Cricket: ವೆಸ್ಟ್ ಇಂಡೀಸ್ ಅಧಃಪತನ… ಪುನರುತ್ಥಾನ ಸಾಧ್ಯವೇ?
Team Udayavani, Jul 5, 2023, 8:00 AM IST
ಸರ್ ವಿವಿಯನ್ ರಿಚರ್ಡ್ಸ್, ಮಾಲ್ಕಮ್ ಮಾರ್ಷಲ್, ಕ್ಲೈವ್ ಲಾಯ್ಡ, ಬ್ರಿಯಾನ್ ಲಾರಾ, ಕರ್ಟ್ಲಿ ಆ್ಯಂಬ್ರೋಸ್, ಕ್ರಿಸ್ ಗೇಲ್, ಶಿವನಾರಾಯಣ್ ಚಂದ್ರಪಾಲ್, ಕಿರನ್ ಪೋಲಾರ್ಡ್, ಸುನಿಲ್ ನಾರಾಯಣ್, ಡ್ವೇನ್ ಬ್ರಾವೊ…. ಹೀಗೆ ಹೆಸರು ಹೇಳಿಕೊಂಡು ಹೋದರೆ ಮುಗಿಯುವುದೇ ಇಲ್ಲ. ಒಂದು ಕಾಲದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವೆಂದರೆ ಸಾಕು, ಜಾಗತಿಕ ತಂಡಗಳೆಲ್ಲ ಹೆದರಿ ಹೋಗುತ್ತಿದ್ದವು. ಇಂಥ ತಂಡ ಈ ಬಾರಿಯ ವಿಶ್ವಕಪ್‌ಗ್ೂ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಸ್ಕಾಟ್ಲೆಂಡ್‌ನಂಥ ಪುಟ್ಟ ತಂಡದೆದುರು ಅರ್ಹತಾ ಸುತ್ತಿನಲ್ಲಿ ಸೋತು ಮನೆಗೆ ಹೋಗಿದೆ. ಅಷ್ಟಕ್ಕೂ ವೆಸ್ಟ್ ಇಂಡೀಸ್ ತಂಡಕ್ಕೆ ಆಗಿದ್ದೇನು? ಈ ತಂಡದ ಅಧಃ ಪತನ ಶುರುವಾಗಿದ್ದು ಯಾವಾಗ?
ವಿಶ್ವಕಪ್ ಮಿಸ್
ಇತ್ತೀಚೆಗಷ್ಟೇ ಸ್ಕಾಟ್ಲೆಂಡ್ ವಿರುದ್ಧ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 7 ವಿಕೆಟ್‌ಗಳ ಅಂತರದಿಂದ ಸೋತಿತು. ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್, 43.5 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು ಕೇವಲ 181 ರನ್ ಗಳಿಸಿತ್ತು. ಆದರೆ ಈ ಮೊತ್ತ ಬೆನ್ನತ್ತಿದ ಸ್ಕಾಟ್ಲೆಂಡ್‌ತಂಡ 43.3 ಓವರ್‌ಗಳಲ್ಲಿ 3 ವಿಕೆಟ್‌ಗೆ 185 ರನ್ ಗಳಿಸಿ ಗೆಲುವು ಸಾಧಿಸಿತು. ವೆಸ್ಟ್ ಇಂಡೀಸ್‌ನ ಈ ಸೋಲು, ದೊಡ್ಡದೊಂದು ಇತಿಹಾಸಕ್ಕೆ ಸಾಕ್ಷಿಯಾಯಿತು. ಇದೇ ಮೊದಲ ಬಾರಿಗೆ ಏಕದಿನ ವಿಶ್ವಕಪ್ ವೊಂದರಿಂದ ವೆಸ್ಟ್ ಇಂಡೀಸ್ ಹೊರಗುಳಿಯುವಂತಾಯಿತು. ಮೊದಲ 2 ಬಾರಿಯ ವಿಶ್ವಕಪ್ ಗೆದ್ದ ತಂಡ, ಈ ಬಾರಿ ವಿಶ್ವಕಪ್ ಆಡುವಂತಿಲ್ಲ ಎಂಬುದೇ ಜಾಗತಿಕ ಕ್ರಿಕೆಟ್‌ಗೆ ಒಂದು ರೀತಿಯ ಶಾಕ್‌ನಂತಾಯಿತು.
ಅಧಃಪತನಕ್ಕೆ ಕಾರಣಗಳು
ಉತ್ತಮ ಆಟಗಾರರಿಗೆ ಸಿಗದ ಅವಕಾಶ
ವೆಸ್ಟ್ ಇಂಡೀಸ್‌ನಲ್ಲಿ ಇಂದಿಗೂ ಉತ್ತಮ ಆಟಗಾರರಿದ್ದಾರೆ. ಇದಕ್ಕೆ ಸಾಕ್ಷಿ ಭಾರತದಲ್ಲೇ ನಡೆಯುವ ಐಪಿಎಲ್. ಇದರಲ್ಲಿ ವೆಸ್ಟ್ ಇಂಡೀಸ್ ಮೂಲದ ಆಟಗಾರರ ಪ್ರದರ್ಶನ ಅತ್ಯುತ್ತಮವಾಗಿಯೇ ಇರುತ್ತದೆ. ಆದರೆ ಅಲ್ಲಿನ ರಾಷ್ಟ್ರೀಯ ತಂಡದಲ್ಲಿ ಇವರಿಗೆ ಅವಕಾಶವೇ ಸಿಗುವುದಿಲ್ಲ. ಅಂದರೆ ಆ್ಯಂಡ್ರೆ ರಸೆಲ್ ಮತ್ತು ಸುನಿಲ್ ನಾರಾಯಣ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ಅಥವಾ ಇವರು ತಂಡದ ಪರ ಆಡದೇ ಇರುವುದು ವೈಫಲ್ಯಕ್ಕೆ ಕಾರಣ.
ಬೋರ್ಡ್ ಜತೆಗೆ ಆಟಗಾರರ ತಿಕ್ಕಾಟ
2015ರಿಂದಲೂ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಮತ್ತು ಆಟಗಾರರ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಆಗ ಡ್ವೇನ್ ಬ್ರಾವೋ, ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧ ಹೇಳಿಕೆ ಹೊರಡಿಸಿದ್ದರು. ಜಗತ್ತಿನಲ್ಲೇ ಅತ್ಯಂತ ಕೆಟ್ಟ ಆಡಳಿತ ಮಂಡಳಿ ಎಂದರೆ, ಅದು ವೆಸ್ಟ್ ಇಂಡೀಸ್ ಮಂಡಳಿ ಎಂದಿದ್ದರು. ಅಲ್ಲದೆ, 2014ರಲ್ಲಿ ಭಾರತದ ಐದು ಪಂದ್ಯಗಳ ಸರಣಿ ಆಡುತ್ತಿದ್ದ ವೆಸ್ಟ್ ಇಂಡೀಸ್ ತಂಡ, ವೇತನದ ವಿಚಾರವಾಗಿ ಜಗಳವಾಡಿಕೊಂಡು, ಮಧ್ಯದಲ್ಲೇ ತನ್ನ ದೇಶಕ್ಕೆ ವಾಪಸ್ ಹೋಗಿತ್ತು.
ಉತ್ತಮ ಪ್ರದರ್ಶನ ನೀಡುವಲ್ಲಿ ವೈಫಲ್ಯ
ಸದ್ಯ ಇರುವ ಆಟಗಾರರೂ, ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಶೈ ಹೋಪ್, ಕೈಲ್ ಮೇಯರ್ಸ್, ನಿಕೋಲಸ್ ಪೂರಣ್, ಜೇಸನ್ ಹೋಲ್ಡರ್‌ರಂಥ ಆಟಗಾರರಿದ್ದಾರೆ. ಇವರು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ರಾಷ್ಟ್ರೀಯ ತಂಡದ ವಿಚಾರದಲ್ಲಿ ಉತ್ತಮವಾದ ಪ್ರದರ್ಶನ ಬಂದಿಲ್ಲ. ಹೀಗಾಗಿಯೇ ಸ್ಕಾಟ್ಲೆಂಡ್, ನೆದರ್ಲೆಂಡ್ಸ್, ಜಿಂಬಾಬ್ವೆ, ಐರ್ಲೆಂಡ್‌ನಂಥ ತಂಡಗಳ ವಿರುದ್ಧ ಸೋಲಬೇಕಾಯಿತು ಎಂದು ಅಲ್ಲಿನ ಮಾಜಿ ಕ್ರಿಕೆಟ್ ಆಟಗಾರರೇ ಹೇಳುತ್ತಾರೆ.
ಇತರ ಕ್ರೀಡೆಗಳಿಗೆ ಮನ್ನಣೆ ಕ್ರಿಕೆಟ್ ಮೇಲೆ ನಿರಾಸಕ್ತಿ?
ಕ್ರಿಕೆಟ್‌ನ ಆರಂಭಿಕ ಹಂತದಲ್ಲಿ ವೆಸ್ಟ್ ಇಂಡೀಸ್‌ನ ಎಲ್ಲ ದ್ವೀಪಗಳಲ್ಲಿ ಅಡ್ಡಾಡಿ ಪ್ರತಿಭೆಗಳನ್ನು ಗುರುತಿಸಿದ್ದವರು ಸರ್ ವಿವಿಯನ್ ರಿಚರ್ಡ್ಸ್, ಕ್ಲೈವ್ ಲಾಯ್ಡನಂಥವರು. ಹೀಗಾಗಿಯೇ 70ರ ದಶಕದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಇಡೀ ಜಗತ್ತಿನ ಬೇರೆ ಬೇರೆ ತಂಡಗಳನ್ನು ಮೀರಿ ಬಲಿಷ್ಠವಾಗಿ ಬೆಳೆಯಿತು. ಒಬ್ಬರಿಗಿಂತ ಒಬ್ಬರು ಅಸಾಧಾರಣ ಪ್ರತಿಭೆ ತೋರಿದರು. ಅನಂತರದ ದಿನಗಳಲ್ಲಿಯೂ ಅಂಥವೇ ಪ್ರತಿಭೆಗಳು ಮೂಡಿ ಬಂದವು. ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಕ್ರಿಕೆಟಿಗ ಬ್ರಿಯಾನ್ ಲಾರಾ. ಇವರ ದಾಖಲೆಗಳಿಗೆ ಲೆಕ್ಕವೇ ಇಲ್ಲ.
ಆದರೆ 2014-15ರ ಅನಂತರದಲ್ಲಿ ಕ್ರಿಕೆಟ್ ಮಂಡಳಿಯೊಳಗಿನ ಕಿತ್ತಾಟದಿಂದಾಗಿ ವೆಸ್ಟ್ ಇಂಡೀಸ್‌ನಲ್ಲಿ ಪ್ರತಿಭೆಗಳ ಕೊರತೆ ಎದುರಾಯಿತು. ಕ್ರಿಕೆಟ್‌ಗೆ ಹೊರತಾದ ಕ್ರೀಡೆಗಳನ್ನು ಹುಡುಕುವಲ್ಲಿ ಜನ ನಿರತರಾದರು. ಫುಟ್ಬಾಲ್ ಮೇಲೆ ಆಸಕ್ತಿ ಹೆಚ್ಚಾಯಿತು. ಸದ್ಯ ವೆಸ್ಟ್ ಇಂಡೀಸ್‌ನಲ್ಲಿ ಕ್ರಿಕೆಟ್ ಕಡಿಮೆ ಆಸಕ್ತಿಯ ಕ್ರೀಡೆಯಾಗಿದ್ದರೆ ಫುಟ್ಬಾಲ್ ಬಹು ಜನರ ಆಸಕ್ತಿಯ ಕ್ರೀಡೆಯಾಗಿದೆ. ಹೀಗಾಗಿಯೇ ಅಲ್ಲಿ ಉತ್ತಮ ಆಟಗಾರರು ಸೃಷ್ಟಿಯಾಗುತ್ತಿಲ್ಲ.
ಇದಷ್ಟೇ ಅಲ್ಲ ಗ್ರಾಸ್‌ರೂಟ್ ಮಟ್ಟದಲ್ಲಿ ಕ್ರಿಕೆಟ್ ಅನ್ನು ಬೆಳೆಸುವಲ್ಲಿಯೂ ಆಯಾ ದ್ವೀಪಗಳು ವಿಫಲವಾದವು. ಇದಕ್ಕೆ ಹಣಕಾಸಿನ ಕೊರತೆಯೂ ಕಾರಣವಾಯಿತು. ಮೊದಲೆಲ್ಲ ದೇಶೀ ಯವಾಗಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿಗಳು ನಿಂ ತವು. ಜತೆಗೆ, ಕ್ರಿಕೆಟ್ ಕಲಿಕೆಗೆ ಬೇಕಾದ ಮೂಲಭೂತ ಸೌಕರ್ಯಗಳೂ ಸ್ಥಗಿತವಾದವು. ಪ್ರಾದೇಶಿಕ ಮಟ್ಟದಲ್ಲೇ ಆಗುತ್ತಿರುವ ಈ ಬೆಳವಣಿಗೆಯೂ ಕ್ರಿಕೆಟ್‌ನ ಹಿನ್ನಡೆಗೆ ಕಾರಣವಾಯಿತು. ಹಾಗೆಯೇ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರರು, ಬೇರೆ ದೇಶಗಳಿಗೆ ವಲಸೆ ಹೋಗಲು ಶುರು ಮಾಡಿಕೊಂಡರು. ಉದಾಹರಣೆಗೆ, ವೆಸ್ಟ್ ಇಂಡೀಸ್‌ನ ಕ್ರಿಕೆಟ್ ತಂಡದಲ್ಲಿ ಕಾಣದಷ್ಟು ಮಂದಿ ಆಟಗಾರರು ಭಾರತದ ಐಪಿಎಲ್‌ನಲ್ಲಿ ಆಡುತ್ತಾರೆ. ಐಪಿಎಲ್‌ನಲ್ಲಿ ಅವರಿಗೆ ಉತ್ತಮ ಹಣವೂ ಸಿಗುತ್ತದೆ, ಒಳ್ಳೆಯ ಗೌರವವೂ ಇದೆ. ಕ್ರಿಸ್ ಗೇಲ್‌ಗೆ ಭಾರತದಲ್ಲಿ ಇರುವಷ್ಟು ಅಭಿಮಾನಿಗಳು ಬೇರೆಲ್ಲೂ ಇಲ್ಲ.
ಇದೆಲ್ಲದರ ಹೊರತಾಗಿ, ಅಲ್ಲಿನ ಆಡಳಿತ ಮಂಡಳಿಯಂತೂ, ಸಂಪೂರ್ಣವಾಗಿ ವಿಫಲವಾಗಿದೆ. ಆಟಗಾರರಿಗೆ ವೇತನ ನೀಡುವುದರಿಂದ ಹಿಡಿದು, ಆಯ್ಕೆ ಮಾಡುವವರೆಗೆ ವಿವಾದ ಮಾಡಿಕೊಳ್ಳುತ್ತಿದೆ. ಆಟಕ್ಕಿಂತ ಹೆಚ್ಚು ರಾಜಕೀಯವೇ ಕಾಣಿಸುತ್ತಿದೆ.
ಈ ಹಿಂದೆ, ದೊಡ್ಡ ದೊಡ್ಡ ಆಟಗಾರರ ದಂಡೇ ಇದ್ದರೂ, ಇವರನ್ನು ಅಲ್ಲಿನ ಕ್ರಿಕೆಟ್ ಮಂಡಳಿ ತರಬೇತಿಗಾಗಿ ಸೇರಿಸಿಕೊಳ್ಳುತ್ತಿಲ್ಲ. ಅಲ್ಲದೆ ಆಯ್ಕೆ ಮಂಡಳಿಯಲ್ಲೂ ಇವರ ಹೆಸರುಗಳು ಕಾಣಿಸುತ್ತಿಲ್ಲ. ಮಂಡಳಿಯು ತನಗೆ ಬೇಕಾದವರಿಗೆ ಮಾತ್ರ ಮಣೆ ಹಾಕುತ್ತಾ, ಈ ಹಿಂದೆ ಇದ್ದ ಶ್ರೇಷ್ಠ ಆಟಗಾರರನ್ನು ಮರೆತೇ ಬಿಟ್ಟಿದೆ.
ಇತ್ತೀಚಿನ ದಿನಗಳಲ್ಲಿ ಜಗತ್ತಿನ ಕ್ರಿಕೆಟ್ ರಂಗದಲ್ಲಿ ಭಾರತ, ಆಸ್ಟ್ರೇಲಿಯ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾದಂಥ ದೇಶಗಳು ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿವೆ. ಈ ದೇಶಗಳಿಗೆ ಸ್ಪರ್ಧೆ ನೀಡುವಷ್ಟು ಬಲವಾಗಲಿ, ಛಲವಾಗಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದಲ್ಲಿ ಕಾಣಿಸುತ್ತಿಲ್ಲ. ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ, ಟೆಸ್ಟ್ ಆಡುವ ಅರ್ಹತೆಯನ್ನೂ ಕಳೆದುಕೊಳ್ಳುವ ಎಲ್ಲ ಸಾಧ್ಯತೆ ಗಳು ಇವೆ.
ಸೋಮಶೇಖರ ಸಿ.ಜೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.