ಬ್ಯಾಡಗಿ:ವಿಕಲಚೇತನ ಮಕ್ಕಳಿಗೆ ಗಾಲಿ ಕುರ್ಚಿ ವಿತರಣೆ
16ವರ್ಷದಲ್ಲಿ ವಿಶ್ವದ ಮುಕ್ಕಾಲು ಪಾಲು ದೇಶಗಳಲ್ಲಿ ತನ್ನದೇ ಆದ ಕ್ಲಬ್ ಗಳನ್ನು ಹೊಂದಿತ್ತು
Team Udayavani, Jun 30, 2023, 2:45 PM IST
ಬ್ಯಾಡಗಿ: ವೃತ್ತಿಪರರಿಂದ ಸಮಾಜದ ಅಭಿವೃದ್ಧಿಯ ಆಲೋಚನೆಗಳನ್ನು ಮಾನವೀಯ ಸೇವೆಗೆ ವಿಸ್ತರಿಸುವ ಮೂಲಕ ಅಶಕ್ತರನ್ನು ಸಶಕ್ತರನ್ನಾಗಿಸಲು ಮುಂದಾಗಿರುವ ರೋಟರಿ ಸಂಸ್ಥೆ (ಕ್ಲಬ್) ಸಾರ್ವಜನಿಕ ಸೇವೆಗೆ ವಿಶ್ವದಲ್ಲೇ ಖ್ಯಾತಿ ಗಳಿಸುವ ಮೂಲಕ ಮಾದರಿ ಸಂಸ್ಥೆಯಾಗಿ ಬೆಳೆದಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಬಣ್ಣಿಸಿದರು.
ಗುರುವಾರ ತಾಪಂ ಸಭಾಭವನದಲ್ಲಿ ವಿಕಲಚೇತನ ಮಕ್ಕಳಿಗೆ ರೋಟರಿ ಕ್ಲಬ್ ವತಿಯಿಂದ ನೀಡಲಾದ 1.80 ಲಕ್ಷ ರೂ. ಮೌಲ್ಯದ ಗಾಲಿ ಕುರ್ಚಿಗಳನ್ನು ವಿತರಿಸಿ ಮಾತನಾಡಿದರು. ರೋಟರಿ ಕ್ಲಬ್ ದೂರದೃಷ್ಟಿ ವಿಚಾರಗಳನ್ನು ಹೊಂದಿದ್ದ ಪಾಲ್ ಹ್ಯಾರಿಸ್ ಎಂಬ ವ್ಯಕ್ತಿಯ ಕನಸಿನ ಸಂಸ್ಥೆಯಾಗಿದೆ. 1905 ರಲ್ಲಿ ಪ್ರಾರಂಭ ವಾದ ರೋಟರಿ ಕ್ಲಬ್ ಆಫ್ ಚಿಕಾಗೋ ಮುಂದೆ ರೋಟರಿ ಕ್ಲಬ್ ಆಗಿ ಪರಿವರ್ತನೆಗೊಂಡು ಇಂದು ವಿಶ್ವದೆಲ್ಲೆಡೆ ತನ್ನ ಶಾಖೆ ಮತ್ತು ಇನ್ನರವೀಲ್ (ಮಹಿಳೆ ಯರ ಕ್ಲಬ್) ಅಂಗ ಸಂಸ್ಥೆಗಳನ್ನು ಹೊಂದಿದೆ ಎಂದರು.
ಪೊಲಿಯೋ ವಿರುದ್ಧ ಹೋರಾಟ ಅಜರಾಮರ: ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಮಾತನಾಡಿ, ರೋಟರಿ ಸಂಸ್ಥೆ ಸಾಧಿಸಿದ ಗುರಿ ಮತ್ತು ಫಲಿತಾಂಶಗಳಿಂದ ವಿಶ್ವಕ್ಕೆ ಪರಿಚಿತವಾಗಿದೆ. ಕಳೆದ 1979 ರಲ್ಲಿ ಫಿಲಿಪೈನ್ಸ್‌ನಲ್ಲಿ 6 ಮಿಲಿಯನ್ ಮಕ್ಕಳಿಗೆ ಪೊಲಿಯೋ ಲಸಿಕೆ ನೀಡುವ ಯೋಜನೆಯೊಂದಿಗೆ ಸಾಮಾಜಿಕ ಹೋರಾಟ ಆರಂಭಿಸಿದ ರೋಟರಿ ಕ್ಲಬ್, ತನ್ನ ಪರಿಶ್ರಮದಿಂದ ಇಂದು ವಿಶ್ವದಲ್ಲಿಯೇ ಕೇವಲ 2 ದೇಶಗಳಲ್ಲಿ ಮಾತ್ರ ಪೊಲಿಯೋ ರೋಗ ಉಳಿಯುವಂತೆ ಮಾಡಿದೆ ಎಂದರು.
ಸಂಸ್ಥೆ ಬದ್ಧತೆ: ಸ್ಥಳೀಯ ಅಧ್ಯಕ್ಷ ಮಂಜುನಾಥ ಉಪ್ಪಾರ ಮಾತನಾಡಿ, ರೋಟರಿ ಸಂಸ್ಥೆಗೊಂದು ಬದ್ಧತೆಯಿದೆ. ಸ್ಥಾಪನೆಯಾದ ಕೇವಲ 16ವರ್ಷದಲ್ಲಿ ವಿಶ್ವದ ಮುಕ್ಕಾಲು ಪಾಲು ದೇಶಗಳಲ್ಲಿ ತನ್ನದೇ ಆದ ಕ್ಲಬ್ ಗಳನ್ನು ಹೊಂದಿತ್ತು. ಅದೇ ಬದ್ಧತೆ ನಿಜವಾಗಿಯೂ ಇಂದು ಅಂತಾರಾಷ್ಟ್ರೀಯ ಖ್ಯಾತಿ ಗಳಿಸಲು ಪ್ರೇರಣೆಯಾಗಿದೆ. ರೋಟರಿ ಕುಟುಂಬ ಇದೀಗ ಜಗತ್ತಿನಲ್ಲಿ ಯೇ ವ್ಯಾಪಿಸಿದ್ದು, ವಿಶ್ವದ ಸವಾಲು ಮತ್ತು ಸಮಸ್ಯೆ ಗಳನ್ನು ಪರಿಹರಿಸಲು ಕಂಕಣಬದ್ಧರಾಗಿದೆ ಎಂದರು.
ಇದೇ ವೇಳೆ ಅಗಸನಹಳ್ಳಿಯ ಪ್ರದೀಪ್ ಓಲೇಕಾರ, ಬನ್ನಿಹಟ್ಟಿ ಗ್ರಾಮದ ವಿನಾಯಕ ಗಡಿಯಪ್ಪನವರ, ಮಾಸಣಗಿಯ ಸಿದ್ಧಲಿಂಗೇಶ ಬನ್ನಿಹಟ್ಟಿ, ತಡಸದ ಉಜುಮಾ ಹರಿಹರ, ಕೆರವಡಿಯ ತನುಜಾ ಬುರಡೀ ಕಟ್ಟಿ, ಗುಂಡೆನಹಳ್ಳಿಯ ಸ್ಫೂರ್ತಿ ಮೂಲಿಮನಿ, ಸೇವಾ ನಗರದ ಮಂಜು ಲಮಾಣಿ, ಘಾಳಪೂಜಿಯ ಮೇಘಾ ಜಾಡರ ಮತ್ತು ರಾಕೇಶ್ ಪಾಟೀಲ, ಕಾಗಿನೆಲೆಯ ಸಿಮ್ರಾನ್‌ತಾಜ್ ನಾಯಕ್, ಮುಸ್ಕಾನ್‌ಬಾನು ಅಮ್ಮಿನ ಭಾವಿ ಬ್ಯಾಡಗಿ ಪಟ್ಟಣದ ಈರಮ್ಮ ಬಾಣಾಪೂರ ಅವರಿಗೆ ಗಾಲಿ ಕುರ್ಚಿಗಳನ್ನು ವಿತರಿಸಲಾಯಿತು.
ಈ ವೇಳೆ ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ದಾನಪ್ಪ ಚೂರಿ, ಕಾರ್ಯದರ್ಶಿ ಮಾರುತಿ ಅಚ್ಚಿಗೇರಿ ಶಿಕ್ಷಣ ಇಲಾಖೆ ಬಿಆರ್‌ಸಿ ಸುಭಾಸ್, ರೋಟರಿ ಸದಸ್ಯರಾದ ಲಿಂಗಯ್ಯ ಹಿರೇಮಠ, ಮಾಲತೇಶ ಅರಳೀಮಟ್ಟಿ, ಡಾ|ಎ.ಎಂ.ಸೌದಾಗರ, ಶಿವರಾಜ ಚೂರಿ, ಸಿದ್ದಲಿಂಗಯ್ಯ ಬೂದಿಹಾಳಮಠ, ಬಸವರಾಜ ಸುಂಕಾಪುರ, ಜೆ.ಎಚ್.ಪಾಟೀಲ, ವೀರೇಶ ಬಾಗೊಜಿ, ಚೇತನ್ ಕುಡತರಕರ, ಪರಶುರಾಮ ಮೇಲಗಿರಿ, ಸತೀಶ ಅಗಡಿ, ಜಗದೀಶ ದೇವಿಹೊಸೂರ, ನಿರಂಜನ ಶೆಟ್ಟಿಹಳ್ಳಿ, ಮಾಲತೇಶ ಉಪ್ಪಾರ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.