ಚರಂಡಿ ಸೇರುತ್ತಿದೆಯೇ ಕಬ್ಬಿನ ಹಾಲು?
Team Udayavani, Jul 22, 2023, 3:38 PM IST
ಮಂಡ್ಯ: ಪ್ರಸ್ತುತ ಸಾಲಿನಲ್ಲಿ ಮೈಷುಗರ್ ಕಾರ್ಖಾನೆಯು ನಿಗದಿತ ಗುರಿಯ ಕಬ್ಬನ್ನು ನಿರಂತರವಾಗಿ ಅರೆದು ನಷ್ಟದಿಂದ ಹೊರಬರಲಿದೆ ಎಂಬ ನಿರೀಕ್ಷೆ ಮತ್ತೆ ಯಾಕೋ ಹುಸಿಯಾದಂತಾಗಿದೆ. ಕಳೆದ 15 ದಿನಗಳಿಂದ ವಿದ್ಯುತ್, ತಾಂತ್ರಿಕ ಕಾರಣಗಳಿಂದ ಪದೇ ಪದೆ ಕಬ್ಬು ಅರೆಯುವಿಕೆ ಸ್ಥಗಿತಗೊಳ್ಳುತ್ತಿದೆ. ಅಲ್ಲದೆ, ಅರೆದ ಕಬ್ಬಿನ ಹಾಲನ್ನು ಹೆಬ್ಟಾಳ ನಾಲೆಗೆ ಬಿಡುತ್ತಿದ್ದಾರೆ ಎಂಬ ಆರೋಪದ ನಡುವೆಯೂ ವಿಡಿಯೋ ಕೂಡ ಹರಿದಾಡುತ್ತಿದೆ.
ಗುರುವಾರವೂ ಮಧ್ಯಾಹ್ನ 2 ಗಂಟೆಯವರೆಗೂ ಕಬ್ಬು ಅರೆಯುವಿಕೆ ಸ್ಥಗಿತಗೊಳಿಸಲಾಗಿತ್ತು. ಇದುವರೆಗೂ 28 ಸಾವಿರಕ್ಕೂ ಹೆಚ್ಚು ಟನ್ ಕಬ್ಬು ಅರೆಯಲಾಗಿದೆ. ಆದರೆ, ನಿಗದಿತ ಪ್ರಮಾಣದಲ್ಲಿ ಸಕ್ಕರೆ ಉತ್ಪಾದನೆಯಾಗಿಲ್ಲ ಎನ್ನಲಾಗುತ್ತಿದೆ. ಮೈಷುಗರ್ ಕಾರ್ಖಾನೆಯದ್ದೇ ಎನ್ನಲಾದ ಅರೆದ ಕಬ್ಬಿನ ರಸವನ್ನು ಸಂಗ್ರಹ ಮಾಡಿಟ್ಟುಕೊಳ್ಳಲಾಗದೆ, ಚರಂಡಿ ಮೂಲಕ ಹೆಬ್ಟಾಳ ನಾಲೆಗೆ ಹರಿಸಲಾಗಿದೆ ಎಂಬ ವಿಡಿಯೋ ವೈರಲ್ ಆಗಿದೆ. ಅರೆದ ಕಬ್ಬಿನ ಹಾಲನ್ನು 24 ಗಂಟೆಯೊಳಗೆ ಹೀಟ್ ಮಾಡಿ ಸಕ್ಕರೆ ಉತ್ಪಾದನೆಗೆ ಬಳಸಬೇಕಾಗಿದೆ. ಆದರೆ, ಯಾವ ಕಾರಣಕ್ಕೆ ನಾಲೆಗೆ ಹರಿಯಲು ಬಿಟ್ಟಿದ್ದಾರೋ ಗೊತ್ತಿಲ್ಲ.
ನೀರಿನ ಜೊತೆ ಕಬ್ಬಿನ ಹಾಲು ಚರಂಡಿಗೆ: ಕಾರ್ಖಾನೆಯಿಂದ ಚರಂಡಿಗೆ ಹೋಗುವ ನೀರಿನ ಜೊತೆಯಲ್ಲಿಯೇ ಕಬ್ಬಿನ ಹಾಲು ಸಹ ಹರಿಯುತ್ತಿರುವ ದೃಶ್ಯ ಸೆರೆಯಾಗಿದೆ. ಕಡಿಮೆ ಪ್ರಮಾಣದಲ್ಲಿ ಕಬ್ಬು ಅರೆದಾಗ ಸಕ್ಕರೆ ತಯಾರಿಸಲು ತೊಡಕಾಗಲಿದೆ. ಆದ್ದರಿಂದ ಕಬ್ಬಿನ ಹಾಲನ್ನು ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಾತ್ರೋ ರಾತ್ರಿ ಚರಂಡಿ ಮೂಲಕ ಹೆಬ್ಟಾಳ ನಾಲೆಗೆ ಹರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಮೈಷುಗರ್ ಕಾರ್ಖಾನೆಯ ಚರಂಡಿಗೆ ನೀರಿನ ಜೊತೆ ಅರೆದಿರುವ ಕಬ್ಬಿನ ಹಾಲು ಹರಿಯುತ್ತಿರುವ ಎರಡು ಸೆಕೆಂಡ್‌ನ ವಿಡಿಯೋ ಹರಿದಾಡುತ್ತಿದೆ.
ಸಕ್ಕರೆ ಉತ್ಪಾದನೆ, ಇಳುವರಿ ಕುಂಠಿತ: ಕಳೆದ ವರ್ಷ ಪ್ರಾಯೋಗಿಕವಾಗಿ ಕಾರ್ಖಾನೆ ನಡೆಸಲಾಗುತ್ತಿದೆ ಎಂದು ಬಿಜೆಪಿ ಸರ್ಕಾರ ಹೇಳಿತ್ತು. ಆದರೆ, ಈ ವರ್ಷ ಕಾಂಗ್ರೆಸ್ ಸರ್ಕಾರ 50 ಕೋಟಿ ರೂ. ಅನುದಾನ ನೀಡಿ ನಿಗದಿತ ಸಮಯದಲ್ಲಿ ಕಬ್ಬು ಅರೆಯುವಿಕೆ ಪ್ರಾರಂಭಿಸಿದರೂ ಪದೇ ಪದೆ ಕಬ್ಬು ಅರೆಯುವಿಕೆ ಸ್ಥಗಿತವಾಗುತ್ತಿದೆ. ಅಲ್ಲದೆ, ಅರೆದಿರುವ ಕಬ್ಬಿನ ಹಾಲನ್ನು ಈ ರೀತಿ ನಾಲೆಗೆ ಹರಿಸಿದರೆ ನಿಗದಿತ ಪ್ರಮಾಣದಲ್ಲಿ ಸಕ್ಕರೆ ಉತ್ಪಾದನೆ, ಇಳುವರಿ ಕುಂಠಿತವಾಗಲಿದೆ. ಇದರಿಂದ ಕಾರ್ಖಾನೆ ಲಾಭದಲ್ಲಿ ಹೇಗೆ ನಡೆಯಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪದೇ ಪದೆ ಕಬ್ಬು ಅರೆಯುವಿಕೆ ಸ್ಥಗಿತ ಹಾಗೂ ನಿಧಾನಗತಿಯ ಯಂತ್ರಗಳ ಚಾಲನೆ ಹಿನ್ನೆಲೆಯಲ್ಲಿ ಕಾರ್ಖಾನೆಯ ಕಬ್ಬು ಯಾರ್ಡ್ ಹಾಗೂ ಕಾರ್ಖಾನೆಯ ಹೊರಗಡೆ ಕಬ್ಬು ತುಂಬಿದ ಲಾರಿ, ಟ್ರ್ಯಾಕ್ಟರ್ ಹಾಗೂ ಎತ್ತಿನಗಾಡಿಗಳು ಸಾಲುಗಟ್ಟಿ ನಿಂತಿವೆ. ಇದರಿಂದ ಆ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ಒಣಗುತ್ತಿದೆ ಸಾವಿರಾರು ಟನ್ ಕಬ್ಬು: ಕಾರ್ಖಾನೆಗೆ ಕಬ್ಬು ತಂದರೂ ನಿಗದಿತವಾಗಿ ತೂಕ ಮಾಡಿ ತೆಗೆದುಕೊಳ್ಳದೆ ವಿಳಂಬ ಮಾಡಲಾಗುತ್ತಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಪದೇ ಪದೆ ಕಬ್ಬು ನುರಿಯುವ ಕಾರ್ಯ ನಿಲ್ಲುತ್ತಿರುವುದರಿಂದ ಕಬ್ಬು ಬಂದರೂ ಸಮಸ್ಯೆಯಾಗುತ್ತಿದೆ. ನಿರಂತರವಾಗಿ ಕಾರ್ಖಾನೆ ಕಬ್ಬು ನುರಿಸದ ಪರಿಣಾಮ ಗದ್ದೆಗಳಲ್ಲಿ ಕಟಾವಾಗಿರುವ ಸಾವಿರಾರು ಟನ್ ಕಬ್ಬು ಒಣಗುತ್ತಿದೆ. ಫ್ಯಾಕ್ಟರಿ ಬಳಿ ಒಂದು ಲೋಡ್ ನಿಂತಿದ್ದರೆ, ಗದ್ದೆಯಲ್ಲಿ ಮೂರ್ನಾಲ್ಕು ಲೋಡ್ ಒಣಗುವ ದುಸ್ಥಿತಿ ಎದುರಾಗಿದೆ. ಇದರಿಂದ ಪ್ರತೀ 10 ಟನ್‌ಗೆ ಅರ್ಧದಿಂದ ಒಂದು ಟನ್ ಇಳುವರಿ ಕುಸಿತವಾಗಲಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಚಾಲಕರಿಗೆ ನರಕಯಾತನೆ: ರೈತರಿಗೆ ಕಬ್ಬಿನ ಇಳುವರಿ, ನಷ್ಟದ ಸಮಸ್ಯೆಯಾದರೆ ಕಬ್ಬು ಸರಬರಾಜು ಮಾಡುವ ಚಾಲಕರಿಗೆ ನರಕಯಾತನೆಯಾಗಿದೆ. ಮೂರ್ನಾಲ್ಕು ದಿನ ಲಾರಿ, ಟ್ರ್ಯಾಕ್ಟರ್ ಹಾಗೂ ಎತ್ತಿನಗಾಡಿಯಲ್ಲೇ ಕಾಲಕಳೆಯಬೇಕಾದ ದುಸ್ಥಿತಿ ಎದುರಾಗಿದೆ. ಶೌಚಾಲಯದ ವ್ಯವಸ್ಥೆಯೂ ಇಲ್ಲದೆ ಪರದಾಡುವಂತಾಗಿದೆ. ಒಂದೇ ದಿನಕ್ಕೆ ಕಬ್ಬು ತೆಗೆದುಕೊಂಡರೆ ತೊಂದರೆ ಆಗುವುದಿಲ್ಲ. ಸರಿಯಾಗಿ ಕಬ್ಬು ನುರಿಸದಿರುವುದರಿಂದ ತುಂಬಾ ತೊಂದರೆ ಆಗುತ್ತಿದೆ. ಬೇರೆ ಕಾರ್ಖಾನೆಗಳಲ್ಲಿ ಈ ರೀತಿ ಸಮಸ್ಯೆ ಆಗುವುದಿಲ್ಲ ಎಂದು ಚಾಲಕರು ಹೇಳುತ್ತಾರೆ.
ಮೌನ ವಹಿಸಿದ ಜನಪ್ರತಿನಿಧಿಗಳು: ಕಾರ್ಖಾನೆಯು ಪದೇ ಪದೆ ಕಬ್ಬು ಅರೆಯುವಿಕೆ ಸ್ಥಗಿತಗೊಳಿಸುತ್ತಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ. ಪ್ರಧಾನ ವ್ಯವಸ್ಥಾಪಕರಾಗಿರುವ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಕಾರ್ಖಾನೆಗೆ ಭೇಟಿ ನೀಡಿ, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸುವ ಕೆಲಸ ಮಾಡುತ್ತಿದ್ದರೂ ಪದೇ ಪದೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಆದರೆ, ಇದುವರೆಗೂ ಯಾವುದೇ ಜನಪ್ರತಿನಿಧಿಗಳು ಭೇಟಿ ನೀಡಿ ಸಮಸ್ಯೆ ಆಲಿಸುವ ಕೆಲಸ ಮಾಡಿಲ್ಲ. ಕಬ್ಬು ಅರೆಯುವಿಕೆಗೆ ಚಾಲನೆ ಕೊಟ್ಟು ಹೋದ ನಂತರ ಕಾರ್ಖಾನೆಯತ್ತ ತಿರುಗಿಯೂ ನೋಡಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.