ಸ್ಥಿರ ಬೆಳವಣಿಗೆಗೆ ಪರಿಸರ ಸಹ್ಯ ನಡೆ ನಮ್ಮದಾಗಲಿ
Team Udayavani, Jul 17, 2023, 6:20 AM IST
ಹಠಾತ್ ಮೇಘ ಸ್ಪೋಟದಿಂದ ಉತ್ತರ ಭಾರತದ ಏಳು ರಾಜ್ಯಗಳು ತತ್ತರಿಸುತ್ತಿವೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರಪ್ರದೇಶ, ಹರಿ ಯಾಣ, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಪ್ರಳಯದ ರುದ್ರನರ್ತನ ಜನಜೀವನವನ್ನು ಬುಡಮೇಲು ಮಾಡಿದೆ. ಮನುಷ್ಯ ನಿರ್ಮಿತ ಕಟ್ಟಡ, ರಸ್ತೆಗಳು ನೋಡನೋಡುತ್ತಿದ್ದಂತೆ ಮಾಯವಾಗುತ್ತಿವೆ. ಕಳೆದ ತಿಂಗಳು ಶಾಖದ ತೀವ್ರತೆ, ಈ ತಿಂಗಳು ಅಬ್ಬರದ ಮಳೆ, ಎಂತಹ ವಿಪರ್ಯಾಸ. ಇತ್ತೀಚಿಗಿನ ವರ್ಷಗಳಲ್ಲಿ ಚಂಡ ಮಾರುತ, ಅತಿವೃಷ್ಟಿ, ಬರಗಾಲ ಎಲ್ಲವೂ ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆಲ್ಲ ಏರುತ್ತಿರುವ ತಾಪಮಾನವೇ ಕಾರಣ ಎಂದು ವಿಜ್ಞಾನಿಗಳು ಎಚ್ಚರಿಸುತ್ತಲೇ ಬಂದಿದ್ದಾರೆ. ಹವಾಮಾನ ವೈಪರೀತ್ಯವು ಭಾರತ ಮಾತ್ರವಲ್ಲದೇ ಇಡೀ ಜಗತ್ತಿನ ಪಾಲಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.
ಅಭಿವೃದ್ಧಿಯ ನೆಪದಲ್ಲಿ ಗಿಡಮರಗಳನ್ನು ಕಡಿಯುತ್ತಾ, ಬೆಟ್ಟಗಳನ್ನು ನೆಲಸಮ ಮಾಡುತ್ತಾ ಸಾಗುತ್ತಿದ್ದೇವೆ. ಪರಿಣಾಮ ಇಂದು ನಮ್ಮನ್ನು ಕಾಡುತ್ತಿರುವ ನೈಸರ್ಗಿಕ ಪ್ರಕೋಪ. ಅಭಿವೃ ದ್ಧಿಗಾಗಿ ನಾವು ತೊಡಗಿಸುವ ಬಂಡವಾಳವನ್ನು ಇಂತಹ ಪ್ರಾಕೃತಿಕ ವಿಕೋಪಗಳು ಕೊಚ್ಚಿ ಕೊಂಡು ಹೋಗುತ್ತಿರುವುದು ಕರಾಳ ಭವಿ ಷ್ಯತ್ತಿಗೆ ಹಿಡಿದ ಕೈಗನ್ನಡಿ. ನಮ್ಮ ಅಭಿವೃದ್ಧಿಯ ನಡೆಗಳು ಹವಾಮಾನ ಬದಲಾವಣೆಯನ್ನು ಉಲ್ಬಣಿ ಸುವಂತಾಗಬಾರದು. ಈ ನಿಟ್ಟಿನಲ್ಲಿ ಪರಿಸರಸಹ್ಯ ಅಭಿವೃದ್ಧಿ ಯೋಜನೆಗಳು ನಮ್ಮದಾಗಬೇಕಿದೆ.
ಗರಿಷ್ಠ ತಾಪಮಾನ ದಾಖಲು
ಕೈಗಾರಿಕ ಕ್ರಾಂತಿಯ ಮೊದಲು ಭೂಮಿಯ ಸರಾಸರಿ ತಾಪಮಾನ ಎಷ್ಟಿತ್ತೋ ಅದಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾದರೆ ಮನು ಷ್ಯನ ಸಹಿತ ಬಹುತೇಕ ಜೀವ ಸಂಕುಲಗಳು ನಾಶವಾಗುತ್ತವೆ ಎಂದು ವಿಜ್ಞಾನಿಗಳು ಎಚ್ಚರಿ ಸುತ್ತಲೇ ಬಂದಿದ್ದಾರೆ. ತಾಪಮಾನ 1.5 ಡಿಗ್ರಿ ಏರುವ ಹೊತ್ತಿಗೆ ಸಾಗರಗಳು ಏರಿಬಂದು ಬಹುಪಾಲು ಸಣ್ಣ ದ್ವೀಪರಾಷ್ಟ್ರಗಳು ಮುಳು ಗಡೆಯಾಗಲಿವೆ ಎಂಬ ಭೀತಿಯನ್ನೂ ವ್ಯಕ್ತಪ ಡಿಸಿದ್ದಾರೆ. ಇದೇ ಜೂನ್ 6ರಂದು ಜಾಗತಿಕ ತಾಪಮಾನವು ಗರಿಷ್ಠ 1.69 ಡಿ.ಸೆ. ದಾಖಲಾಗುವ ಮೂಲಕ ಅಪಾಯದ ಕರೆ ಗಂಟೆಯನ್ನು ಬಾರಿಸಿದೆ.
ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಬೇಸಗೆಯಲ್ಲಿ ಶಾಖದ ತೀವ್ರತೆ ಏರುತ್ತಲೇ ಇದೆ. ಭಾರತದಲ್ಲಿನ ಇತ್ತೀಚಿನ ಬರಗಳು ಮತ್ತು ಪ್ರವಾ ಹದ ಆರ್ಥಿಕ ಮತ್ತು ಸಾಮಾಜಿಕ ಪರಿಣಾ ಮಗಳು ಅಗಾಧವಾಗಿವೆ. ಬಡತನ, ಹಸಿವು, ಅಸಮಾನತೆ ಮತ್ತು ರೋಗವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ವಿಶ್ವ ಸಂಸ್ಥೆಯ 17 ಗುರಿಗಳ ಪಟ್ಟಿಯ “ಸಾಮಾಜಿಕ ಅಭಿವೃದ್ಧಿ ಗುರಿ’ಗಳನ್ನು ಪೂರೈಸುವಲ್ಲಿ ಭಾರತದ ಪ್ರಯತ್ನಗಳನ್ನು ಶಾಖದ ಅಲೆಯು ತಗ್ಗಿಸುತ್ತಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ಹೆಚ್ಚುತ್ತಿರುವ ತಾಪಮಾನ ಮತ್ತು ಬದಲಾ ಗುತ್ತಿರುವ ಮಳೆಯ ಮಾದರಿಗಳು ಭಾರತಕ್ಕೆ ಜಿಡಿಪಿಯ 2.8 ಪ್ರತಿ ಶತದಷ್ಟು ವೆಚ್ಚ ವಾಗಬಹುದು ಮತ್ತು 2050 ರ ವೇಳೆಗೆ ದೇಶದ ಅರ್ಧದಷ್ಟು ಜನಸಂಖ್ಯೆಯ ಜೀವನ ಮಟ್ಟವನ್ನು ಕುಗ್ಗಿಸಬಹುದು ಎಂದು ವಿಶ್ವ ಬ್ಯಾಂಕ್ ವರದಿ ಹೇಳಿದೆ.
ಕೃಷಿ ಉತ್ಪಾದನೆ, ಆಹಾರ ಭದ್ರತೆ ಮತ್ತು ಆರೋಗ್ಯ
ಹವಾಮಾನ ಬದಲಾವಣೆಯು ಮಳೆ, ತಾಪ ಮಾನ, ಕೃಷಿಗೆ ನೀರಿನ ಲಭ್ಯತೆ ಹಾಗೂ ಕೃಷಿ ಉತ್ಪಾದನೆಯ ಮೇಲೆ ನೇರ ಋಣಾತ್ಮಕ ಪರಿ ಣಾಮ ಮತ್ತು ಕೊಳ್ಳುವ ಶಕ್ತಿಗಳ ಮೇಲೆ ಪರೋ ಕ್ಷ ಪರಿಣಾಮಗಳ ಮೂಲಕ ಹಸಿವಿನ ಮಟ್ಟವನ್ನು ಇನ್ನಷ್ಟು ಹದಗೆಡಿಸಬಹುದು. ತಾಪಮಾನ- ಸಂಬಂಧಿತ ಕಾಯಿಲೆಗಳ ಹೆಚ್ಚಳ ಮತ್ತು ದೀರ್ಘಕಾಲದ ಶಾಖದ ಅಲೆಗಳು ಮತ್ತು ಆದ್ರìತೆಗೆ ಸಂಬಂಧಿಸಿದ ಸಾವುಗಳು ಆರ್ಥಿಕ ಅಭಿವೃದ್ಧಿಗೆ ದೊಡ್ಡ ಹೊಡೆತವನ್ನೇ ನೀಡುತ್ತವೆ.
ಪರಿಸರ ಸಾಧನೆ ಸೂಚ್ಯಂಕ
ಪರಿಸರ ವಿಕೋಪ, ಹವಾಮಾನ, ವಾಯು ಮಾಲಿನ್ಯ, ನೈರ್ಮಲ್ಯ ಮತ್ತು ಕುಡಿಯುವ ನೀರು, ಪರಿಸರ ವ್ಯವಸ್ಥೆಯ ಸೇವೆಗಳು, ಜೀವ ವೈವಿಧ್ಯ ಸೇರಿದಂತೆ ವಿವಿಧ ಸೂಚ್ಯಂಕಗಳ ಮೇಲೆ ನಿಗದಿಪಡಿಸಲಾದ “ಪರಿಸರ ಸಾಧನೆ ಸೂಚ್ಯಂಕ 2022′(Environmental Performance Index) ಪ್ರಕಾರ 180 ದೇಶಗಳ ಪಟ್ಟಿಯಲ್ಲಿ ವಿಯೆಟ್ನಾಂ (178), ಬಾಂಗ್ಲಾದೇಶ (177), ಮತ್ತು ಪಾಕಿಸ್ಥಾನ (176) ಅನಂತರ ಭಾರತವು ಅತ್ಯಂತ ಕೆಳ ಸ್ಥಾನ ದಲ್ಲಿದೆ. ಹವಾಮಾನ ನೀತಿ ಗಳನ್ನು ಬಲಪಡಿಸದ ಹೊರತು ಮತ್ತು ಹೊರಸೂಸುವಿಕೆಯ ಪಥ ಗಳು ಬದಲಾಗದ ಹೊರತು ಒಟ್ಟು 24 ದೇಶ ಗಳು 2050 ರ ಸುಮಾರು ಶೇ.80ರಷ್ಟು ಹೊರ ಸೂಸುವಿಕೆಗೆ ಜವಾಬ್ದಾರವಾಗಿರುತ್ತವೆ.
“ವಾಯುಮಂಡಲದ ವಸಾಹತುಶಾಹಿ’ ಪರಿಕಲ್ಪನೆ
ಜಾಗತಿಕವಾಗಿ ಸಂಗ್ರಹವಾದ ಹಸುರುಮನೆ ಅನಿಲ ಹೊರಸೂಸುವಿಕೆಯ ಶೇ.92ರಷ್ಟು ಕೊಡುಗೆಯು ಅಭಿವೃದ್ಧಿ ಹೊಂದಿದ ದೇಶ ಗಳಿಂದಾಗುವ ಅಂಶವನ್ನು “ವಾತಾವರಣದ ವಸಾಹತುಶಾಹಿ’ ಪರಿಕಲ್ಪನೆ (Atmospheric colonization) ಎಂದು ಪರಿಭಾವಿಸಲಾಗಿದೆ. ಈ ದೇಶಗಳು ಜಾಗತಿಕ ಜನಸಂಖ್ಯೆಯ ಶೇ.19 ನ್ನು ಒಳಗೊಂಡಿದೆ. ಆದರೆ ಹಸುರುಮನೆ ಅನಿ ಲ ಹೊರಸೂಸುವಿಕೆಗೆ ಕೇವಲ ಶೇ.8ರಷ್ಟು ಮಾತ್ರವೇ ಕಾರಣವಾಗಿರುವ ದಕ್ಷಿಣದ ದೇಶ ಗಳು ಹೆಚ್ಚುತ್ತಿರುವ ಜಾಗತಿಕ ತಾಪಮಾನದ ಭಾರೀ ಪರಿಣಾಮಗಳನ್ನು ಭರಿಸಲಿರುವುದು ವಿಪರ್ಯಾಸ.
ಜಾಗತಿಕ ತಾಪಮಾನ ಏರಿಕೆಯ ಉಪ ಉತ್ಪನ್ನವಾಗಿರುವ ಹಸುರುಮನೆ ಅನಿಲಗಳ ಹೊರಸೂಸುವಿಕೆಗೆ ವಿಶ್ವದ 50 ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳು ಶೇ.1ರಷ್ಟು ಕೊಡು ಗೆಯನ್ನು ಹೊಂದಿವೆ.
ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಪ್ರಕಾರ, ಅಭಿವೃದ್ಧಿಶೀಲ ರಾಷ್ಟ್ರಗಳು ಹವಾ ಮಾನ ಬದಲಾವಣೆಗೆ ಕಾರಣವಾದ ಶೇ.99ರಷ್ಟು ಸಾವುನೋವುಗಳನ್ನು ಅನು ಭವಿಸುತ್ತವೆ. ಹವಾಮಾನ ಬದಲಾವಣೆಯು ಆರೋಗ್ಯ, ಆರ್ಥಿಕತೆ ಮತ್ತು ಮಾನವ ಹಕ್ಕುಗಳ ಮೇ=ಲೆ ಅದರ ಪರಿಣಾಮಗಳ ಮೂಲಕ ಅಸ್ತಿತ್ವ ದಲ್ಲಿರುವ ಅಸಮಾನತೆಗಳನ್ನು ಹೆಚ್ಚು ಉಲ್ಬಣ ಗೊಳಿಸುತ್ತದೆ ಎಂಬುದು ಬಹಳ ಆತಂಕಕಾರಿ ಅಂಶ.
“ಟ್ರಾಜೆಡಿ ಆಫ್ ದಿ ಕಾಮನ್ಸ್’
“ಟ್ರಾಜೆಡಿ ಆಫ್ ದಿ ಕಾಮನ್ಸ್’ ಅಥವಾ “ಸಾಮಾನ್ಯರ ದುರಂತ’ ಎನ್ನುವುದು ಅರ್ಥ ಶಾಸ್ತ್ರದಲ್ಲಿ ಬರುವ ಪರಿಕಲ್ಪನೆ. ಸಾಮಾನ್ಯ ಹುಲ್ಲು ಗಾವಲು ಅಥವಾ ಮೀನುಗಾರಿಕೆಯಂತಹ ಸಂಪನ್ಮೂಲವನ್ನು ಮಿತಿಮೀರಿದ ಮತ್ತು ತಮ್ಮ ಸ್ವಂತ ಹಿತಾಸಕ್ತಿಯಲ್ಲಿ ಕಾರ್ಯನಿರ್ವಹಿಸುವ ವೈಯಕ್ತಿಕ ಬಳಕೆದಾರರ ಕ್ರಿಯೆಗಳಿಂದಾಗಿ ಖಾಲಿಯಾಗುವ ಪರಿಸ್ಥಿತಿಯನ್ನು ವಿವರಿಸಲು ಬಳಸಲಾಗುವ ಪದವಾಗಿದೆ. ಹವಾಮಾನ ವೈಪರೀತ್ಯವು ಕೂಡ ಎಲ್ಲರ ಒಳಿತನ್ನು ಗಮ ನಿಸದೆ ಸ್ವಂತ ಹಿತಾಸಕ್ತಿಗೆ ಹೆಚ್ಚು ಗಮನ ನೀಡುವ ವ್ಯಾವಹಾರಿಕ ಜೀವನ ಕ್ರಮದ ಪರಿಣಾಮ. ಇದರಿಂದ ಹೆಚ್ಚು ತೊಂದರೆಗೊಳಗಾಗುವವರು ಬಡ ರಾಷ್ಟ್ರಗಳು ಹಾಗೂ ಬಡವರು ಎನ್ನುವುದು ಶೋಚನೀಯ.
“ಮತಿಯ ವಿಶ್ವದಿ ಬೆರೆಸಿ ಜೀವಿತವ ವಿಸ್ತರಿಸೆ’
ಏರುತ್ತಿರುವ ತಾಪಮಾನವು ಪರಿಸರ- ಆರ್ಥಿಕ-ಸಾಮಾಜಿಕ ಸ್ಥಿತಿಗತಿಯ ಮೇಲೆ ಗರಿಷ್ಠ ಪರಿಣಾಮಗಳನ್ನು ಬೀರಲಿವೆ. ಸುಸ್ಥಿರ ಅಭಿವೃದ್ಧಿ ಫಲಿತಾಂಶಗಳನ್ನು ಸಾಧಿಸಲು ಹವಾಮಾನ ವೈಪರೀತ್ಯ ತಡೆ ಕಾರ್ಯತಂತ್ರ ಮತ್ತು ಅಳವಡಿಕೆಗೆ ಒತ್ತು ನೀಡಬೇಕಾಗಿದೆ.
“ಎಲ್ಲರ ಒಳಿತು, ನಮ್ಮೆಲ್ಲರಿಗೂ ಒಳಿತಾಗಲಿದೆ’ ಎಂಬುದನ್ನು ಒಪ್ಪಿಕೊಳ್ಳುವವರೆಗೆ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗದು. ಪ್ರತೀ ಹಜ್ಜೆ ಯಲ್ಲಿ ಪರಿಸರ ಸಂರಕ್ಷಣೆ ಹಾಗೂ ಸಂವರ್ಧನೆ ನಮ್ಮ ಗುರಿಯಾಗಬೇಕು. ನಮ್ಮ ನಡವಳಿಕೆ, ಜೀವನ ಕ್ರಮಗಳು ನಮಗೂ, ಸಮಷ್ಠಿಗೂ ಹಿತ ವನ್ನು ಉಂಟು ಮಾಡುವಂತಾದಾಗ ಮಾತ್ರ ನಿಜವಾದ ಅರ್ಥದಲ್ಲಿ ಅಭಿವೃದ್ಧಿಯನ್ನು ಪಡೆಯಲು ಸಾಧ್ಯ.
“ಮತಿಯ ವಿಶ್ವದಿ ಬೆರೆಸಿ ಜೀವಿತವ ವಿಸ್ತರಿಸೆ’ ಎಂಬ ಡಿವಿಜಿಯವರ ಮಂಕುತಿಮ್ಮನ ಕಗ್ಗದ ಸಾಲು ಮನದ ಆಲೋಚನೆಯನ್ನು ವಿಸ್ತಾರ ಗೊಳಿಸಿ ಸ್ವಾರ್ಥವನ್ನು ಬಿಟ್ಟು, ಸರ್ವರ ಹಿತ, ಒಳಿತಿಗಾಗಿ ತೊಡಗಿಸಿಕೊಳ್ಳುವುದೇ ಜೀವನದ ಲ್ಲಿ “ಮುಕ್ತಿ’ಗೆ ದಾರಿ ಎಂಬ ಸೂತ್ರವನ್ನು ತೆರೆ ದಿಡುತ್ತದೆ. ಕಗ್ಗದ ಈ ಸಾಲು ನಮ್ಮ ಜೀವನ ಕ್ರ ಮಕ್ಕೆ ಮಾರ್ಗದರ್ಶಿಯಾಗಬೇಕು. ನಮ್ಮ ಪ್ರತಿಯೊಂದು ಚಟುವಟಿಕೆಗಳು ಹವಾಮಾನ ವೈಪರೀತ್ಯಕ್ಕೆ ಕೊಡುಗೆ ನೀಡದಿರಲಿ ಎಂಬ ಎಚ್ಚರ, ಸಹ್ಯ ಪರಿಸರ ನಿರ್ಮಾಣದೊಂದಿಗೆ ಸುಸ್ಥಿರ ಅಭಿವೃದ್ಧಿಗೆ ನಾಂದಿ.
ಡಾ|ಎ.ಜಯಕುಮಾರ ಶೆಟ್ಟಿ, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.