Opposition Parties: ಮೋದಿ ಹಣಿಯಲು ಕಾರ್ಯತಂತ್ರ ರಚನೆ
ಬೆಂಗಳೂರಿನಲ್ಲಿ ಜು.17,18 ರಂದು ಕಾಂಗ್ರೆಸ್, ಮಿತ್ರ ಪಕ್ಷಗಳ ಮಹತ್ವದ ಸಭೆ
Team Udayavani, Jul 16, 2023, 8:01 AM IST
ಬೆಂಗಳೂರು: ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ಮಣಿಸಲೇ ಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ಮತ್ತದರ ಮಿತ್ರ ಪಕ್ಷಗಳ ಮಹತ್ವದ ಸಭೆ ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನಲ್ಲಿ ನಡೆಯಲಿದೆ. ಇದು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಮೈತ್ರಿಕೂಟದ “ಲಾಂಚಿಂಗ್ ಪ್ಯಾಡ್’ ಆಗುವ ನಿರೀಕ್ಷೆಯಿದೆ.
ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಅವರ ಅಬ್ಬರದ ಪ್ರಚಾರದ ನಡವೆಯೂ ಬಿಜೆಪಿ ಹೀನಾಯವಾಗಿ ಸೋತಿರುವುದು ದೇಶಾದ್ಯಂತ ಕಾಂಗ್ರೆಸ್‌ನಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ತನ್ನ ಮಿತ್ರ ಪಕ್ಷಗಳ ನಾಯಕರೊಂದಿಗೆ 2 ದಿನಗಳ “ವ್ಯೂಹ ರಚನೆ ಶಿಬಿರ’ ನಡೆಸುವ ಮೂಲಕ ಬಿಜೆಪಿ ವಿರೋಧಿಗಳ ಪರ್ಯಾಯ ವೇದಿಕೆ ರಚನೆಗೆ ಕಾಂಗ್ರೆಸ್ ಅಣಿಯಾಗಲಿದೆ.
ಪಟ್ನಾದಲ್ಲಿ ನಡೆದಿದ್ದ ಮೊದಲ ಸಭೆಗೆ ಗೈರಾಗಿದ್ದ ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಬೆಂಗಳೂರು ಸಭೆಗೆ ಹಾಜರಾಗಲಿದ್ದಾರೆ. ಇದರಿಂದ ಮೈತ್ರಿಕೂಟದ ಬಂಧ ಇನ್ನಷ್ಟು ಬಿಗಿಯಾಗಬಹುದು ಹಾಗೂ ಮುಂದಿನ ಹಾದಿ ಬಗ್ಗೆ ಸ್ಪಷ್ಟತೆ ಮೂಡಬಹುದು ಎಂಬುದು ಕಾಂಗ್ರೆಸ್ ನಾಯಕರ ವಿಶ್ವಾಸ.
ಪಟ್ನಾ ಸಭೆಯಲ್ಲಿ 16 ಪಕ್ಷಗಳು ಭಾಗವಹಿಸಿದ್ದು, ಬೆಂಗಳೂರಿನಲ್ಲಿ 24 ಪಕ್ಷಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಆರ್‌ಎಲ್‌ಡಿ, ಎಂಡಿಎಂಕೆ, ಕೆಡಿಎಂಕೆ, ವಿಎಸ್‌ಕೆ, ಆರ್‌ಎಸ್‌ಪಿ, ಫಾರ್ವಡ್ ಬ್ಲಾಕ್, ಐಯುಎಂಎಲ್, ಕೇರಳ ಕಾಂಗ್ರೆಸ್ (ಮಣಿ) ಮತ್ತು ಕೇರಳ ಕಾಂಗ್ರೆಸ್ (ಜೋಸೆಫ್) ಹೊಸದಾಗಿ ಕಾಂಗ್ರೆಸ್ ಜತೆ ಕೈ ಜೋಡಿಸಲು ಮುಂದಾಗಿವೆ.
ಒಂದೇ ವೇದಿಕೆಯಲ್ಲಿ ವೈರಿಗಳು
ಕೆಲವು ದಿನಗಳ ಹಿಂದೆ ಪಶ್ಚಿಮ ಬಂಗಾಲದ ಪಂಚಾಯತ್ ಚುನಾವಣೆಯಲ್ಲಿ ಹಾವು ಮುಂಗುಸಿಯಂತೆ ಕಾದಾಡಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮತ್ತು ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳು ಸಭೆಯಲ್ಲಿ ಭಾಗವಹಿಸುತ್ತಿವೆ. ಕಳೆದ ಬಾರಿ ಸಭೆಯಲ್ಲಿ ಪಾಲ್ಗೊಂಡಿದ್ದರೂ ಪತ್ರಿಕಾಗೋಷ್ಠಿಯಿಂದ ಹೊರಗುಳಿದಿದ್ದ ಆಮ್ ಆದ್ಮಿ ಪಾರ್ಟಿ ತನ್ನ ಮುನಿಸು ಬದಿಗಿಟ್ಟು ಸಭೆಯಲ್ಲಿ ಪಾಲ್ಗೊಳ್ಳಲಿದೆ ಎಂದು ತಿಳಿದುಬಂದಿದೆ.
ಆದರೆ ಎನ್‌ಸಿಪಿಯನ್ನು ಪ್ರತಿನಿಧಿಸಿ ಸಭೆಯಲ್ಲಿ ಭಾಗಿಯಾಗಿದ್ದ ಪ್ರಫುಲ್ ಪಟೇಲ್ ಈಗ ಬಿಜೆಪಿ ನೇತೃತ್ವದ ಎನ್‌ಡಿಎ ತೆಕ್ಕೆಗೆ ಸೇರಿದ್ದಾರೆ. ಎನ್‌ಸಿಪಿಯ ಸ್ಥಾಪಕ ಶರದ್ ಪವಾರ್ ಮತ್ತವರ ಬಣ ಕಾಂಗ್ರೆಸ್ ಜತೆಗೆ ಮುಂದುವರಿಯುವ ಉಮೇದಿನಲ್ಲಿದೆ.
ಯಾರ ಸಂಚಾಲಕತ್ವ?
ಬೆಂಗಳೂರಿನ ಸಭೆಯಲ್ಲಿ ಮೈತ್ರಿಕೂಟದ ಸಂಚಾಲಕತ್ವವನ್ನು ಯಾರು ವಹಿಸಬೇಕು ಎಂಬುದರ ಬಗ್ಗೆ ಹೆಚ್ಚು ಚರ್ಚೆ ನಡೆಯುವ ಸಾಧ್ಯತೆಯಿದೆ. ಕಾಂಗ್ರೆಸ್ “ಉದಾರತೆ’ ಮೆರೆದು ಸಂಚಾಲಕತ್ವವನ್ನು ಬೇರೆ ಪಕ್ಷಗಳಿಗೆ ಬಿಟ್ಟುಕೊಡುವುದೇ ಅಥವಾ ತನ್ನಲ್ಲೇ ಉಳಿಸಿಕೊಳ್ಳುವುದೇ ಎಂಬುದು ಈ ಸಮಾವೇಶದ ಪ್ರಮುಖ ಅಂಶವಾಗಿದೆ. ಕಳೆದ ಚುನಾವಣೆ ವೇಳೆ ಬಿಜೆಪಿಯೇತರ ಮೈತ್ರಿಕೂಟ ರಚನೆಯ ಕಸರತ್ತು ಮುರಿದು ಬೀಳಲು ಕೂಟದ ನಾಯಕನನ್ನು ಗುರುತಿಸುವಲ್ಲಿ ಎಡವಿದ್ದೇ ಪ್ರಮುಖ ಕಾರಣ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.
ಈ ಹಿನ್ನೆಲೆಯಲ್ಲಿ ಒಕ್ಕೂಟಕ್ಕೆ ಒಬ್ಬ ಅಧ್ಯಕ್ಷರನ್ನು ಆಯ್ಕೆ ಮಾಡುವುದು ಮತ್ತೂಬ್ಬರನ್ನು ಸಂಚಾಲಕರನ್ನಾಗಿ ನೇಮಿಸುವ ಪ್ರಸ್ತಾಪ ಮೈತ್ರಿಕೂಟದಲ್ಲಿದೆ. ಉಳಿದಂತೆ ಮುಂದಿನ ಕಾರ್ಯತಂತ್ರಗಳನ್ನು ರೂಪಿಸಲು ವರ್ಕಿಂಗ್ ಕಮಿಟಿ ರಚಿಸುವ ಬಗ್ಗೆ, ಸಮಾನ ಕಾರ್ಯಕ್ರಮಗಳ ಘೋಷಣೆ, ಮೈತ್ರಿ ಕೂಟದ ಹೆಸರು ಅಂತಿಮಗೊಳಿಸುವ ಪ್ರಯತ್ನ ನಡೆಯಲಿದೆ. ಇದರ ಜತೆಗೆ ಸೀಟು ಹಂಚಿಕೆ ಬಗ್ಗೆ ಮೇಲ್ಮಟ್ಟದ ಚರ್ಚೆ ನಡೆಯುವ ನಿರೀಕ್ಷೆಯೂ ಇದೆ. ಆದರೆ ಬಂಗಾಲ, ಕೇರಳ, ದಿಲ್ಲಿ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಮೈತ್ರಿ ಪಕ್ಷಗಳ ಮಧ್ಯೆ ಸೀಟ್ ಹಂಚಿಕೆ ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಈ ಬಗ್ಗೆ ಸ್ಪಷ್ಟ ಚಿತ್ರಣ ಈ ಸಭೆಯಲ್ಲಿ ಸಿಗುವುದು ಅನುಮಾನ.
ವಿಪಕ್ಷಗಳ ಪಟ್ನಾ ಸಭೆಯ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎಗೂ ಸ್ನೇಹಜಾಲ ವಿಸ್ತರಣೆಯ ಬಯಕೆ ಮೂಡಿದ್ದು, ಈ ನಿಟ್ಟಿನಲ್ಲಿ ತನ್ನ ಹಳೆ ದೋಸ್ತಿಗಳಾದ ಅಕಾಲಿ ದಳ, ಟಿಡಿಪಿಗಳ ಜತೆಗೆ ಜೆಡಿಎಸ್ ಅನ್ನೂ ಸೆಳೆಯಲು ನಡೆಸಿರುವ ಪ್ರಯತ್ನಗಳ ಸಾಧಕ ಬಾಧಕಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.
ಕಳೆದ ಬಾರಿ ಬೆಂಗಳೂರಲ್ಲಿ ಬಿಗಿಯದ ಬಂಧ!
2018ರಲ್ಲಿ ಅಚ್ಚರಿಯ ಬೆಳವಣಿಗೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸರಕಾರ ರಚನೆಯಾಗಿತ್ತು. ಆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವನ್ನು 2019ರ ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಮಹಾಘಟಬಂಧನ್‌ನ ನಾಯಕರನ್ನು ಒಗ್ಗೂಡಿಸುವ ವೇದಿಕೆಯನ್ನಾಗಿ ಬಳಸಲಾಗಿತ್ತು. ಆಗ ಬದ್ಧ ರಾಜಕೀಯ ವೈರಿಗಳಾದ ಅಖೀಲೇಶ್ ಯಾದವ್, ಮಾಯಾವತಿ, ಮಮತಾ ಬ್ಯಾನರ್ಜಿ, ಸೀತಾರಾಂ ಯಚೂರಿ, ಸೋನಿಯಾ ಗಾಂಧಿ, ತೇಜಸ್ವಿ ಯಾದವ್ ಎಲ್ಲರೂ ವೇದಿಕೆ ಏರಿ ಕೈ ಎತ್ತಿ ಒಗ್ಗಟ್ಟನ್ನು ಸಾರಿದ್ದರು. ಆದರೆ ಆ ಒಗ್ಗಟ್ಟು ಬಳಿಕ ಮುರಿದು ಬಿತ್ತು.
ಬಿಜೆಪಿ ನಿರಾಯಾಸವಾಗಿ ಲೋಕಸಭೆಯಲ್ಲಿ ಬಹುಮತ ಪಡೆಯಿತು. ಹಾಗೆಯೇ ಆಗ ಯಾರ ಪ್ರಮಾಣವಚನ ಸಮಾರಂಭ ಬಿಜೆಪಿಯೇತರ ಪಕ್ಷಗಳಲ್ಲಿ ಒಗ್ಗಟ್ಟಿನ ಒರತೆ ಸೃಷ್ಟಿಸಿತ್ತೋ ಅದೇ ಕುಮಾರಸ್ವಾಮಿ ಈಗ ಎನ್‌ಡಿಎ ಸೇರಲು ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಬಿಎಸ್‌ಪಿಯ ಮಾಯಾವತಿ, ಟಿಡಿಪಿಯ ಚಂದ್ರಬಾಬು ನಾಯ್ಡು ಕೂಡ ಕಾಂಗ್ರೆಸ್ ಮೈತ್ರಿಯಿಂದ ದೂರ ಉಳಿದಿದ್ದಾರೆ. ಆದ್ದರಿಂದ ಬೆಂಗಳೂರಿನಲ್ಲಿ ನಡೆಯುವ ಸಭೆ ವಿಪಕ್ಷಗಳ ಮೈತ್ರಿಕೂಟದ ರಚನೆ ಅಥವಾ ವಿಭಜನೆಗೆ ಕಾರಣವಾಗುವುದು ಖಚಿತ ಎಂದು ಹೇಳಲಾಗುತ್ತಿದೆ.
ಕುತೂಹಲಕಾರಿ ಅಂಶಗಳು
ದಿಲ್ಲಿ ಸರಕಾರದ ಅಧಿಕಾರ ಮೊಟಕು ಗೊಳಿಸುವ ಕೇಂದ್ರದ ಅಧ್ಯಾದೇಶದ ಬಗ್ಗೆ ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಬೇಕು ಎಂಬ ಆಪ್‌ನ ನಿಲುವು.
ಬಂಗಾಲದಲ್ಲಿ ಟಿಎಂಸಿ ತನ್ನ ಬದ್ಧ ವಿರೋ
ಧಿಗಳಾದ ಕಮ್ಯುನಿಸ್ಟರ ಜತೆಗೆ ಸೀಟ್ ಹಂಚಿಕೆಗೆ ಒಪ್ಪಬಹುದೇ ಎಂಬ ಅಂಶ.
ಮೈತ್ರಿಕೂಟದ ಮುಂದಾಳತ್ವ ಯಾರದ್ದು?
ಸಂಸತ್ತಿನಲ್ಲಿ ಸಮಾನ ನಾಗರಿಕ ಸಂಹಿತೆ ಬಗ್ಗೆ ಮೈತ್ರಿಕೂಟದ ನಿಲುವು.
ಸಕ್ರಿಯ ರಾಜಕಾರಣದಿಂದ ದೂರವುಳಿ ದಿದ್ದ ಸೋನಿಯಾ ಗಾಂಧಿ ಸಭೆಯಲ್ಲಿ ಭಾಗವಹಿಸುತ್ತಿರುವುದು.
ಬಿಜೆಪಿ ಮತ್ತು ಕಾಂಗ್ರೆಸ್ ಜತೆ ಗುರುತಿಸಿಕೊಳ್ಳದ ಪ್ರಬಲ ಪ್ರಾದೇಶಿಕ ಪಕ್ಷಗಳನ್ನು ಸೆಳೆಯುವ ಕಾರ್ಯತಂತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.