ಮುಂಡ್ಕೂರು; ಶಾಂಭವಿ ನದಿಯಲ್ಲಿ ಭಾರೀ ತ್ಯಾಜ್ಯ
Team Udayavani, Jun 29, 2023, 3:43 PM IST
ಬೆಳ್ಮಣ್: ಕಳೆದೆರಡು ದಿನಗಳಿಂದ ಸುರಿದ ಮುಂಗಾರು ಮಳೆಗೆ ಸಂಕಲಕರಿಯ ಶಾಂಭವಿ ನದಿ ಹರಿಯಲಾರಂಭಿಸಿದ್ದು ಸಂಕಲಕರಿಯ ಸೇತುವೆಯ ಮೇಲಿಂದ ಹಾದು ಹೋಗುವ ಜನ ಎಸೆಯುವ ತ್ಯಾಜ್ಯಗಳು ಅಣೆಕಟ್ಟು ಬಳಿ ಭಾರೀ ಪ್ರಮಾಣದಲ್ಲಿ ಶೇಖರಣೆಯಾಗಿದ್ದು ಮುಂಡ್ಕೂರು ಗ್ರಾ.ಪಂ.ನ ಸ್ವಚ್ಛತ ಸಿಬಂದಿ ಮಂಗಳವಾರ ವಿಲೇವಾರಿ ನಡೆಸಿದರು.
ಪಿಡಿಒ ಸತೀಶ್ ಅವರ ಮಾರ್ಗ ದರ್ಶನದಲ್ಲಿ ತ್ಯಾಜ್ಯ ವಿಲೇವಾರಿ ನಡೆದಿದ್ದು ಮುಂಡ್ಕೂರು ಗ್ರಾ.ಪಂ.ನ ಎಸ್‌ಎಲ್‌ಆರ್‌ಎಂ ಘಟಕದ ಸಿಬಂದಿ ಭಾರೀ ಪ್ರಮಾಣದ ತ್ಯಾಜ್ಯ ತೆರವುಗೊಳಿಸಿ ಶಾಂಭವಿ ನದಿ ಸ್ವತ್ಛತೆ ನಡೆಸಿದರು.
ತ್ಯಾಜ್ಯ ವಿಲೇವಾರಿ ಸಂದರ್ಭವೇ ಕಸ ಎಸೆದರು!
ಮುಂಡ್ಕೂರು ಗ್ರಾ.ಪಂ.ನ ಎಸ್‌ಎಲ್‌ಆರ್‌ಎಂ ಘಟಕದವರು ನದಿನೀರಲ್ಲಿ ತ್ಯಾಜ್ಯ ಹೆಕ್ಕುವಾಗಲೇ ಸೇತುವೆ
ಯಲ್ಲಿ ಸಂಚರಿಸುತ್ತಿದ್ದ ಮಹಿಳೆಯೋರ್ವರು ವಾಹನ ನಿಲ್ಲಿಸಿ ನದಿಗೆ ಕಸ ಎಸೆದು ಅಮಾನವೀಯತೆ ಮೆರೆದರು. ಈ ಸೇತುವೆಯಲ್ಲಿ ನಿತ್ಯ ಪ್ರಯಾಣಿಸುವ ಹಲವರು ಇದೇ ರೀತಿ ತ್ಯಾಜ್ಯ ಎಸೆದು ಶಾಂಭವಿ ಮಲಿನ ಮಾಡುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರಲ್ಲದೆ ಪಂಚಾಯತ್ ಆಡಳಿತ ಸಿಸಿ ಕೆಮೆರಾ ಅಳವಡಿಸಿ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದ್ದಾರೆ.
ಮುಂಡ್ಕೂರು, ಐಕಳ ಪಂಚಾಯತ್ ನಡುವೆ ಹಗ್ಗ ಜಗ್ಗಾಟ
ಸಂಕಲಕರಿಯ ಶಾಂಭವಿ ನದಿ ಸೇತುವೆ ಯಲ್ಲಿ ಗಡಿ ವಿವಾದ ನಿರಂತರವಾಗಿದ್ದು ಅಪಘಾತ ಸಂದರ್ಭ ಸದಾ ಗೊಂದಲ ವೇರ್ಪಡುತ್ತದೆ. ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯನ್ನು ಬೇರ್ಪಡಿಸುವ ಪ್ರಮುಖ ಸೇತುವೆ ಇದಾಗಿದ್ದು ಕಾರ್ಕಳ ಹಾಗೂ ಮೂಲ್ಕಿ ಪೊಲೀಸ್ ಠಾಣೆಗಳ ಆಧಿಕಾರಿಗಳು ಆಯಾ ವಿಭಾಗದ ನಿರ್ವಹಣೆ ನಡೆಸುತ್ತಿದ್ದು ಸೇತುವೆ, ನದಿಯಲ್ಲಿ ಅವಘಡಗಳಾದಾಗ ಎರಡೂ ಠಾಣೆಯವರು ಜಾರಿಕೊಳ್ಳುವ ಪ್ರಮೇಯ ಹಲವು ಬಾರಿ ನಡೆದಿದೆ. ಆದರೆ ಅಕ್ರಮ ಮರಳುಗಾರಿಕೆ ಸಂದರ್ಭ ಇದು ನಮ್ಮ ವ್ಯಾಪ್ತಿಯ ನದಿ ಎನ್ನುವ ಸಬೂಬು ಇವರದ್ದಾಗಿದೆ. ಇಲ್ಲಿನ ಅಣೆಕಟ್ಟು ನಿರ್ವಹಣೆ ದಕ್ಷಿಣ ಕನ್ನಡ ಜಿಲ್ಲಾ ಸಣ್ಣ ನೀರಾವರಿ ಇಲಾಖೆಯ ಮೂಲಕ ನಡೆಯುತ್ತಿದೆ. ಆದರೆ ತ್ಯಾಜ್ಯದ ವಿಚಾರದಲ್ಲಿ ಮುಂಡ್ಕೂರು ಗ್ರಾ.ಪಂ. ಆಡಳಿತ ಯಾವುದೇ ವ್ಯಾಜ್ಯ ಮಾಡದೇ ವಿಲೇವಾರಿ ನಡೆಸಿದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.