ಕುಸಿಯುವ ಭೀತಿಯಲ್ಲಿ ಒತ್ತಿನಣೆ ಸ್ಲೋಪ್ ಪ್ರೊಟೆಕ್ಷನ್ ವಾಲ್
ಆತಂಕ ಮೂಡಿಸುತ್ತಿದೆ ಹೆದ್ದಾರಿ ಸಂಚಾರ
Team Udayavani, Jul 9, 2023, 3:31 PM IST
ಬೈಂದೂರು: ಕಳೆದೊಂದು ವಾರದಿಂದ ಬೈಂದೂರು ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ನದಿ ಕೆರೆ ತುಂಬಿರುವ ಜತೆಗೆ ಹೆದ್ದಾರಿ ಸಂಚಾರ ಕೂಡ ಆತಂಕ ಮೂಡಿಸುತ್ತಿದೆ. ಕುಂದಾಪುರದಿಂದ ಶಿರೂರು ತನಕ ಬಹುತೇಕ ಕಡೆಗಳಲ್ಲಿ ಹೆದ್ದಾರಿ ಹೊಂಡಬಿದ್ದಿದೆ. ಕೆಲವು ಕಡೆಗಳಲ್ಲಿ ಹೆದ್ದಾರಿಯಲ್ಲಿ ನೀರು ನಿಲ್ಲುತ್ತಿರುವುದು ಪ್ರಯಾಣಿಕರಿಗೆ ಅಪಾಯದ ಮುನ್ಸೂಚನೆ ನೀಡುತ್ತಿದೆ.
ಈಗಾಗಲೇ ಒತ್ತಿನಣೆ ತಿರುವಿನ ಗುಡ್ಡ ಕುಸಿದಿದೆ. ಇದರ ಜತೆಗೆ ಎರಡು ವರ್ಷಗಳ ಹಿಂದೆ ಗುಡ್ಡ ಕುಸಿತ ಉಂಟಾಗಿ ಅವಾಂತರ ವಾದ ಬಳಿಕ ಸ್ಲೋಪ್ ಪ್ರೊಟೆಕ್ಷನ್ ವಾಲ್ ಅಳವಡಿಸಲಾಗಿತ್ತು. ಆದರೆ ಈ ವಾಲ್ ಕೂಡ ಬಿರುಕು ಬಿಟ್ಟಿದ್ದು ಕುಸಿಯುವ ಆತಂಕವಿದೆ. ಈ ವರ್ಷದ ಮಳೆಗಾಲದಲ್ಲಿ ಸುರಕ್ಷಿತವೇ ಎನ್ನುವ ಆತಂಕ ಬೈಂದೂರು ಭಾಗದ ಜನರಲ್ಲಿ ಕಾಡುತ್ತಿದೆ. ಎರಡು ದಿನಗಳ ಹಿಂದೆ ಸುರಿದ ಮಳೆಗೆ ಒತ್ತಿನಣೆಯ ಇಳಿಜಾರಿನ ಗುಡ್ಡದ ಮಣ್ಣು ಕೊರೆದು ರಸ್ತೆಗೆ ಹರಿದಿದೆ. ಹೊಸದಾಗಿ ಅಳವಡಿಸಿದ ಸ್ಲೋಪ್ ಪ್ರೊಟೆಕ್ಷನ್ ವಾಲ್ ಮಧ್ಯದಲ್ಲಿ ನೀರು ಹರಿಯಲು ಪ್ರಾರಂಭವಾಗಿದೆ.
ಕೆಲವು ವರ್ಷದ ಹಿಂದೆ ಮಳೆಗಾಲದಲ್ಲಿ ಒತ್ತಿನಣೆ ಗುಡ್ಡ ಕುಸಿತದಿಂದಾಗಿ ಒಂದೆರೆಡು ತಿಂಗಳು ವಾಹನ ಸಂಚಾರವೇ ದುಸ್ತರವಾಗಿತ್ತು. ಗುಡ್ಡವನ್ನು ಕೊರೆಯುವ ಸಂದರ್ಭದಲ್ಲಿ ಸಮರ್ಪಕ ಮಣ್ಣು ಪರೀಕ್ಷೆ ಮಾಡದಿರುವುದು ಸ್ಥಳೀಯ ಭೌಗೋಳಿಕ ಅಂಶಗಳನ್ನು ಪರಿಗಣಿಸದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ಈ ವರ್ಷ ಸುರಿದ ಮೊದಲ ಮಳೆಗೆ ಗುಡ್ಡದ ಮಣ್ಣು ಕುಸಿಯಲು ಪ್ರಾರಂಭಿಸಿದೆ. ರಸ್ತೆಯ ಮೇಲ್ಗಡೆ ಹಾಗೂ ಚರಂಡಿಯಲ್ಲಿ ಶೇಡಿಮಣ್ಣು ಹರಿಯಲು ಪ್ರಾರಂಭವಾಗಿದೆ.ಇದೇ ಪರಿಸ್ಥಿತಿ ಮುಂದುವರಿದರೆ ಗುಡ್ಡ ಮತ್ತೂಮ್ಮೆ ಕುಸಿ ಯುವುದರಲ್ಲಿ ಸಂಶಯವಿಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಾಮಗಾರಿ ಕಂಪೆನಿಯ ಕಾರ್ಯವೈಖರಿ ಬಗ್ಗೆ ಗಂಭೀರವಾಗಿ ಪರಿಗಣಿಸದಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ಸೂಕ್ತ ಮುಂಜಾಗರೂಕತೆ ಇಲ್ಲದೆ ನಡೆಸುವ ಕಾಮಗಾರಿ, ಹೆದ್ದಾರಿ ಹೊಂಡ ಬಿದ್ದರು ಸಹ ದುರಸ್ತಿ ಮಾಡುವುದರಲ್ಲಿ ನಿಷ್ಕಾಳಜಿ, ಹೆಸರಿಗೆ ಮಾತ್ರ ಮಾನ್ಸೂನ್ ಸಭೆ ಮಳೆಗಾಲದಲ್ಲಾಗುವ ಸಮಸ್ಯೆಯ ಅನುಭವ ಇದ್ದರು ಸಹ ನಿರ್ಲಕ್ಷ ಮನೋಭಾವನೆ ಅಧಿಕಾರಿಗಳಿಂದ ಎದ್ದು ಕಾಣುತ್ತಿದೆ.
ಏನಿದು ಸ್ಲೋಪ್ ಪ್ರೊಟೆಕ್ಷನ್ ವಾಲ್
ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಒತ್ತಿನಣೆ ಗುಡ್ಡವನ್ನು ಕೊರೆದು ಇಬ್ಟಾಗ ಮಾಡಲಾಗಿದೆ.ಮೇಲ್ಭಾಗದಲ್ಲಿ ಮ್ಯಾಂಗನೀಸ್ ಕಲ್ಲಿನ ಪೊರೆಗಳಿದ್ದರೂ ಸಹ ಅಡಿಭಾಗದಲ್ಲಿ ಸಂಪೂರ್ಣ ಶೇಡಿಮಣ್ಣಿನಿಂದ ಆವೃತವಾಗಿದೆ.ಮಾತ್ರವಲ್ಲದೆ ಗುಡ್ಡದ ಅಂಚಿನಲ್ಲಿ ಜಿನುಗುವ ನೀರಿನ ಸೆಲೆಯಿಂದಾಗಿ ಮಣ್ಣಿನ ಅಂಟಿನ ಸಾಂದ್ರತೆ ಕಡಿಮೆಯಾಗಿ ಸಂಪೂರ್ಣ ಗುಡ್ಡವೆ ಕುಸಿದು ಬಿದ್ದಿತ್ತು.ಹೀಗಾಗಿ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ಐ.ಆರ್.ಬಿ. ಕಂಪೆನಿ ಗುಡ್ಡವನ್ನು ಕೊರೆದು ಕಬ್ಬಿಣದ ರಾಡ್ ಹಾಗೂ ಮೆಶ್ ಅಳವಡಿಸಿ ಅದರ ಮೇಲೆ ಸಂಪೂರ್ಣ ಕಾಂಕ್ರೀಟ್ ಮಾಡಲಾಗಿದೆ. ಇದರಿಂದ ಮಳೆಗಾಲದಲ್ಲಿ ನೀರು ಇಂಗದೆ ಸರಾಗವಾಗಿ ಹರಿದು ಹೋಗುತ್ತದೆ. ಮಾತ್ರವಲ್ಲದೆ ಗುಡ್ಡದ ಕೆಳಭಾಗದಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಿಸಲಾಗಿದೆ. ಕಾಂಕ್ರೀಟ್ ಅಳವಡಿಸಿದ ಪಕ್ಕದಲ್ಲಿ ಲಾವಂಚ ಮಾದರಿಯ ಹುಲ್ಲುಗಳನ್ನು ನೆಡಲಾಗಿದೆ. ಇದರ ಬೇರುಗಳು ಆಳಕ್ಕೆ ಇಳಿಯುವುದರಿಂದ ಮಣ್ಣು ಕದಲದಂತೆ ಹಿಡಿದಿಟ್ಟುಕೊಳ್ಳುತ್ತದೆ ಎನ್ನುವುದು ಕಂಪೆನಿಯ ಲೆಕ್ಕಾಚಾರವಾಗಿದೆ.
ಹೆದ್ದಾರಿ ಸುರಕ್ಷತೆಯಿಂದ ಮಳೆಗಾಲಕ್ಕೆ ಸೂಕ್ತ ಮುಂಜಾಗ್ರತೆ ವಹಿಸಲಾಗಿದೆ. ಈಗಾಗಲೇ ಗುಡ್ಡ ಕುಸಿತವಾದ ಸ್ಥಳದಲ್ಲಿ ಯಂತ್ರ ಅಳವಡಿಸಿ ಮಣ್ಣು ತೆರವು ಮಾಡಲಾಗಿದೆ. ಸ್ಲೋಪ್ ಪ್ರೊಟೆಕ್ಷನ್ ವಾಲ್ ಸುರಕ್ಷಿತವಾಗಿದೆ. ಯಾವುದೆ ರೀತಿಯ ಆತಂಕ ಆವಶ್ಯಕತೆಯಿಲ್ಲ. ಹೆದ್ದಾರಿ ಗಸ್ತು ತಂಡ ವಿಶೇಷ ನಿಗಾ ವಹಿಸುತ್ತಿದೆ.
– ಯೋಗೇಶ್,
ಐಆರ್‌ಬಿ ಅಧಿಕಾರಿ
ಒತ್ತಿನಣೆ ಸೇರಿದಂತೆ ಹೆದ್ದಾರಿ ಕಾಮಗಾರಿ ಸಾರ್ವಜನಿಕರಿಗೆ ಸದಾ ಕಿರಿ ಕಿರಿ ಉಂಟಾಗುತ್ತಿದೆ.ಮಳೆಗಾಲದ ಆರಂಭದಲ್ಲೆ ಈ ರೀತಿಯಾದರೆ ಮುಂದಿನ ದಿನದಲ್ಲಿ ಆಗುವ ಅನಾಹುತ ಊಹಿಸಲು ಸಾಧ್ಯವಿಲ್ಲ. ನಿತ್ಯ ಸಾವಿರಾರು ವಾಹನ, ಶಾಲಾ ಕಾಲೇಜು ವಿದ್ಯಾರ್ಥಿಗಳು ಸಂಚರಿಸುವ ಒತ್ತಿನಣೆ ಸಮರ್ಪಕ ಸಂಚಾರಕ್ಕೆ ಕಂಪೆನಿ ಸೂಕ್ತ ಅನುಕೂಲ ಮಾಡಿಕೊಡಬೇಕು.
-ಚಂದ್ರ, ಬೈಂದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.