಲಿಲ್ಲ : ಈ ಘಟನೆಯ ಬಗ್ಗೆ ವರದಿ ನೀಡಲು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಎನ್.ವೇಣುಗೋಪಾಲಗೌಡ ಅವರ ಅಧ್ಯಕ್ಷತೆಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿಯನ್ನು ನೇಮಿಸಿತ್ತು. ಕಾನೂನು ಸೇವೆಗಳ ಪ್ರಾಧಿಕಾರದ ಸಮಿತಿ ಹೈಕೋರ್ಟ್‌ಗೆ 2021ರ ಮೇ 13ರಂದೇ ವರದಿ ಸಲ್ಲಿಸಿತ್ತು.
ಒಟ್ಟಾರೆ ಇದರಿಂದ 37 ಮಂದಿ ಮೃತಪಟ್ಟಿದ್ದಾರೆಂದು ವರದಿ ತಿಳಿಸಿತ್ತು. ಅಲ್ಲದೇ, ಆಮ್ಲಜನಕ ಕೊರತೆಯಂತಹ ದೊಡ್ಡ ಪ್ರಮಾದ ನಡೆಯುವ ಮೊದಲೇ ಈ ಬಗ್ಗೆ ಮುಂಜಾಗ್ರತೆ ವಹಿಸದೇ ಜಿಲ್ಲಾಧಿಕಾರಿ ನಿರ್ಲಕ್ಷ್ಯ ವಹಿಸಿದ್ದಾರೆ. ಸಿಮ್ಸ್ ಡೀನ್, ಜಿಲ್ಲಾಸ್ಪತ್ರೆಯ ಪ್ರಭಾರ ಜಿಲ್ಲಾ ಸರ್ಜನ್ ಅವರ ಕರ್ತವ್ಯಲೋಪವೂ ಇದೆಯೆಂದು ವರದಿಯಲ್ಲಿ ಬೊಟ್ಟು ಮಾಡಲಾಗಿತ್ತು.
ಸಂತ್ರಸ್ತರಾದವರಿಗೆ ದೊರೆತಿಲ್ಲ; ನ್ಯಾಯಯುತ ಪರಿಹಾರ : ಈ ಘಟನೆಯಿಂದ 36ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಆದರೆ, ಸರ್ಕಾರದ ಪ್ರಕಾರ ಸತ್ತವರು 24 ಮಂದಿ. ಹೀಗಾಗಿ 37 ಮೃತರ ಕುಟುಂಬದ ಪೈಕಿ ಕೇವಲ 24 ಮಂದಿಯ ಕುಟುಂಬದವರಿಗೆ ಮಾತ್ರ ಅಲ್ಪ ಪರಿಹಾರ (2 ರಿಂದ 3 ಲಕ್ಷ ರೂ.) ದೊರೆತಿದೆ. ಇನ್ನು 13 ಕುಟುಂಬದವರಿಗೆ ನಯಾಪೈಸೆ ಪರಿಹಾರವೂ ಸಿಕ್ಕಿಲ್ಲ. ಕೆಲವರಿಗೆ 2 ಲಕ್ಷ ರೂ., ಇನ್ನು ಕೆಲವರಿಗೆ 3 ಲಕ್ಷ ರೂ. ಪರಿಹಾರ ನೀಡಿದೆ. ಆಕ್ಸಿಜನ್ ಕೊರತೆಯಿಂದ ಅಂದು ರಾತ್ರಿ 11.30ರಿಂದ ಮತ್ತೆ ಮಾರನೆಯ ಮಧ್ಯಾಹ್ನದವರೆಗೂ ಜನರು ಸತ್ತಿದ್ದಾರೆ. ಅವರ ಕುಟುಂಬಗಳಿಗೆ ಯಾವುದೇ ಪರಿಹಾರ ದೊರೆತಿಲ್ಲ.
ಸರ್ಕಾರಿ ಉದ್ಯೋಗದ ಭರವಸೆ ನೀಡಿದ್ದ ರಾಹುಲ್ ಗಾಂಧಿ: ಭಾರತ್ ಜೋಡೋ ಯಾತ್ರೆ ಕೇರಳದಿಂದ ಕರ್ನಾಟಕ ಪ್ರವೇಶಿಸಿದಾಗ ಗುಂಡ್ಲುಪೇಟೆ ಬಳಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಾ.ನಗರದ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ದುರಂತದಲ್ಲಿ ಮಡಿದ ಕುಟುಂಬದವರ ಜೊತೆ ಸಂವಾದ ನಡೆಸಿದ್ದರು. ತಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸಂತ್ರಸ್ತರ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಮತ್ತು ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ರಾಜ್ಯ ಸರ್ಕಾರ ಈ ಭರವಸೆ ಈಡೇರಿಸಲು ಕ್ರಮ ಕೈಗೊಳ್ಳಬೇಕೆಂಬುದು ಸಂತ್ರಸ್ತರ ಒತ್ತಾಯವಾಗಿದೆ.
ನನ್ನ ಪತಿ ನನ್ನ ಕಣ್ಣೆದುರೇ ಆಕ್ಸಿಜನ್ ಬರುತ್ತಿಲ್ಲ ವೆಂದು ನರಳಾಡಿ ಸತ್ತರು. ಘಟನೆ ನಡೆದ ಬಳಿಕ ಸರ್ಕಾರದಿಂದ ನಮಗೆ ಒಂದು ಪೈಸೆಯಷ್ಟೂ ಪರಿ ಹಾರ ಕೊಟ್ಟಿಲ್ಲ. ಇಬ್ಬರು ಮಕ್ಕಳು ಸುತ್ತೂರು ಶ್ರೀಗಳ ದಯೆಯಿಂದ ಉಚಿತ ಶಿಕ್ಷಣ ಪಡೆಯುತ್ತಿ ದ್ದಾರೆ. ನಾನು ಈಗ ಕೂಲಿ ನಾಲಿ ಮಾಡಿ ಕುಟುಂಬ ಸಾಕುತ್ತಿದ್ದೇನೆ. ●ಜ್ಯೋತಿ, ಮೃತ ಆಟೋಚಾಲಕ ಸಿದ್ದನಾಯಕರ ಪತ್ನಿ.
ದುರಂತದಲ್ಲಿ ಪತಿಯನ್ನು ಕಳೆದುಕೊಂಡೆ. ನನಗೆ ಇಬ್ಬರು ಚಿಕ್ಕಮಕ್ಕಳಿ¨ªಾರೆ. ಸರ್ಕಾರದಿಂದ ಪರಿಹಾರ ಬಂದಿಲ್ಲ. ಅಧಿಕಾರಿಗಳನ್ನು ವಿಚಾರಿಸಿದರೆ ಆಸ್ಪತ್ರೆಯಿಂದ ಪಾಸಿಟಿವ್ ವರದಿ ತರಬೇಕು ಎಂದು ಸತಾಯಿಸುತ್ತಿದ್ದಾರೆ. ಹಿಂದಿನ ಶಾಸಕ ಎನ್. ಮಹೇಶ್ ಗಮನಕ್ಕೆ ತಂದರೂ ಪ್ರಯೋಜನ ಆಗಲಿಲ್ಲ. ●ಸಿದ್ದರಾಜಮ್ಮ, ಕೊಳ್ಳೇಗಾಲದ ಮುಂಡಿಗುಂಡ.
ಇದ್ದ ಒಬ್ಬ ಮಗ ದುರಂತದಲ್ಲಿ ಮೃತಪಟ್ಟನು. ವಯಸ್ಸಾದ ನಾನು ಮತ್ತು ನಮ್ಮ ಪತಿ ಜೀವನ ನಡೆಸಲು ಕಷ್ಟಪಡುತ್ತಿದ್ದೇವೆ. ಯಾವುದೇ ಪರಿಹಾರ ಬಂದಿಲ್ಲ. ನಮ್ಮ ಮಗನ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಆಗಬೇಕು. ●ಜಯಮ್ಮ ನಾಗವಳ್ಳಿ,
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸರ್ಕಾರಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿದ್ದರು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಉದ್ಯೋಗ ಸಿಗುವ ಭರವಸೆಯಲ್ಲಿದ್ದೇವೆ. ಸರ್ಕಾರ ಸಂತ್ರಸ್ತರಾದ ನಮ್ಮ ಕುಟುಂಬಗಳಿಗೆ ನೌಕರಿ ನೀಡಬೇಕು. ●ನಾಗರತ್ನ, ಕೆಸ್ತೂರು.
-ಕೆ.ಎಸ್.ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ
Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.