ಹುಬ್ಬಳ್ಳಿ: ಪಾರ್ಕಿಂಗ್ ಜಾಗ ಕಬಳಿಸುವ ಬ್ಯಾರಿಕೇಡ್
Team Udayavani, Jul 19, 2023, 2:20 PM IST
ಹುಬ್ಬಳ್ಳಿ: ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ಬಹುತೇಕ ಅಂಗಡಿಕಾರರು ತಮ್ಮ ಅಂಗಡಿಯ ಎದುರಿನ ಪಾಲಿಕೆಯ ಜಾಗವನ್ನು ಬ್ಯಾರಿಕೇಡ್‌ಗಳನ್ನಿಟ್ಟು ಅತಿಕ್ರಮಿಸಿಕೊಂಡಿದ್ದು, ಇದರಿಂದ ಸಾರ್ವಜನಿಕರಿಗೆ ಅದರಲ್ಲೂ ಮಾರುಕಟ್ಟೆಗೆ ಆಗಮಿಸುವ ವಾಹನಗಳ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಲು ತೀವ್ರ ತೊಂದರೆ ಅನುಭವಿಸಬೇಕಾಗಿದೆ.
ಪಾಲಿಕೆಯವರು ವಾಹನಗಳ ನಿಲುಗಡೆಗೆಂದು ಜಾಗ ಮೀಸಲಿಟ್ಟಿದ್ದಾರೆ. ಅಲ್ಲದೆ ಕೆಲವೆಡೆ ಪಾರ್ಕಿಂಗ್ ಸಲುವಾಗಿಯೇ ಖಾಸಗಿಯವರಿಂದ ಶುಲ್ಕ ಸಂಗ್ರಹಿಸಲು ಗುತ್ತಿಗೆ ಸಹ ನೀಡಿದ್ದಾರೆ. ಆದರೆ ಈ ಪಾರ್ಕಿಂಗ್ ಸ್ಥಳಗಳನ್ನೇ ಅಂಗಡಿಕಾರರು ಬ್ಯಾರಿಕೇಡ್ ಗಳನ್ನು ಹಾಕಿ ಅತಿಕ್ರಮಿಸಿಕೊಂಡಿದ್ದಾರೆ. ಇದರಿಂದ ಮಾರುಕಟ್ಟೆಗೆ ಆಗಮಿಸುವ ವಾಹನಗಳ ಸವಾರರು ನಿಲುಗಡೆಗೆ ಜಾಗವಿಲ್ಲದೆ ಪರದಾಡಬೇಕಾಗಿದೆ. ಇಲ್ಲವೆ ಅಂಗಡಿಗಳ ಮಾಲೀಕರೊಂದಿಗೆ ವಾಗ್ವಾದ ಮಾಡಿಕೊಳ್ಳುವಂತಾಗಿದೆ.
ದುರ್ಗದ ಬಯಲು, ಬ್ರಾಡ್‌ವೇ, ಕಲಾದಗಿ ಓಣಿ, ಉಳ್ಳಾಗಡ್ಡಿಮಠ ಓಣಿ, ಮರಾಠಾ ಗಲ್ಲಿ, ಶಾ ಬಝಾರ ರಸ್ತೆ, ಸಿಬಿಟಿ ಸುತ್ತಮುತ್ತ, ಗಣೇಶಪೇಟೆ, ಸ್ಟೇಶನ್ ರಸ್ತೆ, ಕೊಯಿನ್ ರಸ್ತೆ, ಜೆ.ಸಿ. ನಗರ, ಕೊಪ್ಪಿಕರ ರಸ್ತೆ, ವಿಕ್ಟೋರಿಯಾ ರಸ್ತೆ, ದಾಜಿಬಾನ ಪೇಟೆ, ಜನತಾ ಬಝಾರ, ಅಂಚಟಗೇರಿ ಓಣಿ, ತಾಡಪತ್ರಿ ಗಲ್ಲಿ, ಮೂರುಸಾವಿರ ಮಠ ರಸ್ತೆ, ಮಹಾವೀರ ಗಲ್ಲಿ, ಪೆಂಡಾರ ಗಲ್ಲಿ, ಬೆಳಗಾವಿ ಗಲ್ಲಿ, ಶಂಕರ ಮಠ ರಸ್ತೆ, ಕಂಚಗಾರ ಗಲ್ಲಿ, ಕುಬಸದ ಗಲ್ಲಿ, ಜವಳಿ ಸಾಲ, ಬಾಬಾಸಾನ ಗಲ್ಲಿ, ಭೂಸಪೇಟೆ, ಹಿರೇಪೇಟೆ, ಅಕ್ಕಿಹೊಂಡ, ಹಳೇಹುಬ್ಬಳ್ಳಿ, ಕಸಬಾಪೇಟೆ ಮುಖ್ಯರಸ್ತೆ ಸೇರಿದಂತೆ ಇನ್ನಿತರೆಡೆ ಅಂಗಡಿಕಾರರು ತಮ್ಮ ಅಂಗಡಿಗಳಿಗೆ ಗ್ರಾಹಕರು ಬರಲೆಂದು ರಸ್ತೆಗೆ ಅಡ್ಡಲಾಗಿ ವಾಹನಗಳ ನಿಲುಗಡೆ ಸ್ಥಳದಲ್ಲಿ ಬ್ಯಾರಿಕೇಡ್‌ಗಳನ್ನು ಅಕ್ರಮವಾಗಿ ಹಾಕಿಕೊಂಡಿದ್ದಾರೆ. ಕೆಲವರಂತು
3-4 ಅಡಿ ಜಾಗ ಅತಿಕ್ರಮಿಸಿಕೊಂಡಿದ್ದಾರೆ. ಇವರಿಗೆ ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂಬುದು ಸಾರ್ವಜನಿಕರ
ಆಕ್ರೋಶವಾಗಿದೆ.
ವಾಹನಗಳ ನಿಲುಗಡೆ ಸ್ಥಳಗಳಲ್ಲಿ ಅಡ್ಡಲಾಗಿ ಬ್ಯಾರಿಕೇಡ್ ಹಾಕಿಕೊಳ್ಳಲು ಪಾಲಿಕೆಯಿಂದ ಯಾವುದೇ ಅನುಮತಿ ಇಲ್ಲದಿದ್ದರೂ ಅಂಗಡಿಕಾರರು ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಆಗುವ ರೀತಿಯಲ್ಲಿ ಬ್ಯಾರಿಕೇಡ್‌ಗಳನ್ನು
ಹಾಕಿಕೊಂಡಿದ್ದಾರೆ. ಕಬ್ಬಿಣದ ಪ್ಲಾಟ್‌ಫಾರ್ಮ್ ಮಾಡಿಸಿದ್ದಾರೆ. ಇನ್ನು ಕೆಲವರು ದೊಡ್ಡ ದೊಡ್ಡ ಕಲ್ಲುಗಳನ್ನು ಇಟ್ಟಿದ್ದಾರೆ.
ವಾಹನ ನಿಲುಗಡೆ ಸ್ಥಳ
ಪಾಲಿಕೆಯು ಮಾರುಕಟ್ಟೆ ಪ್ರದೇಶಗಳಲ್ಲಿ ದ್ವಿಚಕ್ರ ವಾಹನ ಸೇರಿದಂತೆ ಲಘು ವಾಹನಗಳ ನಿಲುಗಡೆಗೆ ಸ್ಥಳ ನಿಗದಿಪಡಿಸಿದೆ. ಅಲ್ಲದೆ ಕೆಲವು ಪ್ರದೇಶಗಳಲ್ಲಿ ಗುತ್ತಿಗೆದಾರರಿಗೆ ಟೆಂಡರ್ ಸಹ ನೀಡಿದೆ. ಆದರೆ ನಗರದ ಬಹುತೇಕ ಮಾರುಕಟ್ಟೆ ಪ್ರದೇಶಗಳಲ್ಲಿ ವಾಹನಗಳ ನಿಲುಗಡೆ ಸ್ಥಳಗಳಲ್ಲಿಯೂ ಅಕ್ರಮವಾಗಿ ಬ್ಯಾರಿಕೇಡ್ ಗಳನ್ನು ಹಾಕಿಕೊಂಡಿದ್ದಾರೆ. ಈ ಹಿಂದೆ ಪಾಲಿಕೆಯವರು ಇಂತಹ ಬ್ಯಾರಿಕೇಡ್‌ಗಳನ್ನು ಕಾರ್ಯಾಚರಣೆ ಕೈಗೊಳ್ಳುವ ಮೂಲಕ ತೆರವು ಮಾಡಿದ್ದರು. ಆದರೆ ಮತ್ತೆ ಅದೇ ರಾಗ ಅದೇ ಹಾಡು ಎಂಬಂತೆ ಅಂಗಡಿಕಾರರು ಮುಂದುವರಿಸಿದ್ದಾರೆ.
ಫುಟ್‌ಪಾತ್‌ಗಳು ಮಾಯ
ಮಾರುಕಟ್ಟೆ ಪ್ರದೇಶಗಳ ಹಾಗೂ ಜನನಿಬಿಡ ರಸ್ತೆಗಳಲ್ಲಿನ ಫುತ್ ಪಾತ್‌ಗಳನ್ನು ಅಂಗಡಿಕಾರರು ಅತಿಕ್ರಮಿಸಿಕೊಂಡಿದ್ದಾರೆ. ತಮ್ಮ ಅಂಗಡಿ ನಾಮಫಲಕದ ಬೋರ್ಡ್‌ಗಳನ್ನು ಇಟ್ಟಿದ್ದಾರೆ. ಕೆಲವರು ತಮ್ಮ ಅಂಗಡಿ ವಾಹನಗಳನ್ನು ಬೆಳಗ್ಗೆಯಿಂದ ರಾತ್ರಿ ವರೆಗೆ ಅಲ್ಲಿಯೇ ನಿಲ್ಲಿಸಿಕೊಂಡಿರುತ್ತಾರೆ. ಕೆಲ ಬೀದಿಬದಿ ವ್ಯಾಪಾರಿಗಳು ಅಲ್ಲಿಯೇ ಒಂದು ಕಟ್ಟೆ ಮಾಡಿಕೊಂಡು ವ್ಯಾಪಾರ ಮಾಡುತ್ತಾರೆ. ಹೀಗಾಗಿ ಪಾದಚಾರಿಗಳು ಸಂಚರಿಸಲು ತೀವ್ರ ತೊಂದರೆ ಆಗುತ್ತಿದೆ. ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರು ಸಹ ಯಾವುದೇ ಚಕಾರ ಎತ್ತುವುದಿಲ್ಲ ಎಂಬುದು ಜನರ ಆಕ್ರೋಶವಾಗಿದೆ.
ಮಾರುಕಟ್ಟೆ ಪ್ರದೇಶಗಳಲ್ಲಿ ವಾಹನಗಳ ಪಾರ್ಕಿಂಗ್ ಸ್ಥಳ ಹಾಗೂ ಫುತ್‌ಪಾತ್‌ಗಳಲ್ಲಿ ಅಂಗಡಿಕಾರರು ಬ್ಯಾರಿಕೇಡ್ ಗಳನ್ನು ಅಕ್ರಮವಾಗಿ ಇಟ್ಟುಕೊಂಡು ಸಾರ್ವಜನಿಕರಿಗೆ ಹಾಗೂ ವಾಹನದಾರರಿಗೆ ತೊಂದರೆ ಕೊಡುತ್ತಿದ್ದಾರೆ. ಪಾಲಿಕೆ ಈ ಬಗ್ಗೆ ನಿಗಾವಹಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ವಾಹನ ಸವಾರರಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡುವುದು ಪಾಲಿಕೆಯ ಜವಾಬ್ದಾರಿ. ಪಝಲ್ ಪಾರ್ಕಿಂಗ್ ರೀತಿ ಮಲ್ಟಿ ಸ್ಟೋರೇಜ್ ಪಾರ್ಕಿಂಗ್ ಜಾಗ ಸೃಷ್ಟಿಸಿ ಆದ್ಯತೆ ಮೇರೆಗೆ ಕೈಗೊಳ್ಳಬೇಕು. ಕೆಲವೆಡೆ ಟೆಂಡರ್ ಇಲ್ಲದೆ ಅನಧಿಕೃತವಾಗಿ ಕೆಲವರು ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಇದರ ಬಗ್ಗೆ ಗಮನಹರಿಸಬೇಕು.
ವಿಕಾಸ ಸೊಪ್ಪಿನ, ಎಎಪಿ ಮುಖಂಡ
ಅಂಗಡಿಕಾರರು ಸಾರ್ವಜನಿಕ ಸ್ಥಳ, ವಾಹನಗಳ ನಿಲುಗಡೆ ಸ್ಥಳದಲ್ಲಿ ಬ್ಯಾರಿಕೇಡ್ ಗಳನ್ನು ಇಟ್ಟುಕೊಳ್ಳಲು, ಅಳವಡಿಸಿಕೊಳ್ಳಲು
ಅವಕಾಶವಿಲ್ಲ. ಕಳೆದ ಬಾರಿ ಪಾಲಿಕೆಯಿಂದ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿತ್ತು. ಈಗ ಮತ್ತೆ ಕೆಲವರು ಅದನ್ನು ಮುಂದುವರಿಸಿದ್ದಾರೆ ಮತ್ತು ಫುತ್‌ಪಾತ್ ಅತಿಕ್ರಮಿಸಿಕೊಂಡಿದ್ದಾರೆ. ಮತ್ತೊಮ್ಮೆ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು.
ಎಸ್.ಸಿ. ಬೇವೂರ,
ಪಿಆರ್‌ಒ ಹಾಗೂ ವಲಯ ನಂ. 6ರ ಸಹಾಯಕ ಆಯುಕ್ತ
ಫುಟ್‌ಪಾತ್ ಹಾಗೂ ವಾಹನಗಳ ನಿಲುಗಡೆ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲು ಅಂಗಡಿಕಾರರಿಗೆ ಪರವಾನಗಿ ಇಲ್ಲ. ಎಷ್ಟೋ ಬಾರಿ ಅಂಥವುಗಳನ್ನು ತೆರವು ಮಾಡಲಾಗಿದೆ. ಮತ್ತೆ ಕಾರ್ಯಾಚರಣೆ ಮಾಡುವ ಮೂಲಕ ಅವುಗಳನ್ನು ತೆರವುಗೊಳಿಸಲಾಗುವುದು.
ಮಲ್ಲಿಕಾರ್ಜುನ ಬಿ.ಎಂ.,
ಸಹಾಯಕ ಆಯುಕ್ತ, ವಲಯ ನಂ.8
*ಶಿವಶಂಕರ ಕಂಠಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.